ನವದೆಹಲಿ: ಚುನಾವಣಾ ಬಾಂಡ್ ಯೋಜನೆಯ ಕುರಿತು ಸುಪ್ರಿಂ ಕೋರ್ಟ್ ತೀರ್ಪು ಕಾದಿರಿಸಿದ ನಂತರ ಭಾರತೀಯ ಜನತಾ ಪಕ್ಷವು 8,350 ಕೋಟಿ ರೂ.ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಮುದ್ರಿಸಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದು ಬಂದಿದೆ. ಚುನಾವಣಾ ಬಾಂಡ್
ಮಾಹಿತಿ ಹಕ್ಕು ಹೋರಾಟಗಾರ ಕಮೊಡೊರ್ ಲೋಕೇಶ್ ಬಾತ್ರಾ ಅವರು ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಯಿಂದ ಬಹಿರಂಗಗೊಂಡಿದೆ. ನಿರ್ದಿಷ್ಟವಾಗಿ, ಈ ಅವಧಿಯಲ್ಲಿ ತಲಾ 1 ಕೋಟಿ ರೂ. ಮೊತ್ತದ 8,350 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಮುದ್ರಿಸಲಾಗಿದೆ. ನವೆಂಬರ್ 2023ರಲ್ಲಿ ಚುನಾವಣಾ ಬಾಂಡ್ ಗಳ ಸಾಂವಿಧಾನಿಕ ಸಿಂಧುತ್ವದ ಕುರಿತು ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾದಿರಿಸಿದ ನಂತರ ಈ ಚುನಾವಣಾ ಬಾಂಡ್ ಗಳನ್ನು ಮುದ್ರಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಬಾತ್ರಾ, ಯೋಜನೆಯ ಕುರಿತು ಕಾನೂನಾತ್ಮಕ ವಿಚಾರಣೆ ನಡೆಯುತ್ತಿದ್ದರೂ, 2024ರಲ್ಲಿ ಗಮನಾರ್ಹ ಸಂಖ್ಯೆಯ ಚುನಾವಣಾ ಬಾಂಡ್ ಗಳನ್ನು ಮುದ್ರಿಸಿರುವುದರ ಹಿಂದಿನ ಉದ್ದೇಶವು ಊಹಾಪೋಹಗಳಿಗೆ ಕಾರಣವಾಗಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಪಾಲನೆಯ ಆದೇಶ ನೀಡಿರುವುದರಿಂದ ಕೇಂದ್ರ ಸರಕಾರಕ್ಕೆ ಈ ನಿರ್ಧಾರ ಕೈಗೊಳ್ಳುವ ವಿಶ್ವಾಂಸ ಮೂಡಿರಬಹುದು, ಅದಕ್ಕಾಗಿಯೇ ಬಾಂಡ್‌ಗಳನ್ನು ಮುದ್ರಿಸುವ ಕೆಲಸದಲ್ಲಿ ಬಿಜೆಪಿ ತೊಡಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ : ಚುನಾವಣಾ ಬಾಂಡ್ ಬಹಿರಂಗ : ಮೋದಿ ಸರ್ಕಾರದ ದೊಡ್ಡಹಗರಣ ಬಯಲಿಗೆ
2018ರಿಂದ 2023ರ ನಡುವಿನ ಚುನಾವಣಾ ಬಾಂಡ್ ಯೋಜನೆಗೆ ಸಂಬಂಧಿಸಿದ ಮುದ್ರಣ, ಕಮಿಷನ್ ಹಾಗೂ ಇನ್ನಿತರ ಕಾರ್ಯಾಚರಣೆ ವೆಚ್ಚಗಳಾಗಿ ಭಾರತೀಯ ಸ್ಟೇಟ್ ಬ್ಯಾಂಕ್, ಕೇಂದ್ರ ಸರಕಾರಕ್ಕೆ ರೂ. 13.50 ಕೋಟಿ ಮೊತ್ತದ ಶುಲ್ಕವನ್ನು ವಿಧಿಸಿದೆ ಎಂಬ ವಿವರವೂ ಮಾಹಿತಿ ಹಕ್ಕಿನಿಂದ ಹೊರ ಬಂದಿದೆ.
2018ರಿಂದ ಇಲ್ಲಿಯವರೆಗೆ ಭಾರತೀಯ ಜನತಾ ಪಕ್ಷವು ರೂ. 8,251.8 ಕೋಟಿ ಮೊತ್ತವನ್ನು ಚುನಾವಣಾ ಬಾಂಡ್ ಗಳ ಮೂಲಕ ದೇಣಿಗೆ ಪಡೆದಿರುವುದು ಭಾರತೀಯ ಚುನಾವಣಾ ಆಯೋಗವು ಪ್ರಕಟಿಸಿರುವ ದತ್ತಾಂಶದಿಂದ ಬಹಿರಂಗಗೊಂಡಿದೆ. ಇದೇ ಅವಧಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಟ್ಟು ರೂ. 16,518 ಕೋಟಿ ಮೊತ್ತದ ದೇಣಿಗೆಯನ್ನು ಚುನಾವಣಾ ಬಾಂಡ್ ಮೂಲಕ ಸ್ವೀಕರಿಸಿದ್ದು, ಬಿಜೆಪಿಯೊಂದೇ ಸುಮಾರು ಶೇ. 50ರಷ್ಟು ದೇಣಿಗೆಯನ್ನು ಚುನಾವಣಾ ಬಾಂಡ್ ಮೂಲಕ ಸ್ವೀಕರಿಸಿದೆ.
ಕೇಂದ್ರ ಸರಕಾರ ಜಾರಿಗೆ ತಂದಿದ್ದ ಈ ಚುನಾವಣಾ ಬಾಂಡ್ ಯೋಜನೆಯನ್ನು ಫೆ.15ರಂದು ಸುಪ್ರೀಂಕೋರ್ಟ್ ರದ್ದುಪಡಿಸಿ ಮಹತ್ವದ ತೀರ್ಪು ನೀಡಿತ್ತು. ಇದು ‘ಅಸಾಂವಿಧಾನಿಕ’ ಎಂದಿದ್ದ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಖರೀದಿಸಿದವರ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಬೇಕು ಎಂದು ಎಸ್‌ಬಿಐಗೆ ಖಡಕ್ ನಿರ್ದೇಶನ ನೀಡಿತ್ತು. 2019 ರಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಆಸೋಸಿಷಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ (ಎಡಿಆರ್) ಚುನಾವಣಾ ಬಾಂಡ್ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದವು.
ವಿಡಿಯೋ ನೋಡಿ : ಚುನಾವಣಾ ಬಾಂಡ್ ಹಗರಣ| ಹೆದರಸಿ, ಬೆದರಿಸಿ ಹಣ ಪಡೆದ ಬಿಜೆಪಿ