ನವದೆಹಲಿ: ನೀತಿ ಆಯೋಗದ ಬಹು ಆಯಾಮ ಬಡತನ ಸೂಚ್ಯಂಕ(ಎಂಪಿಐ)ವು ಬಿಡುಗಡೆಯಾಗಿದ್ದು ಇದರ ಪ್ರಕಾರ ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ರಾಜ್ಯಗಳು ಭಾರತದ ಅತ್ಯಂತ ಬಡತನ ಹೊಂದಿರುವ ರಾಜ್ಯಗಳಾಗಿವೆ.
ಅದೇ ರೀತಿಯಲ್ಲಿ ಕೇರಳ, ಗೋವಾ, ಸಿಕ್ಕಿಂ, ತಮಿಳುನಾಡು ಮತ್ತು ಪಂಜಾಬ್ನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಡತನ ಇರುವುದು ಕಂಡುಬಂದಿದೆ.
ವರದಿಯ ಪ್ರಕಾರ, ಭಾರತದ ರಾಷ್ಟ್ರೀಯ ಎಂಪಿಐ ಮಾಪನವೂ ಆಕ್ಸ್ಫರ್ಡ್ ಪಾವರ್ಟಿ ಮತ್ತು ಮಾನವ ಅಭಿವೃದ್ಧಿ ಉಪಕ್ರಮ(ಓಪಿಹೆಚ್ಐ) ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್ಡಿಪಿ) ಅಭಿವೃದ್ಧಿಪಡಿಸಿದ ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಮತ್ತು ದೃಢವಾದ ವಿಧಾನವನ್ನು ಬಳಸುತ್ತದೆ.
ಇದರ ಪ್ರಕಾರವಾಗಿ ಈ ಸೂಚ್ಯಂಕದಲ್ಲಿ ತಿಳಿಸಿದಂತೆ, ಬಿಹಾರದಲ್ಲಿ ಶೇಕಡಾ 51.91 ರಷ್ಟು ಜನ ಬಡವರಾಗಿದ್ದರೆ, ಜಾರ್ಖಂಡ್ನಲ್ಲಿ ಶೇಕಡಾ 42.16 ರಷ್ಟು ಜನ ಹಾಗೂ ಉತ್ತರ ಪ್ರದೇಶದಲ್ಲಿ ಶೇಕಡಾ 37.79 ರಷ್ಟು ಜನ ಬಡವರಾಗಿದ್ದಾರೆ.
ಕೇರಳದಲ್ಲಿ ಶೇಕಡಾ 0.71, ಗೋವಾ(ಶೇ. 3.76), ಸಿಕ್ಕಿಂ (ಶೇ. 3.82), ತಮಿಳುನಾಡು(ಶೇ. 4.89) ಮತ್ತು ಪಂಜಾಬ್(ಶೇ. 5.59) ರಾಜ್ಯಗಳು ದೇಶದಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದ ಬಡತನವನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಸೇರಿವೆ.
ಅತ್ಯಂತ ಹೆಚ್ಚು ಬಡ ರಾಜ್ಯಗಳ ಪಟ್ಟಿಯಲ್ಲಿ ಮಧ್ಯಪ್ರದೇಶ(ಶೇ 36.65)ನಾಲ್ಕನೇ ಸ್ಥಾನದಲ್ಲಿದ್ದರೆ, ಮೇಘಾಲಯ (ಶೇ 32.67) ಐದನೇ ಸ್ಥಾನದಲ್ಲಿದೆ.
ಕಡಿಮೆ ಜನಸಂಖ್ಯೆಯೊಂದಿಗೆ, ಕೇಂದ್ರಾಡಳಿತ ಪ್ರದೇಶಗಳಾಗಿರುವ ಪುದುಚೇರಿಯಲ್ಲಿ 1.72% ಬಡವರಾಗಿದ್ದರೆ, ಲಕ್ಷದ್ವೀಪ(1.82%), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (4.30%), ದೆಹಲಿ (4.79%) ಮತ್ತು ಚಂಡೀಗಢ (5.97%) ಬಡತನವನ್ನು ಹೊಂದಿದೆ.
ವರದಿಯನ್ನು ಸಿದ್ದಪಡಿಸುವ ಮಾನದಂಡಗಳಾಗಿ ಬಹುಆಯಾಮದ ಬಡತನದ ಅಳತೆಗಳನ್ನು ಗುರುತಿಸಲಿದೆ. ಅಲ್ಲದೆ, ಇದು ಕುಟುಂಬಗಳು ಸದಾಕಾಲ ಎದುರಿಸುತ್ತಿರುವ ಕೆಲವು ನಿರ್ದಿಷ್ಟ ಪ್ರಶ್ನೆಗಳು ಹಾಗೂ ವಿವಿಧ ಬಗೆಯ ಸಮಸ್ಯೆಗಳನ್ನು ಗಣನೇಗೆ ತೆಗೆದುಕೊಂಡು ವರದಿಯನ್ನು ಸಿದ್ದಪಡಿಸುತ್ತದೆ.
ಬಹು ಆಯಾಮ ಬಡತನ ಸೂಚ್ಯಂಕ(ಎಂಪಿಐ)ವು ಪ್ರಮುಖವಾಗಿ 12 ಅಂಶಗಳ ಮೇಲೆ ಅಧ್ಯಯನವನ್ನು ನಡೆಸಲಿದ್ದು, ಅದರಲ್ಲಿ ಪ್ರಮುಖವಾಗಿ ಆರೋಗ್ಯ, ಶಿಕ್ಷಣ ಮತ್ತು ಜೀವನ ಮಟ್ಟವನ್ನು ಮೊದಲ ಆಯ್ಕೆಗಳಾಗಿ ಪರಿಗಣಿಸಿದರೆ, ನಂತರ ಸಮಾನಾಂತರವಾಗಿ ಪೌಷ್ಟಿಕತೆ, ಮಗು ಮತ್ತು ಹದಿಹರೆಯದವರ ಮರಣ, ಪ್ರಸವಪೂರ್ವ ಆರೈಕೆ, ಶಾಲಾ ದಿನಗಳು, ಶಾಲಾ ಹಾಜರಾತಿ, ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವಿಕೆ ನೀರು, ವಿದ್ಯುತ್, ವಸತಿ, ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳು ಇತ್ಯಾದಿ ಅಂಶಗಳನ್ನು ಎಂಪಿಐ ಅಧ್ಯಯನದಲ್ಲಿ ಗಣನೇಗೆ ಪರಿಗಣಿಸಲಿದೆ.
ನೀತಿ ಆಯೋಗದ ಪ್ರಕಾರ, ಬಹುಆಯಾಮದ ಬಡತನದ ಮಟ್ಟ ಮತ್ತು ಸಮಯದೊಂದಿಗೆ ಅದರ ಬದಲಾವಣೆಯನ್ನು ಒಳಗೊಂಡಿರುತ್ತದೆ. “ಇದು ದೇಶದಲ್ಲಿನ ಬಡತನದ ಒಟ್ಟಾರೆ ಚಿತ್ರವನ್ನು ಪ್ರಸ್ತುತಪಡಿಸುತ್ತದೆ, ಜೊತೆಗೆ ಪ್ರದೇಶಗಳು – ರಾಜ್ಯ ಅಥವಾ ಜಿಲ್ಲೆಗಳು ಮತ್ತು ನಿರ್ದಿಷ್ಟ ವಲಯಗಳಂತಹ ಪ್ರಮುಖ ಕ್ಷೇತ್ರಗಳನ್ನು ಗುರುತಿಸಿ ನಿಖರ ಮತ್ತು ಹೆಚ್ಚು ಆಳವಾದ ವಿಶ್ಲೇಷಣೆಯನ್ನು ಒಳಗೊಂಡಿರುತ್ತದೆ. ಆರೋಗ್ಯ ಮತ್ತು ಪೋಷಣೆ, ಶಿಕ್ಷಣ ಮತ್ತು ಜೀವನ ಮಟ್ಟದ ಮಾನದಂಡಗಳು ಮತ್ತು ಅಸ್ತಿತ್ವದಲ್ಲಿರುವ ವಿತ್ತೀಯ ಅಂಶಗಳು ಬಡತನದ ಅಂಕಿಅಂಶಗಳಿಗೆ ಪೂರಕವಾಗಿರುತ್ತದೆ.
ಈ ವರದಿಯು ಸಾಕಷ್ಟು ನಿಖರ ಮಾಹಿತಿಯನ್ನು ಒಳಗೊಂಡಿದ್ದರೂ ಸಹ ಮುಖ್ಯವಾಹಿನಿಗೆ ತರುವಲ್ಲಿ ಅನಿವಾರ್ಯವಾದ ಮೊದಲ ಹಂತವಾಗಿದೆ. ಇದು ಐದು ವರ್ಷಗಳಷ್ಟು ಹಳೆಯದಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ 2015-16ರ ಉಲ್ಲೇಖಿತ ಅಂಕಿಅಂಶಗಳಾಗಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಹಲವಾರು ಅಭಿವೃದ್ಧಿ ಕ್ರಮಗಳಿಂದಾಗಿ ಸಾಕಷ್ಟು ವ್ಯತ್ಯಾಸವನ್ನು ಒಳಗೊಂಡಿರುತ್ತದೆ.