ಗಜೇಂದ್ರಗಡ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ಆರೋಪಿಸಿದ್ದಾರೆ.
ಗಜೇಂದ್ರಗಡದ KPRS ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ, ಅಧಿಕಾರಶಾಹಿಯಲ್ಲಿನ ಭ್ರಷ್ಟಾಚಾರ ಮತ್ತು ಕೃಷಿ ಕ್ಷೇತ್ರಕ್ಕೆ ಹೂಡಿಕೆ ಮಾಡುವುದು ತಿದ್ದುಪಡಿಗೆ ಕಾರಣವಾಗಿದೆ. ಭ್ರಷ್ಟ ಪದ್ಧತಿಯನ್ನು ಹೊಂದಲು ಮತ್ತು ಕೃಷಿ ಸಮುದಾಯವನ್ನು ದುರ್ಬಲಗೊಳಿಸಲು ಸರ್ಕಾರದ ಅಸಮರ್ಥತೆಯನ್ನು ಇದು ಬಹಿರಂಗಪಡಿಸುತ್ತದೆ ಎಂದು ಸರಕಾರದ ನಡೆಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿಯಾಗಿ ಕರ್ನಾಟಕ ಸರ್ಕಾರ ತೆಗೆದುಕೊಂಡ ನಿರ್ಧಾರ ಏಕಪಕ್ಷೀಯವಾಗಿದೆ ಸುಗ್ರಿವಾಜ್ಞೆಯ ಮೂಲಕ ಜಾರಿಗೆ ತರಲು ಹೋರಟಿರುವುದರ ಹಿಂದೆ ಬಂಡವಾಳಶಾಹಿಗಳ ಹಿತಕಾಯುತ್ತಿದೆ.ಇದರಿಂದ ರೈತರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ರೈತ ಪರ ಎನ್ನುವ ಸರ್ಕಾರ ಇದೀಗ ಈ ತಿದ್ದುಪಡಿಯನ್ನು ಜಾರಿಗೆ ತರುವ ಮೂಲಕ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಸರ್ಕಾರದ ವಿರುದ್ದ ಯು. ಬಸವರಾಜ ವಾಗ್ದಾಳಿ ನಡೆಸಿದರು. ನವೆಂಬರ್ ೨೬ ರಂದು ರೈತ -ಕಾರ್ಮಿಕ ನೀತಿಗಳ ವಿರುದ್ಧ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿರುವುದಾಗಿ ತಿಳಿಸಿದರು.
ಕೃಷಿ ಕೂಲಿಕಾರರ ಸಂಘದ ತಾಲೂಕ ಅಧ್ಯಕ್ಷ ಬಾಲು ರಾಠೋಡ ಮಾತನಾಡಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರೈತರ ಮರಣಶಾಸನದಂತಿದೆ ಉಳ್ಳವರು ವಾಮಮಾರ್ಗದ ಮೂಲಕ ಕೃಷಿ ಭೂಮಿಯನ್ನು ಖರೀದಿ ಮಾಡಲು ಈ ತಿದ್ದುಪಡಿ ಅವಕಾಶ ಕಲ್ಪಿಸಿದೆ ಎಂದು ಆರೋಪಿಸಿದರು.
ರೈತ ಮುಖಂಡ ಪೀರು ರಾಠೋಡ, ಎಂ ಎಸ್ ಹಡಪದ, ಮಾರುತಿ ಚಿಟಗಿ, ಶಿವಾನಂದ ಬ್ಲೋಸೆ, ಚಂದ್ರು ರಾಠೋಡ, ಹನಮಂತ ತಾಳಿ, ಶಾಂತಣ್ಣ ಸಜ್ಜನ, ಕನಕಪ್ಪಮಡಿವಾಳ, ಮಾದೇಗೌಡ ಪಾಟೀಲ್, ಮೇಘರಾಜ ಬಾವಿ ಕರಿಯಮ್ಮ ಗುರಿಕಾರ, ಕನಕಮ್ಮ ಮಾದರ, ಅಮರಯ್ಯ ಭೂಸನೂರಮಠ, ಯಮನೂರಪ್ಪ ಹುಲ್ಲಣ್ಣನವರ, ಗಿರೀಜಾ ರಾಠೋಡ, ರವೀಂದ್ರ ಹೊನವಾಡ, ಮೈಬು ಹವಾಲ್ದಾರ್, ಚೆನ್ನಪ್ಪ ಗುಗಲೋತ್ತರ ಇತರರು ಉಪಸ್ಥಿತರಿದ್ದರು