ಕೋಲ್ಕತ್ತ: ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ದೊಮೊಹಾನಿ ಬಳಿ ಬಿಕನೇರ್- ಗುವಾಹಟಿ ರೈಲು ಅಪಘಾತದಲ್ಲಿ ಮೃತರ ಸಂಖ್ಯೆ 9 ಕ್ಕೇರಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಗಾಯಗೊಂಡವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.
ನಿನ್ನೆ ರಾತ್ರಿ ವೇಳೆ ಈ ಘಟನೆ ಸಂಭವಿಸಿದ್ದು, ಅಸ್ಸಾಂ ಕಡೆ ತೆರಳುತ್ತಿದ್ದ ಬಿಕನೇರ್-ಗುವಾಹಟಿ ಎಕ್ಸ್ಪ್ರೆಸ್ನ 12 ಬೋಗಿಗಳು ಹಳಿ ತಪ್ಪಿದ್ದವು. ಈ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ಕು ಮಂದಿ ಮೃತಪಟ್ಟಿದ್ದರು. ಇನ್ನು ಐವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ.
ಈ ರೈಲಿನಲ್ಲಿ 1,053 ಮಂದಿ ಪ್ರಯಾಣಿಸುತ್ತಿದ್ದರು ಎಂದು ಈಶಾನ್ಯ ಫ್ರಂಟಿಯರ್ ರೈಲ್ವೆ (ಎನ್ಎಫ್ಆರ್) ವಕ್ತಾರ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಕತ್ತಲೆ ಹಾಗೂ ದಟ್ಟವಾದ ಮಂಜು ಆವರಿಸಿರುವುದು ರಕ್ಷಣಾ ಕಾರ್ಯಚರಣೆಗೆ ತೊಡಕಾಗಿ ಪರಿಣಮಿಸಿತು. ಬೋಗಿಗಳನ್ನು ಕ್ರೇನ್ ಮೂಲಕ ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ.ಘಟನೆ ಹಿಂದಿನ ನಿಖರ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ದುರಂತದಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ₹ 5 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ₹ 1 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ ₹ 25 ಸಾವಿರ ಪರಿಹಾರ ನೀಡುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.
ಈ ಬಗ್ಗೆ ಟಿಎಂಸಿ ಸಂಸದ ಸೌಗತ ರಾಯ್ ಮಾತನಾಡಿದ್ದು, ಒಂದು ವೇಳೆ ರೈಲ್ವೆ ಹಳಿಯಲ್ಲಿ ಬಿರುಕು ಇದ್ದಿದ್ದು ಹೌದಾದರೆ, ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.