ಹಾಸನ: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಡಿ ದೂರು ದಾಖಲಾಗಿ ರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸ ಬೇಕು ಎಂದು ಆಗ್ರಹಿಸಿ ಇದೇ ತಿಂಗಳ 30 ರಂದು ಬೃಹತ್ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಇಂದು ಜಿಲ್ಲಾ ಕಸಾಪ ಭವನದಲ್ಲಿ ನಡೆದ ರಾಜ್ಯಮಟ್ಟದ ಸಮಾಲೋಚನೆ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕರ್ನಾಟಕ ರಾಜ್ಯ ಜನಪರ ಚಳವಳಿಗಳ ನೇತೃತ್ವದಲ್ಲಿ ಹೋರಾಟಕ್ಕೆ ಕರೆ ನೀಡಲಾಯಿತು.
ರಾಜ್ಯಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿ ಬೃಹತ್ ಪ್ರತಿಭಟನೆ ನಡೆಸಬೇಕು ಎಂದು ಕರೆ ಕೊಡಲಾಯಿತು. ವಿವಿಧ ಜನಪರ, ರೈತ, ಕಾರ್ಮಿಕ, ಯುವಜನ, ಮಹಿಳಾ, ವಿದ್ಯಾರ್ಥಿ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿದವು.
ಪ್ರಜ್ವಲ್ ರೇವಣ್ಣ ಬಂಧನ ಆಗಬೇಕು. ಜೊತೆಯಲ್ಲೇ ಸಂತ್ರಸ್ತ ಮಹಿಳೆಯರ ಘನತೆ ರಕ್ಷಣೆ ಆಗಬೇಕು. ಇದಕ್ಕಾಗಿ ರಾಜ್ಯವ್ಯಾಪಿ ಬೃಹತ್ ಚಳುವಳಿ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಹತ್ತು ಹಲವು ಸಂಘಟನೆಗಳ ನೂರಾರು ಮುಖಂಡರು, ಹೋರಾಟಗಾರರು, ಚಿಂತಕರು, ಸಾಹಿತಿಗಳು ಭಾಗಿಯಾಗಿದ್ದರು.
ಸಭೆಯಲ್ಲಿ ಮಾತನಾಡಿದ ಸಾಹಿತಿ ರೂಪ ಹಾಸನ್, ಅಶ್ಲೀಲ ವೀಡಿಯೋ ಸುನಾಮಿ ರೀತಿ ಅಪ್ಪಳಿಸಿದೆ. ಇದೊಂದು ಲೈಂಗಿಕ ಹತ್ಯಾಕಾಂಡ, ಇದರ ಪರಿಣಾಮ ಊಹಿಸಲು ಅಸಾಧ್ಯ, ನೊಂದ ಹೆಣ್ಣು ಮಕ್ಕಳ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದರ ಹಿಂದೆ ಪುರುಷ ರಾಜಕಾರಣ ಅಧೋಗತಿಗೆ ಇಳಿದ ರೀತಿ ತೋರಿಸಿದೆ ಎಂದು ವಿಷಾದಿಸಿದರು.
ಇದೊಂದು ಪುರುಷ ವಿಕೃತಿಯ ಕೃತ್ಯವಾಗಿದೆ ಎಂದು ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಕೂಡಲೇ ಸಂಸದ ಪ್ರಜ್ವಲ್ ಬಂಧನ ಆಗಬೇಕಿದೆ. ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡಲು ಕ್ರಮ ಕೈಗೊಳ್ಳಬೇಕಿದೆ ಎಂದರು.
ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಪ್ರಜ್ವಲ್ ರೇವಣ್ಣ ಅವರನ್ನು ಉಸಿರುಗಟ್ಟಿಸಲು ಸಾಧ್ಯ ಇದೆ. ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡಲು ಕೋರ್ಟ್ ಅನುಮತಿ ಬೇಕಾಗಿಲ್ಲ. ಬ್ರೌನ್ ಕಲರ್‌ನ ಪಾಸ್ ಪೋರ್ಟ್ ರದ್ದು ಮಾಡೋದು ಅತ್ಯಂತ ಸುಲಭ. ಅದನ್ನು ಮಾಡಿದರೆ ಪ್ರಜ್ವಲ್ ಎಲ್ಲೂ ಓಡಾಡಲು ಆಗಲ್ಲ. ಪ್ರಜ್ವಲ್ ಎಲ್ಲಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆಗೆ ಖಂಡಿತಾ ಗೊತ್ತಿದೆ ಎಂದು ಹೈಕೋರ್ಟ್ ವಕೀಲ ಬಿ.ಟಿ.ವೆಂಕಟೇಶ ಹೇಳಿದರು. ಅವರ ಪಾಸ್ ಪೋರ್ಟ್ ರದ್ದಾದ ಕೂಡಲೇ ಅವರ ಬಂಧನ ಸಾಧ್ಯ ಎಂದರು.
ರೆಡ್ ಕಾರ್ನರ್ ನೋಟಿಸ್ ಕೊಟ್ಟು ವೀಸ ರದ್ದುಪಡಿಸಿ: ಹಿರಿಯ ವಕೀಲರಾದ ವೆಂಕಟೇಶ್ ಮಾತನಾಡಿ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ತನಗಿರುವ ರಾಜಕೀಯ ಅಧಿಕಾರ, ರಾಜ್ಯದ ಪ್ರಮುಖ ಪ್ರಭಾವಿ ರಾಜಕೀಯ ಕುಟುಂಬದ ಹಿನ್ನೆಲೆ ಮತ್ತು ತನಗಿರುವ ಪ್ರಬಲ ಜಾತಿಯ ಹಿನ್ನೆಲೆಯನ್ನು ಬಳಸಿಕೊಂಡು ನೂರಾರ ಮಹಿಳೆಯರ ಮೇಲೆ ಪ್ರಭಾವ ಬೀರಿ ಮತ್ತು ಒತ್ತಡ ಹಾಕಿ ಅವರನ್ನು ತನ್ನ ವಿಕೃತ ಲೈಂಗಿಕ ದಾಹಕ್ಕೆ ಬಳಸಿಕೊಂಡು ಅವರ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ಮತ್ತು ಮಹಿಳೆಯರೊಂದಿಗೆ ನಡೆಸಿರುವ ನಗ್ನ ವೀಡಿಯೋ ಸಂಭಾಷಣೆಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ವಿಡಿಯೋಗಳನ್ನು, ಫೋಟೋಗಳನ್ನು, ವಿಡಿಯೋ ಕಾಲ್ ಸ್ಟೀನ್ ಶಾಟ್‌ಗಳನ್ನು ಸಾವಿರಾರು ಸಂಖ್ಯೆಯಲ್ಲಿ ಶೇಖರಿಸಿಟ್ಟುಕೊಂಡಿರುವ ಪ್ರಕರಣ ಈ ಹಿಂದೆ ಯಾರೂ ಎಲ್ಲಿಯೂ ಕಂಡು ಕೇಳರಿಯದ ಅತ್ಯಂತ ಹೀನ ಮತ್ತು ನೀಚ ಕೃತ್ಯವಾಗಿದೆ ಎಂದರು.
ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರ ವೀಡಿಯೋಗಳು ಮತ್ತು ಚಿತ್ರಗಳನ್ನು ಪೆನ್ ಡ್ರೈವ್ ಮತ್ತು ಸಾಮಾಜಿಕ ಮಾಧ್ಯಮಗಳ ಮುಖಾಂತರ ಸಾರ್ವಜನಿಕವಾಗಿ ಹಂಚುವ ಮೂಲಕ ಮಹಿಳೆಯರ ಘನತೆಯ ಮೇಲೆ ದಾಳಿ ಮಾಡಿದ ವ್ಯಕ್ತಿಗಳ ತ್ವರಿತ ಬಂಧನ, ವಿಚಾರಣೆ ಹಾಗೂ ಶಿಕ್ಷೆಯನ್ನು ಖಾತ್ರಿಗೊಳಿಸಬೇಕು ಹಾಗೂ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರ ಗೌಪ್ಯತೆ ಕಾಪಾಡಿ, ಅವರಿಗೆ ಆಪ್ತ ಸಮಾಲೋಚನೆ, ಸೂಕ್ತ ರಕ್ಷಣೆ, ಪುನರ್ವಸತಿ ಮತ್ತು ಪರಿಹಾರ ನೀಡುವಂತೆ ಒತ್ತಾಯಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಇಂತಹ ನೀಚ ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಈ ಮೊದಲೇ ತಿಳಿದಿದ್ದರೂ ಕೂಡ ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಆತನನ್ನೇ ಮತ್ತೆ ಹಾಸನ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿ ಚುನಾವಣೆ ನಡೆಸಿದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ನಡೆ ತೀವ್ರ ಖಂಡನೀಯವಾದುದು. ಪೆನ್ ಡ್ರೈವ್ ತನ್ನಬಳಿ ಇದೆ ಎಂದು ಹೇಳಿಕೊಂಡಿದ್ದ ಜಿ. ದೇವರಾಜೇಗೌಡ ಮತ್ತು ಪ್ರಜ್ವಲ್ ರೇವಣ್ಣ ಕಾರಿನ ಮಾಜಿ ಚಾಲಕ ಕಾರ್ತಿಕ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಮತ್ತಷ್ಟು ಆಶ್ಲೀಲ ವೀಡಿಯೋಗಳು ಮತ್ತು ಅಶ್ಲೀಲ ಚಿತ್ರಗಳು ಹಂಚಿಕೆಯಾಗದಂತೆ ತಡೆಯುವುದರಲ್ಲಿ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆಯು ಸಂಪೂರ್ಣ ವಿಫಲವಾಗಿದೆ ಎಂದರು.
ರಾಜ್ಯ ಸರ್ಕಾರ ಸಂಸದ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸಬೇಕು. ಈ ಸಂಬಂಧ ಕೂಡಲೇ ರೆಡ್ ಕಾರ್ನರ್ ನೋಟೀಸು ನೀಡಬೇಕು. ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ವೀಸಾವನ್ನು ಕೂಡಲೇ ರದ್ದುಪಡಿಸಿ ಆತ ಜಗತ್ತಿನ ಯಾವುದೇ ದೇಶದಲ್ಲಿದ್ದರೂ ಅಂತರಾಷ್ಟ್ರೀಯ ಪೊಲೀಸರ ಸಹಾಯ ಪಡೆದು ಆತನನ್ನು ಕೂಡಲೇ ಬಂಧಿಸಲು ರಾಜ್ಯ ಸರ್ಕಾರಕ್ಕೆ ಸಹಾಯ ನೀಡಬೇಕು. ಸಂತ್ರಸ್ತ ಮಹಿಳೆಯರ ಲೈಂಗಿಕ ವೀಡಿಯೋಗಳು ಮತ್ತು ಚಿತ್ರಗಳನ್ನು ಸಾರ್ವಜನಿಕರಿಗೆ ಪೆನ್ ಡ್ರೈವ್, ಸಾಮಾಜಿಕ ಮಾಧ್ಯಮ ಮತ್ತಿತರೆ ಸಾಧನಗಳ ಮುಖಾಂತರ ಸಾರ್ವಜನಿಕವಾಗಿ ಹಂಚಲು ಸಂಚು ನಡೆಸಿದ ಹಾಗೂ ಸಾರ್ವಜನಿಕವಾಗಿ ಹಂಚಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಅವರ ಮೇಲೆ ಕಠಿಣ ಕಾನೂನು ಪ್ರಕರಣ ದಾಖಲಿಸಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಎಸ್.ಐ.ಎಲ್. ವರದಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ಮಾತನಾಡಿ,ಪ್ರಜ್ವಲ್ ರೇವಣ್ಣನ ಪ್ರಕರಣದಲ್ಲಿ ಬಿಜೆಪಿಯ ನಡೆ ಹಲವು ಅನುಮಾನಗಳಿಗೆ ಅವಕಾಶ ನೀಡುತ್ತದೆ. ತನ್ನದೇ ಪಕ್ಷದ ಮುಖಂಡ ಪ್ರಜ್ವಲ್ ರೇವಣ್ಣ ಇಂತಹ ಕೃತ್ಯ ನಡೆಸಿರುವುದು ಅಧಿಕೃತವಾಗಿ ತಿಳಿದಿದ್ದರೂ ಕೂಡ ಮೌನವಾಗಿರುವುದನ್ನು ನೋಡಿದರೆ, ಬಿಜೆಪಿಗೆ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯಕ್ಕಿಂತ ಜೆಡಿಎಸ್ ಮೈತ್ರಿಯಿಂದ ಆಗಬಹುದಾದ ರಾಜಕೀಯ ಲಾಭವಷ್ಟೇ ಮುಖ್ಯವಾಗಿರುವುದು ಸ್ಪಷ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿದೇಶದಲ್ಲಿರುವ ಸಂಸದ ಪ್ರಜ್ವಲ್ ಬಂಧಿಸಲು ಕೇಂದ್ರ ಸರ್ಕಾರ ಅನುಸರಿಸಲೇಬೇಕಾದ ರಾಜತಾಂತ್ರಿಕ ಕ್ರಮಗಳನ್ನು ಅನುಸರಿಸದೆ ಕೇವಲ ಆರೋಪ ಪ್ರತ್ಯಾರೋಪದಲ್ಲಿ ತೊಡಗಿರುವುದು ಹಲವು ಅನುಮಾನಗಳಿಗೆ ಅವಕಾಶ ನೀಡುತ್ತದೆ. ಜೆಡಿಎಸ್ ಮತ್ತು ಬಿಜೆಪಿ ಇಡೀ ಪ್ರಕರಣದ ದಿಕ್ಕುತಪ್ಪಿಸಲು ಪ್ರಯತ್ನಿಸುತ್ತಾ ಪ್ರಕರಣವನ್ನು ಸಿಬಿಐಗೆ ವಹಿಸುವ ಕುರಿತು ಒತ್ತಡ ಹೇರುತ್ತಿವೆ. ಕಾಂಗ್ರೆಸ್ ಕೂಡ ಬಿಜೆಪಿ ಮತ್ತು ಜೆಡಿಸ್ ಜೊತೆಗೆ ಕೆಸರೆರಚಾಟದಲ್ಲಿ ತೊಡಗಿದ್ದು ಪ್ರಕರಣದ ಗಂಭೀರತೆಗೆ ಧಕ್ಕೆ ಉಂಟಾಗುತ್ತಿದೆ ಈ ಎಲ್ಲಾ ಬೆಳವಣಿಗೆಗಳಿಂದ ಪ್ರಕರಣದಲ್ಲಿ ಕೇಂದ್ರ ಬಿಂದುವಾಗಿರುವ ದೌರ್ಜನ್ಯಕ್ಕೊಳಗಾಗಿರುವ ನೂರಾರು ಮಹಿಳೆಯರ ವಿಷಯ ಪಕ್ಕಕ್ಕೆ ಸರಿಯುತ್ತಿದೆ ಎಂದು ಆರೋಪಿಸಿದರು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಡಾ. ಮೀನಕ್ಷಿ ಬಾಳಿ ಮಾತನಾಡಿ, ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರಲ್ಲಿ ಜೆಡಿಎಸ್‌ನ ಮಹಿಳಾ ನಾಯಕಿಯರು ಮತ್ತು ಪ್ರಮುಖ ಕಾರ್ಯಕರ್ತೆಯರೂ ಜೊತೆಗೆ ಮಹಿಳಾ ಅಧಿಕಾರಿಗಳು, ನೌಕರರು ಮತ್ತು ವೃತ್ತಿಪರರು ಇರುವುದರಿಂದ ಮುಂದೆ ಮಹಿಳೆಯರು ನೇರವಾಗಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪಾಲ್ಗೊಳ್ಳುವ ಕುರಿತು ಬಹಳ ವ್ಯತಿರಿಕ್ತ ಪರಿಣಾಮ ಬೀರಲಿದೆ ಈ ಕುರಿತೂ ನಾವು ಆಲೋಚಿಸಬೇಕಿದೆ ಎಂದು ಬೇಸರವ್ಯಕ್ತಪಡಿಸಿದರು.
ಪ್ರಾಂತರೈತ ಸಂಘದ ರಾಜ್ಯಾ ಕಾರ್ಯದರ್ಶಿ ಟಿ ಯಶವಂತ್ ಮಾತನಾಡಿ, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೇವೇಗೌಡರ ಮೇಲೆ ಸಿಂಪತಿ ಬರುತ್ತಿದೆ. ಈ ವಯಸ್ಸಿನಲ್ಲಿ ಇಂತಹ ಪರಿಸ್ಥಿತಿ ಎದುರಿಸ ಬೇಕಾಯ್ತಲ್ಲ ಎನ್ನೋ ಮಾತಿದೆ. ದೇವೇಗೌಡರು ಅನುಕಂಪಕ್ಕೆ ಅರ್ಹ ಆಗಬೇಕಾದರೆ ಕೇಂದ್ರಕ್ಕೆ ಪತ್ರ ಬರೆದು ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಪಡಿಸಲಿ ಎಂದರು.
ಸಭೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ ಎಸ್ ವಿಮಲಾ, ಗೌರಮ್ಮ, ಮೈಸೂರು ಪ್ರಗತಿಪರ ಚಿಂತಕರು ಉಗ್ರ ನರಸಿಂಹ ಗೌಡ. ವಕೀಲರಾದ ಅಖಿಲ ವಿದ್ಯಾಸಂದ್ರ, ಮೈತ್ರಿ ಕೃಷ್ಣನ್, ಜನಪರ ಸಂಘಟನೆಗಳ ಜಿಲ್ಲಾಧ್ಯಕ್ಷ ಎಚ್‍ಕೆ ಸಂದೇಶ್, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಮಲ್ಲಪ್ಪ ಎಸ್ ಎನ್, ಎಂ. ಸೋಮಶೇಖರ್, ಗೊರೂರು ರಾಜು, ಮುಬಾಶೀರ್ ಅಹಮದ್, ಹೆಚ್.ಆರ್. ನವೀನ್ ಕುಮಾರ್, ಆರ್.ಪಿ. ವೆಂಕಟೇಶ್ ಮೂರ್ತಿ, ಕೆ. ಈರಪ್ಪ, ಎಂ.ಜಿ. ಪೃಥ್ವಿ, ಶಿವಣ್ಣ, ವಿಜಯಕುಮಾರ್, ಸುವರ್ಣ, ಕೆ ಟಿ ಶಿವಪ್ರಸಾದ್, ಮಧು ಭೂಷಣ್ ವಕೀಲರು. ದಲಿತ ಹಕ್ಕುಗಳ ಸಮಿತಿಯ ಗೋಪಾಲಕೃಷ್ಣ ಹರಳಹಳ್ಳಿ, ಕರ್ನಾಟಕ ಜನಶಕ್ತಿಯ ಮಲ್ಲಿಗೆ, ಮಲ್ನಾಡ್ ಮೆಹಬೂಬ್, ಎಸ್ಎಫ್ಐನ ರಮೇಶ್, ಬಿ.ಎಂ ಸೌಮ್ಯ ಸೇರಿದಂತೆ ಇತರರು ಉಪಸ್ಥಿತರಿದ್ರು.
ಪ್ರತಿಭಟನೆ :ಲೈಂಗಿಕ ಹಗರಣದ ವಾಂಟೆಡ್ ಆರೋಪಿ ಪ್ರಜ್ವಲ್ ರೇವಣ್ಣ ಬಂಧಿಸುವಂತೆ ಒತ್ತಾಯಿಸಿ ರಾಜ್ಯಮಟ್ಟದ ವಿವಿಧ ಸಂಘಟನೆಯ ಪ್ರಮುಖರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಪ್ರಜ್ವಲ್ ರೇವಣ್ಣ ಶೀಘ್ರ ಬಂಧನ ವಾಗಬೇಕು ಎಂದು ಒತ್ತಾಯಿಸಿದರು. ಕನ್ನಡ ಸಾಹಿತ್ಯ ಪರಿಷತ್ ಭವರಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಮಹಾವೀರ ಸರ್ಕಲ್ ಬಳಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.