ನವದೆಹಲಿ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಶೇ 63ರಷ್ಟು ಎಲೆಕ್ಟ್ರಾನಿಕ್ ಮತ ಯಂತ್ರಗಳ ಸಂಖ್ಯೆ ಏರಿಕೆಯಾದ ಕಾರಣ, ಇಂದು ತಡರಾತ್ರಿಯವರೆಗೂ ಮತ ಎಣಿಕೆ ಕಾರ್ಯ ಮುಂದುವರಿಯಲಿದೆ ಎಂದು ಚುನಾವಣಾ ಉಪ ಆಯುಕ್ತರಾದ ಸುದೀಪ್ ಜೈನ್ ತಿಳಿಸಿದ್ದಾರೆ.
ಬಿಹಾರ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೂರು ಹಂತಗಳಲ್ಲಿ ಚಲಾವಣೆಯಾಗಿರುವ 4.16 ಕೋಟಿಯಷ್ಟು ಮತಗಳಲ್ಲಿ ಮಧ್ಯಾಹ್ನ 1.30ರವರೆಗೆ 1 ಕೋಟಿಯಷ್ಟು ಮತಗಳನ್ನು ಎಣಿಸಲಾಗಿದೆ‘ ಎಂದು ತಿಳಿಸಿದರು. ಇಲ್ಲಿಯವರೆಗೆ ಮತ ಎಣಿಕೆ ಸುಗಮವಾಗಿ ಸಾಗಿದ್ದು ರಾತ್ರಿ 9 ಕ್ಕೆ ಪೂರ್ಣ ಫಲಿತಾಂಶದ ಚಿತ್ರಣ ಸಿಗಲಿದೆ ಎಂದು ಸುದೀಪ್ ರವರು ತಿಳಿಸಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸುವುದಕ್ಕಾಗಿ ಮತದಾನ ಕೇಂದ್ರಗಳ ಸಂಖ್ಯೆಯನ್ನು 65 ಸಾವಿರದಿಂದ 1.06 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಹೀಗಾಗಿ ಎಲೆಕ್ಟ್ರಾನಿಕ್ ಮತ ಯಂತ್ರಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು.