ಭೀಮಾ ಕೋರೆಗಾಂವ್ ವಿಜಯೋತ್ಸವ ಸರ್ವಜನರ ಏಳ್ಗೆಯ ಪ್ರತೀಕ: ಆನಂದ್ ಚಕ್ರವರ್ತಿ

ಸಂದರ್ಶನ: ಮಂಜುನಾಥ ದಾಸನಪುರ

ಬಹುತೇಕ ಮಂದಿ ಹೊಸ ವರ್ಷ ಅಂದಾಕ್ಷಣ ಕೇಕ್ ಕಟ್ ಮಾಡೋದು, ಪಾರ್ಟಿ ಮಾಡೋದು, ಕುಡಿಯೋದು ಅಷ್ಟಕ್ಕೆ ಸೀಮಿತಗೊಳಿಸುತ್ತಾರೆ. ನಿಜವಾಗಿಯೂ 1818 , ಜನವರಿ ೧ರಂದು ನಡೆದ ಭೀಮಾ ಕೋರೆಗಾಂವ್ ವಿಜಯೋತ್ಸವದ ಮಹತ್ವವನ್ನು ಯುವ ಜನತೆ ಅರಿತುಕೊಂಡಿದ್ದೇ ಆದರೆ, ಮಹಾರ್ ಭೀಮ ಸೈನಿಕರಲ್ಲಿದ್ದ ಸ್ವಾಭಿಮಾನದೆಡೆಗಿನ ತುಡಿತ ಇಂದಿನ ಯುವ ಜನತೆಯ ಮನಸಿನೊಳಗೂ ಮೊಳಕೆಯೊಡೆಯಲು ಸಾಧ್ಯವಾಗುತ್ತದೆ. ಈ ಸ್ವಾಭಿಮಾನಯೆಂಬ ಮೊಳಕೆಯನ್ನು ಸಸಿಯಾಗಿಸಿ, ಗಿಡವಾಗಿಸಿ, ಮರವಾಗಿಸುವುದು ಅಷ್ಟು ಸುಲಭವಲ್ಲ. ಶಿಸ್ತು ಬದ್ಧ ಜೀವನ, ಮೌಲ್ಯಯುತವಾದ ಬದುಕು, ಗುರಿಯೆಡೆಗಿನ ಶ್ರದ್ಶೆಯನ್ನು ಹಂತ ಹಂತವಾಗಿ ಮೈಗೂಡಿಸಿಕೊಂಡಾಗ ಮಾತ್ರ ನಮ್ಮೊಳಗೆ ನಿಜವಾದ ಸ್ವಾಭಿಮಾನ ಮೂಡಲು ಸಾಧ್ಯ

ಭಾರತದಲ್ಲಿ ನಡೆದಿರುವ ಸಾವಿರಾರು ಯುದ್ಧಗಳ ಪೈಕಿ ಭೀಮಾ ಕೋರೆಗಾಂವ್ ಯುದ್ಧದ ವಿಜಯವು ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ್ದಲ್ಲದೆ ಆ ಯುದ್ಧವು ಮುಂದಿನ ತಲೆಮಾರಿಗಳಿಗೆ ಸ್ವಾಭಿಮಾನದ ಪ್ರತೀಕವಾಗಿ ಶಾಶ್ವತವಾಗಿ ಉಳಿದು ಬಿಟ್ಟಿದೆ. ಕೇವಲ 500ಮಂದಿ ಮಹಾರ್ ಸೈನಿಕರು 28ಸಾವಿರ ಜಾತಿವಾದಿ ಪೇಶ್ವೆ ಸೈನಿಕರನ್ನು ಸೆದೆಬಡಿದ ಭಾರತದ ಸ್ವಾಭಿಮಾನದ ಇತಿಹಾಸವನ್ನು ಸಾರಿ ಸಾರಿ ಹೇಳುವಂತಿದೆ. ಈ ವಿಜಯದ ದಾಖಲೆಗಳನ್ನು ನಮ್ಮ ಮನುವಾದಿ ಇತಿಹಾಸಕಾರರು ಗೌಪ್ಯವಾಗಿ ಹುದುಗಿಸಿಟ್ಟಿದ್ದರು. ಅದನ್ನು ಭೇದಿಸಿದ ಡಾ.ಬಿ.ಆರ್.ಅಂಬೇಡ್ಕರ್ ಲಂಡನ್‌ ಲೈಬ್ರರಿಯಲ್ಲಿ ಭೀಮಾ ಕೋರೆಗಾಂವ್ ಯುದ್ಧದ ನೈಜ ದಾಖಲೆಗಳನ್ನು ನೋಡಿ ಪುಲಕಗೊಂಡ ಮನಸ್ಸಿನಿಂದ, ಅಭಿಮಾನದಿಂದ ನಮ್ಮ ಪೂರ್ವಿಕರ ಕುರಿತು ಅಭಿಮಾನದಿಂದ ಭಾರತದಲ್ಲಿ ಪ್ರಚಾರ ಮಾಡಿದರು. ಅಲ್ಲದೆ,  1927 ರ ನಂತರ ಡಾ.ಬಿ.ಆರ್.ಅಂಬೇಡ್ಕರ್ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಜ.೧ರಂದು  ಭೀಮಾ ಕೋರೆಗಾಂವ್ ವಿಜಯ ಸ್ಥಂಬದ ಮುಂದೆ ನಿಂತು ವೀರ ಸೈನಿಕರಿಗೆ ಸೆಲ್ಯುಟ್ ಮಾಡಿ, ಭೀಮ ಸೈನಿಕರ ಆಶಯಗಳನ್ನು ಮುಂದುವರೆಸುವುದಾಗಿ ಪ್ರಮಾಣ ಮಾಡಿ ವಾಪಸ್ಸಾಗುತ್ತಿದ್ದರು. ಅವರಿಂದಾಗಿ ಭೀಮಾ ಕೋರೆಗಾಂವ್‌ನ ವಿಜಯದ ಸ್ವಾಭಿಮಾನದ ಇತಿಹಾಸವು ದೇಶದ ಮೂಲೆ ಮೂಲೆಗೂ ತಲುಪುತ್ತಿದ್ದಂತೆ ಪ್ರತಿವರ್ಷ ಜ.೧ರಂದು ದೇಶಾದ್ಯಂತ ಲಕ್ಷಾಂತರ ಮಂದಿ ಕೋರೆಗಾಂವ್‌ಗೆ ತೆರಳಿ ಮಹಾರ್ ಸೈನಿಕರಿಗೆ ನಮನ ಸಲ್ಲಿಸಿ ಬರುವುದು ರೂಢಿಯಾಗಿದೆ. ಹಾಗೂ ತಾವಿರುವ ಪ್ರದೇಶಗಳಲ್ಲಿಯೇ ಜನತೆ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ. ಅದರಂತೆ 2023ರ ಹೊಸವರ್ಷದಂದು 205ನೇ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಸಮತಾ ಸೈನಿಕ ದಳ(ಡಾ.ಬಿ.ಆರ್.ಅಂಬೇಡ್ಕರ್ ಸ್ಥಾಪಿತ), ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಹಾಗೂ ನೀಲಂ ಕಲ್ಚರಲ್ ಸೆಂಟರ್ ವತಿಯಿಂದ ಬೆಂಗಳೂರಿನ ಫ್ರಿಡಂ ಪಾರ್ಕ್ನಲ್ಲಿ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಮತಾ ಸೈನಿಕ ದಳದ ಮುಖಂಡ ಆನಂದ್ ಚಕ್ರವರ್ತಿ ಅವರು ಭೀಮಾ ಕೋರೆಗಾಂವ್ ವಿಜಯೋತ್ಸವದ ಕುರಿತು ಜನಶಕ್ತಿ ಮೀಡಿಯಾದೊಂದಿಗೆ ಮಾತನಾಡಿದ್ದಾರೆ.

 

ಭೀಮಾ ಕೋರೆಗಾಂವ್ ವಿಜಯೋತ್ಸವದ ನಂತರ ದಲಿತ, ಹಿಂದುಳಿದ ಸಮುದಾಯಗಳಲ್ಲಾದ ಬದಲಾವಣೆಗಳೇನು?

ಆನಂದ್ ಚಕ್ರವರ್ತಿ: ಮಹಾರ್ ಸೈನಿಕರು ಹಾಗೂ ಜಾತಿವಾದಿ ಪೇಶ್ವೆಗಳ ನಡುವೆ ನಡೆದ ಕೋರೆಗಾಂವ್ ಯುದ್ಧ ಕೇವಲ ಒಂದು ಪ್ರದೇಶವನ್ನು ಕೈವಶ ಮಾಡಿಕೊಂಡು, ಅಧಿಕಾರ ಚಲಾಯಿಸುವುದಕ್ಕೆ ಮಾತ್ರ ಆಗಿರಲಿಲ್ಲ. ಅದೊಂದು ಸ್ವಾಭಿಮಾನದ ಯುದ್ಧವಾಗಿತ್ತು. ಜಾತಿವಾದಿಗಳನ್ನು ಮಣ್ಣು ಮುಕ್ಕಿಸುವುದು ಹಾಗೂ ಸಾವಿರಾರು ವರ್ಷಗಳಿಂದ ಶಿಕ್ಷಣ ಹಾಗೂ ಸಂಪತ್ತಿನಿಂದ ವಂಚಿತರಾಗಿದ್ದ ದಲಿತ, ಹಿಂದುಳಿದ ಸಮುದಾಯಗಳಿಗೆ ಸ್ವಾಭಿಮಾನವನ್ನು ಮೂಡಿಸುವ ಯುದ್ಧವಾಗಿತ್ತು.

ಈ ಯುದ್ಧದ ಹಿನ್ನೆಲೆಯನ್ನು ಮೆಲುಕು ಹಾಕುವುದಾದರೆ; ಪೇಶ್ವೆಗಳು ಎಷ್ಟೇ ಜಾತಿವಾದಿಗಳಾಗಿದ್ದರೂ ಭ್ರಿಟಿಷರು ಪೇಶ್ವೆ ರಾಜನ ವಿರುದ್ಧ ಯುದ್ಧ ಸಾರಿದಾಗ, ಮಹಾರ್ ಸೈನಿಕರು ಪೇಶ್ವೆಗಳ ಪರವಾಗಿ ಯುದ್ಧ ಮಾಡಲು ನಿರ್ಧರಿಸಿ ಆ ಬಗ್ಗೆ ತಿಳಿಸುವ ಸಲುವಾಗಿ ಮಹಾರ್ ಸೈನ್ಯದ ಪ್ರತಿನಿಧಿಯೊಬ್ಬ ಪೇಶ್ವೆಗಳ ದೊರೆಯಾದ ಎರಡನೆ ಬಾಜಿರಾವನ ಆಸ್ಥಾನಕ್ಕೆ ಬಂದಾಗ ಅಪಮಾನ ಮಾಡಿ ಕಳಿಸುತ್ತಾರೆ. ಈ ವಿಷಯದ ತಿಳಿದ ಮಹಾರ್ ಸೈನ್ಯದ ನಾಯಕ ಸಿದ್ದಾನಕ ನೇತೃತ್ವದ ಮಹಾರ್ ಸೈನಿಕರು, ಇಂತಹ ಅಪಮಾನಗಳನ್ನು ಶಾಶ್ವತವಾಗಿ ಇಲ್ಲವಾಗಿಸುವ ನಿಟ್ಟಿನಲ್ಲಿ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ.
ಈ ಯುದ್ಧದಲ್ಲಿ ಪೇಶ್ವೆಗಳ ವಿರುದ್ಧ ಯುದ್ಧ ಮಾಡಿ ಗೆದ್ದರೆ, ಯಾವುದೇ ಭೇದ ಭಾವ ಮಾಡದೆ, ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣವನ್ನು ನೀಡಬೇಕು. ಹಾಗೂ ಸೈನ್ಯಕ್ಕೆ ಸೇರಿಕೊಳ್ಳಲು ದಲಿತ, ಹಿಂದುಳಿದ ಸಮುದಾಯಕ್ಕೆ ಅವಕಾಶ ಮಾಡಿಕೊಡಬೇಕೆಂದು ಒಪ್ಪಂದ ಮಾಡಿಕೊಂಡು ಕೇವಲ ಒಂದು ರಾತ್ರಿಯಲ್ಲಿ 500 ಮಂದಿ ಮಹಾರ್‌ಸೈನಿಕರು 28ಸಾವಿರ ಪೇಶ್ವೆ ಸೈನಿಕರನ್ನು ಸೋಲಿಸಿ ಜಯಗಳಿಸುತ್ತಾರೆ. ಯುದ್ಧದ ನಂತರ ಮಹಾರ್ ಸೈನಿಕರು ಭ್ರಿಟಿಷ್ ಅಧಿಕಾರಿಗಳ ಮೇಲೆ ನಿರಂತರವಾಗಿ ಒತ್ತಡ ಹಾಕಿ ಶಾಲೆಗಳನ್ನು ಪ್ರಾರಂಭಿಸುವಲ್ಲಿ ಯಶಸ್ವಿ ಆಗುತ್ತಾರೆ. ಇದರ ಫಲವಾಗಿ ಜ್ಯೋತಿ ಬಾಫುಲೆ ಅವರು ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಯಿತು. ಇವರು ಮೆಟ್ರಿಕ್ಯುಲೇಶನ್ ಪಾಸ್ ಮಾಡಿದ ಮೊದಲ ಬ್ರಾಹ್ಮಣೇತರ ವಿದ್ಯಾರ್ಥಿ ಆಗುತ್ತಾರೆ. ಆ ನಂತರ ಜ್ಯೋತಿಬಾ ಫುಲೆ ಸತ್ಯ ಶೋಧಕ ಸಮಾಜವನ್ನು ಸ್ಥಾಪಿಸಿ ಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದರು. ಆ ನಂತರ ದೇಶದಲ್ಲಿ ಲಾರ್ಡ್ ಮೆಕಾಲೆ ಮೂಲಕ ಸಾರ್ವಜನಿಕ ಶಿಕ್ಷಣ ನೀತಿ ಜಾರಿಯಾಯಿತು. ದೇಶಾದ್ಯಂತ ದಲಿತ, ಹಿಂದುಳಿದ ಸಮುದಾಯ ಶಿಕ್ಷಣದತ್ತ ಮುಖ ಮಾಡಿದರು. ಇದರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತಂದೆ ರಾಮ್‌ಜೀ ಸತ್ಪಾರು ಒಬ್ಬರಾಗಿದ್ದರು. ತಂದೆಯಿಂದ ಶಿಸ್ತುಬದ್ಧ ಜೀವನದ  ಪಾಠ ಹಾಗೂ ಗಾಯಕ್‌ವಾಡ್ ಮಹಾರಾಜರು, ಶಾಹುಮಹಾರಾಜ್ ಅವರು ನೀಡಿದ ಮೀಸಲಾತಿಯಿಂದಾಗಿ ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದ ಡಾ.ಬಿ.ಆರ್.ಅಂಬೇಡ್ಕರ್, ದೇಶದ ಸರ್ವಜನರಿಗೂ ಹಿತವನ್ನು ಬಯಸುವ ಸಂವಿಧಾನವನ್ನು ರಚಿಸಿಕೊಟ್ಟರು. ಹೀಗಾಗಿ ದೇಶದಲ್ಲಿ ಸರ್ವಜನರು ಶಿಕ್ಷಣ ವಂತರಾಗಿ ಸ್ವಾಭಿಮಾನದಿಂದ ಬದುಕುವುದಕ್ಕೆ ಭೀಮಾ ಕೋರೆಗಾಂವ್ ವಿಜಯೋತ್ಸವ ಸದಾ ಮುನ್ನುಡಿ ರೂಪದಂತಿದೆ ಎಂದರೆ ತಪ್ಪಾಗಲಾರದು.

-ಭೀಮಾ ಕೋರೆಗಾಂವ್ ವಿಜಯೋತ್ಸವ ವರ್ತಮಾನಕ್ಕೆ ಹೇಗೆ ಪ್ರಸ್ತುತವಾಗುತ್ತದೆ ಎಂಬುದನ್ನು ವಿವರಿಸುತ್ತೀರ?

ಆನಂದ್ ಚಕ್ರವರ್ತಿ: ನೋಡಿ ಬಹುತೇಕ ಮಂದಿ ಹೊಸ ವರ್ಷ ಅಂದಾಕ್ಷಣ ಕೇಕ್ ಕಟ್ ಮಾಡೋದು, ಪಾರ್ಟಿ ಮಾಡೋದು, ಕುಡಿಯೋದು ಅಷ್ಟಕ್ಕೆ ಸೀಮಿತಗೊಳಿಸುತ್ತಾರೆ. ನಿಜವಾಗಿಯೂ 1818 , ಜನವರಿ ೧ರಂದು ನಡೆದ ಭೀಮಾ ಕೋರೆಗಾಂವ್ ವಿಜಯೋತ್ಸವದ ಮಹತ್ವವನ್ನು ಯುವ ಜನತೆ ಅರಿತುಕೊಂಡಿದ್ದೇ ಆದರೆ, ಮಹಾರ್ ಭೀಮ ಸೈನಿಕರಲ್ಲಿದ್ದ ಸ್ವಾಭಿಮಾನದೆಡೆಗಿನ ತುಡಿತ ಇಂದಿನ ಯುವ ಜನತೆಯ ಮನಸಿನೊಳಗೂ ಮೊಳಕೆಯೊಡೆಯಲು ಸಾಧ್ಯವಾಗುತ್ತದೆ. ಈ ಸ್ವಾಭಿಮಾನಯೆಂಬ ಮೊಳಕೆಯನ್ನು ಸಸಿಯಾಗಿಸಿ, ಗಿಡವಾಗಿಸಿ, ಮರವಾಗಿಸುವುದು ಅಷ್ಟು ಸುಲಭವಲ್ಲ. ಶಿಸ್ತು ಬದ್ಧ ಜೀವನ, ಮೌಲ್ಯಯುತವಾದ ಬದುಕು, ಗುರಿಯೆಡೆಗಿನ ಶ್ರದ್ಶೆಯನ್ನು ಹಂತ ಹಂತವಾಗಿ ಮೈಗೂಡಿಸಿಕೊಂಡಾಗ ಮಾತ್ರ ನಮ್ಮೊಳಗೆ ನಿಜವಾದ ಸ್ವಾಭಿಮಾನ ಮೂಡಲು ಸಾಧ್ಯ, ಹೀಗೆ ಪ್ರತಿಯೊಬ್ಬರು ಸ್ವಾಭಿಮಾನದಿಂದ ಮುನ್ನಡೆದರೆ ವ್ಯಕ್ತಿಗತ ಪ್ರಗತಿ, ಸಮುದಾಯಗಳ ಪ್ರಗತಿ, ಆ ಮೂಲಕ ದೇಶದ ಪ್ರಗತಿ ದೂರವಿಲ್ಲ. ಹೀಗಾಗಿ ಹೊಸ ವರ್ಷವನ್ನು ಸ್ವಾಭಿಮಾನದ ದಿನವನ್ನಾಗಿ ಆಚರಿಸಲು ಭೀಮಾ ಕೋರೆಗಾಂವ್ ಯಾವತ್ತಿಗೂ ಸ್ಫೂರ್ತಿಯಾಗಿರುತ್ತದೆ.

-ಭೀಮಾ ಕೋರೆಗಾಂವ್ ಆಶಯಗಳನ್ನು ಕೊಂಡೊಯ್ಯುವಲ್ಲಿ ಯುವಜನತೆಯ ಜವಾಬ್ದಾರಿಗಳೇನು?

ಆನಂದ್ ಚಕ್ರವರ್ತಿ: ಮೊದಲಿಗೆ ನಮ್ಮ ಭಾರತ ಸಾವಿರಾರು ವರ್ಷಗಳಿಂದ ಸಾಗಿ ಬಂದಿರುವ ಪಲ್ಲಟಗಳನ್ನು ಸರಿಯಾಗಿ ಗ್ರಹಿಸುವಂತಹ ಕೆಲಸವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಬುದ್ಧ, ಬಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಾಗಿ ಬಂದ ಚಿಂತನಾ ಮಾರ್ಗಗಳನ್ನು ಸರಿಯಾಗಿ ಗ್ರಹಿಸಿದರೆ ನಾವು ಸಾಗಬೇಕಾದ ಮಾರ್ಗಗಳು ಸ್ಪಷ್ಟವಾಗುತ್ತದೆ. ಇದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆ ಆದರ್ಶವಾಗುತ್ತಾರೆ. ಅವರು ಮುಚ್ಚಿಡಲಾಗಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವದ ಕುರಿತ ಮಾಹಿತಿಯನ್ನು ಲಂಡನ್ ಗ್ರಂಥಾಲಯವೊಂದರಿಂದ ಮಾಹಿತಿ ತಿಳಿದು, ಆ ಯುದ್ಧದ ಪರಿಣಾಮದಿಂದ ದೇಶದಲ್ಲಿ ಅದರಲ್ಲೂ ದಲಿತ, ಹಿಂದುಳಿದ ಸಮುದಾಯದ ಮೇಲಾದ ಬದಲಾವಣೆಗಳ ಕುರಿತು ಸ್ಪಷ್ಟವಾದ ತಿಳುವಳಿಕೆಯನ್ನು ಪಡೆದರು. ಹೀಗಾಗಿ ಪ್ರತಿವರ್ಷ ಕೋರೆಗಾಂವ್‌ಗೆ ತೆರಳಿ ಮಹಾರ್ ಸೈನಿಕರಿಗೆ ಸೆಲ್ಯೂಟ್ ಹೊಡೆದು ಅವರಿಂದ ಪ್ರೇರಣೆ ಪಡೆದು ಬರುತ್ತಿದ್ದರು. ಹಾಗೂ ಅವರ ಆಶಯಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ಕಟ್ಟಿಬದ್ಧರಾಗಿ ಕಾರ್ಯಯೋಜನೆಗಳನ್ನು ರೂಪಿಸಿದ ಪರಿಣಾಮವಾಗಿಯೇ ಎಲ್ಲರ ಆಶಯಗಳನ್ನೊಳಗೊಂಡ ಸಂವಿಧಾನವನ್ನು ರಚಿಸಲು ಸಾಧ್ಯವಾಯಿತು. ಹೀಗಾಗಿ ಯುವ ಜನತೆಯಾದ ನಾವು ಇವರೆಲ್ಲರೂ ಇತಿಹಾಸವನ್ನು ತಿಳಿಯುತ್ತಾ ಸಮ ಸಮಾಜವನ್ನು ನಿರ್ಮಿಸುವುದರತ್ತ ದಾಪುಗಾಲು ಇಡಬೇಕಾಗಿದೆ.

-ಜನತೆಯನ್ನು ಸ್ವಾಭಿಮಾನಿಗಳಾಗಿ ರೂಪಿಸುವಲ್ಲಿ ಸರಕಾರಗಳ ಕರ್ತವ್ಯ ಏನಾಗಿರಬೇಕು?

ಆನಂದ್ ಚಕ್ರವರ್ತಿ: ಭಾರತದಲ್ಲಿ ರಾಜಪ್ರಭುತ್ವ, ಭ್ರಿಟಿಷರ ಆಳ್ವಿಕೆಯ ನಡುವೆಯೂ ಜನತೆಗಾಗಿ ಆನೇಕ ಸುಧಾರಕರು, ಕ್ರಾಂತಿಕಾರಿಗಳು ತ್ಯಾಗ ಬಲಿದಾನಗಳ ಮಾಡಿ ಸುಧಾರಣೆಯ, ಬದಲಾವಣೆಯ, ಸಮ ಸಮಾಜದ ರಥವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅವರೆಲ್ಲರ ಪ್ರೇರಣೆಯನ್ನು ಪಡೆದ ಡಾ.ಬಿ.ಆರ್.ಅಂಬೇಡ್ಕರ್ ವಿವಿಧ ಜಾತಿ, ಧರ್ಮ, ಭಾಷೆ, ಆಚಾರ, ವಿಚಾರಗಳನ್ನು ಒಳಗೊಂಡ ಭಾರತಕ್ಕೆ ಅಗತ್ಯವಾದ ಸಂವಿಧಾನದವನ್ನು ರಚಿಸಿ ಕೊಟ್ಟಿದ್ದಾರೆ. ಆದರೆ, ಪ್ರಜಾಪ್ರಭುತ್ದದಡಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆಯುತ್ತಿದ್ದರೂ ಸಂವಿಧಾನದ ಮೂಲಭೂತ ಆಶಯಗಳನ್ನು ಜಾರಿ ಮಾಡುವಲ್ಲಿ ದೇಶದ ಚುಕ್ಕಾಣಿ ಹಿಡಿದ ಎಲ್ಲ ಪಕ್ಷಗಳು ನಿರ್ಲಕ್ಷ್ಯಿಸುತ್ತಾ ಬಂದಿವೆ. ಇದರ ಪರಿಣಾಮ ದೇಶದಲ್ಲಿ ಆಸ್ಪೃಶ್ಯತೆ, ಜಾತೀಯತೆ, ನಿರುದ್ಯೋಗ, ಬಡತನ ಸೇರಿದಂತೆ ಎಲ್ಲ ಸಮಸ್ಯೆಗಳು ಇನ್ನಷ್ಟು ಬಲಿಷ್ಟವಾಗುತ್ತಿವೆ. ಇದು ಹೀಗೆಯೇ ಮುಂದುವರೆದರೆ ದೇಶವು ಮತ್ತೊಂದು ಗುಲಾಮ ವ್ಯವಸ್ಥೆಗೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂತಹ ಅಪಾಯಗಳಿಂದ ಪಾರಾಗಬೇಕಾದರೆ, ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿರುವ ಸಂವಿಧಾನದ ಆಶಯಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದೊಂದೆ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಸರಕಾರದೆ ಮೇಲೆ ಒತ್ತಡ ಹೇರಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿಯು ಆಗಿದೆ.

ಆನಂದ್ ಚಕ್ರವರ್ತಿ
Donate Janashakthi Media

Leave a Reply

Your email address will not be published. Required fields are marked *