ಪಟ್ನಾ, ಫೆಬ್ರವರಿ 10: ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದು ಸರ್ಕಾರ ರಚನೆಯಾಗಿ ಸುಮಾರು ಮೂರು ತಿಂಗಳ ಬಳಿಕ ಕೊನೆಗೂ ಬಿಹಾರದಲ್ಲಿ ನಿತೀಶ್ ಕುಮಾರ್ ಸರ್ಕಾರದ ಸಚಿವ ಸಂಪುಟ ನಿನ್ನೆ (ಮಂಗಳವಾರ) ವಿಸ್ತರಣೆಯಾಗಿದೆ.
ಎನ್‌ಡಿಎ ಮೈತ್ರಿಕೂಟದಲ್ಲಿ ರಚನೆಯಾಗಿರುವ ಸರ್ಕಾರಕ್ಕೆ 17 ನೂತನ ಸಚಿವರನ್ನು ಮಂಗಳವಾರ ಸೇರ್ಪಡೆ ಮಾಡಲಾಗಿದೆ. ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರು, ನಿತೀಶ್ ಕುಮಾರ್ ಅವರಿಗೆ ಸಿಎಂ ಹುದ್ದೆ ಬಿಟ್ಟುಕೊಟ್ಟಿತ್ತು, ಸರ್ಕಾರದ ಮೂಗುದಾರವನ್ನು ತಮ್ಮ ಕೈಯಲ್ಲಿ ಇರಿಸಿಕೊಳ್ಳಲು ಪ್ರಮುಖ ಖಾತೆಗಳನ್ನು ತನ್ನದಾಗಿಸಿಕೊಳ್ಳಲು ಬಿಜೆಪಿ ಪ್ರಯತ್ನ ನಡೆಸಿತ್ತು. ಆದರೆ ಬಿಜೆಪಿ ಆಸಗೆ ಜೆಡಿಯು ತಣ್ಣೀರು ಎರಚಿದ್ದು ಆ ಮೂಲಕ ಪ್ರಬಲ ಸಂದೇಶವನ್ನು ನೀಡಿದೆ.
ಬಿಜೆಪಿಯ 9 ಮತ್ತು ಜೆಡಿಯುದ 8 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಪ್ರಮುಖ ಹುದ್ದೆಗಳಾದ ಗೃಹ ಖಾತೆ, ಸಿಬ್ಬಂದಿ, ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಜಲ ಸಂಪನ್ಮೂಲ, ಗ್ರಾಮೀಣ ಕಾರ್ಯ ಮುಂತಾದವು ಜೆಡಿಯುನಲ್ಲಿಯೇ ಉಳಿದುಕೊಂಡಿದೆ.
ಸಂಪುಟ ವಿಸ್ತರಣೆಯಿಂದ ಬಿಜೆಪಿಯು 16 ಸಚಿವ ಸ್ಥಾನ ಪಡೆದಿದ್ದು, 22 ಖಾತೆಗಳು ಅವರ ಬಳಿ ಇವೆ. ಇನ್ನು ಜೆಡಿಯುದ 13 ಸಚಿವರು 21 ಖಾತೆಗಳನ್ನು ನಿಭಾಯಿಸಲಿದ್ದಾರೆ. ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನ್ ಅವಾಮ್ ಮೋರ್ಚಾ ಮತ್ತು ವಿಕಾಸ್‌ಶೀಲ್ ಇನ್ಸಾನ್ ಪಾರ್ಟಿಗಳಿಗೆ ತಲಾ ಒಂದೊಂದು ಸಚಿವ ಸ್ಥಾನ ನೀಡಲಾಗಿದೆ. ಈ ಮೂಲಕ ನಿತೀಶ್ ಅವರ ಸಂಪುಟದಲ್ಲಿನ ಸಚಿವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.
ನಿರೀಕ್ಷೆಯಂತೆಯೇ ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ವಕ್ತಾರ ಸಯ್ಯದ್ ಶಹನವಾಜ್ ಹುಸೇನ್ ಅವರು ನಿತೀಶ್ ಸರ್ಕಾರಕ್ಕೆ ಸೇರ್ಪಡೆಯಾಗಿದ್ದಾರೆ. ಇತ್ತೀಚೆಗಷ್ಟೇ ಬಿಹಾರ ವಿಧಾನಪರಿಷತ್‌ನಿಂದ ಆಯ್ಕೆಯಾಗಿರುವ ಹುಸೇನ್ ಅವರಿಗೆ ಕೈಗಾರಿಕೆ ಖಾತೆ ನೀಡಲಾಗಿದೆ. ಆದರೆ ಬಿಹಾರದಲ್ಲಿ ಕೈಗಾರಿಕೆಗಳ ಸಂಖ್ಯೆ ತೀರಾ ಕಡಿಮೆ. ಹೀಗಾಗಿ ಹುಸೇನ್ ಅವರಿಗೆ ಪ್ರಮುಖ ಖಾತೆ ಸಿಗುವ ನಿರೀಕ್ಷೆ ಹೊಂದಿದ್ದ ಬಿಜೆಪಿಗೆ ಹಿನ್ನಡೆಯಾಗಿದೆ.
ಉಪ ಮುಖ್ಯಮಂತ್ರಿ ರೇಣು ದೇವಿ ಅವರಿಗೆ ವಿಪತ್ತು ನಿರ್ವಹಣಾ ಖಾತೆ ನೀಡಲಾಗಿದೆ. ಅಧಿಕೃತವಾಗಿ ಖಾತೆಗಳ ಹಂಚಿಕೆಯನ್ನು ಘೋಷಣೆ ಮಾಡಬೇಕಿದೆ.
ಕಳೆದ ಸಾಲಿನಲ್ಲಿ ನಿತೀಶ್ ಸಂಪುಟದಲ್ಲಿದ್ದ ಸಚಿವರ ಪೈಕಿ ಬಿಜೆಪಿ ಈ ಬಾರಿ ಮಂಗಲ್ ಪಾಂಡೆ ಮತ್ತು ಪ್ರಮೋದ್ ಕುಮಾರ್ ಅವರಿಗೆ ಮಾತ್ರ ಸಚಿವ ಸ್ಥಾನವನ್ನು ಉಳಿಸಿಕೊಂಡಿದೆ. ಉಳಿದಂತೆ ಹೊಸ ಮುಖಗಳಿಗೆ ಮಣೆ ಹಾಕಿದೆ. ಇನ್ನೊಂದಡೆ ಜೆಡಿಯು ಏಳು ಮಂದಿ ಹಳೆ ಹುಲಿಗಳನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಪಕ್ಷೇತರನಾಗಿ ಸ್ಪರ್ಧಿಸಿ ಚಕೈ ಕ್ಷೇತ್ರದಿಂದ ಗೆದ್ದು ಎನ್‌ಡಿಎಗೆ ಬೆಂಬಲ ನೀಡಿರುವ ಸುಮಿತ್ ಸಿಂಗ್ ಅವರಿಗೆ ಜೆಡಿಯು ತನ್ನ ಕೋಟಾದಲ್ಲಿ ಸಚಿವ ಸ್ಥಾನ ನೀಡಿದೆ. ಹಾಗೆಯೇ ಚೈನ್ಪುರ ಕ್ಷೇತ್ರದಿಂದ ಬಿಎಸ್‌ಪಿ ಅಭ್ಯರ್ಥಿಯಾಗಿ ಗೆದ್ದಿದ್ದ ಜಮಾ ಖಾನ್, ಜೆಡಿಯು ಸೇರ್ಪಡೆಯಾಗಿದ್ದರು. ಅವರನ್ನೂ ಜೆಡಿಯು ಸಚಿವರ ಸಾಲಿನಲ್ಲಿ ಕೂರಿಸಿದೆ. ಸಂಪುಟದಲ್ಲಿ ಜೆಡಿಯುದಿಂದ ಜಮಾ ಖಾನ್ ಏಕೈಕ ಮುಸ್ಲಿಂ ಸಚಿವರಾಗಿದ್ದರೆ, ಸುಮಿತ್ ಸಿಂಗ್ ಅತಿ ಕಿರಿಯ ಸಚಿವರೆನಿಸಿದ್ದಾರೆ. ಮೊದಲ ಬಾರಿ ಶಾಸಕರಾಗಿರುವ ಮಾಜಿ ಡಿಜಿ ಸುನಿಲ್ ಕುಮಾರ್ ಮತ್ತು ಜಯಂತ್ ರಾಜ್ ಅವರಿಗೆ ಕೂಡ ಜೆಡಿಯು ಅವಕಾಶ ನೀಡಿದೆ.
ನಿತಿನ್ ನಬಿನ್, ಸಾಮ್ರಾಟ್ ಚೌಧರಿ, ನೀರಜ್ ಕುಮಾರ್ ಸಿಂಗ್ ಬಬ್ಲು, ಜಾನಕ್ ರಾಮ್, ಸುಭಾಷ್ ಸಿಂಗ್, ಅಲೋಕ್ ರಂಜನ್ ಝಾ ಮತ್ತು ನಾರಾಯಣ್ ಪ್ರಸಾದ್ ಬಿಜೆಪಿಯಿಂದ ಸಚಿವರಾದ ಪ್ರಮುಖರು. ಸಂಜಯ್ ಕುಮಾರ್ ಝಾ, ಶ್ರವಣ್ ಕುಮಾರ್, ಮದನ್ ಸಾಹ್ನಿ, ಲೆಸಿ ಸಿಂಗ್ ಮತ್ತು ಸುನಿಲ್ ಕುಮಾರ್ ಜೆಡಿಯುದಿಂದ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರಾಜ್ಯಪಾಲ ಫಗು ಚೌಹಾಣ್ ಅವರು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಚಿವರಿಗೆ ಪ್ರಮಾಣವಚನ ಭೋದಿಸಿದರು.
ಜೆಡೆಯು ಪಕ್ಷವನ್ನು ಬಿಜೆಪಿ ಮುಗಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿರುವುದು ನಿತೀಶ್ ಕುಮಾರ್ ಗೆ ಈಗ ಅರ್ಥವಾದಂತೆ ಆಗಿದೆ. ಜುಟ್ಟು, ಜನಿವಾರವನ್ನು ಬಿಜಿಪಿ ಕೈಗೆ ಕೊಡುವ ಬದಲು ನಿಧಾನಕ್ಕೆ ಪಕ್ಷವನ್ನು ಬಲಪಡಿಸುವ ಸಾಧ್ಯತೆಯನ್ನು ನಿತಿಶ್ ಹೊಂದಿರುವುದು ತೋರಿಸುತ್ತದೆ. ಇತ್ತಿಚೆಗೆ ಜೆಡಿಯು ಮತ್ತು ನಿತೀಶ್ ಕಥೆ ಮುಗಿದೆ ಹೋಯಿತು ಎಂಬ ರಾಜಕೀಯ ಲೆಕ್ಕಾಚಾರಗಳನ್ನು ನಿತೀಶ್ ತಲೆಕೆಳಗಾಗಿಸಿ ಬಿಜೆಪಿ ಜೊತೆಗಿನ ಬಿಗಿ ಹಿಡಿತವನ್ನು ಮುಂದುವರೆದಿದ್ದಾರೆ.