ಗುರುರಾಜ ದೇಸಾಯಿ
ರಾಜ್ಯದಲ್ಲಿ ಬಿಟ್‌ಕಾಯಿನ್ ಹಗರಣ ಭಾರಿ ಸದ್ದು ಮಾಡುತ್ತಿದೆ. ಸಿಎಂ ತಲೆದಂಡವಾಗಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷರು ಕೂಡಾ ಬದಲಾಗಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಸಿಎಂ ಬೊಮ್ಮಾಯಿ ದೆಹಲಿಗೆ ಹೋಗಿದ್ದು ಅದೇ ವಿಚಾರಕ್ಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳಾಗುತ್ತಿವೆ.
ಬಿಟ್ ಕಾಯಿನ್ ಹಗರಣದಲ್ಲಿ ಭಾಗಿ ಆದವರ ಪೈಕಿ ಅನೇಕ ಕಾಂಗ್ರೆಸ್ ಮುಖಂಡರ ಹೆಸರುಗಳಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಪಟ್ಟಿ ಅವರ ಬಳಿ ಇದ್ದರೆ ಬಿಡುಗಡೆ ಮಾಡಲಿ ಎಂದು ಕಾಂಗ್ರೆಸ್ ಆಗ್ರಹಿಸಿದರೆ, ಬಿಟ್ ಕಾಯಿನ್ ಪ್ರಕರಣವನ್ನು ಮುಚ್ಚಿ ಹಾಕಲು ಬಿಜೆಪಿ, ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಟ್ ಕಾಯಿನ್ ರಾಜಕೀಯ ಕೆಸರೆರಚಾಟಕ್ಕೆ ಚಾಲನೆಯನ್ನು ನೀಡಿದ್ದು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಇದ್ದ ಮೂವರ ಪೈಕಿ ಹಗರಣ ಮಾಡಿದವರು ಯಾರು ಎಂದು ಸಾರ್ವಜನಿಕರು ಪ್ರಶ್ನೆಯನ್ನೆತ್ತುತ್ತಿದ್ದಾರೆ.
ಬಿಟ್ ಕಾಯಿನ್ ಎಂದರೇನು ? ರಾಜ್ಯದಲ್ಲಿ ಇಷ್ಟೆಲ್ಲ ಸದ್ದು ಮಾಡಿರುವ ಬಿಟ್ ಕಾಯಿನ್ ಎಂದರೇನು ಎಂಬುದನ್ನು ನಾವು ತಿಳಿಯಬೇಕಿದೆ. ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ. ಇದಕ್ಕೆ ಮುದ್ರಣ ರೂಪ ಇಲ್ಲ. ಬಿಟ್ ಕಾಯಿನ್ ಎಂಬ ಮಾಯಾಂಗನೆ ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿದ್ದು, ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದು ಇರುವುದಿಲ್ಲ.
ಇಲ್ಲಿ ಹಣದ ತ್ವರಿತವಾದ ವರ್ಗಾವಣೆ ಸಾಧ್ಯವಾಗಿದ್ದು, ಸಂಸ್ಕರಣೆ ಶುಲ್ಕ ಇರುವುದಿಲ್ಲ. ಯಾವುದೇ ಅಡೆತಡೆಯಿಲ್ಲದೇ ಜಗತ್ತಿನಾದ್ಯಂತ ಚಲಾವಣೆ ಮಾಡಬಹುದು. ಬ್ಯಾಂಕಿಂಗ್ ಬಳಕೆ ಅಗತ್ಯವಿಲ್ಲ. ವರ್ಡ್‌ಪ್ರೆಸ್, ರೆಡಿಟ್, ನೇಮ್‌ಚೀಪ್ ಮತ್ತು ಫ್ಲಾಟ್ಟರ್ ನಂತಹ ಅಂತರ್ಜಾಲ ತಾಣಗಳು ಬಿಟ್‌ಕಾಯಿನ್‌ಗಳನ್ನು ನೇರವಾಗಿ ಸ್ವೀಕರಿಸುತ್ತವೆ.
ರಾಜ್ಯದಲ್ಲಿ ಸದ್ದು ಮಾಡಿರುವಬಿಟ್ ಕಾಯಿನ್ ಹಗರಣದಿಂದ ಮುಖ್ಯಮಂತ್ರಿ ಬದಲಾವಣೆ ಆಗಬಹುದು, ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಆಗಬಹುದು ಎಂದು ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ವತಃ ‘ನಾಯಕತ್ವ ಬದಲಾವಣೆ ಇಲ್ಲ’ ಎಂದು ಸ್ಪಷ್ಟೀಕರಣ ಕೊಟ್ಟ ಮೇಲೂ ಚರ್ಚೆ ನಡೆಯುತ್ತಲೇ ಇದೆ. ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಅರುಣ್ ಸಿಂಗ್ ಪದೇ ಪದೇ ‘ಮುಖ್ಯಮಂತ್ರಿ ಬದಲಾವಣೆ ಇಲ್ಲ’ ಎನ್ನುತ್ತಿದ್ದರು ಕಡೆಗೆ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗಿ ಬಂತು. ಈಗಲೂ ‘ಬೆಂಕಿ ಇಲ್ಲದೆ ಹೊಗೆ ಕಾಣಿಸಿಕೊಳ್ಳುವುದಿಲ್ಲ’ ಎಂದು ಬಿಜೆಪಿ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ.
ದಿನ ಹೋದಂತೆ ಬಿಟ್ ಕಾಯಿನ್ ದಂಧೆ ಚಿತ್ರವಿಚಿತ್ರ ತಿರುವನ್ನು ಪಡೆದುಕೊಳ್ಳುತ್ತಿರುವ ಬಿಟ್ ಕಾಯಿನ್ ಯಾರ ಕೊರಳಿಗೆ ಸುತ್ತಿಕೊಳ್ಳಬಹುದು ಎಂಬ ಕುತೂಹಲ ರಾಜಕೀಯದಲ್ಲಿ ಮೂಡಿದೆ. ಮುಂಬರುವ ಚುನಾವಣೆಗಳಲ್ಲಿ ಬಿಟ್ ಕಾಯಿನ್ ಒಂದು ಪಕ್ಷದ ಸೋಲಿಗೆ ಕಾರಣವಾಗಿ ಇನ್ನೊಂದು ಪಕ್ಷದ ಗೆಲುವಿಗೂ ಕಾರಣವಾಗಲಿದೆ. ಅದರಲ್ಲೂ ಬಿಜೆಪಿ ಪಾಲಿಗಂತೂ ಬಿಟ್ ಕಾಯಿನ್ ತೂಗುಕತ್ತಿಯಾಗಿದೆ. ಅಗೆದಷ್ಟು ಬಿಜೆಪಿ ಬುಡಕ್ಕೆ ಏಟು ಬೀಳುತ್ತಿದೆ. ಈ ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಬಿಜೆಪಿ ವಿರುದ್ದ ಮುಗಿಬೀಳಲು ಸಿದ್ದತೆಯನ್ನು ಮಾಡಿಕೊಂಡಿದೆ. ಇದರಲ್ಲಿ ಯಾರ್ಯಾರು ಇದ್ದಾರೋ, ಯಾರ ತಲೆದಂಡವಾಗಲಿದೆಯಾ ಎನ್ನುವುದಕ್ಕೆ ಸದ್ಯದಲ್ಲೇ ಉತ್ತರ ಸಿಕ್ಕರೂ ಸಿಗಬಹುದು?
ಹ್ಯಾಕರ್ ಶ್ರೀಕಿ ಜೊತೆಗೂಡಿ ಡ್ರಗ್ಸ್ ಮತ್ತು ಬಿಟ್ ಕಾಯಿನ್ ದಂಧೆಯಲ್ಲಿ ಶಾಮೀಲಾಗಿದ್ದಾರೆ ಕಾಂಗ್ರೆಸ್ ನ ಪ್ರಭಾವಿ ನಾಯಕರ ಮಕ್ಕಳಿಬ್ಬರಿದ್ದಾರೆ ಎಂದು ಬಿಜೆಪಿ ಹೊಸ ಅಸ್ತ್ರವನ್ನು ಪ್ರಯೋಗಿಸುತ್ತಿದೆಯಾದರೂ ಇದು ಸುಳ್ಳು ಎಂದು ಹ್ಯಾಕರ್ ಶ್ರೀಕಿ ಪ್ರತಿಕ್ರಿಯಿಸುತ್ತಿದ್ದಾರೆ. ” ನನ್ನ ಬಳಿ ಯಾವ ಬಿಟ್ ಕಾಯಿನ್ ಇಲ್ಲ. ಅದು ಏನೆಂಬುದು ನನಗೆ ಗೊತ್ತಿಲ್ಲ, ಪೊಲೀಸರು ನನ್ನಿಂದ ಏನನ್ನು ವಶಪಡಿಸಿಕೊಂಡಿಲ್ಲ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಎಂಬ ಮಾತನ್ನು ಶ್ರೀಕಿ ಬಹಿರಂಗವಾಗಿ ಹೇಳುತ್ತಿರುವುದು ಈ ಪ್ರಕರಣ ಎಲ್ಲಿಗೆ ಬಂದ ತಲುಪ ಬಹುದು ಎಂಬ ಬಿಸಿ ಬಿಸಿ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಸಿಎಂ ಪಿಎಂ ಭೇಟಿ ಯಾಕೆ : ಇದೆ ವೇಳೆ ಸಿಎಂ ಬೊಮ್ಮಾಯಿ ಧಿಡೀರ್ ಅಂತಾ ದೆಹಲಿಗೆ ಹಾರಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಬಿಟ್ ಕಾಯಿನ್ ವಿಚಾರವಾಗಿ ಸಿಎಂ ಮತ್ತು ಪಿಎಂ ಚರ್ಚಿಸಿದ್ದಾರೆ ಎಂಬ ಗುಸು ಗುಸು ಮಾತು ಬಿಜೆಪಿವಲಯದಲ್ಲೆ ಕೇಳಿ ಬರುತ್ತಿದೆ. ಹಗರಣಕ್ಕೆ ಸಂಬಂಧಿಸಿದಂತೆ ಅನಾಮಧೇಯ ಪತ್ರವೊಂದು ಪ್ರಧಾನಮಂತ್ರಿಗಳ ಕಚೇರಿ ತಲುಪಿದ್ದು ಆ ಕಾರಣಕ್ಕಾಗಿ ಇಂದು ಸಭೆ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬೆಂಗಳೂರು ಸೇರಿದಂತೆ ಅಂತಾರಾಷ್ಟ್ರೀಯ ವಂಚಕ ಗ್ಯಾಂಗ್ ಜೊತೆಗೆ ಸರ್ಕಾರದ ಆಡಳಿತ ಯಂತ್ರದ ಮತ್ತು ಬಿಜೆಪಿಯ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದುಪತ್ರದಲ್ಲಿ ಉಲ್ಲೇಖಿಸಲಾಗಿದೆಯಂತೆ. ಬಿಟ್‌ಕಾಯಿನ್ ಹಗರಣದಲ್ಲಿ ಕೆಲವು ಹಿರಿಯ ಐಪಿಎಸ್ ಅಧಿಕಾರಿಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಸಹಿ ಇಲ್ಲದ ಪತ್ರದಲ್ಲಿ ಬರೆಯಲಾಗಿದೆ. ಹಾಗಾಗಿ ಸಿಎಂ ಮತ್ತು ಪಿಎಂ ಏನು ಚರ್ಚೆ ನಡೆಸಿರಬಹುದು? ಹಾಗೇನಾದರೂ ಪ್ರಕರಣ ಬಿಜೆಪಿ ಕಡೆ ತಿರುಗಿದರೆ ವಿಧಾನ ಸಭೆ ವಿಸರ್ಜಿಸಿ ಇಲ್ಲವೆ ನೀವು ರಾಜೀನಾಮೆ ಕೊಡಬೇಕಾಗಿ ಬರಬಹುದು ಎಂದು ಪ್ರತಿಷ್ಟೆಯ ಸೋಗನ್ನು ಜಾರಿ ಮಾಡಬಹುದು ಎಂದು ಜನ ಚರ್ಚಿಸುತ್ತಿದ್ದಾರೆ.
ಅನಾಮಧೇಯ ಪತ್ರವನ್ನು ಪ್ರಧಾನಿ ಕಾರ್ಯಾಲಯ ಗಂಭೀರವಾಗಿ ತೆಗೆದುಕೊಂಡಿದೆಯಾ ಅಥವಾ ರಾಜಕೀಯ ಲೆಕ್ಕಾಚಾರವನ್ನು ಅಳೆದು ತೂಗಿ ಮುಚ್ಚಿ ಹಾಕಿ ಬಿಡಬಹುದಾ? ರಾಜ್ಯದಲ್ಲಿ ಭಾರೀ ಚರ್ಚೆ ಆಗುತ್ತಿರುವ ಮತ್ತು ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಚರ್ಚೆಗೆ ಬಿಟ್ ಕಾಯಿನ್ ಮುನ್ನುಡಿ ಬರೆಯಬಹುದಾ? ಕಾದು ನೋಡಬೇಕಿದೆ.