ಭೀಮಾ ಕೋರೆಗಾಂವ್ ಬಂಧಿತರನ್ನು ಬೇಷರತ್ತಾಗಿ ಬಿಡುಗಡೆ ಮಾಡಿ: ಸಿಪಿಐ(ಎಂ) ಪೊಲಿಟ್‍ ಬ್ಯುರೊ

2018 ರ ಜನವರಿ 1 ರಂದು ಭೀಮಾ ಕೋರೆಗಾಂವ್‌ನಲ್ಲಿ ನಡೆದ ಜಾತಿ ಹಿಂಸಾಚಾರದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪುಣೆ ನಗರದಿಂದ 30 ಕಿಮೀ ದೂರದಲ್ಲಿ ಆಯೋಜಿಸಲಾದ ಎಲ್ಗಾರ್ ಪರಿಷತ್ ಕಾರ್ಯಕ್ರಮವು ಹಿಂಸಾಚಾರದಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ಪ್ರಮಾಣ ಮಾಡಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ, ಈ ಸಂಬಂಧ ಬಂಧಿಸಿರುವ ಎಲ್ಲಾ ಯು.ಎ.ಪಿ.ಎ. ಬಂಧಿತರನ್ನು ತಕ್ಷಣವೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)- ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಗ್ರಹಿಸಿದೆ.

ಡಿಸೆಂಬರ್ 27-28ರಂದು ನವದೆಹಲಿಯಲ್ಲಿ ಸಭೆ ಸೇರಿದ ಸಿಪಿಐ(ಎಂ)ನ ಅತ್ಯುನ್ನತ ಸಮಿತಿ ದೇಶದಲ್ಲಿನ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ರಂಗಗಳಿನ ಇತ್ತೀಚಿನ ಬೆಳವಣಿಗೆಗಳನ್ನು ಪರಾಮರ್ಶಿಸುತ್ತ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಇದನ್ನು ಓದಿ: ಭೀಮಾ ಕೋರೆಗಾಂವ್ ವಿಜಯೋತ್ಸವ ಸರ್ವಜನರ ಏಳ್ಗೆಯ ಪ್ರತೀಕ: ಆನಂದ್ ಚಕ್ರವರ್ತಿ

ಆರ್ಥಿಕ ಚೇತರಿಕೆ ನಡೆಯುತ್ತಿದೆ ಎಂಬ ಸರ್ಕಾರದ ಎಲ್ಲಾ ಪ್ರಚಾರ ಮತ್ತು ದಾವೆಗಳ ಹೊರತಾಗಿಯೂ, ನಿರುದ್ಯೋಗದ ಏರಿಕೆ, ಬೆಲೆಯೇರಿಕೆಗಳಿಂದ ಜನಗಳ ಖರೀದಿ ಸಾಮರ್ಥ್ಯ ಕುಸಿಯುತ್ತಿದೆ, ಇದೂ ಸಾಲದೆಂಬಂತೆ ಒಂದೆಡೆಯಲ್ಲಿ 81.35 ಕೋಟಿ   ಜನಗಳಿಗೆ 5 ಕೆಜಿ  ‘ಉಚಿತ’ ಪಡಿತರ ನೀಡುವುದಾಗಿ ಹೇಳುತ್ತಲೇ ಪಿಎಂಜಿಕೆಎವೈ(ಪ್ರಧಾನ ಮಂತ್ರಿ ಗರೀಬ್‍ ಕಲ್ಯಾಣ ಅನ್ನ ಯೋಜನಾ ) ಮತ್ತು ಆಹಾರ ಭದ್ರತಾ ಕಾಯಿದೆ(ಎಫ್‍ಎಸ್‍ಎ)ಗಳನ್ನು ವಿಲೀನಗೊಳಿಸಿ ಬದುಕುಳಿಯಲು ಹೆಣಗಾಡುತ್ತಿರುವ ಕೋಟಿಗಟ್ಟಲೆ ಕುಟುಂಬಗಳಿಗೆ ಒಂದು  ಕ್ರೂರ ಹೊಡೆತ ಕೊಟ್ಟಿದೆ ಎಂದು ಹೇಳಿದೆ.

ಆದರೆ ಈ ಮೂಲಕ ದೇಶದ 2/3ರಷ್ಟು ಜನಗಳನ್ನು ಹಸಿವಿನ ಸಮಸ್ಯೆ ಬಾಧಿಸುತ್ತಿದೆ, ಜಾಗತಿಕ ಹಸಿವಿನ ಸೂಚ್ಯಂಕ ಹೇಳಿರುವಂತೆ ಪರಿಸ್ಥಿತಿ ಬಹಳ ಗಂಭೀರವಾಗಿದೆ, ದೇಶವನ್ನು ಬಾಧಿಸುತ್ತಿರುವ ಹಸಿವಿನ ಭೀತಿಯನ್ನು ಪಡಿತರವಲ್ಲದೆ ಬೇರೆ ರೀತಿಯಲ್ಲಿ ನಿವಾರಿಸಲು ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿಯಾದರೂ ಸರಕಾರ ಒಪ್ಪಿಕೊಂಡಂತಾಗಿದೆ. ಆದ್ದರಿಂದ ಪಿಎಂಜಿಕೆಎವೈ ಅಡಿಯಲ್ಲಿ ಉಚಿತ 5 ಕೆಜಿ ಮತ್ತು ಎಫ್‌ಎಸ್‌ಎ ಅಡಿಯಲ್ಲಿ ಸಬ್ಸಿಡಿ ದರದಲ್ಲಿ 5 ಕೆಜಿ  ಆಹಾರಧಾನ್ಯಗಳು ಇವೆರಡನ್ನೂ ಮುಂದುವರಿಸಬೇಕು, ಉದ್ಯೋಗ ಸೃಷ್ಟಿಸುವ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾರ್ವಜನಿಕ ಹೂಡಿಕೆಯಲ್ಲಿ ಭಾರಿ ಹೆಚ್ಚಳವಾಗಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಗ್ರಹಿಸಿದೆ, ಅದಿಲ್ಲದೆ ಉದ್ಯೋಗ ಸೃಷ್ಟಿಯಾಗಲಿ ಅಥವಾ ಜನರ ಖರೀದಿ ಸಾಮರ್ಥ್ಯಗಳ ಬೆಳವಣಿಗೆಯಾಗಲಿ ಸಂಭವಿಸಲಾರದು ಎಂದು ಅದು ಅಭಿಪ್ರಾಯಪಟ್ಟಿದೆ.

ಇದನ್ನು ಓದಿ: ಭೀಮಾ ಕೋರೆಗಾಂವ್ ಮತ್ತು ಎಲ್ಗಾರ್ ಪರಿಷತ್ ಪ್ರಕರಣ ಆರೋಪಿ ಸ್ಟಾನ್ ಸ್ವಾಮಿ ನಿಧನ

ಇನ್ನೊಂದೆಡೆಯಲ್ಲಿ, ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಪ್ರಯತ್ನಗಳು ಮುಂದುವರೆಯುತ್ತಿವೆ. ಆಳುವ ಪಕ್ಷದ ಸಂಸದರೊಬ್ಬರು ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ಹಿಂಸಾತ್ಮಕ ಕ್ರಿಮಿನಲ್ ಹಲ್ಲೆಗಳನ್ನು ನಡೆಸಬೇಕು ಎಂದು  ಬೆಂಕಿಹಚ್ಚುವ ಕರೆ ನೀಡಿರುವುದನ್ನು ಬಲವಾಗಿ ಖಂಡಿಸುತ್ತ,   ವಿಚಿತ್ರವೆಂದರೆ, ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಇದನ್ನು ಗಮನಕ್ಕೆ ತೆಗೆದುಕೊಂಡು ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬದಲು ಈ ಭಾಷಣದ ವಿರುದ್ಧ ‘ದೂರು’ ಬಂದರೆ ಮಾತ್ರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ಖೇದ ವ್ಯಕ್ತಪಡಿಸಿದೆ.  ಇದು ಇಂತಹ ವಿಷಕಾರಿ ದ್ವೇಷ, ಹಿಂಸೆ ಮತ್ತು ಭಯೋತ್ಪಾದನೆಯನ್ನು ಹರಡುವ ಜನರಿಗೆ  ಬಹಿರಂಗವಾಗಿಯೇ ನೀಡಿರುವ ಪೋಷಣೆ ಮತ್ತು ರಕ್ಷಣೆಯಾಗಿದೆ ಎಂದು ಅದು ಅಭಿಪ್ರಾಯ ಪಟ್ಟಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ದ್ವೇಷ ಅಪಾಯಕಾರಿಯಾಗಿ ತೀವ್ರಗೊಳ್ಳುತ್ತಿರುವ ವರದಿಗಳು ಹೆಚ್ಚುತ್ತಿವೆ. ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಮೇಲಿನ ದಾಳಿಯ ನಿದರ್ಶನಗಳೂ ಬೆಳೆಯುತ್ತಿವೆ. ಮೌಲಾನಾ ಆಜಾದ್ ರಾಷ್ಟ್ರೀಯ ಫೆಲೋಶಿಪ್ (MANF) ಹೆಸರಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್‌ಗಳ ಯೋಜನೆಯನ್ನು ರದ್ದುಗೊಳಿಸಲಾಗಿದೆ. MANF ಹಲವಾರು ಇತರ ವಿದ್ಯಾರ್ಥಿವೇತನ ಯೋಜನೆಗಳನ್ನು ಅತಿಕ್ರಮಿಸುವುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ. ಇದು ಸ್ಪಷ್ಟವಾಗಿ ತಪ್ಪಾಗಿದೆ. ಹಲವಾರು  ರಾಜ್ಯಗಳಲ್ಲಿ ಮುಸ್ಲಿಮರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರನ್ನು ಒಬಿಸಿ ಎಂದು ಪರಿಗಣಿಸಲಾಗುವುದಿಲ್ಲ. ಈ ವಿದ್ಯಾರ್ಥಿವೇತನ ಯೋಜನೆಯನ್ನು ಮರುಸ್ಥಾಪಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಗ್ರಹಿಸಿದೆ.

ಇದನ್ನು ಓದಿ: ವಿರೋಧಿಗಳನ್ನು ಗುರಿಯಾಗಿಸುವ ದುಷ್ಟ ಕಾರ್ಯಾಚರಣೆ – ಸರಕಾರ ಮತ್ತು ಎನ್‍ಐಎ ಮೇಲೆ ಕಟು ದೋಷಾರೋಪಣೆ: ಸಿಪಿಐ(ಎಂ)

ನ್ಯಾಯಾಂಗದೊಡನೆಯೂ ಮೋದಿ ಸರಕಾರ ಘರ್ಷಣೆಗೆ ಇಳಿಯುವಂತೆ ಕಾಣುತ್ತಿದೆ.  ನ್ಯಾಯಾಂಗದಲ್ಲಿ  ನೇಮಕಾತಿ ಮತ್ತು ವರ್ಗಾವಣೆಗಳಲ್ಲಿ ಸರ್ಕಾರಕ್ಕೆ ಪ್ರಾಬಲ್ಯ ಪಡೆಯುವ ಪ್ರಯತ್ನಗಳನ್ನು  ಅದು  ತೀವ್ರಗೊಳಿಸಿದೆ. ನ್ಯಾಯಾಂಗ ನೇಮಕಾತಿಗಳ ಮೇಲೆ ಕಾರ್ಯಾಂಗದ ನಿಯಂತ್ರಣ ಪಡೆಯುವ ಎಲ್ಲಾ ಪ್ರಯತ್ನಗಳನ್ನು ಸಿಪಿಐ(ಎಂ) ಬಲವಾಗಿ ಪ್ರತಿರೋಧಿಸುವುದಾಗಿ ಹೇಳಿರುವ ಪೊಲಿಟ್‍ ಬ್ಯುರೊ, ನ್ಯಾಯಾಂಗದ ಸ್ವಾತಂತ್ರ್ಯವನ್ನು ಯಾವುದೇ ರಾಜಿಗಿಳಿಯದೆ ಎತ್ತಿ ಹಿಡಿಯಬೇಕು ಎಂದಿದೆ.

ಮೋದಿ ಸರಕಾರ ಒಕ್ಕೂಟತತ್ವದ ಮೇಲೂ ದಾಳಿಯನ್ನು ಮುಂದುವರೆಸಿದೆ.  ಇತ್ತೀಚಿನ ದಾಳಿಯೆಂದರೆ,  ಬಹು ರಾಜ್ಯ ಸಹಕಾರಿ ಸಂಘಗಳ ತಿದ್ದುಪಡಿ ಮಸೂದೆ 2022.  ಸಹಕಾರ ಸಂಘಗಳು ರಾಜ್ಯ ಪಟ್ಟಿಯಲ್ಲಿರುವ ವಿಷಯವಾಗಿದೆ. ಈ ಪ್ರಸ್ತಾವಿತ ಮಸೂದೆಯು ರಾಜ್ಯ ಕಾನೂನುಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಸಹಕಾರಿ ಸಂಘಗಳ ಮೇಲೆ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಹೇರುವ ನಗ್ನ ಪ್ರಯತ್ನವಾಗಿದೆ. ಇದು ಸಹಕಾರಿ ಸಂಘಗಳ ಮೇಲೆ ಹಿಡಿತ ಸಾಧಿಸುವ ನಡೆಯಲ್ಲದೆ ಬೇರೇನೂ ಅಲ್ಲ. ಇದು ಚುನಾಯಿತ ರಾಜ್ಯ ಸರ್ಕಾರಗಳ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಒಕ್ಕೂಟದ ಮೇಲಿನ ನಡೆಸಿರುವ ಆಕ್ರಮಣವಾಗಿದೆ ಎಂದು ಪೊಲಿಟ್‍ ಬ್ಯುರೊ ವರ್ಣಿಸಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ತ್ರಿಪುರಾದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿಪಿಐ(ಎಂ) ಮತ್ತು ಇತರ ವಿರೋಧಿ ಶಕ್ತಿಗಳ ವಿರುದ್ಧ ಆಡಳಿತಾರೂಢ ಬಿಜೆಪಿ ತನ್ನ ಹಿಂಸಾತ್ಮಕ ದಾಳಿಯನ್ನು ತೀವ್ರಗೊಳಿಸಿದೆ. ಸಿಪಿಐ(ಎಂ), ಎಡಪಕ್ಷಗಳು ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಮತ್ತು ಬಿಜೆಪಿ ಸರ್ಕಾರದ ದಬ್ಬಾಳಿಕೆಯಿಂದ ನಾಶವಾಗುತ್ತಿರುವ ಕಾನೂನಿನ ಆಳ್ವಿಕೆಯನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿವೆ. ವಿಧಾನಸಭಾ ಚುನಾವಣೆಯನ್ನು ಒಂದು ಪ್ರಹಸನದ ಮಟ್ಟಕ್ಕೆ  ಇಳಿಸುವುದನ್ನು ತಡೆಯಲು ಚುನಾವಣಾ ಆಯೋಗವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕಾದರೆ ತ್ರಿಪುರಾದಲ್ಲಿ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *