ಹವಾಮಾನ ಬದಲಾವಣೆ : ಗ್ಲಾಸ್ಗೊ ಸಮ್ಮೇಳನ ಮತ್ತು ಭಾರತ

ವಸಂತರಾಜ ಎನ್.ಕೆ.

ಪ್ರಧಾನಿ ಅವರು ಗ್ಲಾಸ್ಗೊ ಸಮ್ಮೇಳನದಲ್ಲಿ ತಮ್ಮ ಭಾಷಣದಲ್ಲಿ ಹವಾಮಾನ ಬದಲಾವಣೆ ತಡೆಯಲು ಭಾರತ ಕೈಗೊಳ್ಳಲಿರುವ ಸೂಸುವಿಕೆ ಕಡಿತದ ಐದು ಗುರಿಗಳ ಘೋಷಣೆ ಮಾಡಿದರು. ಈ ಗುರಿಗಳ ಕಾರ್ಯಸಾಧ್ಯತೆ ಒಂದು ಕಡೆಯಿದೆ. ಆದರೆ ಪ್ರಧಾನಿಯವರ ಘೋಷಣೆಗಳಾಗಲಿ ಅಥವಾ ರಾಷ್ಟ್ರೀಯವಾಗಿ ನಿರ್ಧಾರಿತ ಕೊಡುಗೆ(NDC)ಗಳಾಗಲಿ ಪರಿಣತರ ತಂಡಗಳು, ಇದರ ಪರಿಣಾಮ ಅನುಭವಿಸಲಿರುವ ಜನವಿಭಾಗಗಳ ಸಂಘಟನೆಗಳು ಅಥವಾ ಪ್ರತಿನಿಧಿಗಳು, ರಾಜಕೀಯ ಪಕ್ಷಗಳು – ಇವರೆಲ್ಲರ ಜತೆ ಚರ್ಚೆಯ ನಂತರ ರೂಪಿಸಿದವುಗಳಲ್ಲ…… ಹವಾಮಾನ ಬದಲಾವಣೆಗೆ ಸಂಬಂಧಿಸಿದ ಎರಡು ವಿಷಯಗಳ ಕುರಿತು ಭಾರತದ ಮೌನ ಮಾತ್ರ ಭಾರೀ ಆತಂಕಕಾರಿಯಾಗಿದೆ. ಗ್ಲಾಸ್ಗೊದಲ್ಲಿ 110 ದೇಶಗಳು 2030ರ ಹೊತ್ತಿಗೆ ಅರಣ್ಯನಾಶವನ್ನು 2030ರ ಹೊತ್ತಿಗೆ ನಿಲ್ಲಿಸುವ ಘೋಷಣೆಯಿಂದ ದೂರ ಉಳಿಯಿತು. ಗ್ಲಾಸ್ಗೊದಲ್ಲಿ ನೂರಕ್ಕೂ ಹೆಚ್ಚು ದೇಶಗಳು ಸಹಿ ಹಾಕಿದ “ಜಾಗತಿಕ ಮೀಥೇನ್ ಶಪಥ”ಕ್ಕೂ ಭಾರತ ಸಹಿ ಹಾಕದಿರುವುದು ಸಹ ಆತಂಕಕಾರಿ. ಈ ಶಪಥದ ಪ್ರಕಾರ 2030ರ ಹೊತ್ತಿಗೆ ಹಸಿರುಮನೆ ಅನಿಲಗಳ ಸೂಸುವಿಕೆಯನ್ನು 2020ರ ಮಟ್ಟದಿಂದ 2030ರ ಹೊತ್ತಿಗೆ ಶೇ. 30 ರಷ್ಟು ಕಡಿತ ಮಾಡಬೇಕು.

ಯು.ಕೆ ಯ ಸ್ಕಾಟ್ಲೆಂಡಿನಲ್ಲಿರುವ ಗ್ಲಾಸ್ಗೋದಲ್ಲಿ ಹವಾಮಾನ ಬದಲಾವಣೆ ವಿಶ್ವ ಸಮ್ಮೇಳನ ಅಕ್ಟೋಬರ್ 31ರಿಂದ ನವೆಂಬರ್ 12 ರ ವರೆಗೆ ನಡೆಯುತ್ತಿದೆ. ಈ ಲೇಖನವನ್ನು ನೀವು ಓದುವುದರೊಳಗೆ ಅದು ಮುಗಿದಿರುತ್ತದೆ. ಆದರೆ ಈ ಲೇಖನ ಬರೆದಾಗ (ನವೆಂಬರ್ 11) ಅದು ಇನ್ನೂ ನಡೆಯುತ್ತಿದ್ದು ಯಾವುದೇ ಅಂತಿಮ ಒಪ್ಪಂದ ಇನ್ನೂ ಆಗಿಲ್ಲ.  ಈ ಸಮ್ಮೇಳವವನ್ನು COP 26 ಎಂದು ಕರೆಯಲಾಗಿದೆ.  COP (Conference of the Parties) ನಲ್ಲಿರುವ  ‘Parties’ ಅಂದರೆ UN Framework Convention of Climate Change (UNFCCC – ಹವಾಮಾನ ಬದಲಾವಣೆಗೆ ವಿಶ್ವಸಂಸ್ಥೆಯ ಸಮಾವೇಶದ ಚೌಕಟ್ಟು ) ಒಪ್ಪಂದ ಕ್ಕೆ ಸಹಿ ಹಾಕಿದ 192 ದೇಶಗಳು. ಈ COP ಸಮ್ಮೇಳನ ಪ್ರತಿ ವರ್ಷ ಹವಾಮಾನ ಬದಲಾವಣೆ ಒಪ್ಪಂದದ ಜಾರಿಯ ಪರಾಮರ್ಶೆ ನಡೆಸುತ್ತದೆ.  ಮೊದಲ ಇಂತಹ ಸಮ್ಮೇಳನ COP1 ಜರ್ಮನಿಯ ಬರ್ಲಿನ್ ನಲ್ಲಿ ನಡೆದಿತ್ತು. ಇದು 26 ನೆಯ COP. ಹಲವು ದೇಶಗಳ ಉನ್ನತ ನಾಯಕರು, ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗೆ ಜಗತ್ತಿನ ಹಲವು ಕಡೆ ಘಟಿಸಿದ ಹವಾಮಾನ ವೈಪರೀತ್ಯಗಳಿಂದಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಗಮನವನ್ನು COP26 ಸೆಳೆದಿದೆ.

COP26 ಸಮ್ಮೇಳನದ ಪ್ರಮುಖ ಉದ್ದೇಶ ಹವಾಮಾನ ಬದಲಾವಣೆಯ ಪರಿಣಾಮವಾಗಿ ಜಾಗತಿಕ  ಉಷ್ಣ ಏರಿಕೆ 2 ಡಿಗ್ರಿ ಸಿ (ಸೆಂಟಿಗ್ರೇಡ್) ಗಿಂತ ಕಡಿಮೆಯಾಗಿರುವುದನ್ನು, ಸಾಧ್ಯವಾದರೆ 1.5 ಡಿಗ್ರಿಗೆ ಸೀಮಿತವಾಗಿರುವುದನ್ನು ಖಾತ್ರಿ ಮಾಡುವ ಕ್ರಮಗಳನ್ನು ಕೈಗೊಳ್ಳುವುದು. ಈ ಜಾಗತಿಕ ಸಮಸ್ಯೆಯ ಪ್ರಮಾಣವನ್ನು ಅದಕ್ಕೆ ಜಾಗತಿಕ ಪರಿಹಾರವಾಗಿ ಸೂಸುವಿಕೆ ಕಡಿತದ ಕ್ರಮಗಳನ್ನು 30 ವರ್ಷಗಳಷ್ಟು ಹಿಂದೆಯೇ (1992ರ ಮೊದಲ UNFCCC ರಿಯೋ ಡಿ ಜನೇರಿಯೊ ಶೃಂಗಸಭೆಯಲ್ಲಿಯೇ) ನಿರ್ಧರಿಸಲಾಗಿತ್ತು. ಆದರೆ ಈ ಕಡಿತವನ್ನು ಎಷ್ಟು ಯಾರು ಹೇಗೆ ಮಾಡುವುದು ಎಂಬುದರ ಬಗ್ಗೆ ಒಮ್ಮತ ಸಾಧ್ಯವಾಗಿಲ್ಲ.  ಸೂಸುವಿಕೆ ಕಡಿತವನ್ನು ಈ ಸಮಸ್ಯೆಗೆ  “ಕಾರಣಕರ್ತರಾದ ಪ್ರಮಾಣದಲ್ಲಿ ಮಾಡಬೇಕು’.  ಅಂದರೆ ಈ ಹವಾಮಾನ ಬದಲಾವಣೆಗೆ ಕಾರಣವಾದ ಕೈಗಾರಿಕಾ ಕ್ರಾಂತಿಯ ಪ್ರಯೋಜನ ಪಡೆದ ಶ್ರೀಮಂತ ದೇಶಗಳು ಈ ಸಮಸ್ಯೆಗೆ ಕೊಟ್ಟ ಕೊಡುಗೆಯ ಪ್ರಮಾಣದಲ್ಲಿ ಹೆಚ್ಚು ಕಡಿತ ಮಾಡಬೇಕು, ಅಲ್ಲದೆ ಅವರ ಬಡ ದೇಶಗಳಿಗೆ ಅಗತ್ಯ ತಂತ್ರಜ್ಞಾನ ಮತ್ತು ಪರಿಹಾರ ಕ್ರಮಗಳಿಗೆ ಅನುದಾನಗಳನ್ನು ಕೊಡಬೇಕು – ಎಂಬ ಬಡ ದೇಶಗಳ ಹಕ್ಕೊತ್ತಾಯವನ್ನು ಶ್ರೀಮಂತ ದೇಶಗಳು ನಿರ್ಲಕ್ಷ ಮಾಡುತ್ತಾ ಬಂದು ಸಮಸ್ಯೆ ಈಗ ಭೀಕರ ಸ್ವರೂಪ ಪಡೆದಿದೆ.  (ವಿವರಗಳಿಗೆ ಹವಾಮಾನ ಬದಲಾವಣೆಯ ವಿಜ್ಞಾನ ಮತ್ತು ಸೂಸುವಿಕೆ ಕಡಿತದ ರಾಜಕೀಯ  ಬಾಕ್ಸ್ ನೋಡಿ)

ಸಮ್ಮೇಳನದ ಮೊದಲೇ ಹಿಂದೆ ಒಪ್ಪಿದ ಸೂಸುವಿಕೆ ಕಡಿತದಲ್ಲಿ ಹೆಚ್ಚಿಸಿದ (NDCs – Nationally Determined Contributions) “ರಾಷ್ಟ್ರೀಯವಾಗಿ ನಿರ್ಧಾರಿತ ಕೊಡುಗೆ” ಗಳನ್ನು ಕೊಡಬೇಕಾಗಿತ್ತು. ಹೆಚ್ಚಿನ ದೇಶಗಳು ಇದನ್ನು ಮಾಡಿದ್ದರೂ (ವಿಶೇ಼ಷವಾಗಿ ಅಭಿವೃದ್ಧ ದೇಶಗಳು) ಕಡಿತದಲ್ಲಿ ಗಮನಾರ್ಹ ಹೆಚ್ಚಳಗಳನ್ನು ಮಾಡಿಲ್ಲ. ಚೀನಾ ಸೇರಿದಂತೆ ಕೆಲವು ದೇಶಗಳು ಕಡಿತಗಳ ಹೆಚ್ಚಳದ ಕುರಿತು ಅನೌಪಚಾರಿಕ ಘೋಷಣೆಗಳನ್ನು ಮಾಡಿವೆ. ಭಾರತ ಸೇರಿದಂತೆ ಕೆಲವು ದೇಶಗಳು ಇವೆರಡನ್ನೂ ಮಾಡಿಲ್ಲ. ‘ಉಳಿದವರು ಎಷ್ಟು ಕಡಿತ ಮಾಡುತ್ತಾರೆ’ ಎಂದು ಕಾದು ನೋಡುವ ತಂತ್ರ ಹೆಚ್ಚಿನ ದೇಶಗಳದ್ದು. ಈ ವರೆಗೆ ದೇಶಗಳು ಕೊಟ್ಟಿರುವ  ಸೂಸುವಿಕೆ ಕಡಿತದಲ್ಲಿ ಹೆಚ್ಚಿಸಿದ “ಕೊಡುಗೆ”ಗಳನ್ನು ಪರಿಗಣಿಸಿ UNFCCC ಜಾಗತಿಕ  ಉಷ್ಣ ಏರಿಕೆ 2.4ರಿಂದ 2.7 ಡಿಗ್ರಿ ಸಿ ಆಗಬಹುದು ಎಂದು ಅಂದಾಜಿಸಿದೆ. ನಮ್ಮ ಪ್ರಧಾನಿ ಸೇರಿದಂತೆ ಸಾಕಷ್ಟು ವಿಶ್ವ ನಾಯಕರು ಸಮ್ಮೇಳನದಲ್ಲಿ ಭಾರೀ ಭಾಷಣಗಳನ್ನು ಬಿಗಿದಿದ್ದಾರೆ, ಆಶ್ವಾಸನೆಗಳನ್ನು ಕೊಟ್ಟಿದ್ದಾರೆ. ಆದರೆ ಇದು ಪ್ರಸಿದ್ಧ ಯುವ ಸ್ವಿಡಿಶ್ ಪರಿಸರ ಕಾರ್ಯಕರ್ತೆ ಗ್ರೆಟಾ ತುನ್ಬರ್ಗ್ ಹೇಳಿದಂತೆ ಬರಿಯ ‘ಬ್ಲಾ ಬ್ಲಾ ಬ್ಲಾ’ (ಬೊಗಳೆ) ಯಷ್ಟೇ ಆಗಿದೆ.

ಮೋದಿ  ‘ಗ್ರಾಂಡ್ ಸ್ಟೈಲ್’ ಘೋಷಣೆ

ಪ್ರಧಾನಿ ಮೋದಿ ಅವರು ಗ್ಲಾಸ್ಗೊದಲ್ಲಿ ಅನಿರೀಕ್ಷಿತವಾಗಿ ಘೋಷಿಸಿದ ಭಾರೀ ಸೂಸುವಿಕೆ ಕಡಿತದ ಕ್ರಮಗಳ ಕುರಿತಷ್ಟೇ ಸದ್ಯಕ್ಕೆ ಚರ್ಚಿಸಬಹುದು. ಅನಿರೀಕ್ಷಿತವಾಗಿ ಯಾಕೆಂದರೆ, ಸಮ್ಮೇಳನದ ಮೊದಲು ಅಭಿವೃದ್ಧ ದೇಶಗಳ, ಅಂತರ್ರಾಷ್ಟ್ರೀಯ ಪ್ರತಿನಿಧಿಗಳು ಭಾರತಕ್ಕೆ ಭೇಟಿ ನೀಡಿ ಭಾರತ 2050ರೊಳಗೆ ಒಟ್ಟು ಶೂನ್ಯ ಸೂಸುವಿಕೆ ಗುರಿಯ ಘೋಷಣೆಯನ್ನು ಮಾಡಲು ಒತ್ತಡ ಹಾಕಿದ್ದರು. (ವಿವರಗಳಿಗೆ “ಹವಾಮಾನ ಬದಲಾವಣೆಯ ವಿಜ್ಞಾನ ಮತ್ತು ಸೂಸುವಿಕೆ ಕಡಿತದ ರಾಜಕೀಯ” ಬಾಕ್ಸ್ ನೋಡಿ) ಭಾರತ ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲ ಹಾಗೂ ಈಗಾಗಲೇ ಹೇಳಿದ ಹಾಗೆ NDC ಕುರಿತ ಬಾಧ‍್ಯತೆಗಳನ್ನು ಕೊಟ್ಟಿರಲಿಲ್ಲ. ಆದರೆ ಗ್ಲಾಸ್ಗೊದಲ್ಲಿ ಪ್ರಧಾನಿ ಅವರ ಮಾಮೂಲಿ ‘ವೈಯಕ್ತಿಕ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವ ಗ್ರಾಂಡ್ ಸ್ಟೈಲ್’ ನಲ್ಲಿ ಈ ಘೋಷಣೆಗಳನ್ನು ಮಾಡಿದರು. ಆದರೆ ಅವರ ಯಾವುದೇ ಘೋಷಣೆಗಳನ್ನು ಭಾರೀ ಹೆಡ್ ಲೈನ್ ಮಾಡಿ ಸಂಭ್ರಮಿಸುವ ಭಾರತೀಯ ಮಾಧ್ಯಮಗಳಂತೆ ಜಾಗತಿಕ ಮಾಧ್ಯಮಗಳು ಮಾಡಬಹುದು ಎಂಬ ನಿರೀಕ್ಷೆ ಹುಸಿಯಾಯಿತು. ಹೆಚ್ಚಿನವು ಅದನ್ನು ನಿರ್ಲಕ್ಷಿಸಿದರೆ, ಕೆಲವು 2050ರೊಳಗೆ ಒಟ್ಟು ಶೂನ್ಯ ಸೂಸುವಿಕೆ ಗುರಿಯ ಘೋಷಣೆಯನ್ನು ಮಾಡಿಲ್ಲ ಎಂದು ಟೀಕಿಸಿದವು. ಕೆಲವು ಮಾತ್ರ ಇವು ಭಾರೀ ಸೂಸುವಿಕೆ ಕಡಿತದ ಕ್ರಮಗಳು ಎಂದು ಮೆಚ್ಚಿದವು.

ಈ ಘೋಷಣೆ ಸಮ್ಮೇಳನದಲ್ಲಿ ಹೆಚ್ಚಿನ ಪರಿಣಾಮ ಬೀರಲಿಲ್ಲ. ಇದಕ್ಕೆ ಕಾರಣ ಅಂತರ್ರಾಷ್ಟ್ರೀಯ ನೀತಿಗಳ ಮೇಲೆ ಪರಿಣಾಮಕಾರಿ ಪ್ರಭಾವ  ‘ಗ್ರಾಂಡ್ ಸ್ಟೈಲ್’ ಘೋಷಣೆಗಳಿಂದ ಸಾಧ್ಯವಿಲ್ಲ. ಗುರಿಗಳ ನೀತಿಗಳ ಸ್ಪಷ್ಟತೆ, ಸದ್ದಿಲ್ಲದ ರಾಯಭಾರದ ಮೂಲಕ ಸಂಬಂಧಿಸಿದ ಎಲ್ಲರಿಗೂ ಅದರ ಪರಿಣಾಮಕಾರಿಯಾದ ಸಂವಹನ ಇತ್ಯಾದಿಗಳ ಮೇಲೆ ಅದು ಅವಲಂಬಿಸಿರುತ್ತದೆ. ದೇಶೀಯ ಜನಮರುಳು ರಾಜಕಾರಣದ ತಂತ್ರಗಳು ಅಲ್ಲಿ ಕೆಲಸ ಮಾಡುವುದಿಲ್ಲ. ಈ ಭಾರೀ ಕಡಿತಗಳನ್ನು ಇಟ್ಟುಕೊಂಡು, ಭಾರತ ಮೂರನೆಯ ಜಗತ್ತಿನ ದೇಶಗಳ ಒಟ್ಟಾರೆ ಹಿತಾಸಕ್ತಿಗಳ ಹಕ್ಕೊತ್ತಾಯಗಳ ವಕ್ತಾರನಾಗಬೇಕಿತ್ತು. ಅಭಿವೃದ್ಧ ದೇಶಗಳ ಮೇಲೆ ಅವು NDC ಗಳಲ್ಲಿ ಕೊಟ್ಟ ಕಡಿತಗಳನ್ನು ಇನ್ನಷ್ಟು ಹೆಚ್ಚಿಸಬೇಕು, ಮೂರನೆಯ ಜಗತ್ತಿನ ದೇಶಗಳಿಗೆ ಸೂಸುವಿಕೆ ಕಡಿತಕ್ಕೆ ತಂತ್ರಜ್ಞಾನ ಮತ್ತು ಹಣಕಾಸು ನೆರವನ್ನು ಕೊಡಬೇಕು ಎಂಬ ಷರತ್ತನ್ನು ಹಾಕಿದ್ದರೆ ಸಮ್ಮೇಳನದಲ್ಲಿ ಈ ಕುರಿತು ಚರ್ಚೆ ಎಬ್ಬಿಸುವ ಮೂಲಕ ನಿಜವಾದ ‘ವಿಶ್ವಗುರು’ ಪಾತ್ರ ವಹಿಸಬಹುದಿತ್ತು. ಇವ್ಯಾವುವನ್ನೂ ಮಾಡದೆ, ಆ ಮೇಲೆ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿ ಘೋಷಿತ ಗುರಿಗಳು ಭಾರತ ಸೇರಿದಂತೆ ಕೆಲವು ದೇಶಗಳ (ಅವು ಯಾವುವು ಎಂದು ಸ್ಪಷ್ಟ ಪಡಿಸದೆ) ಕೂಟ ಅಭಿವೃದ್ಧ ದೇಶಗಳಿಂದ 1 ಟ್ರಿಲಿಯನ್ (ಲಕ್ಷ ಕೋಟಿ) ಡಾಲರ್ ಧನಸಹಾಯದ ಮೇಲೆ ಷರತ್ತುಬದ್ಧವಾಗಿವೆ ಎಂದು ಪತ್ರಿಕಾಗೋಷ್ಠಿಗಳಲ್ಲಿ ಹೇಳಿದ್ದು ಅದರ ಪರಿಣಾಮಕಾರಿತನವನ್ನು ಇನ್ನಷ್ಟು ಕಡಿಮೆ ಮಾಡಿದವು.

ಮೋದಿ ಐದು ಗುರಿಗಳ ಕಾರ್ಯಸಾಧ್ಯತೆ

ಪ್ರಧಾನಿ ಅವರು ತಮ್ಮ ಭಾಷಣದಲ್ಲಿ ಘೋಷಣೆ ಮಾಡಿದ ಹವಾಮಾನ ಬದಲಾವಣೆ ತಡೆಯುವ ಭಾರತ ಕೈಗೊಳ್ಳಲಿರುವ ಸೂಸುವಿಕೆ ಕಡಿತದ ಐದು ಗುರಿಗಳು ಹೀಗಿವೆ (ಇವುಗಳಲ್ಲಿ ಅಂತಿಮವಾಗಿ NDC ಯಲ್ಲಿ ಅಧಿಕೃತ ಬದ್ಧತೆಯಾಗಿ ಕೊಡುವಾಗ ಮತ್ತು ಕೆಲವು ವಿವರಗಳನ್ನು ಸ್ಪಷ್ಟಪಡಿಸಿದಾಗ ಕೆಲವು ಬದಲಾವಣೆಗಳಾಗಬಹುದು, ಆದರೆ ಭಾರೀ ವ್ಯತ್ಯಾಸಗಳ ಸಂಭವ ಕಡಿಮೆ):

  1. ಸೂಸುವಿಕೆಯ ತೀವ್ರತೆ (ಜಿಡಿಪಿಯ ಘಟಕಕ್ಕೆ ತಲಾ ಸೂಸುವಿಕೆಯ ಪ್ರಮಾಣ) 2005ಕ್ಕೆ ಹೋಲಿಸಿದರೆ 2030ರ ಹೊತ್ತಿಗೆ 45% ರಷ್ಟು ಕಡಿತ (ಪ್ಯಾರೀಸ್ ಒಪ್ಪಂದದಲ್ಲಿ ಇದು 35% ಇತ್ತು)
  2. (2030ರ ಹೊತ್ತಿಗೆ ಮಾಮೂಲಿ ಆರ್ಥಿಕ ಚಟುವಟಿಕೆಗಳ ಫಲವಾಗಿ ಬರಬಹುದಾದ) ಒಟ್ಟು ವಾರ್ಷಿಕ ಸೂಸುವಿಕೆಯಲ್ಲಿ 100 ಕೋಟಿ ಟನ್ ಕಡಿತ
  3. ಇಂಧನ-ರಹಿತ ಮೂಲಗಳಿಂದ ಶಕ್ತಿ ಉತ್ಪಾಧನೆಯ ಸಾಮರ್ಥ್ಯವನ್ನು 2030ರ ಹೊತ್ತಿಗೆ 500 ಗಿಗಾ ವಾಟ್ ಗೆ ಏರಿಸುವುದು
  4. ನವೀಕರಿಸಬಹುದಾದ ಮೂಲಗಳಿಂದ 2030ರ ಹೊತ್ತಿಗೆ 50% ಶಕ್ತಿ ಉತ್ಪಾದನೆ
  5. 2070ರ ಹೊತ್ತಿಗೆ ಶೂನ್ಯ ಸೂಸುವಿಕೆಯ ಸಾಧನೆ

ಈ ಗುರಿಗಳ ಕಾರ್ಯಸಾಧ್ಯತೆ ಬಗ್ಗೆ ಹೀಗೆ ಹೇಳಬಹುದು :

ಗುರಿ 1 ರ ಸಾಧನೆ ಅಷ್ಟೇನೂ ಕಷ್ಟ ಸಾಧ್ಯವಲ್ಲ. ಗುರಿ 2ರ ಬಗ್ಗೆ ಹಲವು ಸ್ಪಷ್ಟನೆಗಳು ಬೇಕಾಗಿವೆ. ಈಗ ವಾರ್ಷಿಕ ಸೂಸುವಿಕೆ 280  ಕೋಟಿ ಟನ್ ಇದ್ದು, ಈಗಿನ ಅಂದಾಜು ಪ್ರಕಾರ 2030ರ ಹೊತ್ತಿಗೆ ಮಾಮೂಲಿಯಾಗಿ 450 ಕೋಟಿ ಟನ್ ಸೂಸುವಿಕೆಯಾಗುತ್ತದೆ. ನೂರು ಟನ್ (ಅಂದರೆ ಸುಮಾರು ಶೇ.20) ಕಡಿತದ ಪರಿಣಾಮವಾಗಿ ಯಾವ ಆರ್ಥಿಕ ಚಟುವಟಿಕೆ ಕಡಿತವಾಗಬಹುದು, ಯಾವ ರೀತಿಯಲ್ಲಿ ಈ ಕಡಿತ ಅಭಿವೃದ್ಧಿ ಮೇಲೆ ಪರಿಣಾಮ ಬೀರಬಹುದು ಎಂಬುದರ ಕುರಿತು ಚಿಂತನೆ ನಡೆದಂತಿಲ್ಲ. ಗುರಿ 3 ಮತ್ತು 4 ರ ಕಾರ್ಯಸಾಧ್ಯತೆ ಮತ್ತು ಪರಿಣಾಮಗಳ ಕುರಿತು ಸಹ ತೀವ್ರ ಸಂದೇಹಗಳಿವೆ. ಗುರಿ 4ರಲ್ಲಿ ಹೇಳಿರುವುದು ಶಕ್ತಿ ಉತ್ಪಾಧನೆಯ ಸಾಮರ್ಥ್ಯ ಅಥವಾ ಶಕ್ತಿ ಉತ್ಪಾದನೆಯ ಪ್ರಮಾಣದ ಕುರಿತಾ ಎಂಬುದು ಸ್ಪಷ್ಟವಿಲ್ಲ. ಎರಡೂ ಸಂದರ್ಭದಲ್ಲಿ ಇನ್ನು ಮುಂದೆ ಯಾವುದೇ ಕಲ್ಲಿದ್ದಲು ಆಧಾರಿತ ಶಕ್ತಿ ಉತ್ಪಾದನೆ ಸ್ಥಾವರ ಸ್ಥಾಪಿಸುವುದಿಲ್ಲವೆಂದು ಅಂದುಕೊಂಡಂತಿದೆ. ಇದು ಕಾರ್ಯಸಾಧ‍್ಯವಾ, ಇದರ ಪರಿಣಾಮಗಳೇನು ಎಂಬುದು ಸ್ಪಷ್ಟವಿದ್ದಂತಿಲ್ಲ. ಇಂಧನ ಮೂಲಗಳಿಂದ ಸೂಸುವಿಕೆ ವಿದ್ಯುತ್ ಉತ್ಪಾದನೆಯಲ್ಲಿ ಮಾತ್ರ ಆಗುವುದಿಲ್ಲ.  ವಾಹನಗಳಿಂದ ಸೂಸುವಿಕೆ ಕಡಿತ ಮಾಡಲು ಸಾರ್ವಜನಿಕ ಸಾರಿಗೆಯ ಯೋಜನೆಗಳನ್ನು ಹಾಕಲಾಗಿವೆಯೆ ಎಂಬುದು ಸ್ಪಷ್ಟವಿಲ್ಲ.

ಅರಣ್ಯನಾಶ, ಮೀಥೇನ್ ಶಪಥ : ಆತಂಕಕಾರಿ ಮೌನ

ಹವಾಮಾನ ಬದಲಾವಣೆಗೆ ಸಂಬಂಧಿಸಿದ ಎರಡು ವಿಷಯಗಳ ಕುರಿತು ಭಾರತದ ಮೌನ ಮಾತ್ರ ಭಾರೀ ಆತಂಕಕಾರಿಯಾಗಿದೆ. ಗ್ಲಾಸ್ಗೊದಲ್ಲಿ 110 ದೇಶಗಳು ಅರಣ್ಯನಾಶವನ್ನು 2030ರ ಹೊತ್ತಿಗೆ ನಿಲ್ಲಿಸುವ ಘೋಷಣೆಯಿಂದ ದೂರ ಉಳಿಯಿತು. ಪ್ರಧಾನಿ ಘೋಷಣೆ ಮತ್ತು ಭಾರತದ NDC ಎರಡೂ ಈ ಕುರಿತು ಮೌನವಾಗಿದೆ.  ಇತ್ತೀಚಿನ ಅರಣ್ಯನಾಶದ ವಿರುದ್ಧ ಮತ್ತು ಪರಿಸರ ರಕ್ಷಣೆಯ ಕಾನೂನುಬದ್ಧ ನಿರ್ಬಂಧಗಳನ್ನು ಕಾರ್ಪೊರೆಟ್ ಹಿತಾಸಕ್ತಿಗಳ ಒತ್ತಡದಿಂದ ಕಿತ್ತು ಹಾಕಿರುವ ಜೊತೆ ನೋಡಿದರೆ, ಗ್ಲಾಸ್ಗೊದಲ್ಲೂ ಇದೇ ಶಕ್ತಿಗಳ ಪ್ರಭಾವವಿರುವುದನ್ನು ಕಾಣಬಹುದು. ಗ್ಲಾಸ್ಗೊದಲ್ಲಿ ನೂರಕ್ಕೂ ಹೆಚ್ಚು ದೇಶಗಳು ಸಹಿ ಹಾಕಿದ “ಜಾಗತಿಕ ಮೀಥೇನ್ ಶಪಥ”ಕ್ಕೂ ಭಾರತ ಸಹಿ ಹಾಕದಿರುವುದು ಸಹ ಆತಂಕಕಾರಿ. ಈ ಶಪಥದ ಪ್ರಕಾರ 2030ರ ಹೊತ್ತಿಗೆ ಹಸಿರುಮನೆ ಅನಿಲಗಳ ಸೂಸುವಿಕೆಯನ್ನು 2020ರ ಮಟ್ಟದಿಂದ 2030ರ ಹೊತ್ತಿಗೆ ಶೇ. 30 ರಷ್ಟು ಕಡಿತ ಮಾಡಬೇಕು. ಭಾರತದ ಹಸಿರುಮನೆ ಅನಿಲಗಳ ಸೂಸುವಿಕೆ ಹೆಚ್ಚುತ್ತಿದ್ದು ಈ ಮೌನ ಬಹಳ ಕರ್ಕಶವೆಂದೇ ಹೇಳಬೇಕು.

ಸೂಸುವಿಕೆ ಕಡಿತದ ಅಂತರ್ರಾಷ್ಟ್ರೀಯ ಬದ್ಧತೆಗಳು ಒಂದು ಕಡೆ, ಇನ್ನೊಂಧು ಕಡೆ ಆ ಕಡಿತಗಳನ್ನು ನಮ್ಮ ಅಗಾಧ ಅಸಮಾನತೆಗಳಿರುವ ಸಮಾಜ ವ್ಯವಸ್ಥೆಯಲ್ಲಿ ಪ್ರದೇಶವಾರು, ಕ್ಷೇತ್ರವಾರು, ಜನವಿಭಾಗವಾರು ಹೇಗೆ ಹಂಚಲಾಗುತ್ತದೆ ಎಂಬುದು ಮುಖ್ಯವಾಗುತ್ತದೆ. ಗ್ಲಾಸ್ಗೊದಲ್ಲಿ Infrastructure for Resilient Island States (IRIS) ಎಂಬ ಸಣ್ಣ ದ್ವೀಪ ರಾಷ್ಟ್ರಗಳಿಗೆ ಹವಾಮಾನ ಬದಲಾವಣೆ ಪರಿಹಾರಕ್ಕೆ ತಾಂತ್ರಿಕ, ಧನಸಹಾಯವನ್ನು ಅಭಿವೃದ್ಧ ದೇಶಗಳ ನೆರವಿನೊಂದಿಗೆ ಒದಗಿಸುವ ಯೋಜನೆಯನ್ನು ಭಾರತ ಘೋಷಿಸಿತು. ಇದು ಸ್ವಾಗತಾರ್ಹ. ಆದರೆ ಇಂತಹ ಕ್ರಮಗಳನ್ನು ಹವಾಮಾನ ಬದಲಾವಣೆಯಿಂದ ತೀವ್ರ ಪರಿಣಾಮಗಳಿಗೆ ಒಳಗಾಗಲಿರುವ ಸಾಗರ ತೀರದ ಪ್ರದೇಶಗಳು, ಸಣ್ಣ ದ್ವೀಪಗಳು, ನೆರೆ ಪೀಡಿತ ಪ್ರದೇಶಗಳಲ್ಲಿ ಸಹ ಇಂತಹ ಯೋಜನೆ ಅಗತ್ಯ ನಮ್ಮ ದೇಶದೊಳಗೆ ಇದೆ ಎಂಬುದೂ ಈವರೆಗೆ ಸರಕಾರದ ಗಮನಕ್ಕೆ ಬಂದಿಲ್ಲ.

ಕೊನೆಯದಾಗಿ ಪ್ರಧಾನಿಯವರ ಘೋಷಣೆಗಳಾಗಲಿ ಅಥವಾ “ರಾಷ್ಟ್ರೀಯವಾಗಿ ನಿರ್ಧಾರಿತ ಕೊಡುಗೆ” (NDC)ಗಳಾಗಲಿ ಪರಿಣತರ ತಂಡಗಳು, ಇದರ ಪರಿಣಾಮ ಅನುಭವಿಸಲಿರುವ ಜನವಿಭಾಗಗಳ ಸಂಘಟನೆಗಳು ಅಥವಾ ಪ್ರತಿನಿಧಿಗಳು, ರಾಜಕೀಯ ಪಕ್ಷಗಳು – ಇವರೆಲ್ಲರ ಜತೆ ಚರ್ಚೆಯ ನಂತರ ರೂಪಿಸಿದವುಗಳಲ್ಲ. ಇವು ಮುಂದೆಯಾದರೂ ನಿಜವಾಗಿಯೂ “ರಾಷ್ಟ್ರೀಯವಾಗಿ ನಿರ್ಧಾರಿತ” ವಾಗುವುದು ಎಂದು ಆಶಿಸಬಹುದಷ್ಟೆ

ಹವಾಮಾನ ಬದಲಾವಣೆಯ ವಿಜ್ಞಾನ ಮತ್ತು ಸೂಸುವಿಕೆ ಕಡಿತದ ರಾಜಕೀಯ

ಜಾಗತಿಕ ಉಷ್ಣತೆ ಏರಿಕೆ ಚಾರಿತ್ರಿಕವಾಗಿ ಕೈಗಾರಿಕಾ ಕ್ರಾಂತಿಯಿಂದ ಈ ವರೆಗೆ ಹಸಿರುಮನೆ ಅನಿಲಗಳ (ಪ್ರಮುಖವಾಗಿ ಕಾರ್ಬನ್ ಡೈಆಕ್ಸೈಡ್) ಒಟ್ಟು ಚಾರಿತ್ರಿಕ ಸೂಸುವಿಕೆಯ ಫಲ. 1850ರಿಂದ 2019 ವರೆಗೆ ಜಗತ್ತು 2.51 ಲಕ್ಷ ಕೋಟಿ ಕಾರ್ಬನ್ ಡೈಆಕ್ಸೈಡ್ ಸೂಸುವಿಕೆ ಕಂಡಿದೆ. ಇದರಲ್ಲಿ ಶೇ.60 ಅಭಿವೃದ್ಧ ದೇಶಗಳ (ಉತ್ತರ ಅಮೆರಿಕ ಮತ್ತು ಪಶ್ಚಿಮ ಯುರೋಪು) ಪಾಲು. ಜಗತ್ತಿನ ಶೇ. 4 ಮಾತ್ರ ಜನಸಂಖ್ಯೆ ಇರುವ ಯು.ಎಸ್ ಒಟ್ಟು ಸೂಸುವಿಕೆಯ ಕಾಲುಭಾಗವನ್ನು ಹೊಂದಿದೆ. ಈ ಅವಧಿಯಲ್ಲಿ ಜಾಗತಿಕ ಉಷ್ಣತೆ ಏರಿಕೆ 1 ಡಿಗ್ರಿ ಸಿ (ಸೆಂಟಿಗ್ರೇಡ್) ಆಗಿದೆ. ಜಾಗತಿಕ ಉಷ್ಣತೆ ಏರಿಕೆ 1.5 ಡಿಗ್ರಿ ಸಿ ಮುಟ್ಟಿದರೆ ತೀವ್ರ ಅನಾಹುತಕಾರಿ ಹವಾಮಾನ ಬದಲಾವಣೆಗಳು ಆಗುತ್ತವೆ ಎಂದು ವಿಜ್ಞಾನ ಹೇಳುತ್ತದೆ.

ಇದನ್ನು ತಡೆಯಬೇಕಾದರೆ (ಅಂದರೆ ಉಷ್ಣತೆ ಏರಿಕೆ 1.5 ಡಿಗ್ರಿ ಸಿ ಒಳಗೆ ಇರಬೇಕಾದರೆ) ಇಡೀ ಜಗತ್ತು ಚಾರಿತ್ರಿಕ ಒಟ್ಟು ಸೂಸುವಿಕೆಯನ್ನು ಒಟ್ಟು “ಕಾರ್ಬನ್ ಬಜೆಟ್” ಒಳಗೆ ಇರುವಂತೆ ನೋಡಿಕೊಳ್ಳಬೇಕು. 1850ರಿಂದ ಜಗತ್ತು ಒಟ್ಟು ಶೂನ್ಯ ಸೂಸುವಿಕೆ ಮುಟ್ಟುವವರೆಗಿನ ಚಾರಿತ್ರಿಕ ಒಟ್ಟು ಸೂಸುವಿಕೆಯನ್ನು “ಕಾರ್ಬನ್ ಬಜೆಟ್” ಎನ್ನಲಾಗುತ್ತದೆ.  ಒಟ್ಟು ಪ್ರಾಕೃತಿಕ (ಹಾಗೂ ಕೃತಕ) ಸೂಸುವಿಕೆ ಇಂಗಿಸುವ ಸಾಮರ್ಥ್ಯದ ಮಟ್ಟಕ್ಕೆ ಮಾನವ-ಜನಿತ ಸೂಸುವಿಕೆಯು ಕಡಿಮೆಯಾಗುವುದಕ್ಕೆ ಶೂನ್ಯ ಸೂಸುವಿಕೆ ಯ ಮಟ್ಟ ಎನ್ನುತ್ತಾರೆ. “ಕಾರ್ಬನ್ ಬಜೆಟ್” ಸುಮಾರು 3 ಲಕ್ಷ ಕೋಟಿ ಟನ್ ಆಗಿದೆ. ಇದರ ಶೇ. 85 ಈಗಾಗಲೇ ಖರ್ಚಾಗಿದೆ. ಉಳಿದ “ಕಾರ್ಬನ್ ಬಜೆಟ್”ನ್ನು  ಮತ್ತು ಸೂಸುವಿಕೆ ಕಡಿತದ ಕೋಟಾಗಳನ್ನು ದೇಶಗಳ ನಡುವೆ ಹಂಚುವುದು ಹೇಗೆ ಎಂಬುದರ ಬಗ್ಗೆ ಒಮ್ಮತಕ್ಕೆ ಬರುವುದೇ ದೊಡ್ಡ ಸವಾಲಾಗಿದೆ.

“ಕಾರ್ಬನ್ ಬಜೆಟ್”ನ್ನು  ದೇಶಗಳ ಅಭಿವೃದ್ಧಿಯ ಹಂತ, ಜನಸಂಖ್ಯೆಗಳ ಆಧಾರದ ಮೇಲೆ ಹಾಗೂ ಸೂಸುವಿಕೆ ಕಡಿತವನ್ನು ಚಾರಿತ್ರಿಕ ಒಟ್ಟು ಸೂಸುವಿಕೆಯ ಆಧಾರದ ಮೇಲೆ ಹಂಚಬೇಕು ಎಂಬುದು ಹಿಂದಿನಿಂದಲೂ ಭಾರತದ ನಾಯಕತ್ವದಲ್ಲಿ ಮೂರನೆಯ ಜಗತ್ತಿನ ದೇಶಗಳ ಒತ್ತಾಯವಾಗಿತ್ತು.  ಅಂದರೆ ಅಭಿವೃದ್ಧ ದೇಶಗಳು ಒಟ್ಟಾಗಿ ಶೇ.60. ಹಾಗೂ ಯು.ಎಸ್ ಶೇ. 25 ಸೂಸುವಿಕೆಯ ಕಡಿತದ ಜವಾಬ್ದಾರಿ ಹೊರಬೇಕು. ಕಾರ್ಬನ್ ಬಜೆಟಿನ ಶೇ.80 ಭಾಗ ಮೂರನೆಯ ಜಗತ್ತಿನ ದೇಶಗಳಿಗೆ ಮೀಸಲಿಡಬೇಕು. ಈ ಸೂತ್ರವನ್ನು ಅಂಗೀಕರಿಸುವುದನ್ನು ಅಭಿವೃದ್ಧ ದೇಶಗಳು ಕಳೆದ 30 ವರ್ಷಗಳಲ್ಲಿ ಹಲವಾರು ವಿಳಂಬ ತಂತ್ರಗಳ ಮೂಲಕ ಮುಂದಕ್ಕೆ ಹಾಕುತ್ತಾ ಬಂದಿವೆ.

ಸೂಸುವಿಕೆ ಕಡಿತದ ಹಂಚಿಕೆಗೆ ಯಾವುದೇ ಸೂತ್ರ ಅಂಗೀಕರಿಸದೆ ಪ್ಯಾರೀಸ್ ಒಪ್ಪಂದದಲ್ಲಿ ಜಗತ್ತು ಒಟ್ಟು ಶೂನ್ಯ ಸೂಸುವಿಕೆಯನ್ನು 2050ರೊಳಗೆ ಸಾಧಿಸಬೇಕೆಂದು ಹೇಳಲಾಯಿತು. ಆದರೆ ಇದರರ್ಥ ಪ್ರತಿಯೊಂದು ದೇಶ (ಅದರಲ್ಲೂ ಮೂರನೆಯ ಜಗತ್ತಿನ ದೇಶಗಳು) 2050ರೊಳಗೆ ಒಟ್ಟು ಶೂನ್ಯ ಸೂಸುವಿಕೆಯನ್ನು ಸಾಧಿಸಬೇಕು ಎಂದಲ್ಲ. ಹಾಗೆಂದು ಒಪ್ಪಂದದಲ್ಲಿ ಇರಲಿಲ್ಲ ಕೂಡಾ. ಬದಲಾಗಿ ಈ ಗುರಿ ಇಡೀ ಜಗತ್ತು ಸಾಧಿಸಬೇಕಾದರೆ ಅಭಿವೃದ್ಧ ದೇಶಗಳು 2030ರೊಳಗೆ ಒಟ್ಟು ಶೂನ್ಯ ಸೂಸುವಿಕೆಯನ್ನು ಸಾಧಿಸಬೇಕು ಎಂದು ಬಡದೇಶಗಳು ಒತ್ತಾಯಿಸಿದವು. ಆದರೂ ಅದನ್ನು ಒಪ್ಪಂದದಲ್ಲಿ ಕಾಣಿಸಲಾಗಲಿಲ್ಲ.

ಇದನ್ನು ತಿರುವು ಮುರುವು ಮಾಡಿ ಈ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಇತ್ತೀಚಿನ ತಿಂಗಳುಗಳಲ್ಲಿ ಅಭಿವೃದ‍್ಧ ದೇಶಗಳ ನಾಯಕರು ಹಾಗೂ ಪ್ರತಿನಿಧಿಗಳು, ಎಲ್ಲ ದೇಶಗಳ (ಮುಖ್ಯವಾಗಿ ಚೀನಾ, ಭಾರತ) ಮೇಲೆ 2050ರೊಳಗೆ ಒಟ್ಟು ಶೂನ್ಯ ಸೂಸುವಿಕೆಯನ್ನು ಸಾಧಿಸುವ ಗುರಿಗೆ ಬದ್ಧತೆ ಘೋಷಿಸಬೇಕು ಎಂದು ಒತ್ತಡ ಹಾಕಿದರು. ಚೀನಾ ಮತ್ತು ಭಾರತ ಎರಡೂ ಈ ಒತ್ತಡಕ್ಕೆ ಮಣಿಯದಿದ್ದರೂ 2050ರೊಳಗೆ ಜಗತ್ತು ಶೂನ್ಯ ಸೂಸುವಿಕೆ ಸಾಧಿಸಬೇಕಾದರೆ ಅಭಿವೃದ್ಧ ದೇಶಗಳು 2030ರೊಳಗೆ ಶೂನ್ಯ ಸೂಸುವಿಕೆ ಸಾಧಿಸಬೇಕು ಎಂದು ಪ್ರತಿ ಒತ್ತಡ ಹಾಕುವುದರಲ್ಲಿ ವಿಫಲವಾದವು.

Donate Janashakthi Media

Leave a Reply

Your email address will not be published. Required fields are marked *