ಕೃಷಿ ಕಾಯ್ದೆ ರದ್ದತಿಗಾಗಿ ಅನ್ನದಾತರ ಭಾರತ್‌ ಬಂದ್‌ ಗೆ ವ್ಯಾಪಕ ಬೆಂಬಲ

ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ವಿವಿಧ ರಾಜ್ಯಗಳ ರೈತರು ನಡೆಸುತ್ತಿರುವ ಪ್ರತಿಭಟನೆ ನಾಲ್ಕು ತಿಂಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಇಂದು  ಭಾರತ್ ಬಂದ್’ಗೆ ಕರೆ ಕೊಟ್ಟಿದ್ದರ ಬೆನ್ನಲ್ಲೇ ದೇಶದ ಹಲವೆಡೆ ಪ್ರತಿಭಟನೆಗಳು  ನಡೆದಿವೆ.  ದೆಹಲಿ, ಪಂಚಾಬ್‌, ರಾಜಸ್ಥಾನ,‌ ಮಹಾರಾಷ್ಟ್ರ ಮಧ್ಯಪ್ರದೇಶ,  ಹರ್ಯಾಣ, ಜಾರ್ಖಂಡ್‌,  ಆಂದ್ರಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿಯೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ಪ್ರತಿಭಟನೆಕಾರರು ಘೋಷಣೆಗಳನ್ನು ಮೊಳಗಿಸಿದರು.

ಅಮೃತಸರ ಸೇರಿದಂತೆ ಪಂಜಾಬ್‌ನ ಹಲವು ನಗರಗಳಲ್ಲಿ ರೈಲುಗಳ ಸಂಚಾರವನ್ನು ತಡೆದು ಪ್ರತಿಭಟನೆಯನ್ನು ನಡೆಸಿದರು.  ದೆಹಲಿಯ ಗಾಜಿಪುರ, ಸಿಂಘು, ಟಿಕ್ರಿಗಡಿಗಳಲ್ಲಿ ಧರಣಿ ನಡೆಸುತ್ತಿರುವ ರೈತರು ನೃತ್ಯ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು,  ಹರ್ಯಾಣದಲ್ಲಿ ಟೋಲ್‌ ಗೇಟ್‌ ಬಂದ್‌ ಮಾಡಿ ರೈತರು ಪ್ರತಿಭಟನೆಯನ್ನು ನಡೆಸಿದರು. ಟೋಲ್‌ ಗೇಟ್‌ ಬಳಿ ಸಮಾವೇಶವನ್ನು ನಡೆಸಿ ಪ್ರತಿಭಟನೆಕಾರರು ಕೃಷಿಕಾಯ್ದೆಯ ಅಪಾಯಗಳ ಕುರಿತು ಮಾತನಾಡ್ತಾ ಇದ್ರು.

ಇನ್ನು ಆಂದ್ರಪ್ರದೇಶದ ವಿಶಾಖಪಟ್ಟಣದಲ್ಲಿ ಎಡಪಕ್ಷಗಳ ಕಾರ್ಯಕರ್ತರು ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಜಾರ್ಖಂಡ್‌, ಮಧ್ಯಪ್ರದೇಶ್‌, ಮಹಾರಾಷ್ಟ್ರ, ಕರ್ನಾಟಕ ರಾಜಸ್ಥಾನನಲ್ಲಿ ಭಾರತ್‌ ಬಂದ್‌ ಗೆ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ಪ್ರತಿಭಟನೆ ನಿರಂತರವಾಗಿ ನಡೆಯಲಿದೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ತಿಳಿಸಿದೆ.

ಬೆಂಗಳೂರಿನ ಟೌನ್‌ ಹಾಲ್ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಹೋರಾಟಗಾರರನ್ನು ಪೋಲಿಸರು ಬಲವಂತದಿಂದ ಬಂಧಿಸಿದರು.

ಕರ್ನಾಟಕದಲ್ಲೂ ಬಂದ್‌ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೂರು ಕೃಷಿ ಕಾಯ್ದೆಗಳನ್ನ ರದ್ದು ಮಾಡಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ  ಕೃಷಿಕಾಯ್ದೆಗಳ ಶವಯಾತ್ರೆಯ್ನು ನಡೆಸಲು ತೀರ್ಮಾನಿಸಿದ್ದರು  ಟೌನ್​​ಹಾಲ್​ ಬಳಿ ಪ್ರತಿಭಟನೆಗೆ ಮುಂದಾಗಿದ್ರು. ಈ ವೇಳೆ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದರು. ರೈತ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್, ಜಿ.ಸಿ.ಬಯ್ಯಾರೆಡ್ಡಿ, ಕವಿತಾ ಕುರುಗಂಟಿ, ಸಿಐಟಿಯು ರಾಜ್ಯಾಧ್ಯಕ್ಷರಾದ ಎಸ್.‌ ವರಲಕ್ಷ್ಮಿ, ರಾಜ್ಯ ಕಾರ್ಯದರ್ಶಿ ಕೆ.ಎನ್.‌ ಉಮೇಶ್‌, ವಿ ಗೋಪಾಲ್‌, ನೂರ್‌ ಶ್ರೀಧರ್‌ ಸೇರಿದಂತೆ ಹಲವು ಮುಖಂಡರನ್ನು ಪೋಲಸರು ಬಂಧಿಸಿ ಬಿಡಿಗಡೆ ಮಾಡಿದರು.

ಕಲಬುರಗಿಯಲ್ಲಿ ನಡೆದ ಬಂದ್‌ ಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದವು. ಬಂದ್​ಗೆ ಅನುಮತಿ ನೀಡದ ಪೊಲೀಸರು, ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿದ ಹಿನ್ನೆಲೆ ಪ್ರತಿಭಟನೆಕಾರರನ್ನು ಬಂಧಿಸಿದರು. ಸುಮಾರು 30ಕ್ಕೂ ಹೆಚ್ಚು ಹೋರಾಟಗಾರರನ್ನು ಬಂಧಿಸಿದ್ದಾರೆ. ಈ  ರೀತಿ ಬಂಧನ ಮಾಡಿರುವುದು ಖಂಡನಾರ್ಹ, ಹೋರಾಟ ಹತ್ತಿಕ್ಕುವ ಸಂಚನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನಡೆಸುತ್ತಿವೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು. ನಗರದ ಗನ್ ಹೌಸ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು. ಗನ್ ಹೌಸ್ ವೃತ್ತದಿಂದ ಹೊರಟ ಮೆರವಣಿಗೆ ಬೆಂಗಳೂರು ರಸ್ತೆ, ಪುರಭವನ ದ ಮೂಲಕ ಗಾಂಧಿ ವೃತ್ತ ತಲುಪಿ ಮೂರು ಅಣಕು ಶವವನ್ನು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ವಿರೋಧಿ ನೀತಿ ಖಂಡಿಸಿ ಹುಬ್ಬಳ್ಳಿಯ  ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ರಸ್ತೆ ತಡೆಯಲು ಮುಂದಾದ ಹೋರಾಟಗಾರರಿಗೆ ರಸ್ತೆ ತಡೆಯಲು ಅನುಮತಿ ನೀಡದ ಕಾರಣಕ್ಕೆ ಆಕ್ರೋಶಗೊಂಡ ರೈತ ಸಂಘಟನೆ ಕಾರ್ಯಕರ್ತರು, ಪೊಲೀಸ್​ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದ ಘಟನೆ ನಡೆದಿದೆ. ಚಿತ್ರದುರ್ಗದಲ್ಲಿ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ವಾಹನಗಳನ್ನು ತಡೆದು ಬಂದ್​ಗೆ ಸಹಕರಿಸುವಂತೆ ಸವಾರರಿಗೆ ಮನವಿ ಮಾಡಿದರು.  ಕೂಡಲೇ ಕೃಷಿ ಕಾಯ್ದೆ ವಾಪಸ್ ಪಡೆಯಬೇಕೆಂದು ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.

ಕೊಪ್ಪಳದಲ್ಲಿ ಬಂದ್‌ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು, ಬಸ್​ ನಿಲ್ದಾಣದಿಂದ ಆಶೋಕ ವೃತ್ತದ ಮೂಲಕ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಅಂಗಡಿ‌-ಮುಂಗಟ್ಟುಗಳನ್ನು ಬಂದ್ ಮಾಡುವಂತೆ ರೈತರು ಮನವಿ ಮಾಡಿಕೊಂಡರು. ರೈತರ ಮನವಿಗೆ ಸ್ಪಂದಿಸಿದ ವ್ಯಾಪಾರಸ್ಥರು ವ್ಯಾಪರ ವಹಿವಾಟನ್ನು ಸ್ಥಗಿತಗೊಳಿಸಿ ಬಂದ್‌ ಗೆ ಸಹಕಾರವನ್ನು ನೀಡಿದರು.

ಗಜೇಂದ್ರಗಡದಲ್ಲಿ ಕೆ.ಕೆ.ವೃತ್ತದಲ್ಲಿ ಕೃಷಿ ಕಾಯ್ದೆಗಳ ಪ್ರತಿಗಳನ್ನು ಸುಟ್ಟು ಪ್ರತಿಭಟನೆ ನಡೆಸಲಾಯಿತು.  ಕೃಷಿಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಘೋಷಣೆಗಳನ್ನು ಮೊಳಗಿಸಲಾಯಿತು. ಸಂಯುಕ್ತ ಕಿಸಾನ್ ಮೋರ್ಚ ಕರೆ ನೀಡಿದ್ದ ಭಾರತ್ ಬಂದ್ ಬೆಂಬಲಿಸಿ ಹಾಸನ ನಗರದಲ್ಲಿ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.

ಭಾರತ್‌ ಬಂದ್‌ ಬೆಂಬಲಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಟಿಕಾಯತ್ ರ ಮೇಲೆ ಹಾಕಿರುವ  ಸುಳ್ಳು ಮೊಕದ್ದಮೆಯನ್ನು ಹಿಂಪಡೆಯಬೇಕೆಂದು ಎಂದು ಆಗ್ರಹಿಸಿದ ಪ್ರತಿಭಟನೆಕಾರರು ಜನವಿರೋಧಿ ಕಾಯ್ದೆಗಳನ್ನು ಸುಟ್ಟು ಆಕ್ರೋಶವನ್ನು ವ್ಯಕ್ತಪಡಿಸಿದರು. ಭಾರತ್‌ ಬಂದ್‌ ಗೆ ದಕ್ಷಿಣ ಕನ್ನಡ, ರಾಯಚೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ, ಸೇರಿದಂತೆ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಕೃಷಿಕಾಯ್ದೆಗಳ ಶವಯಾತ್ರೆಯನ್ನು ನಡೆಸಲಾಯಿತು.

ಇದನ್ನೂ ಓದಿ : ಅಖಿಲ ಭಾರತ ಮುಷ್ಕರ ಬೆಂಬಲಿಸಿ ‘ಕೃಷಿ ಕಾಯ್ದೆಗಳ ಶವಯಾತ್ರೆ’ ನಡೆಸುತ್ತಿದ್ದ ಮುಖಂಡರ ಬಂಧನ

ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ಈವರೆಗೂ 11 ಸುತ್ತಿನ ಮಾತುಕತೆ ನಡೆದಿದ್ದು, ಸಮಸ್ಯೆ ಇತ್ಯರ್ಥವಾಗಿಲ್ಲ. ಹೊಸ ಕೃಷಿ ಕಾಯ್ದೆಗಳನ್ನು 18 ತಿಂಗಳ ವರೆಗೂ ಅಮಾನತಿನಲ್ಲಿ ಇಡುವ ಪ್ರಸ್ತಾಪವನ್ನು ಸರ್ಕಾರ ಜನವರಿಯಲ್ಲಿ ಮುಂದಿಟ್ಟಿತ್ತು. ರೈತ ಸಂಘಟನೆಗಳು ಆ ಪ್ರಸ್ತಾಪವನ್ನು ತಿರಸ್ಕರಿಸಿ ಪ್ರತಿಭಟನೆ ಮುಂದುವರಿಸಿದವು. ಆದರೆ ಕೇಂದ್ರ ಸರಕಾರ ಮತ್ತೆ ರೈತರ ಜೊತೆ ಮಾತನಾಡುವ ಪ್ರಸ್ತಾಪವನ್ನು ಮಾಡಿಲ್ಲ. ಕಾಯ್ದೆ ರದ್ದಾಗುವವರೆಗೂ ಪ್ರತಿಭಟನೆ ನಡೆಸುವುದಾಗಿ ಸಂಯುಕ್ತ ಕಿಸಾನ್‌ ಮೋರ್ಚಾ ನಿರಂತರವಾಗಿ ಹೇಳಿಕೆಯನ್ನು ನೀಡುತ್ತಿದೆ. ಇನ್ನಾದರೂ ಕೇಂದ್ರ ಸರಕಾರ ಕೃಷಿಕಾಯ್ದೆಗಳನ್ನು ರದ್ದು ಮಾಡುವ ನಿಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಬೇಕಿದೆ.

Donate Janashakthi Media

Leave a Reply

Your email address will not be published. Required fields are marked *