ಹೊಸದಿಲ್ಲಿ: 1990ರ ದಶಕದ ಆರಂಭದಲ್ಲಿ ರಥಯಾತ್ರೆ ನಡೆಸಿ ದೇಶದಾದ್ಯಂತ ಕೋಮುಗಲಭೆ ನಡೆಯಲು ಕಾರಣರಾದ ಹಾಗೂ ಆ ಮೂಲಕ ಬಿಜೆಪಿಯನ್ನು ಅಧಿಕಾರದ ಹತ್ತಿರ ತಂದ ಪಕ್ಷದ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಕೇಂದ್ರ ಸರ್ಕಾರ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಶನಿವಾರ ಘೋಷಿಸದೆ. ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಅಡ್ವಾಣಿಯನ್ನು ಅಭಿನಂದಿಸಿದ್ದಾರೆ.
“ಎಲ್‌ಕೆ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂದು ತಿಳಿಸಿಲು ನನಗೆ ತುಂಬಾ ಸಂತೋಷವಾಗುತ್ತಿದೆ. ನಾನು ಅವರೊಂದಿಗೆ ಮಾತನಾಡಿದ್ದು, ಈ ಗೌರವಕ್ಕಾಗಿ ಅವರನ್ನು ಅಭಿನಂದಿಸಿದ್ದೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ. ಭಾರತದ ಅಭಿವೃದ್ಧಿಯಲ್ಲಿ ಎಲ್‌ಕೆ ಅಡ್ವಾಣಿಯವರ ಪಾತ್ರವು ಸ್ಮರಣೀಯವಾಗಿದ್ದು, ಅವರು ಭಾರತದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಒಬ್ಬರು ಎಂದು ಕರೆದಿದ್ದಾರೆ.
ಇದನ್ನೂ ಓದಿ: ಸಿಎಎ ಜಾರಿ ಇಲ್ಲ | ತಮಿಳುನಾಡು ಮತ್ತು ಕೇರಳ ಮುಖ್ಯಮಂತ್ರಿಗಳ ಪುನರುಚ್ಛಾರ
“ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದು, ಭಾರತದ ಅಭಿವೃದ್ಧಿಗೆ ಅವರ ಕೊಡುಗೆ ಸ್ಮರಣೀಯವಾಗಿದೆ. ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಹಿಡಿದು ನಮ್ಮ ಉಪಪ್ರಧಾನಿಯಾಗಿ ದೇಶಸೇವೆ ಮಾಡುವವರೆಗಿನ ಜೀವನ ಅವರದ್ದಾಗಿದೆ. ಅವರು ನಮ್ಮ ಗೃಹ ಮಂತ್ರಿ ಮತ್ತು I&B ಸಚಿವರಾಗಿಯೂ ಗುರುತಿಸಿಕೊಂಡಿದ್ದಾರೆ. ಅವರ ಸಂಸದೀಯ ಮಧ್ಯಸ್ಥಿಕೆಗಳು ಯಾವಾಗಲೂ ಆದರ್ಶಪ್ರಾಯವಾಗಿದ್ದು, ಶ್ರೀಮಂತ ಒಳನೋಟಗಳಿಂದ ತುಂಬಿವೆ” ಎಂದು ಅವರು ಹೇಳಿದ್ದಾರೆ.ಭಾರತ ರತ್ನ
“ಸಾರ್ವಜನಿಕ ಜೀವನದಲ್ಲಿ ಅಡ್ವಾಣಿ ಅವರ ದಶಕಗಳ ಸುದೀರ್ಘ ಸೇವೆಯು ಪಾರದರ್ಶಕತೆ ಮತ್ತು ಸಮಗ್ರವಾಗಿತ್ತು. ಅವರ ಅಚಲವಾದ ಬದ್ಧತೆಯ ರಾಜಕೀಯ ನೀತಿಶಾಸ್ತ್ರ ಅನುಕರಣೀಯ ಮಾನದಂಡ. ಅವರು ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನವನ್ನು ಹೆಚ್ಚಿಸಲು ಅಪ್ರತಿಮ ಪ್ರಯತ್ನಗಳನ್ನು ಮಾಡಿದ್ದಾರೆ. ಭಾರತ ರತ್ನ ಪ್ರಶಸ್ತಿಯನ್ನು ಅವರು ಪಡೆಯುತ್ತಿರುವುದು ನನಗೆ ತುಂಬಾ ಭಾವನಾತ್ಮಕ ಕ್ಷಣವಾಗಿದೆ. ಅವರೊಂದಿಗೆ ಸಂವಹನ ನಡೆಸಲು ಮತ್ತು ಅವರಿಂದ ಕಲಿಯಲು ನನಗೆ ಅಸಂಖ್ಯಾತ ಅವಕಾಶಗಳು ಸಿಕ್ಕಿರುವುದು ನನ್ನ ವಿಶೇಷತೆಯಾಗಿದೆ”ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಬರ ಪರಿಹಾರ, ಕೇಂದ್ರದ ತಾರತಮ್ಯ ನೀತಿ| ದೆಹಲಿಯಲ್ಲಿ ಫೆಬ್ರವರಿ 7 ರಂದು ಕಾಂಗ್ರೆಸ್ ಪ್ರತಿಭಟನೆ
ಎಲ್ ಕೆ ಅಡ್ವಾಣಿ ಯಾರು?
ಇಂದಿನ ಪಾಕಿಸ್ತಾನದಲ್ಲಿ ಇರುವ ಕರಾಚಿಯಲ್ಲಿ ಜನಿಸಿದ ಎಲ್.ಕೆ. ಅಡ್ವಾಣಿ ಅವರು ದೇಶ ವಿಭಜನೆಯ ನಂತರ ಭಾರತಕ್ಕೆ ವಲಸೆ ಬಂದರು. ನಂತರ ಬಾಂಬೆಯಲ್ಲಿ ನೆಲೆಸಿದ ಅವರು 1941 ರಲ್ಲಿ ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ಆರ್‌ಎಸ್‌ಎಸ್‌ಗೆ ಸೇರಿದ್ದರು. 1951 ರಲ್ಲಿ ಅವರು ಶ್ಯಾಮ ಪ್ರಸಾದ್ ಮುಖರ್ಜಿ ಸ್ಥಾಪಿಸಿದ ಭಾರತೀಯ ಜನಸಂಘದ ಸದಸ್ಯರಾದರು. ಇದುವೆ ಮುಂದೆ ಬಿಜೆಪಿ ಎಂದಾಯಿತು.
ಅಡ್ವಾಣಿ 1970 ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾದರು. 1989 ರವರೆಗೆ ನಾಲ್ಕು ಅವಧಿಗೆ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. 1977 ರಲ್ಲಿ ಜನತಾ ಪಕ್ಷ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿದ ನಂತರ ಅವರು ಮೊದಲ ಬಾರಿಗೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾದರು ಮತ್ತು ರಾಜ್ಯಸಭೆಯಲ್ಲಿ ಸದನದ ನಾಯಕರಾಗಿ ಆಯ್ಕೆಯಾದರು.
ಇದನ್ನೂ ಓದಿ: ಬೆಂಗಳೂರು ನ್ಯಾಷನಲ್ ಕಾಲೇಜು | ದಲಿತ ಪ್ರಾಧ್ಯಾಪಕರಿಗೆ ಹಿಂಬಡ್ತಿ ನೀಡಿ ಅವಮಾನ
ಬಿಜೆಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿರುವ ಅವರು, ಮೂರು ಬಾರಿ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1989 ರಲ್ಲಿ, ಅವರು ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಚುನಾಯಿತರಾದರು. 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗ ಅಡ್ವಾಣಿ ಗೃಹ ವ್ಯವಹಾರಗಳ ಸಚಿವರಾಗಿ ಮತ್ತು ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದರು. 2015ರಲ್ಲಿ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವ ಪದ್ಮವಿಭೂಷಣವನ್ನು ನೀಡಲಾಗಿತ್ತು.
ಬಿಜೆಪಿಯಲ್ಲಿ ಎಲ್.ಕೆ. ಅಡ್ವಾಣಿಯವರ ಪಾತ್ರ
1990 ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಬಿಜೆಪಿಯ ಬೇಡಿಕೆಯ ಮೇಲೆ ಎಲ್.ಕೆ. ಅಡ್ವಾಣಿ ರಾಮ ರಥ ಯಾತ್ರೆಯನ್ನು ಕೈಗೊಂಡರು. ಗುಜರಾತ್‌ನ ಸೋಮನಾಥದಿಂದ ಆರಂಭವಾದ ಈ ಯಾತ್ರೆ ಅಯೋಧ್ಯೆಗೆ ತಲುಪಿತ್ತು. ಈ ವೇಳೆ ದೇಶದಾದ್ಯಂತ ಕೋಮು ಗಲಭೆ ಕೂಡಾ ನಡೆದಿತ್ತು. ಅವರ ರಥಯಾತ್ರೆಗೆ ಜನಬೆಂಬಲ ದೊರೆತು, 1991 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ಸಂಸತ್ತಿನಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ವಿಡಿಯೊ ನೋಡಿ: ಏನಿದು ಮಧ್ಯಂತರ ಬಜೆಟ್ ? ಚುನಾವಣಾ ರಾಮನ ಮುಂದೆ ಸಪ್ಪೆಯಾದ ಬಜೆಟ್ Janashakthi Media