ಬಿಹಾರ: ತನ್ನ ಮಗಳು ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಕೋಪಗೊಂಡ ಆಕೆಯನ್ನು ಕೊಲ್ಲಲು ಸುಫಾರಿ ಕೊಟ್ಟ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಮಾಜಿ ಶಾಸಕ ಸುರೇಂದ್ರ ಶರ್ಮಾ ಬಂಧಿತ ಆರೋಪಿಯಾಗಿದ್ದಾರೆ.
ತನ್ನ ಮಗಳು ಅನ್ಯ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಶರ್ಮಾ ಕೋಪಗೊಂಡಿದ್ದರು. ಹೀಗಾಗಿ ಆಕೆಯನ್ನು ಗುತ್ತಿಗೆ ಹಂತಕರನ್ನು ನೇಮಿಸಿ, ಅವರಿಗೆ 20 ಲಕ್ಷ ರೂ.ಗಳನ್ನು ಪಾವತಿಸಿದ್ದಾನೆ ಎನ್ನಲಾಗಿದೆ.
ಶ್ರೀ ಕೃಷ್ಣಪುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಶರ್ಮಾ ಮಗಳ ಮೇಲೆ ಜುಲೈ 1 ಮತ್ತು 2 ರ ಮಧ್ಯರಾತ್ರಿ ಮೋಟಾರು ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳಿಂದ ಕೊಲೆ ಯತ್ನ ನಡೆದಿದೆ. ಈ ಬಗ್ಗೆ ಆಕೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಬಳಿಯಿದ್ದ ದೇಶ ನಿರ್ಮಿತ ಪಿಸ್ತೂಲ್‌ಗಳು, ಮದ್ದುಗುಂಡುಗಳು ಮತ್ತು ನಂಬರ್ ಪ್ಲೇಟ್ ಇಲ್ಲದ ಮೋಟಾರ್ ಬೈಕ್‌ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶನಿವಾರ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಯಿತು. ಗ್ಯಾಂಗ್ ಲೀಡರ್ ಅಭಿಷೇಕ್ ಅಲಿಯಾಸ್ ಛೋಟೆ ಸರ್ಕಾರ್ ಮತ್ತು ಆತನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಈ ವೇಳೆ, 1990ರ ದಶಕದಲ್ಲಿ ತನ್ನ ಸ್ಥಳೀಯ ಜಿಲ್ಲೆ ಸರನ್‌ನಿಂದ ಅಸೆಂಬ್ಲಿ ಅವಧಿಯನ್ನು ಪೂರ್ಣಗೊಳಿಸಿದ ಶರ್ಮಾ ಬಗ್ಗೆ ಅಭಿಷೇಕ್ ಪೊಲೀಸರಿಗೆ ತಿಳಿಸಿದ್ದರು.
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶರ್ಮಾ ಅವರಿಗೂ ಕ್ರಿಮಿನಲ್ ಇತಿಹಾಸವಿದೆ ಎನ್ನಲಾಗಿದೆ. ಸದ್ಯಕ್ಕೆ ಅವರು ಯಾವ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದು ತಿಳಿದಿಲ್ಲ. ಅಭಿಷೇಕ್ ಮತ್ತು ಆತನ ಸಹಚರರಿಂದ ದೇಶಿ ನಿರ್ಮಿತ ಪಿಸ್ತೂಲ್‌ಗಳು, ಹಲವಾರು ಕಾರ್ಟ್ರಿಡ್ಜ್‌ಗಳು ಮತ್ತು ನಂಬರ್ ಪ್ಲೇಟ್ ಇಲ್ಲದ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.