ಬಿಟ್‌ಕಾಯಿನ್ ಪ್ರಕರಣ: ಸರ್ಕಾರ ನಿರ್ಲಕ್ಷಿಸಿದರೂ, ಕಾಂಗ್ರೆಸ್‌ ಪಕ್ಷ ತಾರ್ಕಿಕ ಅಂತ್ಯ ಕಾಣುವವರೆಗೂ ಬಿಡುವುದಿಲ್ಲ

ಬೆಂಗಳೂರು: ಬಿಟ್‌ಕಾಯಿನ್‍ಗೆ ಸಂಬಂಧಪಟ್ಟಂತೆ ನಾವು ಕೂಡ ಮಾಹಿತಿ ಕಲೆ ಹಾಕುತ್ತಿದ್ದೇವೆ. ಸರ್ಕಾರದ ಸಚಿವರು ಮತ್ತು ಅಕಾರಿಗಳೇ ನಮಗೆ ಮಾಹಿತಿ ಕೊಡುತ್ತಿದ್ದಾರೆ. ತನಿಖೆಯ ಅಂಶಗಳನ್ನು ಸರ್ಕಾರ ಬಹಿರಂಗಪಡಿಸಬೇಕು. ಜಾರಿ ನಿರ್ದೇಶನಾಲಯಕ್ಕೆ ಮತ್ತು ಪ್ರಧಾನಿಯವರಿಗೆ ಇಲ್ಲಿನ ಪ್ರಮುಖರು ಬರೆದಿರುವ ಪತ್ರವನ್ನು ಬಹಿರಂಗಪಡಿಸಬೇಕು. ತನಿಖೆಯಲ್ಲಿ ಕಂಡುಕೊಂಡಿರುವ ಸತ್ಯವೇನು ಎಂಬುದನ್ನು ಜನರ ಮುಂದಿಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆಂದು ಬಿಟ್‌ಕಾಯಿನ್ ಪ್ರಕರಣವನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಬಹುದು. ಆದರೆ ಕಾಂಗ್ರೆಸ್ ಈ ವಿಷಯವನ್ನು ತಾರ್ಕಿಕ ಅಂತ್ಯಕಾಣುವವರೆಗೂ ಬಿಡುವುದಿಲ್ಲ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿಯವರನ್ನು ಭೇಟಿ ಮಾಡಿದ ಬಳಿಕ ಬಿಟ್‌ಕಾಯಿನ್ ವಿಚಾರವನ್ನು ಬಿಟ್ಟು ಹಾಕುವಂತೆ ಪ್ರಧಾನಿ ಸಲಹೆ ಮಾಡಿದ್ದಾರೆ. ಹಾಗಾಗಿ ಅವರು ಅದನ್ನು ಕೈಬಿಡಬಹುದು. ಇದು ಜನರ ವಿಷಯ. ಜನಪರವಾದ ವಿಷಯಗಳನ್ನು ನಾವು ಅಷ್ಟು ಸುಲಭವಾಗಿ ಕೈಬಿಡುವುದಿಲ್ಲ ಎಂದರು.

 

 

ಬಿಟ್‌ಕಾಯಿನ್‍ಗೆ ಸಂಬಂಧಪಟ್ಟಂತೆ ಹೂಡಿಕೆ ಮಾಡುವವರ ಬಗ್ಗೆ ನಮ್ಮ ತಕರಾರಿಲ್ಲ. ಇಲ್ಲಿ ಹ್ಯಾಕಿಂಗ್ ಆಗಿದೆಯೇ ಅಥವಾ ಇಲ್ಲವೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಯಾರನ್ನೆಲ್ಲಾ ತನಿಖೆಗೊಳಪಡಿಸಲಾಗಿದೆ, ಏನೆಲ್ಲ ಅಂಶಗಳು ತಿಳಿದುಬಂದಿದೆ ಎಂಬುದನ್ನು ಜನರಿಗೆ ತಿಳಿಸಬೇಕಿದೆ ಎಂದು ಒತ್ತಾಯಿಸಿದರು.

ನೂತನ ಕಾಂಗ್ರೆಸ್ ಕಚೇರಿ ಮಾತನಾಡಿದ ಡಿ.ಕೆ.ಶಿವಕುಮಾರ್ ʻʻಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದಿನಿಂದ ಹೊಸಬೆಳಕು ಆರಂಭವಾಗಿದೆ. ಇಲ್ಲಿ ಕಾಂಗ್ರೆಸ್ ಕಚೇರಿಯನ್ನು ಆರಂಭಿಸಿದ್ದೇವೆ. ನೆರೆಯ ಭಾಗದಲ್ಲಿರುವ ಬಸವನಗುಡಿ ಸೇರಿದಂತೆ ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬೇಕು. ಮುಂಬರುವ ವಿಧಾನಸಭೆ ಚುಣಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್ ಪಾದಯಾತ್ರೆ ಆಯೋಜಿಸಿದೆ. ಇದರಲ್ಲಿ ಬೆಂಗಳೂರಿನ ಹೆಚ್ಚು ಜನ ಭಾಗವಹಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಕಾಂಗ್ರೆಸ್ ಮುಖಂಡ ಗುರ‍್ರಪ್ಪ ನಾಯ್ಡು, ರಘುನಾಥ್ ಸೇರಿದಂತೆ ಹಲವಾರು ಭಾಗವಹಿಸಿದ್ದರು.

 

Donate Janashakthi Media

Leave a Reply

Your email address will not be published. Required fields are marked *