ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿ ಆಗಲು ಕೇಂದ್ರದ ನಾಯಕರು 2500 ಕೋಟಿ ಕೊಡಿ ಎಂದು ಕೇಳಿರುವ ಹಿನ್ನಲೆ ಹಾಗೂ ಅಮಿತ್ ಷಾ ಈ ಹಿಂದೆ ಚುನಾವಣೆಗಳು ನಮಗೆ ವ್ಯವಹಾರ ಇದ್ದಂತೆ ಎಂಬ ಹೇಳಿಕೆ ನೀಡಿದ್ದು ಒಂದೆ ಆಗಿದೆ ಎಂದು ಹೇಳಿದ್ದಾರೆ.
ಯತ್ನಾಳ್ ಅವರಿಗೆ ಎರಡುವರೆ ಸಾವಿರ ಕೋಟಿ ಹಣ ಕೇಂದ್ರದ ಯಾವ ನಾಯಕರು ಕೇಳಿರಬೇಕು? ಮುಖ್ಯಮಂತ್ರಿ ಸ್ಥಾನಕ್ಕಾಗಿ ಎರಡುವರೆ ಸಾವಿರ ಕೋಟಿ ಕೇಳಿರುವುದು ಕರ್ನಾಟಕ ರಾಜ್ಯ ತಲೆ ತಗ್ಗಿಸುವಂತದ್ದು, ಮಾತ್ರವಲ್ಲ ಸಂವಿಧಾನ, ಪ್ರಜಾಪ್ರಭುತ್ವ ಗಾಳಿಗೆ ತೂರಿ ಬಿಜೆಪಿಯವರು ಹಣದ ಮೇಲೆ ರಾಜಕಾರಣ ಮಾಡ್ತಿರೋದು ಸ್ಪಷ್ಟವಾಗಿ ಕಾಣ್ತಿದೆ ಎಂದರು.
ಇದನ್ನು ಓದಿ: ದೆಹಲಿಯಿಂದ ಬಂದವರು ಸಿಎಂ ಮಾಡ್ತೀವಿ 2500 ಕೋಟಿ ಕೊಡಿ ಅಂದ್ರು: ಬಸನಗೌಡ ಪಾಟೀಲ್ ಯತ್ನಾಳ್
ಧರ್ಮದ ಮೇಲೆ, ಹಣದ ಮೇಲೆ ರಾಜಕೀಯ ನಡೆಸುವುದು ಬಿಜೆಪಿಯ ಚುನಾವಣ ಕಾರ್ಯತಂತ್ರ. ಹಣ ಕೇಳಿದ್ದು ಯಾರು? ಎಂಬುದನ್ನು ಈ ಕೂಡಲೇ ಯತ್ನಾಳ್ ಅವರಿ ಸ್ಪಷ್ಟಪಡಿಸಬೇಕು. ಅಮಿತ್ ಶಾ ಕೇಳಿದ್ದಾ? ಮೋಹನ್ ಭಾಗವತ್ ಕೇಳಿದ್ದಾ? ಜೆ.ಪಿ ನಡ್ಡಾ ಕೇಳಿದ್ದಾ? ಇಲ್ಲ ಮೋದಿ ಕೇಳಿದ್ದಾ? ಎಂದು ಬಿಜೆಪಿ ಕೇಂದ್ರದ ನಾಯಕರ ಮೇಲೆ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಕೂಡಲೇ ರಾಜ್ಯಪಾಲರು ಯತ್ನಾಳ್ ಹೇಳಿಕೆ ಕುರಿತು ತನಿಖೆಗೆ ಆದೇಶಿಸಬೇಕೆಂದು ಹರಿಪ್ರಸಾದ್ ಒತ್ತಾಯಿಸಿದ್ದಾರೆ.