ಪಾಟ್ನಾ: ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯ ಎನ್ಟಿಪಿಸಿ ಮೊದಲ ಹಂತದ ಪರೀಕ್ಷೆಯ ಫಲಿತಾಂಶದಲ್ಲಿ ಅಕ್ರಮ ನಡೆದಿರುವ ಬಗ್ಗೆ ಉದ್ಯೋಗಾಕಾಂಕ್ಷಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳು ಶುಕ್ರವಾರ ಕರೆ ನೀಡಿರುವ ಬಿಹಾರ ಬಂದ್ಗೆ ವ್ಯಾಪಕ ಬೆಂಬಲ ದೊರಕಿದೆ.
ಬಂದ್ಗೆ ಬೆಂಬಲ ಸೂಚಿಸಿ ಪ್ರತಿಭಟನಾಕಾರರು ಪಾಟ್ನಾ ಸೇರಿದಂತೆ ಹಲವೆಡೆ ರಸ್ತೆ ತಡೆ ನಡೆಸಿದರು. ಬಿಹಾರದ ರಾಜಧಾನಿ ಪಾಟ್ನಾ ಹಾಗೂ ರಾಜ್ಯದ ಇತರೆಡೆ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ಅಖಿಲ ಭಾರತ ವಿದ್ಯಾರ್ಥಿಗಳ ಸಂಘ ಅಥವಾ ಎಐಎಸ್ಎ ಸೇರಿದಂತೆ ಹಲವಾರು ವಿದ್ಯಾರ್ಥಿಗಳ ಬಿಹಾರ ಬಂದ್ ನಲ್ಲಿ ಭಾಗಿಯಾಗಿದ್ದವು.
ಬಂದ್ ಬೆಂಬಲಿಸಿ ವಿರೋಧ ಪಕ್ಷಗಳಾದ ರಾಷ್ಟ್ರೀಯ ಜನತಾ ದಳ, ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಸಿಪಿಐ, ಮತ್ತು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ), “ಬಿಹಾರವು ದೇಶದಲ್ಲಿ ಅತಿ ಹೆಚ್ಚು ಯುವಜನರನ್ನು ಹೊಂದಿದೆ ಹಾಗೂ ಅತಿ ಹೆಚ್ಚು ನಿರುದ್ಯೋಗವನ್ನು ಹೊಂದಿದೆ. ಕೇಂದ್ರ ಹಾಗೂ ಬಿಹಾರ ಸರಕಾರಗಳಿಂದ ವಿದ್ಯಾರ್ಥಿಗಳಿಗೆ ವಂಚನೆಯಾಗುತ್ತಿದೆ. ಸರಕಾರವು ಅವರಿಗೆ ಉದ್ಯೋಗದ ಭರವಸೆಯನ್ನು ನೀಡುತ್ತದೆ. ಆದರೆ ಅವರು ಉದ್ಯೋಗಕ್ಕಾಗಿ ಒತ್ತಾಯಿಸಿ ಬೀದಿಗೆ ಬಂದಾಗ ನಿತೀಶ್ ಕುಮಾರ್ ಸರಕಾರವು ಅವರ ಮೇಲೆ ಲಾಠಿಪ್ರಹಾರ ನಡೆಸುತ್ತದೆ ” ಎಂದು ಹೇಳಿಕೆ ನೀಡಿದೆ.
ಆರ್ಆರ್ಬಿ ಎನ್ಟಿಪಿಸಿ ಹುದ್ದೆಗಳ ಭರ್ತಿಗಾಗಿ ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆ ವಿರೋಧಿಸಿ ಹಲವೆಡೆ ಉದ್ಯೋಗಾಕಾಂಕ್ಷಿಗಳು ಬುಧವಾರದಂದು ನಡೆಸಿದ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿತ್ತು. ಪ್ರಯಾಣಿಕ ರೈಲಿಗೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ದರು. ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗಿಸಿದ್ದರು. ಪೊಲೀಸರು ದಾಖಲಿಸಿರುವ ಪ್ರಕರಣ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಎರಡು ಹಂತಗಳಲ್ಲಿ ಪರೀಕ್ಷೆ ನಡೆಸುವ ರೈಲ್ವೆ ನಿರ್ಧಾರವನ್ನು ವಿರೋಧಿಸಿರುವ ವಿದ್ಯಾರ್ಥಿಗಳು ಜನವರಿ 15ರಂದು ಪ್ರಕಟವಾಗಿರುವ ಮೊದಲ ಹಂತದ ಪರೀಕ್ಷೆಯ ಫಲಿತಾಂಶದಲ್ಲಿ ಉತ್ತೀರ್ಣರಾದವರಿಗೆ ಎರಡನೇ ಹಂತದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.
ಸುಮಾರು 1.25 ಕೋಟಿ ಅಭ್ಯರ್ಥಿಗಳು ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದು, ಹಂತ 2 ರಿಂದ ಹಂತ 6 ರವರೆಗೆ 35,000 ಕ್ಕೂ ಹೆಚ್ಚು ಹುದ್ದೆಗಳು ಇವೆ ಎಂದು ಜಾಹೀರಾತು ನೀಡಲಾಗಿದೆ. ಪ್ರಾರಂಭಿಕ ವೇತನವು ತಿಂಗಳಿಗೆ ₹ 19,900 ರಿಂದ ₹ 35,400 ವರೆಗೆ ಇರುತ್ತದೆ. ಸುಮಾರು 60 ಲಕ್ಷ ಮಂದಿ ಪರೀಕ್ಷೆಗೆ ಹಾಜರಾಗಿದ್ದರು.
ಭಾರತೀಯ ರೈಲ್ವೆ ಇಲಾಖೆ ಪ್ರಕಾರ, ಸಮಿತಿಯು 2019ರಲ್ಲಿ ತಾಂತ್ರಿಕವಲ್ಲದ ಜನಪ್ರಿಯ ವರ್ಗಗಳ-ಎನ್ಟಿಪಿಸಿ ಸ್ಪರ್ಧಾತ್ಮಕ ಪರೀಕ್ಷೆ ನೀಡಲಾದ ಕೇಂದ್ರೀಕೃತ ಉದ್ಯೋಗಿಗಳ 1ನೇ ಹಂತದ ಸಿಬಿಟಿ ಫಲಿತಾಂಶಗಳನ್ನು ಪರಿಶೀಲಿಸುತ್ತದೆ. ಅಭ್ಯರ್ಥಿಗಳು ತಮ್ಮ ಕಾಳಜಿ ಮತ್ತು ಸಲಹೆಗಳನ್ನು ಸಮಿತಿಗೆ ಸಲ್ಲಿಸಬಹುದು ಎಂದು ರೈಲ್ವೆ ತಿಳಿಸಿದೆ.