ವಾಷಿಂಗ್ಟನ್: ಲಾಟ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ ಮತ್ತು ರೊಮೇನಿಯಾದಂತಹ ರಷ್ಯಾದ ಗಡಿಯಲ್ಲಿ 12,000 ಸೈನಿಕರನ್ನು ನಿಯೋಜಿಸಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಶುಕ್ರವಾರ, ಡೆಮಾಕ್ರಟಿಕ್ ಕಾಕಸ್‌ನ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು ಉಕ್ರೇನ್‌ಗೆ ಬೆಂಬಲವನ್ನು ನೀಡುವ ಮೂಲಕ ಯುರೋಪ್‌ನಲ್ಲಿನ ನಮ್ಮ ಮಿತ್ರರಾಷ್ಟ್ರಗಳೊಂದಿಗೆ ನಿಲ್ಲುವುದನ್ನು ಮುಂದುವರಿಸಲಿದ್ದೇವೆ. ಅದಕ್ಕಾಗಿಯೇ ನಾನು, ರಷ್ಯಾದ ಗಡಿಯಲ್ಲಿ ಅಮೆರಿಕದ 12,000 ಯೋಧರನ್ನು ನಿಯೋಜಿಸಿಸಿದ್ದೇನೆ. ನ್ಯಾಟೊ ದೇಶಗಳ ಪ್ರದೇಶಗಳ ರಕ್ಷಣೆಯ ಬಾಧ್ಯತೆ ನಮ್ಮ ಮೇಲಿದೆ. ಆದರೂ ನಾವು ಉಕ್ರೇನ್‌ನಲ್ಲಿ ಮೂರನೇ ಮಹಾಯುದ್ಧ ನಡೆಸಲು ಹೋರಾಡುವುದಿಲ್ಲ’ಎಂದು ಹೇಳಿದರು.
ಉಕ್ರೇನ್ ವಿರುದ್ಧ ಕೆಮಿಕಲ್ ಅಸ್ತ್ರ ಪ್ರಯೋಗಿಸಿದರೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ರಷ್ಯಾಕ್ಕೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಎಚ್ಚರಿಕೆ ನೀಡಿದ್ದಾರೆ. ಅವರು ಉಕ್ರೇನ್‌ನಲ್ಲಿ ರಷ್ಯಾದ ವಿರುದ್ಧ ಹೋರಾಡುವುದಿಲ್ಲ. ‘ಉಕ್ರೇನ್‌ನಲ್ಲಿ ನಡೆಯುತ್ತಿರುವುದು ಮೂರನೇ ಮಹಾಯುದ್ಧವಲ್ಲ’ ಎಂದು ಒತ್ತಿ ಹೇಳಿದರು. ‘ನಾಟೊ ಒಕ್ಕೂಟದ ದೇಶಗಳ ಪ್ರತಿ ಇಂಚು ಭೂಮಿಯನ್ನೂ ನಾವು ರಕ್ಷಿಸುತ್ತೇವೆ’ಎಂಬ ಸಂದೇಶ ರವಾನಿಸುವ ಭರವಸೆ ನೀಡಿದರು.
ನ್ಯಾಟೊ, ಉತ್ತರ ಅಮೆರಿಕ ಮತ್ತು ಯುರೋಪಿನ 30 ರಾಷ್ಟ್ರಗಳ ಗುಂಪಾಗಿದೆ. ರಾಜಕೀಯ ಮತ್ತು ಮಿಲಿಟರಿ ವಿಧಾನಗಳ ಮೂಲಕ ಅದರ ಸದಸ್ಯ ರಾಷ್ಟ್ರಗಳ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಖಾತರಿಪಡಿಸುವುದು ನ್ಯಾಟೊ ಉದ್ದೇಶವಾಗಿದೆ.
ನ್ಯಾಟೋ ತನ್ನ ಭೂಪ್ರದೇಶದ ಪ್ರತಿ ಇಂಚು ಕಾಪಾಡಿಕೊಳ್ಳುವ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದ ಜೋ ಬಿಡೆನ್, ಉಕ್ರೇನ್‌ನಲ್ಲಿ ರಷ್ಯಾದ ಗೆಲುವು ಅಸಾಧ್ಯ. ನ್ಯಾಟೋ ಮೈತ್ರಿಯನ್ನು ಮುರಿಯಲು ಪುಟಿನ್ ಅವರ ಪ್ರಯತ್ನಗಳು ಸಂಪೂರ್ಣವಾಗಿ ವಿಫಲವಾಗಿವೆ. ಕೆಲವು ಸರ್ವಾಧಿಕಾರಿಗಳು ದಶದಿಕ್ಕನ್ನು ನಿರ್ಧರಿಸಲು ಜಗತ್ತು ಅನುಮತಿಸುವುದಿಲ್ಲ ಎಂದು ಅಮೇರಿಕ ಅಧ್ಯಕ್ಷ ಹೇಳಿದ್ದಾರೆ.
ಉಕ್ರೇನ್‌ನ ಮೇಲಿನ ಧಾಳಿ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲೆ ಮತ್ತಷ್ಟು ಒತ್ತಡವನ್ನು ಹೆಚ್ಚಿಸುವ ಮೂಲಕ ರಷ್ಯಾದೊಂದಿಗಿನ ಸಾಮಾನ್ಯ ವ್ಯಾಪಾರ ಸಂಬಂಧಗಳನ್ನು ಕೊನೆಗೊಳಿಸಲು ಅಮೇರಿಕಾ ಅಧ್ಯಕ್ಷ ನಿರ್ಧರಿಸಿದರು.
ಫೆಬ್ರವರಿ 24 ರಿಂದ, ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿವೆ. ಉಕ್ರೇನ್‌ನ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ಸ್ವತಂತ್ರ ಪ್ರದೇಶಗಳೆಂದು ಗುರುತಿಸಿದ ಮೂರು ದಿನಗಳ ನಂತರ ಈ ಆಕ್ರಮಣ ಆರಂಭವಾಯಿತು.