ಕಲಬುರಗಿ: ಭೀಮಾ ನದಿ ತೀರದಲ್ಲಿ ಪ್ರವಾಹದ ಉಂಟಾಗಿದೆ. ಘತ್ತರಗಿ ಹಾಗೂ ಗಾಣಗಾಪುರ ಸೇತುವೆಗಳು ಜಲಾವೃತವಾಗಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಗ್ರಾಮಗಳಲ್ಲಿ ನಡೆದಿದೆ. ಅಫಜಲಪುರ ಹಾಗೂ ಸಿಂದಗಿ ಪಟ್ಟಣಕ್ಕೆ ಸಂಪರ್ಕ ಕಡಿತವಾಗಿದ್ದು, ಮಹಾರಾಷ್ಟ್ರದಿಂದ ನದಿಗೆ ಭಾರಿ ನೀರು ಹರಿದು ಬರುತ್ತಿದೆ.
ಸೊನ್ನ ಬ್ಯಾರೇಜ್ ನಿಂದ ಭೀಮಾ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನದಿ ಪಾತ್ರದಲ್ಲಿ ಪ್ರವಾಹ ಆತಂಕ ಎದುರಾಗಿದೆ. ಅಧಿಕ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವುದರಿಂದ ಅನೇಕ ಗ್ರಾಮಗಳಿಗೆ ನೀರು ನುಗ್ಗಲಿದೆ. ಜಿಲ್ಲೆಯ ಅಫಜಲಪುರ, ಜೇವರ್ಗಿ, ಚಿತ್ತಾಪುರ ತಾಲೂಕಿನ ಅನೇಕ ಗ್ರಾಮದ ಜನರಿಗೆ ಆತಂಕ ಉಂಟಾಗಿದೆ. ನದಿ ಸಮೀಪ ಹೋಗದಂತೆ ಜನರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಮಳೆಯಿಂದ ಮನೆ ಗೋಡೆ ಕುಸಿದು ಮಹಿಳೆಗೆ ಗಂಭೀರ ಗಾಯವಾಗಿರುವಂತಹ ಘಟನೆ ಯಡ್ರಾಮಿ ತಾಲೂಕಿನ ತೆಲಗಬಾಳ ಗ್ರಾಮದಲ್ಲಿ ನಡೆದಿದೆ. ರಾತ್ರಿ ಸುರಿದ ಮಳೆಯಿಂದಾಗಿ ಏಕಾಏಕಿ ಮನೆ ಗೋಡೆ, ಮೇಲ್ಚಾವಣಿ ಕುಸಿದುಬಿದ್ದಿದೆ. ಮಹಾಂತೇಶ್ ಸಜ್ಜನ್ ಎಂಬುವರಿಗೆ ಸೇರಿದ ಮನೆಯಾಗಿದ್ದು, ಮನೆಯಲ್ಲಿ ಶಿಲ್ಪಾ ಎಂಬುವರಿಗೆ ಗಾಯವಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೇಲ್ಚಾವಣಿ ಕುಸಿಯುತ್ತಿದ್ದಂತೆ ತಕ್ಷಣ ಕುಟುಂಬಸ್ಥರು ಹೊರಬಂದಿದ್ದಾರೆ.