ಗಾಂಧೀನಗರ: ಬಿಲ್ಕಿಸ್ ಬಾನೊ ಅವರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 11 ಅಪರಾಧಿಗಳು ಬಿಡುಗಡೆ ಮಾಡಲಾತ್ತು. ಇದಕ್ಕೆ ಸಂಬಂಧಿಸಿ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಇದೀಗ 11 ಮಂದಿ ಅಪರಾಧಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಆಗಸ್ಟ್ 15ರಂದು ಸನ್ನಡತೆ ಆಧಾರದಲ್ಲಿ ಇವರನ್ನು ಗುಜರಾತ್ ರಾಜ್ಯದ ಬಿಜೆಪಿ ಸರ್ಕಾರ ಜೈಲಿನಿಂದ ಬಿಡುಗಡೆ ಮಾಡಿತ್ತು. ಇವರ ಬಿಡುಗಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಮತ್ತೆ ತಮ್ಮ ಮೇಲೆ ಹೊಸ ಪ್ರಕರಣ ದಾಖಲಿಸಬಹುದು ಎಂಬ ಭಯದಿಂದ ಗುರಾಜತ್ ರಾಜ್ಯದ ದೋಹಾದ್ ಜಿಲ್ಲೆಯ ರಂಧಿಕ್‍ಪುರ ಗ್ರಾಮ ತೊರೆದಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
11 ಮಂದಿ ಅಪರಾಧಿಗಳು ಬಿಡುಗಡೆಗೊಂಡ ಬಳಿಕ ಮನೆಯ ಮುಂದೆ ಕುಳಿತಿದ್ದರೆ, ಮಾರುಕಟ್ಟೆಗೆ ಹೋದರೆ ಅವರ ಫೋಟೋ ತೆಗೆದ ಕೆಲವು ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಜೀವ ಭಯದಿಂದ ಅವರೆಲ್ಲರೂ ಗ್ರಾಮ ತೊರೆದಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.
2002ರ ಗುಜರಾತ್ ರಾಜ್ಯದಲ್ಲಿ ಸಂಭವಿಸಿದ ಭೀಕರ ಕೋಮುಗಲಭೆಯಲ್ಲಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಗ ಬಿಲ್ಕಿಸ್ ಅವರು 5 ತಿಂಗಳ ಗರ್ಭಿಣಿಯಾಗಿದ್ದರು. ಅವರ 3 ವರ್ಷದ ಮಗು ಸೇರಿ 7 ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ 11 ಅಪರಾಧಿಗಳಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.