ವಿವರಗಳನ್ನು ಒದಗಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರಿಂ ಕೋರ್ಟ್ ನಿರ್ದೇಶನ
ಭಾರತದ ಚುನಾವಣಾ ಆಯೋಗ ಆಗಸ್ಟ್ 1ರಂದು ಪ್ರಕಟಿಸಿರುವ ಬಿಹಾರದ ಕರಡು ಮತದಾರರ ಪಟ್ಟಿಯಲ್ಲಿ ಹಿಂದಿನ ಪಟ್ಟಿಯಲ್ಲಿದ್ದ 65 ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ, ಈ ಬಗ್ಗೆ ವಿವರಗಳನ್ನು ರಾಜಕೀಯ ಪಕ್ಷಗಳಿಗೆ ಕೊಡಲಾಗಿದೆ ಎಂದು ಆಯೋಗ ಹೇಳಿತ್ತು. ಹೆಸರು
-ವೇದರಾಜ ಎನ್ ಕೆ
ಆದರೆ ಆಯೋಗ ಕೊಟ್ಟಿರುವ ಪಟ್ಟಿಗಳಲ್ಲಿ ಈ 65 ಲಕ್ಷ ಮತದಾರರನ್ನು ಏಕೆ ಕೈಬಿಡಲಾಗಿದೆ ಎಂಬಿತ್ಯಾದಿ ವಿವರಗಳನ್ನು ಕೊಟ್ಟಿಲ್ಲ, ಇದಲ್ಲದೆ ಬ್ಲಾಕ್ ಮಟ್ಟದ ಪಟ್ಟಿಗಳನ್ನು ರಾಜಕೀಯ ಪಕ್ಷಗಳಿಗೆ ನಿರಾಕರಿಸಲಾಗಿದೆ ಎಂದು ಎಸ್‍ಐಆರ್ ಪ್ರಕ್ರಿಯೆಯನ್ನು ಸುಪ್ರಿಂ ಕೋರ್ಟಿನಲ್ಲಿ ಪ್ರಶ್ನಿಸಿರುವ ಅರ್ಜಿದಾರರುಗಳಲ್ಲಿ ಒಬ್ಬರಾದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದ ಅರ್ಜಿಯನ್ನು ಅನುಸರಿಸಿ ಸುಪ್ರಿಂ ಕೋರ್ಟ್ ನ್ಯಾಯಪೀಠ ಇವನ್ನು ಆಗಸ್ಟ್ 9ರೊಳಗೆ ಅರ್ಜಿದಾರರುಗಳಿಗೆ ಒದಗಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಆಗಸ್ಟ್ 6ರಂದು ನಿರ್ದೇಶನವನ್ನು ನೀಡಿದೆ. ಹೆಸರು
ಕರಡು ಪಟ್ಟಿ ಪ್ರಕಟವಾದ ಎರಡು ದಿನಗಳ ನಂತರ ಆಯೋಗ, ಪರಿಷ್ಕರಣೆಯ ಕಾರ್ಯ ಯಶಸ್ವಿಯಾಗಿ ನಡೆದಿದೆ, ಯಾವ ರಾಜಕೀಯ ಪಕ್ಷದಿಂದಲೂ ಆಕ್ಷೇಪಣೆಗಳು ಇದುವರೆಗೆ ಬಂದಿಲ್ಲ ಎಂದೂ ಹೇಳಿತ್ತು ಎಂಬುದನ್ನು ಇಲ್ಲಿ ಗಮನಿಸಬಹುದು. ವಾಸ್ತವವಾಗಿ, ಆಯೋಗ ಪ್ರಕಟಿಸಿರುವ ಪಟ್ಟಿ ಮತ್ತು ಲೋಕಸಭಾ ಚುನಾವಣೆಗಳ ಮೊದಲು ಜನವರಿ 2024ರಲ್ಲಿ ಪ್ರಕಟಿಸಿದ್ದ ಪಟ್ಟಿ ಪರಸ್ಪರ ಹೋಲಿಸುವ ರೀತಿಯಲ್ಲಿ ಇಲ್ಲ, ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ ಎಂದು ಬಿಜೆಪಿ ಬಿಟ್ಟು ಉಳಿದೆಲ್ಲ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ನ್ಯಾಯಪೀಠದ ಆಗಸ್ಟ್ 6 ರ ನಿರ್ದೇಶನವನ್ನು ನೋಡಬಹುದಾಗಿದೆ. ಹೆಸರು
ಇದನ್ನೂ ಓದಿ: ಮುಖ್ಯ ಲೆಕ್ಕಾಧಿಕಾರಿಯ ಕಾರು ಚಾಲಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆತ್ಮಹತ್ಯೆ
ಈ 65 ಲಕ್ಷ ಮಂದಿ ಜುಲೈ 25ರ ವರೆಗೆ ಗಣತಿ ಪತ್ರಗಳನ್ನು ಸಲ್ಲಿಸಿಲ್ಲವಾದ್ದರಿಂದ ಹೀಗಾಗಿದೆ ಎಂದು ತಿಳಿಸಲಾಗಿತ್ತು. ಇವರಲ್ಲಿ 22ಲಕ್ಷ ಮಂದಿ ನಿಧನರಾಗಿರುವವರು, 36ಲಕ್ಷ ಮಂದಿ ‘ಪತ್ತೆಯಾಗದವರು’ ಅಂದರೆ ಉದ್ಯೋಗ ಅರಸಿ ವಲಸೆ ಹೋದವರು ಹಾಗೂ ಸುಮಾರು 7ಲಕ್ಷ ಮಂದಿಯ ಹೆಸರುಗಳು ಒಂದಕ್ಕಿಂತ ಹೆಚ್ಚು ಮತದಾರ ಕ್ಷೇತ್ರಗಳಲ್ಲಿ ಇದ್ದವುಗಳು ಎಂದು ಒಂದು ವಾರದ ಹಿಂದೆ ಆಯೋಗ ಹೇಳಿತ್ತು. ಇದನ್ನು ಜುಲೈ 28-29ರ ವಿಚಾರಣೆಯ ವೇಳೆಗೆ ಗಮನಕ್ಕೆ ತಂದಾಗ ನ್ಯಾಯಪೀಠ “65ಲಕ್ಷದಷ್ಟು ಮತದಾರರು (ಪಟ್ಟಿಯಲ್ಲಿ) ಇರಲಿಕ್ಕಿಲ್ಲ ಎಂಬುದು ನಿಮ್ಮ ಸಂದೇಹ, ಚುನಾವಣಾ ಆಯೋಗ 2025ರ ಪಟ್ಟಿಗೆ ಸಂಬಂಧಿಸಿದಂತೆ ಸರಿಪಡಿಕೆಗಳನ್ನು ಪ್ರಯತ್ನಿಸುತ್ತಿದೆ. ನಾವು ನ್ಯಾಯಾಂಗ ಪ್ರಾಧಿಕಾರವಾಗಿ ಇದನ್ನು ಗಮನಿಸುತ್ತೇವೆ. ಸಾಮೂಹಿಕ ಹೊರಪಡಿಕೆ ಇದ್ದರೆ, ನಾವು ತಕ್ಷಣವೇ ಪ್ರವೇಶಿಸುತ್ತೇವೆ, ತಾವು ಬದುಕಿದ್ದೇವೆ, ಆದರೂ ಹೊರಪಡಿಸಲಾಗಿದೆ ಎನ್ನುವ 15 ಮಂದಿಯನ್ನು ತನ್ನಿ”ಎಂದು ನ್ಯಾಯಪೀಠದ ಒಬ್ಬ ನ್ಯಾಯಮೂರ್ತಿಗಳು ಹೇಳಿರುವುದಾಗಿಯೂ ವರದಿಯಾಗಿತ್ತು.
ಆದರೆ ಈಗ ಪ್ರಕಟಿಸಿರುವ ಕರಡು ಪಟ್ಟಿಯಲ್ಲಿ ಅರ್ಜಿದಾರರು ಸಂದೇಹ ಪಟ್ಟಂತೆ ಈ 65 ಲಕ್ಷಮಂದಿಯ ಹೆಸರುಗಳು ಇಲ್ಲ ಮಾತ್ರವಲ್ಲ ಅವರನ್ನು ಏಕೆ ಕೈಬಿಡಲಾಗಿದೆ ಎಂಬ ಬಗ್ಗೆ ಯಾವ ವಿವರಗಳೂ ಇಲ್ಲ. ಆದ್ದರಿಂದ ಯಾವ ಆಧಾರದ ಮೇಲೆ ನ್ಯಾಯಾಲಯ ಮಧ್ಯಪ್ರವೇಶಿಸುವಂತೆ ಕೇಳುವುದು ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿತ್ತು.
94ಲಕ್ಷ-1.5 ಕೋಟಿ ಜನರ ‘ವೋಟ್‍ಬಂದಿ’?
ಈ ‘ವಿಶೇಷ ತೀವ್ರ ಪರಿಷ್ಕರಣೆ’ ಅಥವ ಎಸ್‍ಐಆರ್ ನಿಬಂಧನೆಗಳ ಪ್ರಕಾರ ಈ 65ಲಕ್ಷ ಮಂದಿ ಭಾರತದ ನಾಗರಿಕರಾಗಿ ತಮ್ಮ ಬಹುಮೂಲ್ಯವಾದ ಮತದಾನದ ಹಕ್ಕನ್ನು ಕಳಕೊಳ್ಳುತ್ತಾರೆ. ಆದರೆ ಈ ಸಂಖ್ಯೆ ಇಷ್ಟಕ್ಕೇ ನಿಲ್ಲುವುದಿಲ್ಲ ಎಂದು ಪರಿಣಿತರು ಲೆಕ್ಕ ಹಾಕಿದ್ದಾರೆ.

ಈ ಪ್ರಕ್ರಿಯೆಯ ತರಾತುರಿಯ ಬಗ್ಗೆ ಬಹಳಷ್ಟು ಟೀಕೆಗಳು ಬಂದಾಗ, ಆಯೋಗ ಅಗತ್ಯ ದಾಖಲೆಗಳನ್ನು ನಂತರವೂ ಕೊಡಬಹುದು ಎಂದಿತ್ತು. ಇದರಿಂದಾಗಿ ಕರಡು ಪಟ್ಟಿಯಲ್ಲಿ ಇರುವವರಲ್ಲಿ 75%ದಷ್ಟು ಮಂದಿ ಅಗತ್ಯ ದಾಖಲೆಗಳನ್ನು ಕೊಟ್ಟಿಲ್ಲ. ನ್ಯಾಯಾಲಯ ಸೂಚಿಸಿದಂತೆ ಆಧಾರ್ ಮತ್ತು ಮತದಾರ ಕಾರ್ಡ್‍ಗಳನ್ನು ಪರಿಗಣಿಸಲಾಗುತ್ತದೆಯೇ ಎಂದು ಇನ್ನೂ ಆಯೋಗ ಹೇಳಿಲ್ಲ. ಅದರ ವಾದದ ಪ್ರಕಾರ ಪರಿಗಣಿಸದೇ ಇದ್ದಲ್ಲಿ, ಕರಡು ಪಟ್ಟಿಯಲ್ಲಿರುವವರಲ್ಲಿಯೂ ಬಹಳಷ್ಟು ಮಂದಿ ಪಟ್ಟಿಯಿಂದ ಹೊರಗಾಗುತ್ತಾರೆ.
ಸಂಖ್ಯೆ ಕನಿಷ್ಟ 94 ಲಕ್ಷದಿಂದ 1,5 ಕೋಟಿಯ ವರೆಗೂ ಹೋಗಬಹುದು ಎಂದು ಲೆಕ್ಕ ಹಾಕಲಾಗಿದೆ.
ಏಕೆಂದರೆ ಜುಲೈ 2025ರ ವೇಳೆಗೆ ಬಿಹಾರದ ಜನಸಂಖ್ಯೆಯಲ್ಲಿ 18 ವರ್ಷಕ್ಕೆ ಮೇಲ್ಪಟ್ಟವರ ಸಂಖ್ಯೆ, ಅಂದರೆ ಮತದಾನದ ಅರ್ಹತೆ ಇರುವರ ಸಂಖ್ಯೆ 8.18 ಕೋಟಿ. ಆಗಸ್ಟ್ 1, 2025ರ ಕರಡು ಪಟ್ಟಿಯಲ್ಲಿರುವರ ಸಂಖ್ಯೆ 7.24 ಕೋಟಿ. ಅಂದರೆ, ಸರಕಾರೀ ದಾಖಲೆಗಳು ಮತ್ತು ಚುನಾವಣಾ ಆಯೋಗದ ದಾಖಲೆಗಳಲ್ಲಿನ ಅಂಕಿ-ಅಂಶಗಳ ಪ್ರಕಾರವೇ ಮತದಾನ ಪಟ್ಟಿಗಳಲ್ಲಿ ಇಲ್ಲ ಅರ್ಹ ಮತದಾರರ ಸಂಖ್ಯೆ 8.18- 7.24=94 ಲಕ್ಷ ಆಗುತ್ತದೆ. ಇದು ಮತದಾನದ ಹಕ್ಕು ನಿರಾಕರಿಸಲ್ಪಡುವವರ ಕನಿಷ್ಟ ಸಂಖ್ಯೆ. ಅಂದರೆ ಅರ್ಹ ಮತದಾರರಲ್ಲಿ ಕನಿಷ್ಟ 12%’ ಇದಲ್ಲದೆ, ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ನಡೆಯುವ ಅಕ್ಟೋಬರ್ 2025 ರ ವೇಳೆಗೆ, 18 ವರ್ಷ ತುಂಬುವ ಸುಮಾರು 20ಲಕ್ಷ ಯುವಜನರ ಹೆಸರುಗಳು ಸೇರಿಲ್ಲ ಎಂದೂ ಅಂದಾಜು ಮಾಡಲಾಗಿದೆ.
ಎಸ್‍ಐಆರ್ ನಿಬಂಧನೆಗಳ ಪ್ರಕಾರ ಬ್ಲಾಕ್ ಮಟ್ಟದ ಅಧಿಕಾರಿ(ಬಿಎಲ್‍ಒ)ಗಳು ಗಣತಿ ಪ್ರಪತ್ರವನ್ನು ಸಲ್ಲಿಸಿದವರ ಬಗ್ಗೆಯೂ ‘ಶಿಫಾರಸು ಮಾಡಲ್ಪಡದವರು’ ಎಂದು ಷರಾ ಹಾಕಬಹುದು. ಇಂತವರನ್ನು ಸೇರಿಸುವ ಅಥವ ಕೈಬಿಡುವ ಅಂತಿಮ ನಿರ್ಧಾರವನ್ನು ಚುನಾವಣಾ ನೋಂದಣಿ ಅಧಿಕಾರಿ(ಇಆರ್‌ಒ) ‘ಸ್ಥಳೀಯ ತನಿಖೆ’ಯ ನಂತರ ಕೈಗೊಳ್ಳುತ್ತಾರೆ.
ಇವೆಲ್ಲ ಪ್ರಕ್ರಿಯೆಗಳನ್ನು ಹಾದು ಹೋಗುವಾಗ ಇನ್ನೂ 50-60 ಲಕ್ಷ ಮಂದಿಯ ಹೆಸರುಗಳು ಕಡಿತವಾಗಬಹುದು, ಅಂದರೆ ಎಸ್‍ಐಆರ್ ನಲ್ಲಿ 1.5 ಕೋಟಿ ( ಸುಮಾರು 19%) ಬಿಹಾರಿ ಜನರಿಗೆ ಮತದಾನದ ಹಕ್ಕು ನಿರಾಕರಿಸಲ್ಪಡಬಹುದು ಎಂದು ಲೆಕ್ಕ ಹಾಕಲಾಗಿದೆ (ಪವನ್ ಕೊರಾಡ, ದಿ ವೈರ್, ಆಗಸ್ಟ್ 5)
ಹೊರದಬ್ಬಲ್ಪಟ್ಟವರು ಯಾರು?
ಚುನಾವಣಾ ಆಯೋಗ ಕೈಬಿಟ್ಟವರ ವಿವರಗಳನ್ನು, ಅದೂ ಕ್ಷೇತ್ರವಾರಾಗಿ ನೀಡಿಲ್ಲವಾದ್ದರಿಂದ ಹೀಗೆ ಮತದಾನದ ಹಕ್ಕು ನಿರಾಕರಿಸಲ್ಪಟ್ಟವರು ಯಾರು ಎಂದು ಸ್ಪಷ್ಟವಾಗಿ ತಿಳಿಯುವುದಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ಆಯೋಗ ವಿವರಗಳನ್ನು ಒದಗಿಸಿದ ಮೇಲೆ ಇದು ಹೆಚ್ಚು ಸ್ಪಷ್ಟವಾಗಬಹುದು. ಆದರೂ ಎಸ್‍ಐಆರ್ ನ ತರಾತುರಿ ಮತ್ತು ಕಠಿಣ ನಿಬಂಧನೆಗಳು ಮುಖ್ಯವಾಗಿ ಸಮಾಜದ ಅಂಚಿನಲ್ಲಿರುವ ಜನವಿಭಾಗಗಳಿಗೆ ಮತದಾನದ ಹಕ್ಕನ್ನು ವಂಚಿಸುತ್ತದೆ ಎಂಬ ಸಂದೇಹ ಕರಡು ಪಟ್ಟಿಯ ಪ್ರಾಥಮಿಕ ವಿಶ್ಲೇಷಣೆಯಲ್ಲಿ ದೃಢ ಪಟ್ಟಿರುವಂತೆ ಕಾಣುತ್ತದೆ ಎನ್ನಲಾಗಿದೆ.

ಕರಡು ಪಟ್ಟಿಯಲ್ಲಿ ಇಲ್ಲದವರ ಪ್ರಮಾಣ(%) ರಾಜ್ಯದ ಸರಾಸರಿಗಿಂತ ಹೆಚ್ಚಿರುವ 10 ಜಿಲ್ಲೆಗಳಲ್ಲಿ 4 ರಾಜ್ಯದ ಅತ್ಯಂತ ಹೆಚ್ಚು ಬಡತನ ಇರುವ ಜಿಲ್ಲೆಗಳು- ಪೂರ್ಣಿಯ (12.07%), ಕಿಷನ್‍ಗಂಜ್(11.82%),ಸೀತಾಮಡಿ(9.32%) ಮತ್ತು ಸಹರ್ಸಾ(9,45%). ಪೂರ್ಣಿಯ, ಕಿಷನ್‍ಗಂಜ್ ಮತ್ತು ಸೀತಾಮಡಿ ಜೊತೆಗೆ ಮಧುಬನಿ(10.44%) ಮುಸ್ಲಿಂ ಸಮುದಾಯ ಬಹುಸಂಖ್ಯೆಯಲ್ಲಿರುವ ಜಿಲ್ಲೆಗಳು. ಈ 10 ಜಿಲ್ಲೆಗಳಲ್ಲಿ ವಲಸೆ ಕಾರ್ಮಿಕರ ಪ್ರಮಾಣ ಬಹಳ ಹೆಚ್ಚಿರುವ ಮತ್ತು ಬುಡಕಟ್ಟು ಸಮುದಾಯಗಳ ಪ್ರಮಾಣ ಹೆಚ್ಚಿರುವ 5 ಜಿಲ್ಲೆಗಳೂ ಸೇರಿವೆ ಎನ್ನುತ್ತಾರೆ ಪತ್ರಕರ್ತೆ ಶ್ರಾವಸ್ತಿ ದಾಸ್‍ಗುಪ್ತ(ದಿ ವೈರ್, ಆಗಸ್ಟ್ 5). ಮತ್ತೆ-ಮತ್ತೆ ಪ್ರವಾಹಗಳಿಗೆ ತುತ್ತಾಗುವ ಪ್ರದೇಶಗಳಲ್ಲೂ ಮತದಾರ ಪಟ್ಟಿಗಳಲ್ಲಿ ಹೆಸರಿಲ್ಲದವರ ಪ್ರಮಾಣ ಸರಾಸರಿಗಿಂತ ಹೆಚ್ಚಿದೆ.
ಜುಲೈ 16ರಂದು ಬಿಹಾರದ ಮುಖ್ಯ ಚುನಾವಣಾಧಿಕಾರಿ ಪ್ರಕಟಿಸಿದ ಗಣತಿ ಪ್ರಪತ್ರಗಳನ್ನು ಸಲ್ಲಿಸದ 1.49 ಮತದಾರರ ಪಟ್ಟಿಯನ್ನು ವಿಶ್ಲೇಷಿಸಿದ ಆಯುಷ್ ತಿವಾರಿ(ಸ್ಕ್ರಾಲ್, ಜುಲೈ 31) ಕೂಡ ಸುಮಾರಾಗಿ ಇದೇ ತೀರ್ಮಾನಕ್ಕೆ ಬರುತ್ತಾರೆ.
ಕರಡು ಪಟ್ಟಿಯ ವಿಶ್ಲೇಷಣೆ ನಡೆಸಿರುವ ಇನ್ನೂ ನಾಲ್ಕು ವಿಶ್ಲೇಷಕರು ( ದಿ ಹಿಂದೂ, ಡಾಟಾ ಪಾಯಿಂಟ್, ಆಗಸ್ಟ್ 6) ಕೂಡ ಈ ಕರಡು ಪಟ್ಟಿಯ ಪ್ರಾಥಮಿಕ ವಿಶ್ಲೇಷಣೆ ಕಳವಳಕಾರಿ ಪ್ರವೃತ್ತಿಗಳನ್ನು ತೋರಿಸುತ್ತಿದೆ ಎಂದಿದ್ದಾರೆ. ಅವರೂ ಕೈಬಿಟ್ಟ ಮತದಾರರ ಪ್ರಮಾಣ ಮುಸ್ಲಿಂ-ಬಾಹುಳ್ಯದ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಹೊರ ವಲಸೆ ಇರುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣ ಬಂದಿದೆ ಎಂದು ಹೇಳುತ್ತಾರೆ.
ನ್ಯಾಯಪೀಠದತ್ತ ಚಿತ್ತ
ಇವಲ್ಲದೆ, ಗಣತಿ ಪ್ರಪತ್ರಗಳನ್ನು ಸಲ್ಲಿಸುವ ವೇಳೆಯಲ್ಲೇ ಆಗಿರಬಹುದಾದ ಎಸ್‍ಐಆರ್ ಪ್ರಕ್ರಿಯೆಯ ಉಲ್ಲಂಘನೆಗಳತ್ತ ಸಾಕ್ಷಿ ಸಹಿತ ಗಮನ ಸೆಳೆದ, ಅದರಿಂದಾಗಿ ಎಫ್‍ಐಆರ್ ಗೂ ಗುರಿಯಾದ ಬಿಹಾರದ ಪ್ರಖ್ಯಾತ ಪತ್ರಕರ್ತ ಅಜಿತ್ ಅಂಜುಮ್ ತನಗೆ ಬಂದ ಮಾಹಿತಿಗಳ ಆಧಾರದಲ್ಲಿ ಕರಡು ಪಟ್ಟಿಯಲ್ಲಿ ನಿಧನರಾದವರ ಹೆಸರುಗಳೂ ಇರುವುದನ್ನು ತೋರಿಸಿ ಕೊಟ್ಟಿದ್ದಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಹಲವೆಡೆಗಳಲ್ಲಿ ನಿಬಂಧನೆಗಳ ಪ್ರಕಾರ ಕನಿಷ್ಟ 3 ಬಾರಿ ಮತದಾರರನ್ನು ಭೇಟಿ ಮಾಡಬೇಕಾದ ಬಿಎಲ್‍ಒಗಳು ಒಂದು ಬಾರಿಯೂ ಭೇಟಿ ನೀಡಿರಲಿಲ್ಲ ಎಂಬುದೂ ಬೆಳಕಿಗೆ ಬಂದಿರುವುದನ್ನು ತೋರಿಸಿದ್ದಾರೆ. ಮತದಾರ ಪಟ್ಟಿಗಳನ್ನು ಶುದ್ಧೀಕರಿಸುವ ಚುನಾವಣಾ ಆಯೋಗದ ಘೋಷಿತ ಉದ್ದೇಶದ ಬಗ್ಗೆ ಇದು ಮತ್ತೊಮ್ಮೆ ಪ್ರಶ್ನೆ ಚಿಹ್ನೆ ಇಟ್ಟಿದೆ.
ಆದರೆ ಇವೆಲ್ಲವೂ ‘ಸಾಮೂಹಿಕ ಹೊರದಬ್ಬುವಿಕೆ’ ಎಂದು ಪರಿಗಣಿಸಲ್ಪಡುವುದೇ, ಎಸ್‍ಐಆರ್ ಪ್ರಕ್ರಿಯೆ ಒಳಗೊಳ್ಳುವಂತದ್ದಾಗಬೇಕೇ ವಿನಃ ಹೊರದಬ್ಬುವಂತದ್ದಾಗಬಾರದು ಎಂದಿರುವ, ಸುಪ್ರಿಂ ಕೋರ್ಟ್ ನ್ಯಾಯಪೀಠ ಮಧ್ಯಪ್ರವೇಶಿಸುವಂತಾಗಬಹುದೇ?
ಇಲ್ಲಿ ಮತದಾರ ಪಟ್ಟಿಯ ತಯಾರಿಕೆ ಸೇರಿದಂತೆ ಚುನಾವಣೆಗಳನ್ನು ನಡೆಸುವ ಮತ್ತು ಮೇಲ್ವಿಚಾರಣೆ ಮಾಡುವ ದೀರ್ಘ ಅನುಭವವನ್ನು ಹೊಂದಿರುವ ಉನ್ನತ ಸರಕಾರೀ ಹುದ್ದೆಗಳಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ 93 ಹಿರಿಯರು ಸುಪ್ರಿಂ ಕೋರ್ಟಿಗೆ ಒಂದು ಬಹಿರಂಗ ಪತ್ರದಲ್ಲಿ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.
ಸುಧಾರಣೆಯ ನೆಪದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಬುಡಮೇಲು ಮಾಡುವ ಸಾಮರ್ಥ್ಯವಿರುವ ಎಸ್‌ಐಆರ್‌ನ್ನು ನಡೆಸಿರುವುದೂ ಸಾಕಾಗಿಲ್ಲವೋ ಎಂಬಂತೆ, ಅದನ್ನು ಅಗಾಧ ವೇಗದಲ್ಲಿ ಜಾರಿಗೆ ತಂದಿರುವುದು, ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಕೆಲಸ ಪೂರೈಸಲಾಗದಷ್ಟು ಕಡಿಮೆ ಸಮಯ ನೀಡಿರುವುದು, ಮಾಹಿತಿಗಳನ್ನು ಡಿಜಿಟಲೀಕರಣಗೊಳಿಸಲು ಅಗತ್ಯ ಸೌಕರ್ಯಗಳನ್ನು ಲಭ್ಯವಾಗಿಸದಿರುವುದು ಆಯೋಗ ಹಾಕಿಕೊಟ್ಟ ಅತ್ಯಂತ ವಿಸ್ತಾರವಾದ ಕಾರ್ಯವಿಧಾನಗಳನ್ನೇ ಅಣಕಿಸುವಂತೆ ಮಾಡಿವೆ ಎಂದು ತೀವ್ರವಾಗಿ ಟೀಕಿಸಿರುವ ಈ ಬಹಿರಂಗ ಪತ್ರ, “ಈ ವಿಷಯವನ್ನು ಪರಿಶೀಲಿಸುತ್ತಿರುವ ಸುಪ್ರಿಂ ಕೋರ್ಟ್ ನಮ್ಮಂತಹ ವಿಶಾಲ ಪ್ರಜಾಪ್ರಭುತ್ವದಲ್ಲಿ ಮತದಾರ ಪಟ್ಟಿಗಳನ್ನು ಸಿದ್ಧಗೊಳಿಸುವುದರ ಸಂಕೀರ್ಣತೆಗಳ ಬಗ್ಗೆ ನಮಗೆ ತಿಳಿದಿರುವುದರಿಂದ, ನಾವು
ಎತ್ತಿರುವ ಪ್ರಶ್ನೆಗಳ ಬಗ್ಗೆ ಗಮನ ಹರಿಸುತ್ತದೆ ಎಂದು ಆಶಿಸುತ್ತೇವೆ” ಎಂದು ಹೇಳಿರುವುದನ್ನೂ ನೆನಪಿಸಿಕೊಳ್ಳಬಹುದು.
ಇದನ್ನೂ ನೋಡಿ: ಉತ್ತರಾಖಂಡದಲ್ಲಿ ಮೇಘಸ್ಫೋಟ : ಕೊಚ್ಚಿಹೋದ ಮನೆಗಳು Janashakthi Media
