ಮುಂಬಯಿ: 2018ರ ಭೀಮಾ ಕೋರೆಗಾಂವ್ ಪ್ರಕರಣದ ಇಬ್ಬರು ಕಿರಿಯ ಆರೋಪಿಗಳು ಜಾಮೀನಿಗಾಗಿ ಮುಂಬೈ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪ್ರಕರಣದ ಇಬ್ಬರು ಕಿರಿಯ ಆರೋಪಿಗಳಾದ ಮಹೇಶ್ ರಾವುತ್ ಮತ್ತು ಜ್ಯೋತಿ ಜಗತಾಪ್ ಜಾಮೀನು ಕೋರಿ ಮುಂಬೈ ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಜ್ಯೋತಿ ಜಗತಾಪ್ ಅವರನ್ನು ಸೆಪ್ಟೆಂಬರ್ 8, 2020 ರಂದು ಬಂಧಿಸಲಾಗಿತ್ತು. ಅವರ ಮೇಲೆ ಅಕ್ಟೋಬರ್ 9, 2020ರಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಮಿಲಿಂದ್ ತೇಲ್ತುಂಬ್ಡೆ (ನವೆಂಬರ್ 13ರಂದು ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತರಾದ ನಕ್ಸಲ್ ನಾಯಕ) ಅವರನ್ನು ಜ್ಯೋತಿ ಕೊರ್ಚಿ ಎಂಬ ಸ್ಥಳದಲ್ಲಿ ಭೇಟಿಯಾಗಿ ಶಸ್ತ್ರಾಸ್ತ್ರ , ಸ್ಫೋಟಕಗಳ ಬಳಕೆ ಹಾಗೂ ದೈಹಿಕ ಚಟುವಟಿಕೆಗಳ ಬಳಕೆಗೆ ಸಂಬಂಧಿಸಿದ ತರಬೇತಿ ಪಡೆದಿದ್ದರು ಎಂದು ಎನ್‌ಐಎ ಆರೋಪಿಸಿತ್ತು.
ಸರ್ಕಾರದ ವಿರುದ್ಧ ದ್ವೇಷ ಸೃಷ್ಟಿಸುವ ಉದ್ದೇಶದಿಂದ ದಲಿತರು ಮತ್ತಿತರ ಸಂಘಟನೆಗಳ ಬೃಹತ್ ಸಾರ್ವಜನಿಕ ಗುಂಪನ್ನು ಒಗ್ಗೂಡಿಸಲು ಯತ್ನಿಸಿದ್ದ ಎಲ್ಗಾರ್ ಪರಿಷತ್ ಸಂಘಟಕರ ಸಭೆಗಳಲ್ಲಿ ಜ್ಯೋತಿ ಭಾಗವಹಿಸಿದ್ದರು ಎಂಬ ಆರೋಪವನ್ನು ಹೊರಿಸಲಾಗಿದೆ.
ಜ್ಯೋತಿ ಅವರು ಕಬೀರ್ ಕಲಾ ಮಂಚ್‌ನ (ಕೆಕೆಎಂ) ಸದಸ್ಯರಾಗಿದ್ದರು, ಇದು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ನಿಷೇಧಿತ ಸಂಘಟನೆ ಎಂಬ ಆರೋಪವಿದೆ. 2002ರ ಗುಜರಾತ್ ಗಲಭೆಯ ನಂತರ ಸಂಗೀತ ಕವನಗಳ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಈ ಸಾಂಸ್ಕೃತಿಕ ಗುಂಪು ರಚನೆಯಾಗಿತ್ತು.
ತನ್ನ ವಿರುದ್ಧ ಎಂಟು ದಿನ ತಡವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಆರೋಪಿಯಾಗಿದ್ದರೂ ಎರಡು ವರ್ಷಗಳಿಂದ ತನ್ನನ್ನು ಬಂಧಿಸಿಲ್ಲ. ಆರಂಭದಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದ ಪುಣೆ ಪೊಲೀಸರು ತನ್ನ ವಿರುದ್ಧ ಒಂದೇ ಒಂದು ಆರೋಪಪಟ್ಟಿ ಸಲ್ಲಿಸಿರಲಿಲ್ಲ ಎಂದು ಜ್ಯೋತಿ ವಾದಿಸಿದ್ದಾರೆ.
ವಿಶೇಷ ನ್ಯಾಯಾಲಯದಲ್ಲಿ ರಾವುತ್ ಅವರ ಜಾಮೀನು ಅರ್ಜಿಯನ್ನೂ ಆಲಿಸಿತು. ರಾವುತ್ ಪರವಾಗಿ ವಕೀಲ ವಿಜಯ್ ಹಿರೇಮಠ್ ವಾದ ಮಂಡಿಸಿದರು. ಎನ್‌ಐಎ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕಾಶ್ ಶೆಟ್ಟಿ ಅವರು ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದರು. ವಾದ ಆಲಿಸಿದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತು.