ಬಿಹಾರ: ಅಂಚೆಮತಗಳ ಎಣಿಕೆ ಮೇಲೆ ತೇಜಸ್ವಿ ಅನುಮಾನ; ಕಾನೂನು ಹೋರಾಟಕ್ಕೂ ಚಿಂತನೆ

  • ವಿಧಾನಸಭಾ ಚುನಾವಣೆಯಲ್ಲಿ ಮೋಸದ ಮೂಲಕ ಎನ್‌ಡಿಎ ಗೆದ್ದಿದೆ:

ಪಟ್ನಾ: ಆರ್‌ಜೆಡಿ (ರಾಷ್ಟ್ರೀಯ ಜನತಾದಳ) ನಾಯಕ ತೇಜಸ್ವಿ ಯಾದವ್ ಅವರು ಗುರುವಾರ ಘಟಬಂಧನದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ ಅವರು ಎನ್‌ಡಿಎ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ವಿಧಾನಸಭಾ ಚುನಾವಣೆಯಲ್ಲಿ ಮೋಸದ ಮೂಲಕ ಎನ್‌ಡಿಎ ಗೆದ್ದಿದೆ,’ ಎಂದು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿ ಯಾದವ್, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಗೇಲಿ ಮಾಡಿದರು. ‘ಅವರು ತಮ್ಮ ಆತ್ಮಸಾಕ್ಷಿಗೆ ಕಿವಿಡಿಗೊಡುತ್ತಾರೆಯೇ? ಕುರ್ಚಿ ಮೇಲಿನ ತಮ್ಮ ವ್ಯಾಮೋಹ ಬಿಟ್ಟುಕೊಡುತ್ತಾರೆಯೇ?’ ಎನ್ನುವ ಮೂಲಕ ಆಶ್ಚರ್ಯ ವ್ಯಕ್ತಪಡಿಸಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತೇಜಸ್ವಿ ಯಾದವ್‌ ಅವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ನಿತೀಶ್‌ ಕುಮಾರ್‌ ಅವರು 2017 ರಲ್ಲಿ ಮಹಾಘಟಬಂಧನವನ್ನು ತೊರೆದು ಎನ್‌ಡಿಎ ಸೇರಿಕೊಂಡಿದ್ದರು. ಆಗ ಮಾತನಾಡಿದ್ದ ನಿತೀಶ್‌ ಕುಮಾರ್ ‘ಆತ್ಮಸಾಕ್ಷಿಗೆ (ಆತ್ಮ ಕಿ ಆವಾಜ್) ಕಿವಿಗೊಟ್ಟು ಮೈತ್ರಿಯಿಂದ ಹೊರಬಂದಿದ್ದೇನೆ,’ ಎಂದು ಹೇಳಿಕೊಂಡಿದ್ದರು. ಅಂದು ನಿತೀಶ್‌ ಹೇಳಿದ್ದ ಮಾತನ್ನೇ ಬಳಸಿಕೊಂಡು ತೇಜಸ್ವಿ ಯಾದವ್‌ ಇಂದು ಟೀಕೆ ಮಾಡಿದರು.

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್‌ ಕುಮಾರ್‌ ಅವರ ಜೆಡಿಯು ಸ್ಥಾನ ನಷ್ಟ ಅನುಭವಿಸಿದ್ದು, ಮೂರನೇ ಸ್ಥಾನಕ್ಕೆ ತೃಪ್ತಿ ಹೊಂದಿದೆ. ಮುಂದುವರಿದು ಮಾತನಾಡಿರುವ ತೇಜಸ್ವಿ ಯಾದವ್‌, ‘ಇದು ನಿಸ್ಸಂದೇಹವಾಗಿ ಬದಲಾವಣೆ ಪರವಾಗಿ ವ್ಯಕ್ತವಾದ ಜನಾದೇಶ. ಆದರೆ, ಎನ್‌ಡಿಎ ಹಣಬಲ, ತೋಳ್ಬಲದ ಮೂಲಕ ವಂಚನೆಯಿಂದ ಗೆದ್ದಿದೆ’ ಎಂದು ಅವರು ಆರೋಪಿಸಿದರು.

ಮಹಾಘಟಬಂಧನವು ತನ್ನದೇ ಸರ್ಕಾರ ರಚಿಸಲು ಸಂಖ್ಯೆಗಳನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಜನಾದೇಶವನ್ನು ನೀಡಿದ ಜನರ ಬಳಿಗೇ ಹೋಗುತ್ತೇವೆ. ಅವರು ಅಂತಹ ಆಶಯವನ್ನು ವ್ಯಕ್ತಪಡಿಸಿದರೆ ನಾವು ಅದರಂತೆ ಕಾರ್ಯನಿರ್ವಹಿಸುತ್ತೇವೆ’ ಎಂದು ಹೇಳಿದರು.

ಚುನಾವಣಾ ದತ್ತಾಂಶವನ್ನು ಉಲ್ಲೇಖಿಸಿ ಮಾತನಾಡಿದ ತೇಜಸ್ವಿ, ಎನ್‌ಡಿಎ ಮೈತ್ರಿಕೂಟವು ಮಹಾಘಟಬಂಧನಕ್ಕಿಂತಲೂ ಕೇವಲ 12,270 ಹೆಚ್ಚುವರಿ ಮತಗಳನ್ನಷ್ಟೇ ಪಡೆದುಕೊಂಡಿದೆ. ‘ನಮಗಿಂತ 15 ಸ್ಥಾನಗಳನ್ನು ಪಡೆದಿರುವ ಅವರದ್ದು ಅದು ಹೇಗೆ ವಿಜಯವಾಗುತ್ತದೆ? ಮತಗಳ ಎಣಿಕೆ ನ್ಯಾಯಯುತವಾಗಿದ್ದಿದ್ದರೆ ನಾವು 130 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿರುತ್ತಿದ್ದೆವು. ಬಿಹಾರದಲ್ಲಿ ಮಹಾಘಟಬಂಧನವು 110 ಸ್ಥಾನಗಳನ್ನು ಗೆದ್ದಿದೆ. ಸರ್ಕಾರ ರಚಿಸಲು ಅಗತ್ಯವಿರುವ 122 ಸ್ಥಾನಗಳಿಗಿಂತ 12 ಸ್ಥಾನ ಕಡಿಮೆ ಶಾಸಕರು ಕೂಟದಲ್ಲಿ ಗೆದ್ದಿದ್ದಾರೆ. ಇನ್ನೊಂದೆಡೆ ಎನ್‌ಡಿಎ 125 ಸ್ಥಾನಗಳನ್ನು ಗೆದ್ದಿದೆ. ಮೈತ್ರಿ ಕೂಟವೂ ಚುನಾವಣಾ ಆಯೋಗಕ್ಕೆ ಪತ್ರ ಬರೆದು ‘ವ್ಯತ್ಯಾಸಗಳನ್ನು’ ಎತ್ತಿ ತೋರಿಸುವ ಪ್ರಯತ್ನ ಮಾಡಲಿದೆ ಎಂದೂ ಅವರು ಹೇಳಿದರು.

‘ಅನೇಕ ಕ್ಷೇತ್ರಗಳಲ್ಲಿ, ಅಂಚೆ ಮತಗಳನ್ನು ಎಲೆಕ್ಟ್ರಾನಿಕ್‌ ಮತ ಎಣಿಕೆ ನಂತರ ಮಾಡಲಾಗಿದೆ. ನಿಯಮಗಳ ಪ್ರಕಾರ ಅದನ್ನು ಮೊದಲೇ ಎಣಿಕೆ ಮಾಡಬೇಕು. ಇದಲ್ಲದೆ, ಕೆಲವು ಕ್ಷೇತ್ರಗಳಲ್ಲಿ ಒಟ್ಟಾರೆ 900 ಅಂಚೆ ಮತಪತ್ರಗಳನ್ನು ಅಸಿಂಧುಗೊಳಿಸಲಾಗಿದೆ,’ ಎಂದು ಅವರು ಮತ ಎಣಿಕೆ ಪ್ರಕ್ರಿಯೆ ಕುರಿತು ಅನುಮಾನ ವ್ಯಕ್ತಪಡಿಸಿದರು.

‘ಒಂದು ಶ್ರೇಣಿ, ಒಂದು ಪಿಂಚಣಿ ಯೋಜನೆ ಕುರಿತ ನಮ್ಮ ಬದ್ಧತೆಯಿಂದ ಪ್ರೇರಣೆಗೊಂಡ ದೊಡ್ಡ ಪ್ರಮಾಣದ ಸೈನಿಕರಿಂದ ನಮಗೆ ದೊರೆತ ಬೆಂಬಲವನ್ನು ತಲೆಕೆಳಗು ಮಾಡಲು ಹೀಗೆ ಮಾಡಲಾಗಿದೆ ಎಂಬ ಗುಮಾನಿ ನಮಗೆ ಇದೆ. ಮತ ಪತ್ರಗಳ ಎಣಿಕೆ ವಿಚಾರದಲ್ಲಿ ನಮಗೆ ಎಲ್ಲಿ ಅನುಮಾನವಿದೆಯೋ ಆ ಎಲ್ಲಾ ಕ್ಷೇತ್ರಗಳಲ್ಲಿ ಅಂಚೆ ಮತಗಳ ಮರು ಎಣಿಕೆಗೆ ನಾವು ಒತ್ತಾಯಿಸುತ್ತೇವೆ ಮತ್ತು ಪ್ರಕ್ರಿಯೆಯನ್ನು ಚಿತ್ರೀಕರಿಸುವಂತೆ ಆಗ್ರಹಿಸುತ್ತೇವೆ,’ ಎಂದು ಯಾದವ್ ಪ್ರತಿಪಾದಿಸಿದರು.

ಮತ ಎಣಿಕೆ ವೇಳೆ ಅಧಿಕಾರಿಗಳು ಬಿಜೆಪಿಯ \”ಪ್ರಕೋಶ\” (ಕೋಶ)ದಂತೆ ವರ್ತಿಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಆರೋಪಿಸಿದ್ದಾರೆ. ‘ಒಂದು ವೇಳೆ ಚುನಾವಣೆ ಆಯೋಗ ಸಮಸ್ಯೆಯನ್ನು ಬಗೆಹರಿಸದೇ ಹೋದರೆ, ಕಾನೂನು ಹೋರಾಟ ನಡೆಸುವಿರೇ?’ ಎಂಬ ಪ್ರಶ್ನೆಗೆ ಉತ್ತರಿಸಿರುವ ತೇಜಸ್ವಿ, ಸಮಸ್ಯೆ ಬಗೆಹರಿಯದಿದ್ದರೆ, ಕಾನೂನು ಮಾರ್ಗಗಳನ್ನು ಹುಡುಕುವುದಾಗಿ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *