- ಬಿಟ್‌ಕಾಯಿನ್ ಹಗರಣ: ‘ಸುಪ್ರೀಂ’ ತನಿಖೆಗೆ ಆಗ್ರಹ
- ಪೊಲೀಸ್ ತನಿಖೆಯ ಮೇಲೆ ಅನುಮಾನ
- ಸಿಎಂ ಬದಲಾಗುವುದು ನಿಜ
ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿ ಸರ್ಕಾರದಿಂದ ಸ್ಪಷ್ಟ ಸತ್ಯಾಂಶ ಹೊರಬರುವುದಿಲ್ಲ. ಯಾಕೆಂದರೆ ಎಲ್ಲರೂ ಇದರಲ್ಲಿದ್ದಾರೆ. ಪೊಲೀಸ್, ಸರ್ಕಾರ ಎಲ್ಲರೂ ಇದ್ದಾರೆ. ಇಲ್ಲಿ ಯಾರು ತನಿಖೆ ಮಾಡಿದರೂ ಸತ್ಯಾಂಶ ಹೊರಬರುವುದಿಲ್ಲ, ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ ನಾವೇ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವರ ತನಿಖೆ ಸತ್ಯ ಹೊರತರಲು ಅಲ್ಲ, ಸತ್ಯವನ್ನು ಮುಚ್ಚಿ ಹಾಕಲು ತನಿಖೆ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿದರೆ ಮಾತ್ರ ಸತ್ಯ ಹೊರ ಬರಲಿದೆ. ಸತ್ಯಾಂಶ ಹೊರಬಂದ ನಂತರ ಕ್ರಮ ಆಗಲಿದೆ ಎಂದು ಹೇಳಿದರು.
ಅಲ್ಲದೇ, ಸಿಎಂ ಬಸವರಾಜ್ ಬೊಮ್ಮಾಯಿ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ”ಸಿಎಂ ಬೊಮ್ಮಾಯಿ ಸೆಟಲ್ಮೆಂಟ್ ಮಾಡೋಕೆ ನೋಡ್ತಿದ್ದಾರೆ. ನೀವು ಇದ್ದೀರಿ, ನಾವು ಇದ್ದೀವಿ ಅನ್ನೋ ರೀತಿ ಹೇಳ್ತಿದ್ದಾರೆ. ಕಾಂಗ್ರೆಸ್ನವರು ಇನ್ವಾಲ್ವ್ ಆಗಿದ್ದಾರೆ ಅಂತ ಸಿಎಂ ಹೇಳ್ತಿದ್ದಾರೆ. ಅವರ ಮಾತಿನ ಧಾಟಿ ನೋಡಿದ್ರೆ ಬೇರೆಯೇ ಅರ್ಥ ಇದೆ. ಕಾಂಗ್ರೆಸ್ ನವರು ಇದ್ದರೆ ಕೇಸ್ ದಾಖಲಿಸಲಿ. ಬಿಜೆಪಿಯವರಿಗೆ ಮಾತನಾಡಲು ವಿಷಯಗಳೇ ಇಲ್ಲ. ಬಿಟ್ ಕಾಯಿನ್ ಕೇಸ್ನಲ್ಲಿ ಬಿಜೆಪಿಯವರು ಭಯ ಪಟ್ಟಿದ್ದಾರೆ. ED, CBI ಎಲ್ಲವೂ ನಿಮ್ಮ ಕೈಯಲ್ಲೇ ಇದೆ.. ತನಿಖೆಗೆ ಒಪ್ಪಿಸಿ ಎಂದು ಸುದ್ದಿಗೋಷ್ಠಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.
”ಬಿಟ್ ಕಾಯಿನ್ ಕೇಸ್ಗೆ ಮೆಗಾ ಟ್ವಿಸ್ಟ್ ಸಿಗೋ ಸಾಧ್ಯತೆಯಿದೆ. ಪ್ರಕರಣಕ್ಕೆ ಪ್ರಾಮುಖ್ಯತೆ ಇಲ್ಲ ಅಂದ್ರೂ ಪ್ರಧಾನಿ ಜೊತೆ ಚರ್ಚೆ ಯಾಕೆ ನಡೆಯುತ್ತಿದೆ? ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿಯನ್ನ ಭೇಟಿ ಆಗಿದ್ದೇಕೆ..? ಪ್ರಾಮುಖ್ಯತೆ ಇಲ್ಲದಿದ್ರೆ ಪ್ರಧಾನಿ ಮೋದಿಗೆ ಈ ಸಂಬಂಧ ಎಕ್ಸ್ಫ್ಲೈನ್ ಮಾಡಿದ್ದೇಕೆ.? ಯಾಕೆ ಸುಮ್ಮನೆ ಪ್ರಧಾನಿ ಮೋದಿ ಟೈಮ್ ವೇಸ್ಟ್ ಮಾಡಿದ್ರು.?” ಎಂದು ಸಿಎಂ ಬೊಮ್ಮಾಯಿ ಕುರಿತು ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಪೊಲೀಸ್ ತನಿಖೆಯ ಬಗ್ಗೆ ಅನುಮಾನವಿದೆ : ಶ್ರೀಕಿಯನ್ನು ಬಂಧಿಸಿದ ನಂತರ ಪೊಲೀಸರು ಕೈಗೊಂಡ ಕ್ರಮಗಳ ಬಗ್ಗೆ ಹಲವು ಅನುಮಾನಗಳಿವೆ. ₹ 9 ಕೋಟಿ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ವಶಕ್ಕೆ ಪಡೆದಿರುವುದಾಗಿ ಪ್ರಕಟಿಸಿದ್ದರು. ಇನ್‌ಸ್ಪೆಕ್ಟರ್ ಶ್ರೀಧರ್ ಪೂಜಾರ್ ಎಂಬುವವರು ಪಂಚನಾಮೆಗೆ ಸಾಕ್ಷಿಗಳನ್ನಾಗಿ ಬೆಸ್ಕಾಂ ಲೈನ್‌ಮನ್ ಮತ್ತು ವಾಣಿಜ್ಯ ತೆರಿಗೆ ಇಲಾಖೆಯವರನ್ನು ಕರೆಸಿದ್ದರು. ಬಿಟ್‌ಕಾಯಿನ್ ಬಗ್ಗೆ ಲೈನ್‌ಮನ್‌ಗಳಿಗೆ ಏನು ಗೊತ್ತಿರಲು ಸಾಧ್ಯ ಎಂದು ಪ್ರಶ್ನಿಸಿದರು.
ಬಿಟ್‌ಕಾಯಿನ್ ವರ್ಗಾಯಿಸಿಕೊಂಡು ಹವಾಲಾ ಮೂಲಕ ಹಣ ಕೊಡುತ್ತಿದ್ದ ರಾಬಿನ್ ಖಂಡೇಲ್‌ವಾಲಾ ಎಂಬಾತ ಮೌರ್ಯ ಹೋಟೆಲ್‌ನಲ್ಲಿ ಪೊಲೀಸರಿಗೆ ಶರಣಾಗಿದ್ದ. ಆತನ ಬಗ್ಗೆ ಸರಿಯಾದ ತನಿಖೆಯನ್ನೇ ನಡೆಸಿಲ್ಲ. ಶ್ರೀಕಿ ವಾಲೆಟ್‌ನಲ್ಲಿ 31 ಬಿಟ್‌ಕಾಯಿನ್‌ಗಳು ಇದ್ದವು ಎಂದು ಹೇಳಲಾಗಿತ್ತು. ನಂತರ ವಾಲೆಟ್ ತೆರೆದಾಗ ಅಲ್ಲಿ 186 ಬಿಟ್‌ಕಾಯಿನ್‌ಗಳು ಇದ್ದವು. 31 ಬಿಟ್‌ಕಾಯಿನ್‌ಗಳು 186 ಆಗಿದ್ದು ಹೇಗೆ ಎಂದು ಪ್ರಿಯಾಂಕ್ ಕೇಳಿದರು.
ಪೊಲೀಸರ ವಶದಲ್ಲಿದ್ದಾಗ ತನಗೆ ಡ್ರಗ್ಸ್ ನೀಡಲಾಗಿತ್ತು ಎಂಬುದನ್ನು ಶ್ರೀಕಿ ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಆ ಬಗ್ಗೆ ಸರಿಯಾದ ವೈದ್ಯಕೀಯ ಪರೀಕ್ಷೆಯೇ ನಡೆದಿಲ್ಲ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡುವಲ್ಲೂ ಪೊಲೀಸರು ವಿಳಂಬ ಮಾಡಿದ್ದಾರೆ. ಇದೆಲ್ಲವೂ ಅಕ್ರಮ ನಡೆದಿರುವ ಸುಳಿವು ನೀಡುತ್ತವೆ ಎಂದು ಹೇಳಿದರು.
ತನಿಖೆ ನಡೆದರೆ ಸಿಎಂ ಬದಲಾಗುತ್ತಾರೆ ಎಂಬ ಹೇಳಿಕೆ ಬಗ್ಗೆ ಮತ್ತೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಮೂರನೇ ಸಿಎಂ ಯಾರು ಬೇಕಾದರೂ ಆಗಲಿ. ನಾನು ಯಾರ ಹೆಸರನ್ನೂ ಇಲ್ಲಿ ಹೇಳುವುದಿಲ್ಲ. ಆದರೆ ಮೂರನೇ ಮುಖ್ಯಮಂತ್ರಿಯಾಗುವುದು ನಿಜ. ನನ್ನ ಮಾತಿಗೆ ಈಗಲೂ ಬದ್ದ ಎಂದರು.