ಹಾಸನ: ಸರ್ಕಾರಿ ಬಸ್ಸು, ಟೆಂಪೋ ಟ್ರಾವೆಲರ್, ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿದ್ದು ನಾಲ್ವರು ಮಕ್ಕಳು ಸೇರಿದಂತೆ 9 ಜನರು ಮರಣ ಹೊಂದಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಣಾವರ ಹೋಬಳಿಯ ಹಳ್ಳಿಕೆರೆ ಗ್ರಾಮದ ಬಳಿ ಕಳೆದ ತಡರಾತ್ರಿ ನಡೆದಿದೆ.
ಧರ್ಮಸ್ಥಳದ ಮಂಜುನಾಥೇಶ್ವರ, ಕುಕ್ಕೆ ಕ್ಷೇತ್ರದ ಸುಬ್ರಹ್ಮಣ್ಯ ಹಾಗೂ ಹಾಸನದ ಹಾಸನಾಂಬೆಯ ದರ್ಶನ, ಪೂಜೆಯ ನಂತರ ಮನೆಗೆ ಹಿಂದಿರುಗಬೇಕಿದ್ದವರು ಬಾರದ ಲೋಕಕ್ಕೆ ತೆರಳಿದ್ದಾರೆ. ಒಂದು ದೊಡ್ಡ ಕುಟುಂಬವೇ ಹೀಗೆ ಹಠಾತ್ ಎಂದು ಕಣ್ಮರೆಯಾಗಿರುವುದು ಸಂಬಂಧಿಕರು, ಗೆಳೆಯರು, ಗ್ರಾಮಸ್ಥರಲ್ಲಿ ಆಘಾತ ಉಂಟಾಗಿದೆ.
ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಘೋರ ದುರಂತ ಸಂಭವಿಸಿದ್ದು, ಲಾರಿ ಬಸ್ ಮಧ್ಯೆ ಸಿಲುಕಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಟೆಂಪೋ ಟ್ರಾವೆಲರ್ ವಾಹನದಲ್ಲಿ 14 ಮಂದಿ ತೆರಳಿದ್ದರು. ಅಪಘಾತದಿಂದ ಸ್ಥಳದಲ್ಲಿಯೇ ಐವರು ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಅರಸೀಕೆರೆ ತಾಲೂಕಿನ ಬಾಣವಾರ ಗ್ರಾಮದವರಾಗಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರು 50 ವರ್ಷದ ಲೀಲಾವತಿ, 33 ವರ್ಷದ ಚೈತ್ರಾ, 10 ವರ್ಷದ ಸಮರ್ಥ್, 12 ವರ್ಷದ ದೀಪ್ತಿ, 10 ವರ್ಷದ ತನ್ಮಯಿ, 2 ವರ್ಷದ ಮಗು ಧ್ರುವ, 20 ವರ್ಷದ ವಂದನಾ, 60 ವರ್ಷದ ದೊಡ್ಡಯ್ಯ ಮತ್ತು 50 ವರ್ಷದ ಭಾರತಿ ಎಂದು ಗುರುತಿಸಲಾಗಿದೆ. ಮೃತರು ಟೆಂಪೋ ಟ್ರಾವಲರ್ ನಲ್ಲಿ ಪ್ರಯಾಣಿಸುತ್ತಿದ್ದರು.
ಮೃತ ಪಟ್ಟವರು, ಐದಾರು ಕಿಲೋಮೀಟರ್ ಕ್ರಮಿಸಿದ್ದರೆ ತಮ್ಮ ಊರು ತಲುಪುತ್ತಿದ್ದರು. ಅಷ್ಟರಲ್ಲಿ ಅಪಘಾತ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟ ಹೆಚ್ಟಾಗುವ ಸಾಧ್ಯತೆಯಿದೆ. ಗಾಯಾಳುಗಳನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಬಾಣಾವರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭೀಕರ ಅಪಘಾತದಲ್ಲಿ 10 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಚಿಂತಾಜನವಾಗಿದೆ ಎನ್ನಲಾಗಿದೆ. ಗಾಯಾಳುಗಳು ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಇದ್ದವರು ಎನ್ನಲಾಗಿದೆ. ಸಾರಿಗೆ ಬಸ್ಸಿನ ಚಾಲಕನೂ ಗಾಯಗೊಂಡಿದ್ದು, ಹಾಲಿನ ಟ್ಯಾಂಕರ್ ಚಾಲಕ ಘಟನೆ ನಡೆದ ಸ್ಥಳದಿಂದ ಪರಾರಿಯಾಗಿದ್ದಾನೆ. ಹಾಲಿನ ಟ್ಯಾಂಕರ್ ಚಾಲನ ನಿರ್ಲಕ್ಷ್ಯತನವೇ ಅಪಘಾತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಅಪಘಾತ ಸಂಭವಿಸಿದ್ದ ಸ್ಥಳವು ಚತುಷ್ಪಥ ರಸ್ತೆಯಾಗಿದೆ. ವಿರುದ್ಧ ದಿಕ್ಕಿನಲ್ಲಿ ಬಂದ ಹಾಲಿನ ಟ್ಯಾಂಕರ್ ಟೆಂಪೋ ಟ್ರಾವೆಲರ್ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಏಕಮುಖ ಸಂಚಾರ ಮಾಡಲಾಗಿತ್ತು. ಆದರೆ ಕಾಮಗಾರಿ ಕೈಗೊಳ್ಳುತ್ತಿರುವ ಬಗ್ಗೆ ಸೂಚನಾ ಫಲಕವನ್ನು ಹಾಕಿರಲಿಲ್ಲ. ಪರಿಣಾಮ ಏಕ ಮುಖ ಸಂಚಾರ ರಸ್ತೆಯಲ್ಲಿ ಹಾಲಿನ ಟ್ಯಾಂಕರ್ ನುಗ್ಗಿ ಬಂತು. ದಿಢೀರ್ ಎಂದು ಎದುರಾದ ವಾಹನ ಟೆಂಪೋ ಟ್ರಾವೆಲರ್ ಚಾಲಕನಿಗೆ ಗೊತ್ತಾಗಲಿಲ್ಲ. ಈ ವೇಳೆ ರಸ್ತೆ ಮೇಲೆ ಕೆಎಸ್ಆರ್ಟಿಸಿ ಬಸ್ಸು ಸಂಚರಿಸುತ್ತಿತ್ತು. ಕೊನೆ ಕ್ಷಣದಲ್ಲಿ ಎದುರಿಗೆ ಬರುತ್ತಿದ್ದ ಟ್ಯಾಂಕರ್ ನೋಡಿದ ತಕ್ಷಣ ಟೆಂಪೋ ಟ್ರಾವೆಲರ್ ಚಾಲಕ ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆ ಸರ್ಕಾರಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಬಳಿಕ ಎದುರಿನಿಂದ ಬರುತ್ತಿದ್ದ ಟ್ಯಾಂಕರ್ ಡಿಕ್ಕಿಯಾಗಿದೆ.
ಮುಖ್ಯಮಂತ್ರಿ ಸಂತಾಪ
ಅಪಘಾತದಲ್ಲಿ ಸಾವಿಗೀಡಾಗಿದ್ದನ್ನು ಕೇಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತರಾಗಿರುವುದು ತೀವ್ರ ದುಃಖದಾಯಕ. ಮೃತರ ಆತ್ಮಗಳಿಗೆ ಶಾಂತಿಯನ್ನು ಕೋರುತ್ತೇನೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು. ಗಾಯಾಳುಗಳ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮೊದಲಾದವರು ಕಂಬನಿ ಮಿಡಿದಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ‘ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ. ಅಪಘಾತದಲ್ಲಿ ಗಾಯಗೊಂಡವರನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ‘ಜಿಲ್ಲಾಧಿಕಾರಿಗಳು ಆಸ್ಪತ್ರೆಯಲ್ಲಿರುವ ಮೃತದೇಹಗಳ ಮರಣೋತ್ತರ ಪರೀಕ್ಷೆ ಮುಗಿಸಲು ಕ್ರಮ ವಹಿಸಿ, ತಕ್ಷಣ ಸಂಬಂಧಿಕರಿಗೆ ಹಸ್ತಾಂತರ ಮಾಡಬೇಕು. ಗಾಯಾಳುಗಳಿಗೆ ಉಚಿತ, ಉತ್ತಮ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಮೃತರಿಗೆ ರಾಜ್ಯ ಸರ್ಕಾರ ಕೂಡಲೇ ಸೂಕ್ತ ಪರಿಹಾರ ಘೋಷಣೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.