ನವದೆಹಲಿ: ರಾಜಕೀಯ ಪಕ್ಷಗಳಿಗೆ ಸಂಗ್ರಹವಾಗುವ ನಿಧಿಯಲ್ಲಿ ಚುನಾವಣಾ ಬಾಂಡ್ ಮೂಲಕವೂ ಅತ್ಯಧಿಕ ಮೊತ್ತದ ಹಣ ಸಂಗ್ರವಾಗಿದ್ದು 2019-20ನೇ ಸಾಲಿನಲ್ಲಿ 3,355 ಕೋಟಿ ಮೌಲ್ಯದ ನಿಧಿ ವಿವಿಧ ರಾಜಕೀಯ ಪಕ್ಷಗಳಿಗೆ ಹಣ ಸಂದಾಯವಾಗಿದೆ. ಈ ಪೈಕಿ ಬಿಜೆಪಿಗೆ 2,555 ಕೋಟಿ ಮೌಲ್ಯದ ಬಾಂಡ್ ಬಂದಿವೆ. ಕಳೆದ ಬಾರಿಗಿಂತ ಅಧಿಕ ಮೊತ್ತದ ದೇಣಿಗೆಯನ್ನು ಬಿಜೆಪಿಯು ಚುನಾವಣಾ ಬಾಂಡ್ ಮೂಲಕ ಸಂಗ್ರಹಿಸಿಕೊಂಡಿದೆ. ಶೇಕಡ 75ರಷ್ಟು ಹೆಚ್ಚಳವಾಗಿದ್ದು, 1,450 ಕೋಟಿ ರೂಪಾಯಿ ಅಧಿಕ ಮೊತ್ತದ ನಿಧಿ ಸಂಗ್ರಹವಾಗಿದೆ.
2019-20ನೇ ಸಾಲಿನ ರಾಜಕೀಯ ಪಕ್ಷಗಳ ವಾರ್ಷಿಕ ಆಯವ್ಯಯ ಲೆಕ್ಕಪತ್ರಗಳ ವಿವರಗಳನ್ನು ಚುನಾವಣಾ ಆಯೋಗ ಸೋಮವಾರ ಬಹಿರಂಗಪಡಿಸಿತು. 2019-20ನೇ ಸಾಲಿನಲ್ಲಿ ಬಿಜೆಪಿಯ ಒಟ್ಟು ಆದಾಯ 3,623 ಕೋಟಿ ರೂಪಾಯಿ ಹಾಗೂ ಕಾಂಗ್ರೆಸ್ ಒಟ್ಟು ಆದಾಯ 682 ಕೋಟಿ ರೂಪಾಯಿ ಆಗಿದೆ.
ಇದನ್ನು ಓದಿ: ಚುನಾವಣಾ ಬಾಂಡ್ ಬಗ್ಗೆ ಸುಪ್ರಿಂ ಕೋರ್ಟ್: ವಾಸ್ತವ ಪ್ರಶ್ನೆಯಿಂದ ನುಣುಚಿಕೊಳ್ಳುವ ಕ್ರಮ
ದೇಶದ ಸಾರ್ವಜನಿಕರು, ಉದ್ಯಮಿಗಳು, ಕಾರ್ಪೋರೇಟ್ ಸಂಸ್ಥೆಗಳು ಮತ್ತು ಗಣ್ಯರು ವಿವಿಧ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡುವ ಅವಕಾಶವನ್ನು 2018ರ ಜನವರಿ 2ರಂದು ಕೇಂದ್ರ ಸರ್ಕಾರ ಘೋಷಿತು. ಚುನಾವಣಾ ಬಾಂಡ್ ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 29ಎ ಅಡಿ ನೊಂದಣಿಯಾದ ರಾಜಕೀಯ ಪಕ್ಷಗಳಷ್ಟೇ ಪಡೆದುಕೊಳ್ಳಬಹುದು. ಇಂಥ ಪಕ್ಷಗಳು ತಮ್ಮ ಅಧಿಕೃತ ಖಾತೆಗಳ ಮೂಲಕ ಬಾಂಡ್ ನಗದೀಕರಣಗೊಳಿಸಬಹುದು.
ಬಿಜೆಪಿ ಪಕ್ಷದ ನಂತರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕ ಮೊತ್ತದ ನಿಧಿ ಸಂಗ್ರಹವಾಗಿದ್ದೂ, ನಿಧಿ ಸಂಗ್ರಹದಲ್ಲಿ ಶೇಕಡ 17ರಷ್ಟು ಇಳಿಕೆ ಕಂಡಿದೆ. 2018ರಲ್ಲಿ ಚುನಾವಣಾ ಬಾಂಡ್ ಮೂಲಕ 383 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. 2019-20ನೇ ಸಾಲಿನಲ್ಲಿ ಕಾಂಗ್ರೆಸ್ ಚುನಾವಣಾ ಬಾಂಡ್ ಮೂಲಕ 318 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಇದನ್ನು ಓದಿ: ಚುನಾವಣೆ ಆಯೋಗವನ್ನು ಬುಡಮೇಲು ಮಾಡುವ ಕೃತ್ಯ
ಅದೇ ರೀತಿಯಲ್ಲಿ ಪ್ರಾದೇಶಕ ಪಕ್ಷಗಳು ಸಹ ಚುನಾವಣಾ ಬಾಂಡ್ ಮೂಲಕ ನಿಧಿ ಸಂಗ್ರಹಿಸಿಕೊಂಡಿವೆ. ಆ ಪೈಕಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ 100.46 ಕೋಟಿ, ಶರದ್ ಪವಾರ್ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ 29.25 ಕೋಟಿ, ಶಿವಸೇನೆಗೆ 41 ಕೋಟಿ, ಡಿಎಂಕೆ ಪಕ್ಷಕ್ಕೆ 45 ಕೋಟಿ, ಲಾಲೂ ಪ್ರಸಾದ್ ಯಾದವ್ ರಾಷ್ಟ್ರೀಯ ಜನತಾ ದಳಕ್ಕೆ 2.5 ಕೋಟಿ ಮತ್ತು ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ 18 ಕೋಟಿ ರೂಪಾಯಿಯಷ್ಟು ನಿಧಿ ಚುನಾವಣಾ ಬಾಂಡ್ ಮೂಲಕ ಸಂಗ್ರಹವಾಗಿದೆ ಎಂದು ಕೇಂದ್ರೀಯ ಚುನಾವಣಾ ಆಯೋಗದ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
2019ರ ಮಾರ್ಚ್ ಅವಧಿಗೆ ಹೋಲಿಸಿದರೆ, 2020ರ ಮಾರ್ಚ್ ವೇಳೆಗೆ ಬಿಜೆಪಿ ಆದಾಯ ಹೆಚ್ಚಾಗಿದೆ. ಮಾರ್ಚ್ 2020ರ ಸಾಲಿಗೆ ಚುನಾವಣಾ ಬಾಂಡ್ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಸಂಗ್ರಹವಾದ ಮೊತ್ತದಲ್ಲಿ ಶೇಕಡ 68ರಷ್ಟು ಪಾಲು ಪಡೆದುಕೊಂಡಿದೆ. ಚುನಾವಣಾ ಬಾಂಡ್ ಪದ್ಧತಿಯನ್ನು ಆರಂಭಿಸಿದ ದಿನದಿಂದ ಈವರೆಗೂ ಅತಿಹೆಚ್ಚು ಆದಾಯ ಗಳಿಸಿಕೊಂಡ ಪಕ್ಷ ಬಿಜೆಪಿಯಾಗಿದೆ.