ಭೂ ದುರ್ಬಳಕೆ ಆರೋಪ: ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಲೋಕಾಯುಕ್ತಕ್ಕೆ ದೂರು

ಕಲಬುರಗಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಸರ್ಕಾರಿ ಜಮೀನು ಒತ್ತುವರಿ ಆರೋಪದಡಿ ಲೋಕಾಯುಕ್ತಕ್ಕೆ ದೂರು ದಾಖಲಾಗಿದೆ. ಜಿಲ್ಲಾಡಳಿತ ನೀಡಿದ್ದ ಭೂಮಿ ದುರ್ಬಳಕೆ ಮಾಡಿಕೊಂಡ ಆರೋಪ ಇದಾಗಿದ್ದು, ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ​ ಕಾಂಗ್ರೆಸ್‌ ಪಕ್ಷದ ಇಬ್ಬರು ನಾಯಕರ ವಿರುದ್ಧ ದೂರು ದಾಖಲಿಸಿದ್ದಾರೆ.

ಕಲಬುರಗಿ ಲೋಕಾಯುಕ್ತ ಕಚೇರಿಗೆ ದೂರು ನೀಡಲಾಗಿದ್ದು, ನಗರದ ಪೊಲೀಸ್ ಭವನ ಕಟ್ಟಡದ ಪಕ್ಕದಲ್ಲಿ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಸ್ಮಾರಕ ಸಮಿತಿಗೆ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಎಂದು 1981 ಆಗಸ್ಟ್ 6 ರಂದು 36 ಸಾವಿರ ಚದರ ಅಡಿ ವಿಸ್ತೀರ್ಣದ ನಿವೇಶನವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಕಲ್ಯಾಣ ಮಂಟಪ ಸಾರ್ವಜನಿಕ ಬಳಕೆಗೆ ನೀಡದೆ ಅಲ್ಲಿ ಕರ್ನಾಟಕ ಪಿಪಲ್ಸ್ ಎಜುಕೇಶನ್ ಸೊಸೈಟಿ ಕಚೇರಿ ಕಾರ್ಯನಿರ್ವಹಿಸುತ್ತದೆ ಎಂಬ ಆರೋಪವಿದೆ.

ಇದನ್ನು ಓದಿ: ಪತ್ರಕರ್ತರಿಗೆ ಲಂಚ; ಸಿಎಂ, ಮಾಧ್ಯಮ ಸಂಯೋಜಕರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ

ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ಪೀಪಿಲ್ಸ್ ಎಜುಕೇಶನ್ ಸೊಸೈಟಿಯ ಸ್ಥಾಪಕ ಅಧ್ಯಕ್ಷರು. ಸದ್ಯ ಅವರು ಸೊಸೈಟಿಯಲ್ಲಿ ಯಾವುದೇ ಹುದ್ದೆ ಹೊಂದಿಲ್ಲ. ಆದರೆ ಪ್ರಿಯಾಂಕ್ ಖರ್ಗೆ ಅದರ ಸದಸ್ಯರಾಗಿದ್ದು, ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಮಣಿಕಂಠ ರಾಠೋಡ್ ಆರೋಪಿಸಿದ್ದಾರೆ.

ಷರತ್ತಿನ ಪ್ರಕಾರ ಈ ನಿವೇಶನದಲ್ಲಿ ಕಲ್ಯಾಣ ಮಂಪಟ ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಆದರೆ, ತಮ್ಮ ಪ್ರಭಾವ ಮತ್ತು ಅಧಿಕಾರ ದುರುಪಯೋಗ ಮಾಡಿಕೊಂಡು ಪೀಪಲ್ಸ್ ಎಜುಕೇಷನ್ ಸೊಸೈಟಿಯ ಕಚೇರಿಯನ್ನು ತೆರೆಯಲಾಗಿದೆ. ಒತ್ತುವರಿ ಪ್ರದೇಶದ ಸದ್ಯದ ಮಾರುಕಟ್ಟೆ ದರ 50 ಕೋಟಿ ಇದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದೇನೆ ಎಂದು ಮಣಿಕಂಠ ರಾಠೋಡ ತಿಳಿಸಿದ್ದಾರೆ.

ಇದನ್ನು ಓದಿ: ಎಸಿಬಿಗಿಲ್ಲ ಪೊಲೀಸ್ ಠಾಣೆ ಸ್ಥಾನಮಾನ; ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಲು ಹೈಕೋರ್ಟ್ ಆದೇಶ

ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿವೇಶನ ಮಂಜೂರಾಗಿದ್ದ ಅವಧಿಯಲ್ಲಿ ಕಂದಾಯ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಕೋರಿಕೆಯಂತೆ ಅಂದಿನ ರಾಜ್ಯ ಸರ್ಕಾರ ನಿವೇಶನ ಮಂಜೂರು ಮಾಡಿತ್ತು. ಕೆಲವು ವರ್ಷಗಳಿಂದ ಕಲ್ಯಾಣ ಮಂಟಪ ಸಾರ್ವಜನಿಕರ ಬಳಕೆಗೆ ಕಾಯ್ದಿರಿಸಲಾಗುತ್ತಿಲ್ಲ. ಅಲ್ಲಿ ಮದುವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಬದಲಿಗೆ, ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿ(ಕೆಪಿಇಎಸ್) ಕಚೇರಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *