ದಿಲ್ಲಿಯಲ್ಲಿ ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಮತ್ತು ರೈತರ ಹೋರಾಟದ ಬಗ್ಗೆ ಸಹಾನುಭೂತಿ ಇರುವ ಇತರ ನಾಗರಿಕರು ರೈತರು ಕರೆ ನೀಡಿರುವ ಭಾರತ ಬಂದ್‍ಗೆ ಬೆಂಬಲವಾಗಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು. ಸಿಐಟಿಯು, ಎಐಸಿಸಿಟಿಯು ಮತ್ತಿತರ ಕಾರ್ಮಿಕ ಸಂಘಟನೆಗಳು ಇದನ್ನು ಸಂಘಟಿಸಿದ್ದರು. ಈ ಮತಪ್ರದರ್ಶನದಲ್ಲಿ ಈ ದೇಶವ್ಯಾಪಿ ಕಾರ್ಯಾಚರಣೆಯ ಆಗ್ರಹಗಳನ್ನು ಕುರಿತಂತೆ ಘೋಷಣೆಗಳು ಮೊಳಗಿದವು. ಕಳೆದ ಹತ್ತುತಿಂಗಳಿಂದ ದೇಶಾದ್ಯಂತ ರೈತರು ಎತ್ತುತ್ತಿರುವ ಆಗ್ರಹಗಳನ್ನು, ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು, ವಿದ್ಯುತ್ ತಿದ್ದುಪಡಿ ಮಸೂದೆಯನ್ನು ವಾಪಾಸ್ ಪಡೆಯಬೇಕು, ಎಂ.ಎಸ್.ಪಿ.ಗೆ ಕಾನೂನಿನ ಖಾತ್ರಿ ಒದಗಿಸಬೇಕು ಮತ್ತು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಮಾಡಬೇಕು ಎಂಬ ಆಗ್ರಹಗಳನ್ನು ಅವರು ಪುನರುಚ್ಛರಿಸಿದರು.
“ಪ್ರಜಾಪ್ರಭುತ್ವದ ಅಡಿಯಲ್ಲಿ ಸರಕಾರಗಳು ಪರಸ್ಪರ ಸಮಾಲೋಚನೆಗಳು ಮತ್ತು ಸಂವಾದಗಳಿಂದ ಕೆಲಸ ಮಾಡುತ್ತವೆ. ಜನಸಂಖ್ಯೆಯ ಒಂದು ದೊಡ್ಡ ವಿಭಾಗ ಕಷ್ಟಗಳನ್ನು ಎದುರಿಸುತ್ತಿದ್ದರೆ, ಅ ಜನಗಳೊಂದಿಗೆ ಮಾತಾಡುವುದು, ಅವರ ಕಷ್ಟಗಳನ್ನು ಪರಿಹರಿಸುವುದು ಕೇಂದ್ರ ಸರಕಾರದ ಜವಾಬ್ದಾರಿ. ಆದರೆ ಈ ಸರಕಾರ ಜನವರಿ ತಿಂಗಳಿಂದ ರೈತರೊಡನೆ ಮಾತಾಡಿಲ್ಲ” ಎಂದು ಒಬ್ಬ ಕಾರ್ಮಿಕ ಮುಖಂಡರು ಹೇಳಿದರು.
ಇದನ್ನು ಓದಿ: ಭಾರತ ಬಂದ್: ಹೆದ್ದಾರಿಗಳು, ರೈಲು ಹಳಿಗಳು, ಟೋಲ್‍ಗಳಲ್ಲಿ ರೈತರ ಪ್ರತಿಭಟನೆ
ಈ ಸರಕಾರ ಕಾರ್ಮಿಕ ಸಂಘಗಳು ಕಾರ್ಮಿಕ ಸಂಹಿತೆಗಳ ಬಗ್ಗೆ ಕೊಟ್ಟಿರುವ ಸೂಚನೆಗಳನ್ನೂ ಕಿವಿಗೆ ಹಾಕಿಕೊಂಡಿಲ್ಲ. ಈ ಭಾರತ ಬಂದ್ ಬಡವರ ಬಗ್ಗೆ, ರೈತರು, ಕಾರ್ಮಿಕರು,ವಿದ್ಯಾರ್ಥಿಗಳು, ಮಹಿಳೆಯರ ಪ್ರಶ್ನೆಗಳ ಬಗ್ಗೆ ಸರಕಾರ ಹೊಂದಿರುವ ತಿರಸ್ಕಾರದ ಫಲಿತಾಂಶ ಎಂದೂ ಅವರು ಹೇಳಿದರು.
ಈ ಸರಕಾರ ಮಾಡುವ ಕಾನೂನುಗಳು ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರಾಗಿಸುತ್ತ ಬಡವರು ಸಾಯುವಂತೆ ಮಾಡುತ್ತಿವೆ. ಆದ್ದರಿಂದ ಎಲ್ಲರೂ ಇದರ ವಿರುದ್ಧ ದನಿಯೆತ್ತಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ದನಿಯೆತ್ತುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಈ ಸರಕಾರ ಆ ದನಿಗಳಿಗೆ ಕಿವಗೊಡಲು ನಿರಾಕರಿಸುತ್ತಿದೆ, ಆದ್ದರಿಂದಲೇ ರೈತರು ಸುಮಾರು ಒಂದು ವರ್ಷದಿಂದ ದಿಲ್ಲಿ ಹೊರಗೆ ಕೂತಿದ್ದಾರೆ ಎಂದು ಇನ್ನೊಬ್ಬ ಮುಖಂಡರು ಹೇಳಿದರು.
ಜಂತರ್ ಮಂತರ್‌ನಲ್ಲಿ ಸಾಮಾನ್ಯವಾಗಿ ಪ್ರತಿಭಟನೆಗಳು ನಡೆಯುವ ಸ್ಥಳವನ್ನು ಬಳಸದಂತೆ ಪೋಲಿಸರು ತಡೆಗಟ್ಟುಗಳನ್ನು ಹಾಕಿ ದೊಡ್ಡ ಸಂಖ್ಯೆಯಲ್ಲಿ ನಿಂತಿದ್ದರು. ಆದ್ದರಿಂದ ಪ್ರತಿಭಟನೆ ಸಮೀಪದಲ್ಲಿ, ಸಂಸದ್ ಮಾರ್ಗ ಪೋಲಿಸ್ ಸ್ಟೇಷನ್ ಬಸ್ ನಿಲ್ದಾಣದ ಎದುರು ನಡೆಯಿತು. ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಿದ್ದಾಗ ಪೋಲೀಸರು ಹಳದಿ ತಡೆಗಟ್ಟುಗಳಿಂದ ಇಣುಕಿ ನೋಡುತ್ತಿದ್ದರು. ಸರಕಾರ ದೇಶದ ನಾಗರಿಕರ ಮಾತುಗಳನ್ನು ಕೇಳಲು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಬೇಕಾದ ಸಮಯವೀಗ ಬಂದಿದೆ ಎಂದು ಪ್ರತಿಭಟನಾಕಾರರು ನೆನಪಿಸಿದರು.