ಬಿಲ್ಕಿಸ್ ಬಾನು ಪ್ರಕರಣ : ಗಜರಾತ್ ಸರಕಾರದ ವಿರುದ್ಧ ಜನಾಕ್ರೋಶ

ಬೆಂಗಳೂರು : ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ 11 ಮಂದಿ ಅಪರಾಧಿಗಳನ್ನು ಗುಜರಾತಿನ ಬಿಜೆಪಿ ಸರಕಾರ ಬಿಡುಗಡೆ ಮಾಡಿರುವ ಕ್ರಮ ಖಂಡಿಸಿ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜಮಾಯಿಸಿದ ಹೋರಾಟಗಾರರು, ಬಿಲ್ಕಿಸ್ ಬಾನು ಅವರಿಗೆ ಧೈರ್ಯ ತುಂಬಲು ಸಾವಿರಾರು ಪತ್ರಗಳನ್ನು ಬರೆದು, ಪೆಟ್ಟಿಗೆಯಲ್ಲಿ ತುಂಬಿಸಿದರು. ಆನಂತರ, ಗುಜರಾತ್ ಸರಕಾರ ಬಿಡುಗಡೆ ಮಾಡಿದ ಎಲ್ಲ ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳಿಸಿ, ಕಠಿಣ ಶಿಕ್ಷೆ ವಿಧಿಸಲು ಸುಪ್ರೀಂ ಕೋರ್ಟ್ ಮುಂದಾಗಬೇಕು ಎಂದು ಘೋಷಣೆ ಕೂಗಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಅಧ್ಯಕ್ಷರೂ ಆದ ಲೇಖಕ ಆಕಾರ್ ಪಟೇಲ್, ಮಾನವೀಯ ವಿರೋಧಿ ಘಟನೆಗಳು ನಡೆದಾಗ ಎಲ್ಲ ಸಂಘ ಸಂಸ್ಥೆಗಳು ಜಂಟಿಯಾಗಿ ಖಂಡಿಸಬೇಕು. ಬಿಲ್ಕಿಸ್ ಬಾನು ಅವರು ಸತತ ಎರಡು ದಶಕಗಳಿಂದ ನೋವು ಅನುಭವಿಸುತ್ತಿದ್ದಾರೆ. ಇಂತಹ ಮಹಿಳೆಗೆ ಈಗಲೂ ನ್ಯಾಯ ದೊರೆತಿಲ್ಲ. ಹೀಗಿರುವಾಗ, ನಾವು ಹೋರಾಟ ಮುಂದುವರೆಸಬೇಕಾಗಿದೆ ಎಂದು ತಿಳಿಸಿದರು.

ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್. ವಿಮಲಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು, ದೇಶದ ಪ್ರಗತಿಗೆ ಮಹಿಳೆಯರ ಕುರಿತು ಗೌರವದ ಭಾವನೆ ಅತ್ಯಗತ್ಯ. ಅವರ ಘನತೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದ ಸಂದರ್ಭದಲ್ಲೇ ಅವರ ತವರು ರಾಜ್ಯದಲ್ಲೇ ಇಂತಹ ಘಟನೆ ನಡೆದಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಲೇಖಕಿ ಡಾ.ಕೆ.ಶರೀಫಾ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕೆ ಮುಸ್ಲಿಮರು ನೀಡಿದ ಕೊಡುಗೆ, ತ್ಯಾಗ, ಬಲಿದಾನವನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ. ಅದೇ ರೀತಿ, 2002ರ ಗುಜರಾತ್ ಗಲಭೆಯೂ ನಡೆದಿಲ್ಲ ಎನ್ನುವ ರೀತಿ ಬಿಂಬಿಸಲಾಗುತ್ತಿದೆ. ಮತ್ತೊಂದೆಡೆ ಅಪರಾಧ ಕೃತ್ಯ, ದೌರ್ಜನ್ಯವನ್ನು ಧರ್ಮದ ಆಧಾರದಲ್ಲಿ ನೋಡಿ, ಶೋಷಿತರನ್ನು ಬಲಿಕೊಡುವ ಪ್ರಯತ್ನ ನಿರಂತರ ನಡೆದುಕೊಂಡು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಹುತ್ವ ಕರ್ನಾಟಕ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೆಂಗಳೂರು ಒಳಗೊಂಡಂತೆ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ವಕೀಲರು, ಸಾಹಿತಿಗಳು, ದಲಿತ ಸಂಘಟನೆಗಳ ಮುಖಂಡರು, ಚಿಂತಕರು, ಮಾನವ ಹಕ್ಕುಗಳ ಹೋರಾಟಗಾರರು ಪಾಲ್ಗೊಂಡಿದ್ದರು.

 

Donate Janashakthi Media

One thought on “ಬಿಲ್ಕಿಸ್ ಬಾನು ಪ್ರಕರಣ : ಗಜರಾತ್ ಸರಕಾರದ ವಿರುದ್ಧ ಜನಾಕ್ರೋಶ

  1. ಬಿ ಜೇ ಪಿ ಅರ್ ಎಸ್ ಎಸ್ ಮತ್ತು ಇತರೆ ಸಂಘ ಪರಿವಾರದವರು ತಮ್ಮ ಮುಖವಾಡ ಬಿಚ್ಚಿ ಬ್ರಾಹ್ಮಣತ್ವ ದ – ಆಗ ಬ್ರಿಟಿಷರ ಗುಲಾಮರು ಈಗಾ ಕಾರ್ಪೊರೇಟ್ ದೊರೆಗಳ ಗುಲಾಮರೆಂಬ – ನಿಜವಾದ ಮುಖ ತೋರಿಸಿ, ಘನತೆ ಗೌರವ ಮನುಷತ್ವಕ್ಕಾಗಿ ನಿಲ್ಲುವ ಎಲ್ಲಾ ಜನಶಕ್ತಿಯನ್ನು ಒಗ್ಗುದಿಸುತಿದ್ದಾರೆ.
    ಬಿಲ್ಕಿಸ್ ಬಾನೋ ಹೋರಾಟ ನಮ್ಮೆಲ್ಲರ ಹೋರಾಟ! ಮನುಶತ್ವಕ್ಕಾಗಿ ಹೋರಾಟ!

Leave a Reply

Your email address will not be published. Required fields are marked *