ಬಿಹಾರ ವಿಧಾನಸಭೆ ಚುನಾವಣೆಯು ಸ್ವಲ್ಪದರಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟದ ಪರವಾಗಿ ಬಂದಿದೆ. ಅದು ‘ಮಹಾಘಟಬಂಧನ’ದ 110 ಸ್ಥಾನಗಳ ವಿರುದ್ಧ 125 ಸ್ಥಾನಗಳನ್ನು ಗೆದ್ದಿದೆ. ಆದರೆ, ಈ ಎರಡು ಮೈತ್ರಿಕೂಟಗಳ ನಡುವಿನ ಒಟ್ಟು ಮತಗಳ ವ್ಯತ್ಯಾಸವು ಕೇವಲ ಶೇಕಡಾ 0.2 ರಷ್ಟಿದೆ.
ಚುನಾವಣಾ ಫಲಿತಾಂಶದಲ್ಲಿ ಗೆಲುವನ್ನು ಸಾಧಿಸಿದ್ದರೂ, ಎನ್.ಡಿ.ಎ.ಗೆ ಸಾಕಷ್ಟು ಹಿನ್ನಡೆಯಾಗಿದೆ. 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ ಶೇಕಡಾ 12.4 ರಷ್ಟು ಪ್ರಭಾವ ಕಡಿಮೆಯಾಗಿದೆ. ನಿತೀಶ್ ಕುಮಾರ್ ಸರ್ಕಾರದ ವಿರುದ್ಧದ ಜನರ ಅತೃಪ್ತಿಯು ಹಿಂದಿನ ಚುನಾವಣೆಯಲ್ಲಿ ಜೆಡಿಯು ಪಡೆದ 71 ಸ್ಥಾನಗಳ ಬದಲು ಈ ಬಾರಿ ಕೇವಲ 43 ಸ್ಥಾನಗಳನ್ನು ಪಡೆಯುವುದರಲ್ಲಿ ವ್ಯಕ್ತವಾಗಿದೆ. ಹಿಂದಿನ ಚುನಾವಣೆಯಲ್ಲಿ ‘ಮಹಾಘಟಬಂಧನ’ದ ಮುಖ್ಯಮಂತ್ರಿಯಾದ ನಂತರ 2017ರಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿ ಕಡೆ ಪಕ್ಷಾಂತರ ಮಾಡಿದ್ದನ್ನು ಜನರು ಇಷ್ಟಪಟ್ಟಿಲ್ಲ, ಅವರು ಈ ನಗ್ನ ಸಮಯಸಾಧಕತನಕ್ಕಾಗಿ ಬಹಳ ಅನುಭವಿಸಬೇಕಾಯಿತು.
ತೇಜಸ್ವಿ ಯಾದವ್ ಅವರ ನಾಯಕತ್ವದಲ್ಲಿನ ಮಹಾಘಟಬಂಧನದ ಚುನಾವಣಾ ಪ್ರಚಾರವು ಜನರಿಂದ, ಅದರಲ್ಲೂ ಯುವಜನರಿಂದ ಭಾರಿ ಸ್ಪಂದನೆಯನ್ನು ಪಡೆಯಿತು. ಅವರು ಉದ್ಯೋಗ ಮತ್ತು ಆರ್ಥಿಕ ನ್ಯಾಯ ಕುರಿತು ಗಮನ ಕೇಂದ್ರೀಕರಿಸಿ ಪ್ರಚಾರ ಮಾಡಿದರು. ಎಡಪಕ್ಷಗಳ ಪಾಲ್ಗೊಳ್ಳುವಿಕೆಯಿಂದಾಗಿ ಚುನಾವಣಾ ಪ್ರಚಾರದಲ್ಲಿ ಲಾಕ್ಡೌನ್ ನಿಂದಾದ ಉದ್ಯೋಗ ನಷ್ಟ, ಆರ್ಥಿಕ ಸಂಕಟ, ಹಿಮ್ಮುಖ ವಲಸೆ, ರೈತರ ಸಮಸ್ಯೆಗಳು ಹಾಗೂ ದುಡಿಯುವ ಜನರ ಹಕ್ಕುಗಳ ಬಗ್ಗೆ ಹೆಚ್ಚು ಒತ್ತುಕೊಡಲು ಸಾಧ್ಯವಾಯಿತು.
ಬಿಹಾರ ಚುನಾವಣೆಯು ಕೆಲವು ಸಕಾರಾತ್ಮಕ ಅಂಶಗಳನ್ನು ಮುನ್ನೆಲೆಗೆ ತಂದಿದೆ: ಒಂದು ಪರಿಣಾಮಕಾರಿ ಚುನಾವಣಾ ಮೈತ್ರಿಕೂಟ ರಚಿಸುವುದು; ಜನರ ನಿಜವಾದ ಸಮಸ್ಯೆಗಳನ್ನು ತೆಗೆದುಕೊಳ್ಳುವುದು, ಜನಪರ ನೀತಿಗಳನ್ನು ಜನರ ಮುಂದಿಡುವುದು ಮತ್ತು ಯುವಜನರನ್ನು ಹುರಿದುಂಬಿಸಿ ಆಕರ್ಷಿಸುವ ಸಾಮರ್ಥ್ಯ ಪಡೆಯುವುದು. ಇವುಗಳನ್ನು ಮುಂದಿನ ದಿನಗಳಲ್ಲಿ ಇಡೀ ದೇಶಕ್ಕೆ ಕೊಂಡೊಯ್ಯಲು ಸಾಧ್ಯವಾಗಬೇಕು.
16 ಸ್ಥಾನಗಳನ್ನು ಪಡೆದು ಎಡಪಕ್ಷಗಳು ಉತ್ತಮ ಸಾಧನೆಗೈದವು, ಅದರಲ್ಲಿ ಸಿಪಿಐ(ಎಂ.ಎಲ್.)-12, ಸಿಪಿಐ(ಎಂ)-2 ಹಾಗೂ ಸಿಪಿಐ-2 ಸ್ಥಾನಗಳನ್ನು ಪಡೆದಿರುವುದು ಜನರು ಈ ಚುನಾವಣೆಯಲ್ಲಿ ಅವರ ಬದುಕಿನಲ್ಲಿ ಅವರಿಗೆ ಹೆಚ್ಚು ಬಾಧಿಸಿರುವ ಸಮಸ್ಯೆಗಳ ಬಗ್ಗೆ ಸ್ಪಂದಿಸಿರುವುದನ್ನು ಎತ್ತಿತೋರಿಸಿದೆ.
ಎಂದಿನಂತೆ, ಬಿಜೆಪಿಯು ಹಿಂದುತ್ವ ಕಾರ್ಯಸೂಚಿಯನ್ನು ಬಳಸಲು ಪ್ರಯತ್ನ ಮಾಡಿತು – ಸಂವಿಧಾನದ 370ನೇ ವಿಧಿ, ರಾಮ ಮಂದಿರ, ನುಸುಳುಕೋರರನ್ನು ಹಿಂದಕ್ಕೆ ಕಳಿಸುವುದು ಮುಂತಾದ ವಿಷಯಗಳನ್ನು ಪ್ರಸ್ತಾಪ ಮಾಡಿತು. ‘ಜೈ ಶ್ರೀರಾಮ್ ಘೋಷಣೆಗೆ ವಿರೋಧ ಮಾಡುವ ಜನರಿದ್ದಾರೆ ಎಂದು ನರೇಂದ್ರಮೋದಿ ಘೋಷಿಸಿದರು. ಬಿಜೆಪಿ ತನ್ನ ಸ್ಥಿತಿಯನ್ನು ಉತ್ತಮಗೊಳಿಸಿಕೊಂಡಿರುವುದು ಮತ್ತು 74 ಸ್ಥಾನಗಳನ್ನು ಪಡೆದಿರುವುದು, ಕೋಮುವಾದಿ ರಾಜಕೀಯದ ಜತೆ ಜಾತಿ ಸಮೀಕರಣಗಳ ಅಪಾಯಕಾರಿ ಪ್ರವೃತ್ತಿ ಇನ್ನೂ ಕೂಡ ಶಕ್ತಿಯುತ ಪ್ರಭಾವ ಬೀರುತ್ತಿದೆ ಎಂಬ ಸಂದೇಶ ನೀಡಿದೆ.
ಮುಂದಿನ ದಿನಗಳಿಗೆ ಸರಿಯಾದ ಪಾಠಗಳನ್ನು ಕಲಿಯಲು ಚುನಾವಣಾ ಫಲಿತಾಂಶವನ್ನು ಇನ್ನೂ ಆಳವಾಗಿ ವಿಮರ್ಶಿಸಬೇಕಾದ ಅಗತ್ಯವಿರುವಾಗಲೇ, ಹಿಂದುತ್ವ-ಸರ್ವಾಧಿಕಾರಿ ಅಪಾಯದ ಎದುರು ನಡೆಸಬೇಕಾದ ಹೋರಾಟದಲ್ಲಿ ವಿರೋಧ ಪಕ್ಷಗಳ ವ್ಯಾಪಕ ಐಕ್ಯತೆಯನ್ನು ಸಾಧಿಸಬೇಕಾಗಿರುವುದು ಅತ್ಯಂತ ಮುಖ್ಯವಾದದ್ದು. ಮಹಾಘಟಬಂಧನವು ನಡೆಸಿದ ಹೋರಾಟವು ಇದನ್ನು ಸಾಬೀತುಪಡಿಸಿದೆ.
ಇಂತಹ ಚುನಾವಣಾ ಮೈತ್ರಿಗಳಲ್ಲಿ ಭಾಗೀದಾರರು ತಮ್ಮ ಶಕ್ತಿ ಮತ್ತು ಪ್ರಭಾವಗಳಿಗೆ ಮೀರಿ ಸ್ಥಾನಗಳನ್ನು ಕೇಳಬಾರದು ಮತ್ತು ಅದಕ್ಕಾಗಿ ಕಾದಾಡಬಾರದು ಎಂಬುದು ಕೂಡ ಮುಖ್ಯವಾದ ಸಂಗತಿ. 70 ಸ್ಥಾನಗಳಿಗಾಗಿ ಕಾಂಗ್ರೆಸ್ ಕಾದಾಡಿದ್ದು ಈ ಮೈತ್ರಿಯ ದೌರ್ಬಲ್ಯ ಎಂಬುದು ಸಾಬೀತಾಯಿತು. ಅದು ಕೇವಲ 19 ಸ್ಥಾನಗಳನ್ನು ಮಾತ್ರ ಗಳಿಸಿತು.
ಹೀಗೆ ಬಿಹಾರ ಚುನಾವಣೆಯು ಕೆಲವು ಸಕಾರಾತ್ಮಕ ಅಂಶಗಳನ್ನು ಮುನ್ನೆಲೆಗೆ ತಂದಿತು: ಒಂದು ಪರಿಣಾಮಕಾರಿ ಚುನಾವಣಾ ಮೈತ್ರಿಕೂಟ ರಚಿಸುವುದು; ಜನರ ನಿಜವಾದ ಸಮಸ್ಯೆಗಳನ್ನು ತೆಗೆದುಕೊಳ್ಳುವುದು, ಜನಪರ ನೀತಿಗಳನ್ನು ಜನರ ಮುಂದಿಡುವುದು, ಮತ್ತು ಯುವಜನರನ್ನು ಹುರಿದುಂಬಿಸಿ ಆಕರ್ಷಿಸುವ ಸಾಮರ್ಥ್ಯ ಪಡೆಯುವುದು. ಇವುಗಳನ್ನು ಮುಂದಿನ ದಿನಗಳಲ್ಲಿ ಇಡೀ ದೇಶಕ್ಕೆ ಕೊಂಡೊಯ್ಯಲು ಸಾಧ್ಯವಾಗಬೇಕು.
ಸಿಪಿಐ(ಎಂ) ಅಭ್ಯರ್ಥಿಗಳು ಪಡೆದ ಮತಗಳು
ಚುನಾವಣಾ ಕ್ಷೇತ್ರ ಅಭ್ಯರ್ಥಿ ಪಡೆದ ಮತಗಳು ಒಟ್ಟು ಮತಗಳ %
ಮಾಂಝಿ ಡಾ. ಸತ್ಯೇಂದ್ರ ಯಾದವ್ 59324 37.56
ಬಿಭೂತಿಪುರ ಅಜಯ ಕುಮಾರ್ 73822 45.00
ಮಟಿಹಾನಿ ರಾಜೇಂದ್ರ ಪ್ರಸಾದ್ ಸಿಂಗ್ 60599 29.27
ಪಿಪ್ರ ರಾಜ್ ಮಂಗಲ್ ಪ್ರಸಾದ್ 80410 40.10
ಮಾಂಝಿಯಲ್ಲಿ ಸಿಪಿಐ(ಎಂ) ಅಭ್ಯರ್ಥಿ ಸಮೀಪದ ಪ್ರತಿಸ್ಪರ್ಧಿಗಿಂತ 25386 ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿಭೂತಿಪುರದಲ್ಲಿ 40,456 ಮತಗಳ ಅಂತರದಿಂದ ಗೆದ್ದಿದ್ದಾರೆ. ಮಟಿಹಾನಿಯಲ್ಲಿ ಗೆದ್ದ ಅಭ್ಯರ್ಥಿ ಸಿಪಿಐ(ಎಂ) ಅಭ್ಯರ್ಥಿಗಿಂತ ಕೇವಲ 765 ಹೆಚ್ಚು ಮತಗಳನ್ನು ಪಡೆದರು. ಪಿಪ್ರದಲ್ಲಿ ಗೆದ್ದ ಅಭ್ಯರ್ಥಿ 8177 ಹೆಚ್ಚು ಮತಗಳನ್ನು ಪಡೆದರು.
- ಪಕ್ಷಗಳ ಬಲಾಬಲ
- ಪಕ್ಷ ಸೀಟುಗಳು ಮತ %
- ಬಿಜೆಪಿ 74 19.46
- ಜೆಡಿ(ಯು) 43 15.90
- ಇತರ 2 ಪಕ್ಷಗಳು 08 1.90
- ಎನ್ ಡಿ ಎ 125 37.26
- ಆರ್ಜೆಡಿ 75 23.11
- ಕಾಂಗ್ರೆಸ್ 19 9.48
- ಎಡಪಕ್ಷಗಳು 16 4.63
- ಮಹಾಘಟಬಂಧನ್ 110 37.23
- ಎಐಎಂಐಎಂ 5 1.24
- ಎಲ್ಜೆಪಿ 1 5.66
- ಬಿಎಸ್ಪಿ 1 1.49
- ಪಕ್ಷೇತರ 1
ಎಲ್ಜೆಪಿ ಮತ್ತು ಎಐಎಂಐಎಂ ಹಾಗೂ ಕಾಂಗ್ರೆಸ್
ಜನರ ವಿಶ್ವಾಸ ಕಳೆದುಕೊಂಡ ಬಿಜೆಪಿ-ಜೆಡಿ(ಯು)ಮೈತ್ರಿಕೂಟ ಕೊನೆಗೂ ಮತ್ತೆ ಅಧಿಕಾರ ಪಡೆಯುವಲ್ಲಿ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್ಜೆಪಿ ಮತ್ತು ಒವೈಸಿಯವರ ನೇತೃತ್ವದ ಎಐಎಂಐಎಂ ಪಾತ್ರ ಬಗ್ಗೆ ಬಹಳಷ್ಟು ವಿಶ್ಲೇಷಣೆಗಳು ಬಂದಿವೆ.
ಬಿಜೆಪಿಯನ್ನು ಬಲಪಡಿಸುವುದೇ ತನ್ನ ಗುರಿಯಾಗಿತ್ತು, ಅದನ್ನು ಸಾಧಿಸಿದ್ದೇನೆ ಎಂದು ಕೇವಲ 333 ಮತಗಳ ಅಂತರದಿಂದ ಒಂದು ಸೀಟನ್ನು ಗೆದ್ದಿರುವ, ಆದರೂ ಒಟ್ಟಾರೆಯಾಗಿ 5.66ಶೇ. ಮತ ಪಡೆದಿರುವ ಎಲ್ಜೆಪಿ ಮುಖಂಡರು ನೇರವಾಗಿಯೇ ಹೇಳಿಕೊಂಡಿದ್ದಾರೆ. ಎಲ್ಲ ಜೆಡಿ(ಯು) ಅಭ್ಯರ್ಥಿಗಳ ವಿರುದ್ದ ಸ್ಪರ್ಧಿಸಿದ್ದರಿಂದ ಈ ಮತಗಳಿಕೆ ಎಂಬುದು ಸ್ಪಷ್ಟ.
ನಿತೀಶ್ ಕುಮಾರ್ ಅವರನ್ನು ಈ ಬಗ್ಗೆ ಪತ್ರಕರ್ತರು ಕೇಳಿದಾಗ “ಬಿಜೆಪಿ ಮಾತ್ರವೇ ಎಲ್ಜೆಪಿ ಪಾತ್ರದ ಬಗ್ಗೆ ನೋಡಲು ಸಾಧ್ಯ” ಎಂದು ಉತ್ತರಿಸಿ ತಪ್ಪಿಸಿಕೊಂಡರು.
ತದ್ವಿರುದ್ಧವಾಗಿ ಒವೈಸಿಯವರ ಪಕ್ಷ ಕೇವಲ 1.24 ಶೇ. ಮತ ಪಡೆದು 5 ಸೀಟುಗಳನ್ನು ಗೆದ್ದಿರುವುದು ಎನ್ ಡಿ ಎ ಗೆಲುವಿನಲ್ಲಿ ಅದರ ಪಾತ್ರ ಏನು ಎಂಬುದರತ್ತ ಬೊಟ್ಟುಮಾಡುತ್ತದೆ. ಸ್ವತಃ ಪ್ರಧಾನಿಗಳ ನೇತೃತ್ವದಲ್ಲಿ ನಡೆದ ಕೋಮುಧ್ರುವೀಕರಣದ ಪ್ರಯತ್ನಕ್ಕೆ ಈ ಪಕ್ಷದ ಕೊಡುಗೆ ಎಷ್ಟು ಎಂಬುದರ ವಿಶ್ಲೇಷಣೆಯೂ ನಡೆಯಬೇಕಾಗಿದೆ.
ಇನ್ನು ಮಹಾಘಟಬಂಧನ್ನಲ್ಲಿ 70 ಸ್ಥಾನಗಳನ್ನು ಕಾದಾಡಿ ಪಡೆದ ಕಾಂಗ್ರೆಸ್ ಪಕ್ಷ ಕೇವಲ 19ನ್ನು ಮಾತ್ರ ಗೆಲ್ಲಲು ಸಾಧ್ಯವಾಗಿರುವುದು ಮಹಾಘಟಬಂಧನ್ ಬಹುಮತ ಪಡೆಯದಂತೆ ತಡೆಯಲು ಕಾರಣವಾಗಿದೆ ಎಂದು ಆ ಪಕ್ಷದ ಹಿರಿಯ ಮುಖಂಡ ತಾರೀಕ್ ಅನ್ವರ್ ಅವರೇ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಎನ್ಡಿಎ ಮೋಸದಿಂದ ಗೆದ್ದಿದೆ: ತೇಜಸ್ವಿ ಯಾದವ್
ನವೆಂಬರ್ 10 ರಂದು ದಿನವಿಡೀ ಎರಡು ಮೈತ್ರಿಕೂಟಗಳ ನಡುವೆ ಕಾಣ ಬಂದ ಪೈಪೋಟಿ ಕೊನೆಗೂ ಎನ್ಡಿ ಎ ಪರವಾಯಿತು. ಆದರೆ ಇದು ಕೊನೆಯ ಹಂತದ ಮತ ಎಣಿಕೆಯ ಬಗ್ಗೆ ಹಲವು ಪ್ರಶ್ನೆಗಳು ಎತ್ತಿದೆ. ಕನಿಷ್ಟ 10 ಸೀಟುಗಳಲ್ಲಿ ಮತಗಳ ಅಂತರ ತೀರ ಕಡಿಮೆಯಿದ್ದಲ್ಲಿ ಅವನ್ನು ಎನ್ಡಿಎ ಪರವಾಗಿ ‘ಮ್ಯಾನೇಜ್ʼ ಮಾಡಲಾಯಿತು ಎಂಬ ಆಪಾದನೆಗಳಿವೆ. ಮಹಾಘಟಬಂಧನ್ ಪಕ್ಷಗಳು ಈ ಕುರಿತು ಎತ್ತಿರುವ ಆಕ್ಷೇಪಗಳನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ.
ಆರ್ಜೆಡಿ ಮತ್ತು ಮಹಾಘಟಬಂಧನ್ ಮುಖ್ಯಸ್ಥರಾದ ತೇಜಸ್ವಿ ಯಾದವ್ ನವೆಂಬರ್ 12ರಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡುತ್ತ ಎನ್ಡಿಎ ಮೋಸದಿಂದ ಗೆದ್ದಿದೆ ಎಂದಿದ್ದಾರೆ. ತಮ್ಮ ಮೈತ್ರಿಕೂಟದ ಅಭ್ಯರ್ಥಿಗಳು 200ಕ್ಕಿಂತ ಕಡಿಮೆ ಮತಗಳಲ್ಲಿ ಸೋತಿರುವ 20 ಸೀಟುಗಳ ಅಂಚೆ ಮತಪತ್ರಗಳ ಎಣಿಕೆಯ ವೀಡಿಯೋಗಳನ್ನು ಮತ್ತು ದಸ್ತಾವೇಜುಗಳನ್ನು ಬಿಡುಗಡೆ ಮಾಡಬೇಕು ಎಂದು ತೇಜಸ್ವಿ ಚುನಾವಣಾ ಆಯೋಗವನ್ನು ಕೇಳಿದ್ದಾರೆ.
ʼʼಮತ ಎಣಿಕೆಯಲ್ಲಿ ಅನಿಯಮಿತತೆಗಳಿಂದಾಗಿ ನಾವು 20 ಸೀಟುಗಳನ್ನು ಕಳೆದುಕೊಂಡಿದ್ದೇವೆ. ಈ ಬಗ್ಗೆ ನಮ್ಮ ಅಭ್ಯರ್ಥಿಗಳು ಎತ್ತಿದ ಪ್ರಶ್ನೆಗಳನ್ನು ಚುನಾವಣಾ ಆಯೋಗ ಕಿವಿಗೆ ಹಾಕಿಕೊಳ್ಳಲಿಲ್ಲ… ನಾವು 130 ಸ್ಥಾನಗಳಲ್ಲಿ ಗೆದ್ದು ಜನಾದೇಶ ಪಡೆದಿದ್ದೇವೆ, ಆದರೆ ಚುನಾವಣಾ ಆಯೋಗ ಫಲಿತಾಂಶಗಳನ್ನು ಎನ್ಡಿಎ ಪರವಾಗಿ ಘೋಷಿಸಿದೆ” ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಅಂಚೆ ಮತಪತ್ರಗಳನ್ನು ರಾತ್ರಿಯಲ್ಲಿ ಎಣಿಸಿದ್ದೇಕೆ, ಈ ಕುರಿತ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬ ಸರಳ ಪ್ರಶ್ನೆಗೆ ಆಯೋಗ ಉತ್ತರ ಕೊಡಲಿ ಎಂದು ಅವರು ಸವಾಲು ಹಾಕಿದರು.
ಅನು: ಟಿ. ಸುರೇಂದ್ರ ರಾವ್