ಸೂರತ್: ಸೂರತ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಮುಖೇಶ್ ಕುಮಾರ್ ದಲಾಲ್ ಅವಿರೋಧವಾಗಿ ಸಂಸದರಾಗಿ ಆಯ್ಕೆಯಾಗಿರುವ ಕುರಿತು ಟ್ವಿಸ್ಟ್ ಒಂದು ಸಿಕ್ಕಿದ್ದು,ಕಣದಲ್ಲಿದ್ದ ಸ್ವತಂತ್ರ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದು ಬಿಜೆಪಿಯ ಸೂಚನೆಯ ಮೇರೆಗೆ ಎಂಬುದನ್ನು ಬಿಜೆಪಿ ಸ್ವತಃ ಸ್ಪಷ್ಟಪಡಿಸಿದೆ.
ಸೂರತ್ ಲೋಕಸಭಾಕ್ಷೇತ್ರ ಕಣಕ್ಕಿಳಿದಿದ್ದ ಸ್ವತಂತ್ರ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದು, ಕಾಂಗ್ರೆಸ್‌ನ ಡಮ್ಮಿ ಅಭ್ಯರ್ಥಿಯ ನಾಮಪತ್ರವನ್ನು ಚುನಾವಣಾ ಆಯೋಗ ಒಪ್ಪದೇ ಇದ್ದುದ್ದಕ್ಕಾಗಿ ಅವಿರೋಧವಾಗಿ ಬಿಜೆಪಿ ಪಕ್ಷದ ಮುಖೇಶ್ ಕುಮಾರ್ ದಲಾಲ್ ಅವಿರೋಧವಾಗಿ ಸಂಸದರಾಗಿ ಆಯ್ಕೆಯಾಗಿದ್ದರು.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ,.ಸೂರತ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸ್ವತಂತ್ರ ಅಭ್ಯರ್ಥಿಗಳಿಗೆ ನಾಮಪತ್ರವನ್ನು ಹಿಂಪಡೆಯುವಂತೆ ಕೇಳಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ. ಸೂರತ್‌ನಲ್ಲಿ ಬಿಜೆಪಿ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುವಂತೆ ಸೂಚಿಸಿದ್ದು, 12 ವರ್ಷಗಳ ನಂತರ ತಮ್ಮ ಪಕ್ಷದ ಅಭ್ಯರ್ಥಿ ಅವಿರೋಧವಾಗಿ ಗೆದ್ದ ಮೊದಲ ಲೋಕಸಭಾ ಅಭ್ಯರ್ಥಿಯಾಗಿದ್ದಾರೆ ಎಂದಿದ್ದಾರೆ.
ಇಷ್ಟರ ಮಟ್ಟಿಗೆ ಬಿಜೆಪಿ ಕುಸಿದುಹೋಗಿದ್ದೆಯೇ? ಎನ್ನುವ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ತಾವ್ಡೆ, ‘ಸ್ವತಂತ್ರ ಅಭ್ಯರ್ಥಿಗಳಿಗೆ ಹೆಸರು ಹಿಂಪಡೆಯುವಂತೆ ಮನವಿ ಮಾಡಿದ್ದೆವು ಮತ್ತು ಅವರು ತಮ್ಮ ಹೆಸರನ್ನು ಹಿಂಪಡೆದಿದ್ದಾರೆ. ಇದರಲ್ಲಿ ರಾಜಕೀಯದ ಮಟ್ಟ ಕುಸಿತದಂತಹದ್ದೇನಿದೆ? ಹೆಸರು ಹಿಂಪಡೆಯಲು ಬಿಜೆಪಿ ಇತರ ಎಲ್ಲ ಅಭ್ಯರ್ಥಿಗಳನ್ನು ಸಂಪರ್ಕಿಸಿದೆಯೇʼ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾಮಪತ್ರ ಸಲ್ಲಿಸುವ ಮುನ್ನವೇ ಹೆಸರು ಹಿಂಪಡೆಯಲು ಎಲ್ಲ ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದೆವು ಎಂದು ಉತ್ತರಿಸಿರುವುದಾಗಿ “ದಿ ಹಿಂದೂ” ವರದಿ ಮಾಡಿದೆ.
ಗೆಲುವಿಗಾಗಿ ಚುನಾವಣೆಗೆ ಸ್ಪರ್ಧಿಸುತ್ತೇವೆ ಎಂದ ತಾವ್ಡೆ, ನಿಯಮಗಳು ಮತ್ತು ಸಂವಿಧಾನದ ಪ್ರಕಾರ, ಎಲ್ಲರೂ ಹಿಂತೆಗೆದುಕೊಂಡರೆ ಅಭ್ಯರ್ಥಿಗಳು ಕಣದಲ್ಲಿ ಉಳಿಯುವುದಿಲ್ಲ. ಯಾರಾದರೂ ನೋಟಾಗೆ ಮತ ಹಾಕಲು ಬಯಸಿದರೆ, ಅವರು ಹಾಗೆ ಮಾಡಬಹುದಿತ್ತು. ಇದರ್ಥ ಅಲ್ಲಿಯೂ ನೋಟಾ ಜನರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆಯೇ ಎಂದರ್ಥವಾಗಿ ಎಂದಿದ್ದಾರೆ.
ಸೂರತ್‌ನಲ್ಲಿ ಒಟ್ಟು 15 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಕಾಂಗ್ರೆಸ್, ಬಹುಜನ ಸಮಾಜ ಪಕ್ಷ ಮತ್ತು ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಇವರಲ್ಲಿ 6 ಮಂದಿಯನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದು, ಒಂಬತ್ತು ಮಂದಿ ಅರ್ಜಿ ಹಿಂಪಡೆದಿದ್ದು, ದಲಾಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ವರದಿಯ ಪ್ರಕಾರ, ಬಿಜೆಪಿಯ ಕಾನೂನು ಪ್ರಕೋಷ್ಠದ ಮುಖ್ಯಸ್ಥ ಕಿರಣ್ ಘೋಘರಿ, ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಮತ್ತು ಡಮ್ಮಿ ಅಭ್ಯರ್ಥಿ ಸುರೇಶ್ ಪಡಸಾಲ ಅವರ ಅಫಿಡವಿಟ್‌ಗಳನ್ನು ಸೂರತ್ ನಗರ ಬಿಜೆಪಿ ಕಾನೂನು ಪ್ರಕೋಷ್ಠದ ಸದಸ್ಯರಿಂದ ನೋಟರೈಸ್ ಮಾಡಲಾಗಿದೆ ಎಂದು ಕಾಂಗ್ರೆಸಿನ ಅಭ್ಯರ್ಥಿ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವರ ಏಜೆಂಟ್ ದಿನೇಶ್ ಜೋಧಾನಿ, ನೀಲೇಶ್ ಕುಂಬಾನಿಯ ಪತ್ರಗಳ ಮೇಲಿನ ಮೂರು ಸಹಿಗಳ ಬಗ್ಗೆ ಆಕ್ಷೇಪಣೆಗಳನ್ನು ಎತ್ತಿದ್ದರು. ಮತ್ತೊಬ್ಬರ ಪರ ವಕೀಲರು ನಕಲಿ ಆರೋಪ ಮಾಡಿದ್ದರು. ಈ ವಿಷಯದಲ್ಲಿ, ಸೂರತ್ ಜಿಲ್ಲಾಧಿಕಾರಿ ಸೌರಭ್ ಪರ್ಘಿ ಏಪ್ರಿಲ್ 21 ‘ವಿಶೇಷ ವಿಚಾರಣೆ’ ನಡೆಸಿ ಈ ಆಕ್ಷೇಪಣೆಗಳನ್ನು ಎತ್ತಿ ಹಿಡಿದಿದ್ದರು
ನಾಲ್ವರು ಪ್ರತಿಪಾದಕರು ಸೂರತ್ ಕ್ರೈಂ ಬ್ರಾಂಚ್ ಮುಂದೆ ಹಾಜರಾಗಿ ನಾಮನಿರ್ದೇಶನ ರದ್ದುಗೊಳಿಸಲು ಕಾರಣ ನೀಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಆಪಾದಿತ ಭಿನ್ನಾಭಿಪ್ರಾಯಗಳಿಂದಾಗಿ ನಾಮಪತ್ರವನ್ನು ತಿರಸ್ಕರಿಸಿದ ಪಕ್ಷದ ಅಭ್ಯರ್ಥಿ ಕುಂಬಾನಿ ಮನೆಯ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದ್ದು, ಕುಂಬಾನಿ ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನೀಲೇಶ್ ಕುಂಬಾನಿ ಅವರು ಕೈಗೆ ಸಿಗುತ್ತಿಲ್ಲ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ. ಆದಾಗ್ಯೂ, ಸೂರತ್ ಕಾರ್ಪೊರೇಷನ್‌ನ ಮಾಜಿ ಕಾಂಗ್ರೆಸ್ ನಾಯಕ ಪ್ರಫುಲ್ಲ ತೊಗಾಡಿಯಾ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡುತ್ತಾ, ಕುಂಬಾನಿ ಗೋವಾದಲ್ಲಿದ್ದು, ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವವರೆಗೆ ಅಲ್ಲಿಯೇ ಇರುತ್ತಾರೆ ಎಂದಿದ್ದಾಋಎ.
ಕುಂಬಾನಿ ಕಾಂಗ್ರೆಸ್ ಕೌನ್ಸಿಲರ್ ಆಗಿದ್ದು, 2022 ರ ವಿಧಾನಸಭಾ ಚುನಾವಣೆಯಲ್ಲಿ ಸೂರತ್‌ನ ಕಮ್ರೇಜ್‌ನಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಇದನ್ನೂ ನೋಡಿ: ಚಾಮರಾಜನಗರ ಲೋಕಸಭಾ ಕ್ಷೇತ್ರ: ಬಿಜೆಪಿ ಎರಡನೇ ಬಾರಿ ಗೆಲ್ಲುತ್ತಾ ? ಮರಳಿ ಅಧಿಕಾರ ಸ್ಥಾಪಿಸುತ್ತಾ ಕಾಂಗ್ರೆಸ್?!