ತುಮಕೂರು: ಜನತೆಯಲ್ಲಿ ಅನಗತ್ಯವಾಗಿ ಭಾವನೆಗಳನ್ನು ಕೆರಳಿಸಿ ವಿಭಜಿಸಿ – ಕಿತ್ತಾಡಿಸುವುದಲ್ಲ. ಬದಲಿಗೆ ಜನತೆ ಉತ್ತಮ ಆಹಾರ, ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಸಾಮರಸ್ಯ- ಸಮಭಾವದ ಮೂಲಕ ಬದುಕು ಅರಳಿಸುವುದು ಸರ್ಕಾರಗಳ ಕೆಲಸ ಅಗಬೇಕೆಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮಿನಾಕ್ಷಿ ಸುಂದರಂ ಹೇಳಿದರು.
ತುಮಕೂರಿನ ಜನಚಳುವಳಿ ಕೇಂದ್ರದಲ್ಲಿ ಇಂದು(ಜುಲೈ 17) ಹಮ್ಮಿಕೊಂಡಿದ್ದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಜಿಲ್ಲಾ ಮಟ್ಟದ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತಾನಾಡಿದರು. ಮುಂದುವರಿದು ಮಾತನಾಡಿದ ಅವರು, ಇರುವುದನ್ನು ಉಳಿಸೋದು ಅಭಿವೃದ್ದಿ ಅಲ್ಲ ಎಂದು ಹೇಳಿದ ಅವರು ಕಳೆದ 6 ತಿಂಗಳಲ್ಲಿ 40 ಬಿಲಿಯನ್ ಡಾಲರ್ ಬಂಡವಾಳ ಹಿಂತೆಗೆತ ಅಗಿದೆ. ಅಮದು ಹೆಚ್ಚಿದೆ-ರಪ್ತು ಇಳಿಕೆಯಾಗಿದೆ. ಇದು ದೇಶವನ್ನು ಸಂಕಟಕ್ಕೆ ಸಿಲುಕಲಿದೆ. ಅಲ್ಲದೇ, ಬಂಡವಾಳಶಾಹಿ ದೇಶಗಳಲ್ಲಿ ಬೆಲೆ ಏರಿಕೆಯ ವಿಪರೀತವಾಗಿ ಜನತೆ ತತ್ತರಿಸುವಂತಾಗಿದೆ ಎಂದರು.
ಶಾಲಾ ಬಿಸಿಯೂಟ ನೌಕರರಿಗೆ ಬೇಳೆ, ಅಡುಗೆ ಎಣ್ಣೆ, ಖರ್ಚಿನ ಬಾಬತ್ತು ಹಣ ಮತ್ತು ಗೌರವಧನ ನೀಡಲು ಆಗ್ರಹ
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಬಿಸಿ ಊಟಕ್ಕೆ ಬೇಕಾಗಿರುವ ಆಹಾರ ಪದಾರ್ಥಗಳು ಕಳೆದೆರಡು – ಮೂರು ತಿಂಗಳಿಂದ ಬಿಸಿ ಊಟ ನೌಕರರು ತಮ್ಮದೇ ಖರ್ಚಿನಲ್ಲಿ ಬೇಳೆ, ಅಡುಗೆ ಎಣ್ಣೆ ಮತ್ತು ಕೆಲವೆಡೆ ಅಕ್ಕಿಯನ್ನು ಸಹ ತಾವು ಪಡೆಯುವ ತಿಂಗಳ 3000 ರೂಪಾಯಿ ಸಂಬಳದಲ್ಲಿಯೇ ಖರ್ಚು ಮಾಡುತ್ತಿದ್ದಾರೆ. ಇವು ಯಾವುದೋ ಒಂದೆಡೆಯಾಗದೇ, ಜಿಲ್ಲೆಯ ಹಲವೆಡೆ ನಡೆದಿದೆ. ಅಧಿಕಾರಿಗಳ ಬಿಸಿಯೂಟ ಯೋಜನೆ ಅನುಷ್ಟಾನದಲ್ಲಿ ಅಧಿಕಾರಿಗಳ ಈ ನಡೆಯನ್ನು ಸಿಐಟಿಯು ಸಭೆಯು ತೀರ್ವವಾಗಿ ಖಂಡಿಸಿದೆ.
ಬಡ ನೌಕರರಿಂದ 2-3 ತಿಂಗಳು ಖರ್ಚು ಮಾಡಿಸಿರುವ ಇಲಾಖೆಯು ಅದರ ಹಣವನ್ನು ನೀಡದೆ, ತೇಪೆ ಹಚ್ಚುವ ಕಾರಣ ನೀಡುವ ಸರ್ಕಾರಿ ಆಧಿಕಾರಿಗಳ ನಡೆಯುನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕೆಂದು ಸಿಐಟಿಯು ಒತ್ತಾಯಿಸಿದೆ. ಅಲ್ಲದೆ, ಈ ಕೂಡಲೇ ನೌಕರರಿಂದ ಖರ್ಚು ಮಾಡಿಸಿರುವ ಹಣ ಹಾಗೂ ನೌಕರರ 3 ತಿಂಗಳ ಸಂಬಳವನ್ನು ಈ ತಕ್ಷಣವೇ ನೀಡುವಂತೆ ಸಭೆಯು ನಿರ್ಣಯ ಅಂಗೀಕರಿಸಿ ಒತ್ತಾಯಿಸಿದೆ.
ತುಮಕೂರು ನಗರದಲ್ಲಿ ಈಚೀನ ಭಾರೀ ಮಳೆಯಲ್ಲಿ ಕೊಚ್ಚಿಹೋದ ಆಟೋ ಚಾಲಕನಿಗೆ 25ಲಕ್ಷ ಪರಿಹಾರ – ಕುಟುಂಬದ ಅವಲಂಬಿತರಿಗೆ ಸರ್ಕಾರಿ ಕೆಲಸ ನೀಡುವಂತೆ ಸಭೆಯು ಸರ್ಕಾರವನ್ನು ಒತ್ತಾಯಿಸಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸೈಯದ್ ಮುಜಿಬ್ ಮಾತನಾಡಿ ಜಿಲ್ಲೆಯಲ್ಲಿ ಕಾರ್ಮಿಕರನ್ನು ದುಡಿಸಿಕೊಂಡು ಸಂಬಳ-ಭವಿಷ್ಯ ನಿಧಿಯನ್ನು ನೀಡದೇ ಸಾವಿರಾರು ಕಾರ್ಮಿಕರನ್ನು ವಂಚಿಸಲಾಗುತ್ತಿದೆ. ಈ ಬಗ್ಗೆ ಸರ್ಕಾರ ಕ್ರಮ ವಹಿಸಲು ಅಗ್ರಹಿಸಿದರು.
ಸಭೆಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಜಿ. ಕಮಲ, ಎನ್ ಕೆ ಸುಬ್ರಮಣ್ಯ, ಅಂಗನವಾಡಿ ನೌಕರರ ಸಂಘ ಗುಲ್ಚಾರ್ ಬಾನು, ಅನಸೂಯ, ಕಟ್ಟಡ ಕಾರ್ಮಿಕರ ಸಂಘದ ಬಿ. ಉಮೇಶ್, ಗ್ರಾಮ ಪಂಚಾಯತ್ ನೌಕರರ ಸಂಘದ ನಾಗೇಶ್, ಶಂಕರಪ್ಪ,ಕಲಿಲ್, ಬಿಸಿಯೂಟ ನೌಕರರ ಸಂಘದ ಕೆಂಚಮ್ಮ, ನಾಗರತ್ನ, ಪೌರ ಕಾರ್ಮಿಕರ ಸಂಘದ ವೆಂಕಟೇಶ್, ನಾಗರಾಜು, ನೀರು ಸರಬರಾಜು ನೌಕರರ ಸಂಘದ ಕುಮಾರ್, ಹಮಾಲಿ ಕಾರ್ಮಿಕರ ಸಂಘದ ರಾಮಾಂಜಿನಿ, ಕಸದ ಆಟೋ ಚಾಲಕರ ಸಂಘದ ಮಂಜುನಾಥ್ , ಶಿವರಾಜು, ಮನೆ ಕೆಲಸಗಾರರ ಸಂಘದ ನಸೀಮಾ ಬಾನು ಮತ್ತಿತರರು ಇದ್ದರು.