ಬಿಜೆಪಿ ಜೆಡಿಎಸ್ ಮೈತ್ರಿ ಎಚ್‌ಡಿಕೆ ಮತ್ತು ಅಮಿತ್ ಶಾ ಮಧ್ಯೆ ಮಾತುಕತೆ!

ನವದೆಹಲಿ: ಲೋಕಸಭಾ ಚುನಾವಣೆಯನ್ನು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಎದುರಿಸಲು ನಿರ್ಧರಿಸಿರುವ ಜಾತ್ಯತೀತ ಜನತಾದಳವು(ಜೆಡಿಎಸ್‌), ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೆ-22 ಶುಕ್ರವಾರ ಅಧಿಕೃತವಾಗಿ ಸೇರ್ಪಡೆಯಾಗಿದೆ. ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ಪ್ರಕ್ರಿಯೆಯನ್ನು ದಸರಾ ಹಬ್ಬದ ನಂತರ ನಡೆಸಲು ಉಭಯ ಪಕ್ಷಗಳ ಉನ್ನತ ನಾಯಕರು ನಿರ್ಧರಿಸಿದ್ದಾರೆ.

ಇದನ್ನೂ ಓದಿ:ಜೆಡಿಎಸ್ ಹಾಗೂ ಬಿಜೆಪಿಯ ಹೊಂದಾಣಿಕೆ “ಕುರುಡನ ಹೆಗಲ ಮೇಲೆ ಕುಂಟನ ಸವಾರಿ”ಯಂತಿದೆ! ಕಾಂಗ್ರೆಸ್‌ ಟ್ವೀಟ್

ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ 2006-07ರಲ್ಲಿ ಅಧಿಕಾರ ನಡೆಸಿದ್ದವು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನವನ್ನು ವಾಗ್ದಾನದಂತೆ 20 ತಿಂಗಳು ಬಳಿಕ ಬಿಟ್ಟುಕೊಟ್ಟಿಲ್ಲ ಎಂಬ ಕಾರಣಕ್ಕೆ ಮೈತ್ರಿ ಸರ್ಕಾರ ಪತನಗೊಂಡಿತ್ತು. ಇದೀಗ ಎರಡೂ ಪಕ್ಷಗಳು ಎರಡನೇ ಇನ್ಸಿಂಗ್ಸ್‌ ಆರಂಭಿಸಿವೆ.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಶಾ ನಿವಾಸದಲ್ಲಿ ಶುಕ್ರವಾರ ಸೆ-22 ಭೇಟಿ ಮಾಡಿ ಜೆಡಿಎಸ್‌-ಬಿಜೆಪಿ ಮೈತ್ರಿ ಸಂಬಂಧ ಸುದೀರ್ಘವಾಗಿ ಸಮಾಲೋಚಿಸಿದರು. ಎನ್‌ಡಿಎಎ ಒಕ್ಕೂಟಕ್ಕೆ ಅಧಿಕೃತವಾಗಿ ಸೇರಲು ಕುಮಾರಸ್ವಾಮಿ ಸಮ್ಮತಿ ಸೂಚಿಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲು ಅವರು ರಾಷ್ಟ್ರ ರಾಜಧಾನಿಯಲ್ಲಿ ಇದ್ದರೂ ಅವರಿಗೆ ಈ ಸಭೆಗೆ ಆಹ್ವಾನ ಇರಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ರಾಜ್ಯದ ನಾಯಕರನ್ನು ನಿರಂತರವಾಗಿ ಕಡೆಗಣಿಸುತ್ತಿರುವ ಬಿಜೆಪಿ ವರಿಷ್ಠರು, ಮೈತ್ರಿ ಮಾತುಕತೆಯಿಂದಲೂ ದೂರವಿಟ್ಟು ಸಂದೇಶ ರವಾನಿಸಿದರು. ಆದರೆ, ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಹಾಜರಿದ್ದು ಮೈತ್ರಿ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದರು.

ಮಹತ್ವದ ಸಭೆಯ ಬಳಿಕ, ನಡ್ಡಾ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮೈತಿಕೂಟದ ಭಾಗವಾಗಲು ಜೆಡಿಎಸ್‌ ನಿರ್ಧರಿಸಿರುವುದು ನನಗೆ ಖುಷಿ ತಂದಿದೆ. ಪಕ್ಷವನ್ನು ಎನ್‌ಡಿಎ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಇದು ಎನ್‌ಡಿಎಎ ಮತ್ತು ಪ್ರಧಾನಿಯವರ ನವ ಭಾರತ, ಬಲಿಷ್ಠ ಭಾರತ  ದೃಷ್ಠಿಕೋನವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದರು.

ಇದನ್ನೂ ಓದಿ:ಬಿಜೆಪಿ-ಜೆಡಿಎಸ್‌ ಎರಡು ಪಕ್ಷಗಳು ದುರ್ಬಲವಾಗಿದ್ದು ಮೈತ್ರಿ ಅನಿವಾರ್ಯ:ಜಗದೀಶ್ ಶೆಟ್ಟರ್‌

ಗೊಂದಲವಿಲ್ಲದೆ ಮೈತ್ರಿ ಮಾಡಿಕೊಳ್ಳಲಿದ್ದೇವೆ : ಕುಮಾರಸ್ವಾಮಿ

ಸಭೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕುಮಾರಸ್ವಾಮಿ, ಒಳ್ಳೆಯ ದಿನ, ಒಳ್ಳೆಯ ಸಮಯ ನೋಡಿಕೊಂಡು ಯಾರಿಗೆಷ್ಟು ಕ್ಷೇತ್ರಗಳು ಎಂಬುವುದನ್ನು ದಸರಾ ನಂತರ ನಿರ್ಧಾರ ಮಾಡುತ್ತೇವೆ ಎಂದರು. ಯಾರು ಯಾರಿಗೆ ಎಷ್ಟು ಸೀಟು ಹಂಚಿಕೆ ಆಗುತ್ತದೆ ಎನ್ನುವುದು ಮುಖ್ಯವಲ್ಲ ಎಂದು ಅನೇಕ ಬಾರಿ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ಬಗ್ಗೆ ಚರ್ಚೆ ನಡೆಸಲಾಯಿತು. ಈ ವಿಷಯವನ್ನು ನಾನು ಬಿಜೆಪಿ ವರಿಷ್ಠರಿಗೆ ಒತ್ತಿ ಹೇಳಿದ್ದೇನೆ. ನನ್ನ ಮಾತಿಗೆ ಅವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಮೈತ್ರಿ ವಿಚಾರವಷ್ಟೇ ಅಲ್ಲದೆ ಕರ್ನಾಟಕಕ್ಕೆ ಸಂಬಂಧಿಸಿದ ಇತರ ಅನೇಕ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಗೃಹ ಸಚಿವ ಅಮಿತ್ ಶಾ ಜತೆ ಚರ್ಚಿಸಿದ್ದೇವೆ. ಕಾವೇರಿ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತೋರಿದೆ. ರಾಜ್ಯದ ರೈತರಿಗೆ ಮಾರಕವಾಗುವ ರೀತಿ ಸರ್ಕಾರದ ನಡವಳಿಕೆ ಇದೆ. ನಿವೃತ್ತ ನ್ಯಾಯಮೂರ್ತಿಗಳ ಜೊತೆ ಸಭೆ ಮಾಡುವ ಕನಿಷ್ಠ ತಿಳವಳಿಕೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಎನ್​ಡಿಎ ಒಕ್ಕೂಟಕ್ಕೆ ಜೆಡಿಎಸ್​ ಸೇರ್ಡಡೆಯಾಗಿದ್ದಕ್ಕೆ ಸ್ವಾಗತಿಸುತ್ತೇನೆ ಎಂದು ದೆಹಲಿಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು. ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ನನ್ನ ಒಳ್ಳೆಯ ಸ್ನೇಹಿತರು. ಲೋಕಸಭೆಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ 25ಕ್ಕೂ ಹೆಚ್ಚು ಸೀಟ್ ಬಿಜೆಪಿ ಸಿಗಲಿದೆ ಎಂದು ಅವರು ಹೇಳಿದರು.

ಜೆಡಿಎಸ್‌ ಪ್ರಮುಖರನ್ನು ಹೊರಗಿಟ್ಟು ಚರ್ಚೆ:

ಕುತೂಹಲದ ಸಂಗತಿ ಎಂದರೆ ಪಕ್ಷದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶೆಂಪೂರ್ ದೆಹಲಿಗೆ ತೆರಳಿಲ್ಲ. ಪಕ್ಷದ ಮೈತ್ರಿಗಾಗಿ ಬಿಜೆಪಿ ಕೇಂದ್ರ ನಾಯಕತ್ವವನ್ನು ಭೇಟಿ ಮಾಡಲು ದೆಹಲಿಗೆ ಹೋಗುವುದಾಗಿ ಕುಮಾರಸ್ವಾಮಿ ಮಾಧ್ಯಮಗಳಿಗೆ ಹೇಳಿದ್ದರು. ಮೂರು ವಾರಗಳ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕುಮಾರಸ್ವಾಮಿ ಜೊತೆಗೆ ಪುತ್ರ ನಿಖಿಲ್ ತೆರಳಿದ್ದಾರೆ, ದೇವೇಗೌಡರು ಈಗಾಗಲೇ ದೆಹಲಿಯಲ್ಲಿದ್ದಾರೆ.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಹೋಗಲು ನಿರ್ಧರಿಸಿದರೆ, ಕುಮಾರಸ್ವಾಮಿ ಅವರು ಕೆಲವು ಅಸಮಾಧಾನವನ್ನು ಎದುರಿಸಬೇಕಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಬಿಜೆಪಿಯ ಕೆಲವು ವಿಭಾಗಗಳು ಜೆಡಿಎಸ್ ಜೊತೆ ಮೈತ್ರಿಗೆ ಒಲವು ಹೊಂದಿಲ್ಲದ ಕಾರಣ ಪಕ್ಷದೊಳಗೆ ಶೀಘ್ರದಲ್ಲೇ ಅಥವಾ ನಂತರ ಅಸಮಾಧಾನ ಎದುರಿಸಬೇಕಾಗಬಹುದು ಎನ್ನುವುದು ಎದ್ದು ಕಾಣುತ್ತಿದ್ದು, ಅಧಿಕೃತವಾಗಿ ಮೈತ್ರಿ ವಿಚಾರ ಘೋಷಣೆಯಾದ ಬೆನ್ನಲ್ಲೇ ಇದನ್ನು ಜೆಡಿಎಸ್‌ ಪಕ್ಷದಲ್ಲಿರುವ ಕೆಲ ನಾಯಕರು ವಿರೋಧಿಸಿ ಪಕ್ಷವು ವಹಿಸಿರುವ ಸ್ಥಾನಗಳಿಗೆ ರಾಜೀನಾಮೆಯನ್ನು ನೀಡಲು ಸಿದ್ದರಾಗಿದ್ದಾರೆ.

ಇದನ್ನೂ ಓದಿ:ಬಿಜೆಪಿ-ಜೆಡಿಎಸ್‌ ಮೈತ್ರಿ:ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆದಿಲ್ಲ ಸ್ಪಷ್ಟಪಡಿಸಿದ ಎಚ್‌.ಡಿ.ಕೆ

ಜೆಡಿಎಸ್ ರಾಜ್ಯ ವಕ್ತಾರೆ ಹುದ್ದೆಗೆ ರಾಜೀನಾಮೆ:

ಜಾತ್ಯತೀತ ಜನತಾದಳವು(ಜೆಡಿಎಸ್‌) ರಾಜ್ಯ ವಕ್ತಾರೆ ಹುದ್ದೆಗೆ ಯುಟಿ ಆಯಿಶ ಫರ್ಝಾನ ಅವರು ಸೆ-22 ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. ಜಾತ್ಯಾತೀತ ಜನತಾದಳದ ಮಧ್ಯಮ ಮುಖ್ಯಸ್ಥರಾದ ಶ್ರೀ ಕಂಠೇಗೌಡ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ಕನ್ನಡ ನಾಡಿನ ಸಮೃದ್ಧಿ ಮತ್ತು ಜಾತ್ಯಾತೀತ ನಿಲುವುಗಳು ನನ್ನ ಜೀವನದ ಪ್ರಧಾನ ಆಶಯಗಳಾಗಿದ್ದು, ಆ ನಿಟ್ಟಿನಲ್ಲಿ ಶ್ರಮಿಸುವ ಸಲುವಾಗಿ ನಾನು ತಮ್ಮ ಪಕ್ಷವನ್ನು ಸೇರಿದ್ದೆ. ಆದರೆ, ಬದಲಾದ ಕಾಲಘಟದಲ್ಲಿ ನನ್ನ ನಿಲುವುಗಳು ಮತ್ತು ಪಕ್ಷದ ನಿಲುವುಗಳಲ್ಲಿ ಹೊಂದಾಣಿಯಾಗದ ಕಾರಣ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಜೆಡಿಎಸ್‌ ಪಕ್ಷ ನೀಡಿದ್ದ ರಾಜ್ಯ ವಕ್ತಾರೆ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಗೌರವದಿಂದ ನಡೆಸಿಕೊಂಡ ಎಲ್ಲಾರಿಗೂ ಧನ್ಯವಾದಗಳು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜೆಡಿಎಸ್ ಪಕ್ಷಕ್ಕೆ ರಾಜ್ಯಾಧ್ಯಕ್ಷ ಅಂತ ಒಬ್ಬರಿದ್ದರು ಈ ಚಿತ್ರದಲ್ಲಿ ಅವರೆಲ್ಲಿದ್ದಾರೆ? ಎಂದು ಕಾಂಗ್ರೆಸ್‌ ಟಾಂಗ್:

ಭಾರತೀಯ ಜನತಾ ಪಕ್ಷ ಮತ್ತು ಜಾತ್ಯತೀತ ಜನತಾದಳ ಮೈತ್ರಿ ಕುರಿತ ಮಾತುಕತೆಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ರಾಜ್ಯಾಧ್ಯಕ್ಷ ಅಂತ ಒಬ್ಬರಿದ್ದರು ಈ ಚಿತ್ರದಲ್ಲಿ ಅವರೆಲ್ಲಿದ್ದಾರೆ? ಎಂದು ಟಾಂಗ್ ನೀಡಿದೆ.

ಜೆಡಿಎಸ್ ಪಕ್ಷಕ್ಕೆ ರಾಜ್ಯಾಧ್ಯಕ್ಷ ಅಂತ ಒಬ್ಬರಿದ್ದರು ಈ ಚಿತ್ರದಲ್ಲಿ ಅವರೆಲ್ಲಿದ್ದಾರೆ? ಪಕ್ಷದ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳುವುದಕ್ಕೆ ರಾಜ್ಯಾಧ್ಯಕ್ಷರ ಅಭಿಪ್ರಾಯ ಬೇಕಿಲ್ಲವೇ? ಅವರ ಉಪಸ್ಥಿತಿ ಬೇಕಿಲ್ಲವೇ? ಎಂದು ಪ್ರಶ್ನಿಸಿದೆ. ರಾಜ್ಯಾಧ್ಯಕ್ಷ ಹುದ್ದೆ ಎನ್ನುವುದು ಕುಮಾರಸ್ವಾಮಿಯವರ ಕುಟುಂಬ ಕೈ ಒರೆಸಲು ಇಟ್ಟುಕೊಂಡಿರುವ ಟಿಶ್ಯೂ ಪೇಪರ್ ಮಾತ್ರವೇ? ವಿಮಾನದ ಟಿಕೆಟ್ ಬುಕ್ ಮಾಡಲೊಬ್ಬರು, ಹೋಟೆಲ್ ರೂಮ್ ಬುಕ್ ಮಾಡಲೊಬ್ಬರು ಹಾಗೂ ತಮ್ಮ ಪುತ್ರ ಜೊತೆಗಿದ್ದರೆ ಸಾಕೇ? ಎಂದು ಟೀಕಾ ಪ್ರಹಾರ ನಡೆಸಿದೆ.

ಜಾತ್ಯಾತೀತ ಮತದಾರರ ಹಿತಕ್ಕಿಂತ ಕುಟುಂಬದ ಹಿತವೇ ಮುಖ್ಯವಾಯ್ತೆ?: ಕಾಂಗ್ರೆಸ್‌ 

ಕೇವಲ ಕುಟುಂಬದ ಹಿತಾಸಕ್ತಿಗಾಗಿ ಜಾತ್ಯಾತೀತತೆಯನ್ನು ವಿಸರ್ಜಿಸಿರುವ ಜೆಡಿಎಸ್ ತನ್ನ ಅಲ್ಪಸಂಖ್ಯಾತ ಮತದಾರರಿಗೆ ಏನೆಂದು ಉತ್ತರಿಸುತ್ತದೆ? ಬಿಜೆಪಿಯ ಅಲ್ಪಸಂಖ್ಯಾತ ಹಾಗೂ ದಲಿತ ವಿರೋಧಿ ನೀತಿಗಳಿಗೆ ಜೆಡಿಎಸ್ ನ ಸಮ್ಮತಿಯೂ ಇದೆಯೇ? ಹಿಂದೆ ಜೆಡಿಎಸ್ ಪಕ್ಷದಲ್ಲೇ ಇದ್ದ ಸಂಸದ ಡ್ಯಾನಿಷ್ ಅಲಿ ಅವರ ಬಗ್ಗೆ ಅತ್ಯಂತ ತುಚ್ಛವಾಗಿ ಮಾತಾಡಿದ ಬಿಜೆಪಿ ಸಂಸದನ ಮಾತನ್ನು ಜೆಡಿಎಸ್ ಕೂಡ ಅನುಮೋದಿಸುತ್ತದೆಯೇ? ಜಾತ್ಯಾತೀತ ಮತದಾರರ ಹಿತಕ್ಕಿಂತ ಕುಟುಂಬದ ಹಿತವೇ ಮುಖ್ಯವಾಯ್ತೆ? ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ವಿಡಿಯೋ ನೋಡಿ:INDIA v/s NDA : 2024 ರ ಲೋಕಸಭೆಗೆ ಸಿದ್ದಗೊಂಡ ವೇದಿಕೆ Janashakthi Media

Donate Janashakthi Media

Leave a Reply

Your email address will not be published. Required fields are marked *