ಚೆನ್ನೈ: ತಮಿಳುನಾಡು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ತನ್ನ ಪ್ರಾಬಲ್ಯವನ್ನು ವಿಸ್ತರಿಸಿಕೊಳ್ಳಲು ಎಷ್ಟೇ ಪ್ರಯತ್ನಪಟ್ಟರೂ ಅದಕ್ಕೆ ಸಾಧ್ಯವಾಗುತ್ತಿಲ್ಲ.
ಇತ್ತೀಚಿನ ಬೆಳವಣಿಗೆಯಲ್ಲಿ ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯೊಬ್ಬರಿಗೆ ಕೇವಲ ಒಂದು ಮತ ಮಾತ್ರ ಬಿದ್ದಿದೆ. ಅದರಲ್ಲೂ ಅವರ ಕುಟುಂಬದಲ್ಲಿ ಐವರು ಸದಸ್ಯರಿದ್ದರೂ ಅವರು ಸಹ ಮತ ನೀಡಲಿಲ್ಲ ಎಂಬುದು ಗಮನ ಸೆಳೆದಿದೆ.
ಇತ್ತೀಚೆಗೆ ನಡೆದ ಕೊಯಮತ್ತೂರು ಜಿಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪೇರಿನಾಯಕನ್ಪಾಳ್ಯಂ ಪಂಚಾಯತ್ ಕ್ಷೇತ್ರದ 9ನೇ ವಾರ್ಡ್ಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಕಾರ್ತಿಕ್ ಒಂದೇ ಒಂದು ಮತ ಗಳಿಸಿದ್ದಾರೆ. ಗಮನಾರ್ಹವೆಂದರೆ ಅವರ ಹೆಂಡತಿಯೂ ಸೇರಿದಂತೆ ಐವರು ಮತ ನೀಡಲಿಲ್ಲ.
ಡಿಎಂಕೆ ಪಕ್ಷದಿಂದ ಅರುಳ್ರಾಜ್, ಎಐಎಡಿಎಂಕೆ ಪಕ್ಷದಿಂದ ವೈಥಿಯಾಲಿಂಗಂ, ತೇಮುಜಿನ್ ಪಕ್ಷದಿಂದ ರವಿ ಕುಮಾರ್, ಬಿಜೆಪಿ ಪಕ್ಷದಿಂದ ಕಾರ್ತಿಕ್ ಅವರುಗಳು ಸ್ಪರ್ಧಿಸಿದ್ದರು. ಕಣದಲ್ಲಿ ಪಕ್ಷೇತರ ಅಭ್ಯರ್ಥಿ ಜಯರಾಜ್ ಸೇರಿದಂತೆ ವಿವಿಧ ಪಕ್ಷಗಳ ಆರು ಅಭ್ಯರ್ಥಿಗಳಿದ್ದರು.
1,551 ಮತಗಳಲ್ಲಿ 991 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ ಡಿಎಂಕೆಯ ಅರುಳ್ರಾಜ್ 387 ಮತ, ಪಕ್ಷೇತರ ಅಭ್ಯರ್ಥಿ ಜಯರಾಜ್ 240 ಮತ ಪಡೆದಿದ್ದಾರೆ. ವೈಥಿಯಾಲಿಂಗಂ 198 ಮತ ಪಡೆದಿದ್ದರೆ, 3 ಮತಗಳು ತೀರಸ್ಕೃತಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ 84 ಮತ ಪಡೆದಿದ್ದರು. ಕಾರ್ತಿಕ್ 1 ಮತ ಪಡೆದಿದ್ದಾರೆ.
ಕಾರ್ತಿಕ್ ಅವರು ಕೊಯಮತ್ತೂರು ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರು ಕೂಡ ಹೌದು. ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದಲ್ಲಿದ್ದರೂ ಕೇವಲ ಒಂದು ಮತ ಪಡೆದ ಕಾರ್ತಿಕ್ ಅವರನ್ನು ಹಾಗೂ ಬಿಜೆಪಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಟ್ರೋಲ್ ಮಾಡುತ್ತಿದ್ದಾರೆ. ಅವರ ಮನೆಯವರೇ ಅವರಿಗೆ ಮತ ಹಾಕಿಲ್ಲ ಎಂದು ಅಣಕವಾಡುತ್ತಿದ್ದಾರೆ.