ಚಿಕ್ಕಬಳ್ಳಾಪುರ : ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಕೋಮುವಾದಿ ಬಿಜೆಪಿ ತನ್ನ ದುರಾಡಳಿತ, ಜನ ವಿರೋಧಿ, ರೈತ , ಕಾರ್ಮಿಕ ವಿರೋಧಿ, ಆರ್ಥಿಕ ನೀತಿಗಳಿಂದ ದೇಶಕ್ಕೆ ಇಂದು ದೊಡ್ಡ ಆಪತ್ತು ಸೃಷ್ಟಿಸಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು.
ನಗರದ ಡಾ.ಬಿ.ಆರ್‌ಅಂಬೇಡ್ಕರ್ ಭವನದಲ್ಲಿ ಚಿಕ್ಕಬಳ್ಳಾಪುರ ಡಾ.ಬಿ.ಆರ್‌ಅಂಬೇಡ್ಕರ್ ಬಹುಜನ ಸಮಾಜ ಪಕ್ಷದ ಸಂಸ್ಥಾಪಕರಾದ ಕ್ಯಾನ್ಷಿರಾಂ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬಹುಜನರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ, ನಿರುದ್ಯೋಗದಿಂದ ಇಂದು ಯುವಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಲೆ ಏರಿಕೆ ಸಾಲದ ಬಾದೆಯಿಂದ ರೈತರ ಆತ್ಮಹತ್ಯೆ ಕೂಡ ಹೆಚ್ಚಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದಾರೆ. ಬ್ಯಾಂಕುಗಳು ಇಂದು ಲೂಟಿಯಾಗುತ್ತಿವೆ, ರೂಪಾಯಿ ಮೌಲ್ಯ ಕುಸಿತ, ದಲಿತರ ಮೇಲೆನ ದಬ್ಬಾಳಿಕೆ, ಕೊಲೆ, ಸುಲಿಗೆ, ದೌರ್ಜನ್ಯ ಹೆಚ್ಚಾಗುತ್ತಿದ್ದು, ಮೋದಿ ಸರ್ಕಾರದ ಆಡಳಿತದ ಅವಧಿಯಲ್ಲಿ ಧರ್ಮದ ಉನ್ಮಾದ ಬೆಳೆಯುತ್ತಿದೆ. ಜನ ವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ ಕಾಯ್ದೆಗಳಿಂದ ಜನರು ಆತಂಕದಲ್ಲಿ ಬದುಕುವಂತಾಗಿದೆ ಎಂದು ಮೋದಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಪಿ.ವಿ.ನಾಗಪ್ಪ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಲಿತರ, ಅಲ್ಪಸಂಖ್ಯಾತರ ಹಾಗು ಹಿಂದುಳಿದ ವರ್ಗಗಳ ಮೇಲೆ ಹಲ್ಲೆ , ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಮೇಲ್ವರ್ಗದ ಮೀಸಲಾತಿ ಹೋರಾಟಗಳು ದಲಿತರ ಮೀಸಲಾತಿಯನ್ನು ನಾಶಮಾಡುವ ಹುನ್ನಾರವನ್ನು ಹೊಂದಿದೆ. ಸರ್ವರಿಗೂ ಸಮಪಾಲು, ಸಮಬಾಳು ಬರಬೇಕಾದರೇ ಬಹುಜನರು ಅಧಿಕಾರಕ್ಕೆ ಬರಬೇಕು. ಹಾಗಾಗಿ ಕ್ಯಾನ್ಷಿರಾಂ ರವರ ರಾಜಕೀಯ ತತ್ವ, ಸಿದ್ದಾಂತಗಳ ಅವರ ಹೋರಾಟದ ಹಾದಿಯನ್ನು ಪ್ರತಿಯೊಬ್ಬ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಅನುಸರಿಸಬೇಕೆಂದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಮುನಿಕೃಷ್ಣಯ್ಯ, ಜಿಲ್ಲಾ ಉಪಾಧ್ಯಕ್ಷ ಗುರ್ರಯ್ಯ, ಮಾಜಿ ಜಿಲ್ಲಾಧ್ಯಕ್ಷ ಸೋಮಶೇಖರ್, ಜಿಲ್ಲಾ ಸಂಯೋಜಕರಾದ ಡಾ.ದೇವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತರಾಜ್, ಜಿಲ್ಲಾ ಕಾರ್ಯದರ್ಶಿ ಮೂರ್ತಿ, ಚಿಂತಾಮಣಿ ತಾಲೂಕು ಅಧ್ಯಕ್ಷ ಸುರೇಶ್, ಚಿಕ್ಕಬಳ್ಳಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.