ಬೆಂಗಳೂರು : ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೇನು ಒಂದು ವರ್ಷ ಬಾಕಿ ಇರುವಾಗಲೇ 1998ರಲ್ಲಿ ಬಿಜೆಪಿ ಚುನಾವಣೆ ಗೆದ್ದ ರಹಸ್ಯವನ್ನು ಬಿಜೆಪಿ ಮಾಜಿ ಶಾಸಕ ಬಹಿರಂಗ ಪಡಿಸಿದ್ದಾರೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮುನಿರಾಜು ಕಾರ್ಯಕ್ರಮವೊಂದರಲ್ಲಿ ಬಹಿರಂಗ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲದೆ ಆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಏನಿದು ಚುನಾವಣಾ ರಹಸ್ಯ’ ಎಂದು ಕಾಂಗ್ರೆಸ್ ಟ್ರೋಲ್ ಮಾಡಿದೆ.
1998 ರ ಉಪಚುನಾವಣೆಯಲ್ಲಿ ಒಂದು ಸಾವಿರ ಜನ ಕಾರ್ಯಕರ್ತರು ಬಂದು… ಐದೈದು, ಹತ್ತತ್ತು ಓಟ್ ಹಾಕಿದ್ರು. ಆ ರೀತಿ ಪಕ್ಷ ಕಟ್ಟಿದ್ದಕ್ಕೆ.. ಇವತ್ತು 119 ವಿಧಾನಸಭಾ ಸದಸ್ಯರನ್ನು ಇಟ್ಕೊಂಡು ಸರಕಾರ ಮಾಡಿದ್ದೇವೆ..’ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದ ತುಂಬ ಹರಿದಾಡುತ್ತಿದೆ.
ಮುನಿರಾಜು ಅವರ ವಿಡಿಯೋ ಲಿಂಕ್ ಮಾಡಿ ಟ್ವೀಟ್ ಮಾಡಿರುವ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಏನಿದು ರಹಸ್ಯ? ಅಸಹ್ಯ?’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಪ್ರಶ್ನಿಸಿದ್ದಾರೆ.
ಬಿಜೆಪಿಯ ನಯವಂಚಕ & ಅನೈತಿಕ ರಾಜಕಾರಣದ ಮುಖವನ್ನು ಬೆಂಗಳೂರು ನಗರದ ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕ ಮುನಿರಾಜು ಎಂಬ ಮಹಾಶಯರೇ ಬಹಿರಂಗಪಡಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವುದು ಅಡ್ಡದಾರಿಯಲ್ಲೇ ಎನ್ನುವುದು ಈಗ ರುಜುವಾತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ರಾಜ್ಯದ ಮೇಲೆ ರಾಜ್ಯ ಗೆಲ್ಲುತ್ತಿರುವ ಬಿಜೆಪಿ ಗೆಲುವಿನ ಗುಟ್ಟು ಈಗ ರಟ್ಟಾಗಿದೆ. ಅಡ್ಡದಾರಿಯ ಕೊಚ್ಚೆಯಲ್ಲಿ ಅರಳುವ ಕಮಲವನ್ನು ಮುಡಿದುಕೊಂಡು ಬೀಗುವವರ ʼಕಳ್ಳವೋಟಿನ ಕಥೆʼ ನಿಮ್ಮ ಮಾಜಿ ಶಾಸಕರೇ ಬಯಲು ಮಾಡಿದ್ದರೂ ಇನ್ನೂ ಕುರ್ಚಿಯಲ್ಲಿರಲು ಅದ್ಹೇಗೆ ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆ ಸಾಮ್ರಾಟರೇ? ಅಶೋಕನ ಹೆಸರಿಗಾದರೂ ಮರ್ಯಾದೆ ಬೇಡವೇ? ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.