ಬಿಜೆಪಿಗೆ ಇಲ್ಲಿ 30 ಸೀಟು ಬರುವುದಿಲ್ಲ

ಕೋಲ್ಕತ, ಜ 02: ಬಿಜೆಪಿ 30 ಸೀಟುಗಳನ್ನು ಪಶ್ಚಿಮ ಬಂಗಾಳದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ಟಾಂಗ್ ನೀಡಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲ ತಿಂಗಳುಗಳು ಬಾಕಿಯಿರುವಾಗಲೇ ಟಿಎಂಸಿ, ಎಡಪಕ್ಷಗಳು, ಕಾಂಗ್ರೆಸ್, ಮತ್ತು ಬಿಜೆಪಿ ಪಕ್ಷಗಳು ಭರ್ಜರಿ ಪ್ರಚಾರ ಆರಂಭಿಸಿವೆ. ರಾಜ್ಯದಲ್ಲಿ 200 ಸೀಟು ಗೆದ್ದೇ ಗೆಲ್ಲುವುದಾಗಿ ಬಿಜೆಪಿ ಹೇಳಿದ್ದಕ್ಕೆ ಮಮತಾ ಬ್ಯಾನರ್ಜಿಯವರು ತೀಕ್ಷ್ಣವಾಗಿ ಪ್ರತಿಕ್ರೀಯಿಸಿದ್ದಾರೆ.

ಬಿಜೆಪಿ ಪಶ್ಚಿಮ ಬಂಗಾಳದ 294 ಸೀಟುಗಳ ಪೈಕಿ 200 ಸೀಟು ಗೆಲ್ಲುವುದಾಗಿ ಹೇಳಿಕೊಂಡಿದೆ. 200 ಸೀಟು ಬದಿಗಿರಲಿ ಮೊದಲು ಅವರು 30 ಸೀಟು ಗೆದ್ದು ತೋರಿಸಲಿ ಎಂದು ಅವರು ಹೇಳಿದ್ದಾರೆ. ಬಿಜೆಪಿ ಹೊರಗಿನ ಪಕ್ಷ. ಇದೀಗ ಅವರು ಹೊರಗಿನ ಪಕ್ಷಗಳನ್ನು ಕರೆದುಕೊಂಡು ನಮ್ಮ ರಾಜ್ಯ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇಲ್ಲಿನ ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹಲವು ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಆದರೆ ಅಲ್ಲಿ ಏನು ಅಭಿವೃದ್ಧಿ ಆಗಿದೆ. ದೇಶದ ರೈತರು ಬೀದಿಯಲ್ಲಿ ನಿಂತು ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ನಮ್ಮ ಟಿಎಂಸಿಯ ಶಾಸಕರನ್ನು ಕೊಂಡುಕೊಳ್ಳುವುದರಲ್ಲಿ ನಿರತವಾಗಿದೆ. ನಮ್ಮ ಶಾಸಕರನ್ನು ಅವರ ಬಳಿ ಸೆಳೆದುಕೊಂಡ ಮಾತ್ರಕ್ಕೆ ಗೆದ್ದರೆಂದು ಅವರು ಭಾವಿಸಿದ್ದಾರೆ. ಜನರೆ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಮಮತಾ ಪ್ರತಿಕ್ರೀಯಿಸಿದ್ದಾರೆ.

ಎಡಪಕ್ಷಗಳತ್ತ ಜನ : 35 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿ ಬದಲಾದ ಸನ್ನಿವೇಶದಲ್ಲಿ ಅಧಿಕಾರ ಕಳೆದುಕೊಂಡ ಎಡಪಕ್ಷದತ್ತ ಇತ್ತೀಚಿನ ದಿನಗಳಲ್ಲಿ ಯುವ ಜನತೆ ಆಕರ್ಷಿತರಾಗುತ್ತಿದ್ದಾರೆ. ಅಧಿಕಾರ ಕಳೆದುಕೊಂಡಿರಬಹುದು ಆದರೆ ಚಳುವಳಿ ಬಲಗೊಳ್ಳುತ್ತಿದೆ. ಚಳುವಳಿಯಿಂದಲೇ ಎಡಪಕ್ಷಗಳು ಅಧಿಕಾರಕ್ಕೆ ಬರುತ್ತವೆ. ಲಾಕ್ಡೌನ್ ಸಂದರ್ಭದಲ್ಲಿ ಎಡಪಕ್ಷದ ಚಳುವಳಿಯ ನಾಯಕರು ಸಾರ್ವಜನಿಕರ ಸಂಕಷ್ಟಗಳ ಜೊತೆ ನಿಂತದ್ದು ವಿದ್ಯಾರ್ಥಿ – ಯುವಜನರ ಆಕರ್ಷಣೆಗೆ ಕಾರಣವಾಗಿದೆ. ಈ ಬಾರಿ ಹೆಚ್ಚಿನ ಸೀಟು ಗೆಲ್ಲುವುದಾಗಿ ಸಿಪಿಐಎಂ ಹೇಳಿದೆ. ಟಿಎಂಸಿ ಮತ್ತು ಬಿಜೆಪಿ ಪಕ್ಷಗಳು ಹಣ, ಆಮೀಷದ ಮೂಲಕ ಜನರನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಹಲವೆಡೆ ನಮ್ಮ ಕಾರ್ಯಕರ್ತರ ಮೇಲೆ ದಾಳಿ, ದಬ್ಬಾಳಿಕೆ, ದೌರ್ಜನ್ಯ ನಡೆಸಿತ್ತಿದ್ದಾರೆ ಎಂದು ಸಿಪಿಐಎಂ ಆರೋಪಿಸಿದೆ.

Donate Janashakthi Media

Leave a Reply

Your email address will not be published. Required fields are marked *