– ಸ್ವಪಕ್ಷವನ್ನೂ ಬಿಡದ ಸುಬ್ರಮಣಿಯನ್ ಸ್ವಾಮಿ ಮೇಲೆ ವೈಯಕ್ತಿಕ ದಾಳಿ ಆರಂಭಿಸಿದ ಬಿಜೆಪಿ ಐಟಿ ಸೆಲ್
– ಬಿಜೆಪಿ ಐಟಿ ಸೆಲ್ ರಾಕ್ಷಸೀಕರಣಗೊಂಡಿದೆ: ಸುಬ್ರಮಣಿಯನ್ಸ್ವಾಮಿ
ಹೊಸದಿಲ್ಲಿ: ತನ್ನ ಖಡಕ್ ವಾಗ್ದಾಳಿಗಳ ಮೂಲಕ ವಿರೋಧ ಪಕ್ಷಗಳನ್ನು ಬಾಯಿ ಮುಚ್ಚಿಸುವ ಬಿಜೆಪಿ ನಾಯಕ ಹಲವು ಸಂದರ್ಭಗಳಲ್ಲಿ ಬಿಜೆಪಿಯನ್ನೂ ತೀವ್ರವಾಗಿ ಟೀಕಿಸುತ್ತಿದ್ದ ಬಿಜೆಪಿ ಹಿರಿಯ ನಾಯಕ ಸುಬ್ರಮಣಯನ್ ಸ್ವಾಮಿ ಅವರನ್ನು ಬಿಜೆಪಿ ಐಟಿ ಸೆಲ್ ಗುರಿಯಾಗಿಸಿದೆ ಎಂಬ ಆರೋಪವನ್ನು ಸ್ವತಃ ಸುಬ್ರಮಣಿಯನ್ಸ್ವಾಮಿಯವರೇ ಮಾಡಿದ್ದಾರೆ.
ವಿರೋಧ ಪಕ್ಷಗಳ ಜೊತೆಗೆ ತಮ್ಮ ಪಕ್ಷದ ತಪ್ಪುಗಳನ್ನು ಕೂಡ ಕಟುವಾಗಿಯೇ ಟೀಕಿಸುವ ಸ್ವಾಮಿ, ಬಿಜೆಪಿಗರಿಗೂ ಕೂಡ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ. ಇತ್ತೀಚೆಗೆ ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಎಡವುತ್ತಿರುವ ಬಗ್ಗೆಯೂ ಮೋದಿ ಸರ್ಕಾರವನ್ನು ಟೀಕಿಸಿದ್ದ ಸುಬ್ರಮಣಿಯನ್ ಸ್ವಾಮಿ, ದೇಶದ ಆರ್ಥಿಕತೆ ಕುಸಿತಕ್ಕೆ ದೇವರ ಆಟ ಕಾರಣ ಎಂದಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧವೂ ಟ್ವೀಟ್ ಮಾಡಿದ್ದರು. ಜೆಇಇ, ನೀಟ್ ಪರೀಕ್ಷೆಯನ್ನು ಕೊರೊನಾ ನಿಮಿತ್ತ ಮುಂದೂಡಲು ಒಪ್ಪದ ಕೇಂದ್ರ ಸರ್ಕಾರದ ನಡೆ ವಿರುದ್ಧವೂ ಸ್ವಾಮಿ ಕಿಡಿಕಾರಿದ್ದರು.
ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ 20 ಲಕ್ಷ ಕೋಟಿಯ ವಿಶೇಷ ಪ್ಯಾಕೇಜನ್ನು ಕೂಡ ಸ್ವಾಮಿ ಟೀಕಿಸಿದ್ದರು. ಇಷ್ಟೆಲ್ಲಾ ನೇರವಾಗಿ ಮಾತನಾಡುವ ಸುಬ್ರಮಣಿಯನ್ ಸ್ವಾಮಿಯನ್ನು ಹಣಿಯಲು ಬಿಜೆಪಿಯಲ್ಲೇ ಕುತಂತ್ರ ನಡೆಯುತ್ತಿದ್ಯಾ ಅನ್ನುವ ಅನುಮಾನ ಈಗ ಹುಟ್ಟಿದೆ. ಕೇಂದ್ರದ ಅಸಮರ್ಪಕ ನಡೆಗಳ ವಿರುದ್ಧ ಕಿಡಿಕಾರುತ್ತಲೇ ಬಂದಿರುವ ಸ್ವಾಮಿ ಅವರನ್ನು ಹಣಿಯಲು ಬಿಜೆಪಿ ಐಟಿ ಸೆಲ್ ಅವರ ವಿರುದ್ಧ ವೈಯಕ್ತಿಕ ದಾಳಿಗೆ ಇಳಿದಿದ್ಯಾ ಅನ್ನುವ ಗುಮಾನಿ ಬಂದಿದೆ. ಇದಕ್ಕೆ ಕಾರಣ ಸುಬ್ರಮಣಿಯನ್ ಸ್ವಾಮಿ ಮಾಡಿರುವ ಒಂದು ಟ್ವೀಟ್.
ಬಿಜೆಪಿಯ ಐಟಿ ಸೆಲ್ ರಾಕ್ಷಸೀಕರಣಗೊಂಡಿದೆ. ಐಟಿ ಸೆಲ್ನ ಕೆಲವು ಸದಸ್ಯರು ನಕಲಿ ಟ್ವಿಟರ್ ಖಾತೆಗಳನ್ನು ತೆರೆದು ನನ್ನ ವಿರುದ್ಧ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ. ಇಂತಹ ದುರುದ್ದೇಶಪೂರಿತ ವೈಯಕ್ತಿಕ ದಾಳಿಗಳಿಂದ ನನ್ನ ಹಿಂಬಾಲಕರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಪರ್ಸನಲ್ ಅಟ್ಯಾಕ್ ಮಾಡಲು ಮುಂದಾದರೆ ಅದಕ್ಕೆ ನಾನು ಹೊಣೆಯಾಗಲಾರೆ.
– ಸುಬ್ರಮಣಿಯನ್ ಸ್ವಾಮಿ
ನೀವು ನಕಲಿ ಟ್ವೀಟ್ಗಳನ್ನು ನಿರ್ಲಕ್ಷಿಸಿ ಎಂದು ಟ್ವೀಟಿಗರೊಬ್ಬರು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ, ನಾನು ಅದನ್ನೆಲ್ಲಾ ನಿರ್ಲಕ್ಷ್ಯ ಮಾಡುತ್ತೇನೆ. ಆದರೆ ಬಿಜೆಪಿ ತನ್ನ ಐಟಿ ಸೆಲ್ ಸದಸ್ಯರನ್ನು ಕಿತ್ತೊಗೆಯಬೇಕು. ಒಬ್ಬ ಮಾಳವಿಯಾನ ಪಾತ್ರ ಅಶುದ್ಧತೆಯಿಂದ ಗಲಭೆ ನಡೆಸುವಂತಿದೆ. ನಮ್ಮದು ಮರ್ಯಾದಾ ಪುರುಷೋತ್ತಮನ ಪಕ್ಷ, ರಾವಣ ಅಥವಾ ದುಶ್ಯಾಸನನ ಪಕ್ಷವಲ್ಲ ಎಂದು ಹೇಳಿದ್ದಾರೆ.
ಇದೀಗ ಬಿಜೆಪಿ ಐಟಿ ಸೆಲ್ ವಿರುದ್ಧವೇ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿರೋದು ಬಿಜೆಪಿಗೆ ಮುಜುಗರವಾಗಿರುವುದರ ಜೊತೆಗೆ ಸ್ವಾಮಿಯನ್ನು ಹಣಿಯಲು ಬಿಜೆಪಿಯಿಂದಲೇ ವೈಯಕ್ತಿಕ ದಾಳಿ ಮಾಡಲು ಪ್ಲಾನ್ ನಡೀತಿದ್ಯಾ ಅನ್ನೋ ಅನುಮಾನ ಹುಟ್ಟಿದೆ.