ಬಿಹಾರ ಜಾತಿ ಸಮೀಕ್ಷೆ ವರದಿ | 94 ಲಕ್ಷ ಕುಟುಂಬಗಳ ತಿಂಗಳ ಆದಾಯ 6,000; ದಲಿತರ ಪಾಲು 43%!

ಪಾಟ್ನಾ: ಬಿಹಾರದಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಕುಟುಂಬಗಳು ದಿನಕ್ಕೆ 200 ರೂ ಅಥವಾ ಅದಕ್ಕಿಂತ ಕಡಿಮೆ ಆದಾಯವನ್ನು ಹೊಂದುತ್ತಿವೆ ಎಂದು  ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಇತ್ತಿಚೆಗೆ ರಾಜ್ಯ ಸರ್ಕಾರ ಮಾಡಿರುವ ಜಾತಿ ಸಮೀಕ್ಷೆಯ ವರದಿಯಲ್ಲಿ ಇದು ಬಹಿರಂಗವಾಗಿದ್ದು, ಈ ಆದಾಯದಲ್ಲಿ ಬದುಕುತ್ತಿರುವ ಒಟ್ಟು ಜನಸಂಖ್ಯೆಯಲ್ಲಿ ಎಸ್‌ಸಿ-ಎಸ್‌ಟಿ ಕುಟುಂಬಗಳ ಸಂಖ್ಯೆ ಸುಮಾರು 43% ದಷ್ಟಿದೆ ಎಂದು ವರದಿ ಎತ್ತಿತೋರಿಸಿದೆ.

ರಾಜ್ಯದಲ್ಲಿ ಸುಮಾರು 2.97 ಕೋಟಿ ಕುಟುಂಬಗಳಿದ್ದು, ಅದರಲ್ಲಿ 94 ಲಕ್ಷಕ್ಕೂ ಹೆಚ್ಚು (34.13%) ಕುಟುಂಬಗಳು ತಿಂಗಳಿಗೆ 6,000 ಅಥವಾ ಅದಕ್ಕಿಂತ ಕಡಿಮೆ ಆದಾಯದಲ್ಲಿ ವಾಸಿಸುತ್ತಿವೆ ಎಂದು ರಾಜ್ಯದ ಸಂಸದೀಯ ವ್ಯವಹಾರಗಳ ಸಚಿವ ವಿಜಯ್ ಕುಮಾರ್ ಚೌಧರಿ ವರದಿ ಮಂಡಿಸುತ್ತಾ ಹೇಳಿದ್ದಾರೆ. 2011ರ ಜನಗಣತಿ ವೇಳೆ 69.8% ದಷ್ಟು ಇದ್ದ ರಾಜ್ಯದ ಸಾಕ್ಷರತೆ 79.8%ಕ್ಕೆ ಏರಿಕೆಯಾಗಿದೆ ಎಂದು ಸಮೀಕ್ಷೆ ವರದಿ ಹೇಳಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪಿಎಸ್ಐ ಹಗರಣ: ಆರೋಪ ಮಾಡುವ ಮುನ್ನ ಬಿಜೆಪಿ ನಾಯಕರು ಹೋಂವರ್ಕ್ ಮಾಡಿಕೊಂಡು ಬರಲಿ – ಸಚಿವ ಪ್ರಿಯಾಂಕ್​ ಖರ್ಗೆ

ರಾಜ್ಯದ ಒಟ್ಟು ಪರಿಶಿಷ್ಟ ಪಂಗಡದ ಕುಟುಂಬಗಳಲ್ಲಿ 42.91% ಮತ್ತು ಪರಿಶಿಷ್ಟ ಜಾತಿಯ ಕುಟುಂಬಗಳಲ್ಲಿ 42.78% ಕುಟುಂಬಗಳು ತಿಂಗಳಿಗೆ ರೂ. 6000 ಕ್ಕಿಂತ ಕಡಿಮೆ ಅಥವಾ ದಿನಕ್ಕೆ ರೂ 200 ಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಾಗಿವೆ ಎಂದು ವರದಿಯು ಹೇಳಿದೆ.

ವರದಿಯ ಪ್ರಾಥಮಿಕ ಸಂಶೋಧನೆಗಳನ್ನು ಅಕ್ಟೋಬರ್ 2 ರಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಉಪಸ್ಥಿತಿಯಲ್ಲಿ ಸಾರ್ವಜನಿಕಗೊಳಿಸಲಾಗಿತ್ತು. ಇದೀಗ ಸಚಿವ ಚೌಧರಿ ಅವರು ವಿವರವಾದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.

ಈ ಪ್ರಕ್ರಿಯೆಯನ್ನು “ಐತಿಹಾಸಿಕ” ಎಂದು ಕರೆದ ಚೌಧರಿ ಅವರು, ವರದಿಯಲ್ಲಿನ ಅಂಕಿಅಂಶಗಳು “ಪ್ರಾಮಾಣಿಕ” ಎಂದು ದೃಢಪಡಿಸಿದ್ದಾರೆ. ಆಡಳಿತಾರೂಢ ಮಹಾಘಟಬಂಧನ್ ಮೈತ್ರಿಕೂಟದ ರಾಜಕೀಯವಾಗಿ ಸರಿಹೊಂದುವಂತೆ ಅಂಕಿ ಅಂಶಗಳನ್ನು ತಿದ್ದುಪಡಿ ಮಾಡಲಾಗಿದೆ ಎಂಬ ಬಿಜೆಪಿಯ ಆರೋಪವನ್ನು ಅವರು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಚುನಾವಣೆ ವೇಳೆ ಚುನಾವಣಾ ಬಾಂಡ್ ವಿಂಡೋ ಓಪನ್ ಮಾಡಿದ ಕೇಂದ್ರ ಸರ್ಕಾರ | ಭಾರತ ಸರ್ಕಾರದ ಮಾಜಿ ಕಾರ್ಯದರ್ಶಿ ಆಕ್ಷೇಪ

“ಒಂದು ಜಾತಿಯ ಜನಸಂಖ್ಯೆಯ ಶೇಕಡಾವಾರು ಹೆಚ್ಚಳವು ಸಾಧನೆಗೆ ಸಮನಾಗಿರುವುದಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಅಂತೆಯೇ, ಶೇಕಡಾವಾರು ಕುಸಿತ ಕೂಡಾ ನಷ್ಟ ಎಂದರ್ಥವಲ್ಲ. ಸುಪ್ರೀಂ ಕೋರ್ಟ್ ಸಮೀಕ್ಷೆಯ ಪ್ರಕ್ರಿಯೆಯನ್ನು ‘ಸಂಪೂರ್ಣವಾಗಿ ಮಾನ್ಯ’ ಮಾಡಿದ್ದರೂ, ಸಮೀಕ್ಷೆಯನ್ನು ಪ್ರಶ್ನಿಸಲು ಪ್ರಯತ್ನಿಸುತ್ತಿರುವುದು ಸರಿಯಲ್ಲ” ಎಂದು ಸಚಿವರು ಚೌದರಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಮುಖ್ಯಮಂತ್ರಿ ನೇತೃತ್ವದ ಸರ್ವಪಕ್ಷ ನಿಯೋಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡದೆ. ಅಲ್ಲದೆ ವೈಯಕ್ತಿಕ ಮನವಿಯ ಮೂಲಕ ಕೂಡಾ ಒತ್ತಾಯಿಸಲು ಶಾಸಕಾಂಗವು ಎರಡು ಸರ್ವಾನುಮತದ ನಿರ್ಣಯಗಳನ್ನು ಅಂಗೀಕರಿಸಿದ್ದರೂ ಸಹ, ಜಾತಿ ಸಮೀಕ್ಷೆ ಕೈಗೊಳ್ಳಲು ಕೇಂದ್ರ ಸರ್ಕಾರ ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾತಿ ಸಮೀಕ್ಷೆ ನಡೆಸಿದೆ” ಎಂದು ಸಚಿವ ಚೌಧರಿ ನೆನಪಿಸಿಕೊಂಡಿದ್ದಾರೆ.

ರಾಜ್ಯದ ಲಿಂಗಾನುಪಾತ 1,000 ಪುರುಷರಿಗೆ 918 ರಿಂದ 953 ಕ್ಕೆ ಸುಧಾರಣೆಯಾಗಿದೆ ಸಚಿವ ಹೇಳಿದ್ದಾರೆ. ಬಿಹಾರದ 50 ಲಕ್ಷಕ್ಕೂ ಹೆಚ್ಚು ಜನರು ಜೀವನೋಪಾಯ ಅಥವಾ ಉತ್ತಮ ಶಿಕ್ಷಣಕ್ಕಾಗಿ ರಾಜ್ಯದ ಹೊರಗೆ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಸಮೀಕ್ಷೆಯಿಂದ ಬಹಿರಂಗವಾಗಿದೆ. ಇತರ ರಾಜ್ಯಗಳಲ್ಲಿ ಜೀವನ ಸಾಗಿಸುತ್ತಿರುವವರು ಸುಮಾರು 46 ಲಕ್ಷದಷ್ಟು ಜನರಿದ್ದು, ವಿದೇಶಗಳಲ್ಲಿ 2.17 ಲಕ್ಷ ಜನರಿದ್ದಾರೆ ಎಂಬುವುದು ಜಾತಿ ಸಮೀಕ್ಷೆ ವರದಿ ಬಹಿರಂಗಪಡಿಸಿದೆ. ಇತರ ರಾಜ್ಯಗಳಲ್ಲಿ ಅಧ್ಯಯನ ಮಾಡುತ್ತಿರುವವರು ಸುಮಾರು 5.52 ಲಕ್ಷದಷ್ಟಿದ್ದರೆ, ಸುಮಾರು 27,000 ವಿದ್ಯಾರ್ಥಿಗಳು ವಿದೇಶಗಳಲ್ಲಿ ಅಧ್ಯಯನ ನಿರತರಾಗಿದ್ದಾರೆ.

ಇದನ್ನೂ ಓದಿ: ಅಸಮರ್ಪಕ ಬಿಸಿಯೂಟ ವಿತರಣೆ: ತರಗತಿ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ ಶಾಲಾ ವಿದ್ಯಾರ್ಥಿಗಳು

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಒಬಿಸಿಗಳು ಮತ್ತು ಇಬಿಸಿಗಳು 60%ಕ್ಕಿಂತ ಹೆಚ್ಚು ಇದ್ದು, ಮೇಲ್ಜಾತಿ ಸಮುದಾಯಗಳು 10% ರಷ್ಟಿದ್ದಾರೆ ಎಂದು ಪ್ರಾಥಮಿಕ ಸಂಶೋಧನೆಗಳು ಹೇಳಿದ್ದವು. 25%ಕ್ಕಿಂತ ಹೆಚ್ಚು ಮೇಲ್ಜಾತಿಯವರು ತಿಂಗಳಿಗೆ ರೂ 6000 ಅಥವಾ ಅದಕ್ಕಿಂತ ಕಡಿಮೆ ಆದಾಯವನ್ನು ಹೊಂದಿದ್ದಾರೆ ಎಂದು ಜಾತಿ ಸಮೀಕ್ಷೆ ವರದಿ ಹೇಳಿದೆ.

ರಾಜ್ಯದಲ್ಲಿ ತಮ್ಮ ಸಮುದಾಯ ಹೆಚ್ಚಿನ ಜನಸಂಖ್ಯೆ ಹಾಗೂ ರಾಜಕೀಯ ಪ್ರಭಾವವಿದ್ದರೂ 35% ಕ್ಕಿಂತ ಹೆಚ್ಚು ಯಾದವರ ಮಾಸಿಕ ಆದಾಯ 6000 ರೂ. ಎಂದು ವರದಿ ಬಹಿರಂಗಪಡಿಸಿದೆ. ಪ್ರಸ್ತುತ ರಾಜ್ಯದ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಅವರ ಸಮುದಾಯವಾದ ಕುರ್ಮಿಗಳಲ್ಲಿ, ಸುಮಾರು 30% ಜನರು ಕೂಡಾ ಇದೇ ರೀತಿಯ ಆದಾಯ ಹೊಂದಿದ್ದಾರೆ.

ಸಮೀಕ್ಷೆಯು ಮುಸ್ಲಿಮರ ನಡುವೆ ಹಲವು ಜಾತಿಯನ್ನು ಗುರುತಿಸಿದ್ದು, ಧಾರ್ಮಿಕವಾಗಿ ಮುಸ್ಲಿಮರು ರಾಜ್ಯದ ಜನಸಂಖ್ಯೆಯ 17% ಕ್ಕಿಂತ ಹೆಚ್ಚಿದ್ದಾರೆ. ಅದಾಗ್ಯೂ ಪ್ರವಾದಿಯವರ ಕುಟುಂಬಸ್ಥರು ಎಂದು ಹೇಳಿಕೊಳ್ಳುವ 17.61% ರಷ್ಟು ಸೈಯ್ಯದ್‌ ಸಮುದಾಯ ತಿಂಗಳಿಗೆ 6000 ರೂ ಅಥವಾ ಅದಕ್ಕಿಂತ ಕಡಿಮೆ ಆದಾಯ ಗಳಿಸುತ್ತಾರೆ ಎಂದು ವರದಿ ಉಲ್ಲೇಖಿಸಿದೆ.

ವಿಡಿಯೊ ನೋಡಿ: ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿಸಿಡಿದೆದ್ದ ಗ್ರಾಮ ಪಂಚಾಯಿತಿ ನೌಕರರು

Donate Janashakthi Media

Leave a Reply

Your email address will not be published. Required fields are marked *