ಬೆಂಗಳೂರು: ವಿಧಾನಸೌಧದ ಬಳಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರಿಗೆ ಹುಟುಹಬ್ಬದ ಶುಭಾಶಯ ಕೋರಿ ಅಳವಡಿಸಿದ್ದ ಬ್ಯಾನರ್ ಹರಿದು ಹಾಕಿ ಕಾಂಗ್ರೆಸ್ ನಾಯಕಿ ಬಿಂದು ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಟಿ ರವಿಯವರ ಹುಟ್ಟುಹಬ್ಬಕ್ಕೆ ವಿಧಾನಸೌಧದ ಸುತ್ತಮುತ್ತ ಅನಧಿಕೃತವಾಗಿ ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು. ಶಕ್ತಿ ಸೌಧದ ಮುಂದೆ ಈ ರೀತಿ ಬ್ಯಾನರ್ ಮತ್ತು ಫ್ಲೆಕ್ಸ್ ಹಾಕಲು ಬಿಬಿಎಂಪಿಯು ಅನುಮತಿಯನ್ನು ನೀಡುವುದಿಲ್ಲ. ಆದರೂ, ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಇದರಿಂದ ಆಕ್ರೋಶಗೊಂಡು ಬಿಂದುಗೌಡ ಫ್ಲೆಕ್ಸ್‌ಗಳನ್ನು ಹರಿದು ಹಾಕಿದ್ದಾರೆ.
ಅನಧಿಕೃತ ಬ್ಯಾನರ್ ಅಳವಡಿಸದಂತೆ ಹೈಕೋರ್ಟ್ ಸ್ಪಷ್ಟವಾದ ಆದೇಶ ಹೊರಡಿಸಿದ್ದು, ಹೈ ಕೋರ್ಟ್ ಮುಂಭಾಗದಲ್ಲೇ ಪ್ಲೆಕ್ಸ್ ಹಾಕಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಬ್ಯಾನರ್ ಹರಿದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನ ಅಂದ ಕೆಡುತ್ತದೆ ಎಂದು ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಕೆ ನಿರ್ಬಂಧಿಸಿ ವರ್ಷದ ಹಿಂದೆಯೇ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶ ಜಾರಿಯಲ್ಲಿರುವ ಸಂದರ್ಭದಲ್ಲಿ ಹೈಕೋರ್ಟ್ ಮುಂಭಾಗವೇ ಬ್ಯಾನರ್ ಅಳವಡಿಸಿರುವುದನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದರು. ಇದೀಗ ಕಾಂಗ್ರೆಸ್ ನಾಯಕಿ ಬಿಂದು ಗೌಡ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿಭಟನಾ ರೂಪವಾಗಿ ಬ್ಯಾನರ್ ಗಳನ್ನು ಹರಿದು ಹಾಕಿದ್ದಾರೆ.