ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ಸರಕಾರವು ಅಧಿಕಾರವನ್ನು ಹಿಡಿದ ನಂತರದ ದಿನಗಳಲ್ಲಿ ಜನಸಾಮಾನ್ಯರ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಸತತವಾಗಿ ಏರಿಕೆ ಯಾಗುತ್ತಿದೆ. ಪೆಟ್ರೋಲ್ ಡೀಸೆಲ್ ಬೆಲೆಗಳು ನಿರಂತರವಾಗಿ ಏರುತ್ತಿವೆ. ಕಳೆದ 8 ತಿಂಗಳ ಅವಧಿಯಲ್ಲಿ ಅಡುಗೆ ಅನಿಲ ದರ ರೂ.190ರಷ್ಟು ಏರಿಕೆಯಾಗಿದೆ.
ಆದರೆ, ಬೆಲೆ ಏರಿಕೆಗಳ ಪ್ರಶ್ನೆಯ ಬಗ್ಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಕೇಂದ್ರ ನಾಯಕ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಬೆಲೆಗಳ ಏರಿಕೆಯ ಬಗ್ಗೆ ಪ್ರಶ್ನಿಸಿದರೆ ಅದಕ್ಕೆ ಸಮರ್ಪಕವಾಗಿ ಉತ್ತರಿಸದೆ ವಿಷಯಾಂತರ ಮಾಡಿದ್ದ ಪ್ರಸಂಗ ನಡೆದಿದೆ.
ಇದನ್ನು ಓದಿ: ಮತ್ತೆ ಏರಿಕೆ ಕಂಡ ಎಲ್‌ಪಿಜಿ ದರ: ರೂ.25 ಹೆಚ್ಚಳ
ರಾಜ್ಯ ಪ್ರವಾಸದಲ್ಲಿರುವ ಅರುಣ್ ಸಿಂಗ್ ಅವರಿಗೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳು ‘ಅಡುಗೆ ಅನಿಲ, ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಇದನ್ನು ತಗ್ಗಿಸಲು ಏನು ಮಾಡುತ್ತಿದ್ದೀರಿ, ಜನರಿಗೆ ಏನು ಸಂದೇಶ ನೀಡುತ್ತೀರಿ’ ಎಂಬ ಪ್ರಶ್ನೆಗೆ ‘ನೋಡಿ ಪ್ರಧಾನಿ ಮಂತ್ರಿ ಮೋದಿಯವರ ನೇತೃತ್ವದಲ್ಲಿ ಬಡವರಿಗೆ ಎಲ್ಲ ರೀತಿಯ ನೆರವನ್ನು ನೀಡಲಾಗುತ್ತಿದೆ. ಪ್ರತಿ ಮನೆಗಳಿಗೂ ನಲ್ಲಿಯಿಂದ ನೀರು ಪೂರೈಕೆ ಮಾಡುವ ಕೆಲಸ ಹಮ್ಮಿಕೊಳ್ಳಲಾಗಿದೆ. ರೈತರ ಖಾತೆಗಳಿಗೆ ₹6 ಸಾವಿರ ಹಾಕುತ್ತಿದ್ದೇವೆ… ಭಾರತ್ ಮಾಲಾ ಯೋಜನೆಯಡಿ ರಸ್ತೆ ನಿರ್ಮಿಸುತ್ತಿದ್ದೇವೆ’ ಎಂದು ಹೇಳುವ ಮೂಲಕ ವಿಷಯಾಂತರಕ್ಕೆ ಮುಂದಾದರು.
ಆದರೂ ‘ನಾವು ಆ ಬಗ್ಗೆ ಕೇಳುತ್ತಿಲ್ಲ, ಬೆಲೆ ಏರಿಕೆ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಿ’ ಎಂಬ ಮರು ಪ್ರಶ್ನೆಗೆ, ‘ಆಯುಷ್ಮಾನ್ ಭಾರತ್ ಜಾರಿ ಆಗಿದೆ. ಎಲ್ಲರಿಗೂ ಹಣ ಬೇಕು. ಎಲ್ಲ ಯೋಜನೆಗಳಿಗೂ ಹಣ ಬೇಕು. ತೆರಿಗೆ ಮೂಲಕ ಹಣ ಬರುತ್ತಾ ಇದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ತಾತ್ಕಾಲಿಕವಾಗಿದ್ದು, ಮುಂದೆ ಕಡಿಮೆ ಆಗಬಹುದು. ನೀವು ಮಾಧ್ಯಮದವರು ಚರ್ಚೆ ಮಾಡಬೇಕಾದರೆ ಹಣ ದುಬ್ಬರ ಆಧರಿಸಿ ಚರ್ಚೆ ಮಾಡಬೇಕು. ಒಂದು ಪೆಟ್ರೋಲ್, ಒಂದು ಟೊಮೆಟೊ, ಒಂದು ಈರುಳ್ಳಿ ವಿಚಾರ ಇಟ್ಟುಕೊಂಡು ಚರ್ಚೆ ಮಾಡಬೇಡಿ’ ಎಂದರು.
ಹವ್ಯಕಭವನದಲ್ಲಿ ನಡೆದ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಜಿಲ್ಲೆಯ ಪಕ್ಷದ ಪದಾಧಿಕಾರಿಗಳ ಸಭೆ ಬಳಿಕ ಅಡುಗೆ ಅನಿಲ ಮತ್ತು ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಮೇಲಿನಂತೆ ಹಾರಿಕೆಯ ಉತ್ತರ ನೀಡಿ ಜಾರಿಕೊಂಡರು.
ಇದನ್ನು ಓದಿ: ಬೆಲೆ ಏರಿಕೆಯಿಂದ ಜನರ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತಿಲ್ಲ: ಬಿಜೆಪಿ ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ಅಲ್ಲದೇ, ಯುಪಿಎ ಸರ್ಕಾರ ಇದ್ದಾಗಲೂ ಬೆಲೆ ಏರಿಕೆ ಆಗಿತ್ತು. ಆಗಿನ ಪ್ರಧಾನಿ ಮನಮೋಹನ್ ಸಿಂಗ್, ನೂರು ದಿನಗಳಲ್ಲಿ ಬೆಲೆ ಏರಿಕೆ ನಿಯಂತ್ರಣಕ್ಕೆ ತರುವುದಾಗಿ ಹೇಳಿದ್ದರು. ಆದರೆ ಅದು ಅವರಿಂದ ಆಗಿರಲಿಲ್ಲ, ಶೇಕಡ 15ರಷ್ಟು ಬೆಲೆ ಏರಿಕೆ ಆಗಿತ್ತು. ಆದರೆ ಮೋದಿ ಅವಧಿಯಲ್ಲಿ ಬೆಲೆ ನಿಯಂತ್ರಣದಲ್ಲಿ ಇದೆ ಎಂದು ತಮ್ಮ ಸರ್ಕಾರದ ನಿರ್ಧಾರಗಳನ್ನು ಸಮರ್ಥಿಸಿಕೊಂಡರು.
ದೇಶದಲ್ಲಿ ಜನಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಸಾಮಾನ್ಯ ಜನರು ಜೀವನ ನಡೆಸುವುದು ಬಲುಕಷ್ಟವಾಗಿದೆ. ಸೆಪ್ಟೆಂಬರ್ 1ರಂದು ಮತ್ತೆ ಸಿಲಿಂಡರ್ ಬೆಲೆಯನ್ನು 25 ರೂ ಏರಿಕೆ ಮಾಡಿರುವ ಸರ್ಕಾರ ಕೋವಿಡ್ ಆರ್ಥಿಕ ಹೊಡೆತದಿಂದ ನಲುಗಿರುವ ಜನರಿಗೆ ಮತ್ತೆ ಬರೆ ಎಳೆದಿದೆ. ಆದರೂ ಸಹ ಬಿಜೆಪಿ ಪಕ್ಷದ ನಾಯಕರು ಬೆಲೆ ಏರಿಕೆಯಾಗುತ್ತಿರುವುದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.