ಕೋವಿಡ್‌: ಭಾರತದ ನೆರವಿಗೆ ಸಿದ್ಧವೆಂದ ವಿಶ್ವಸಂಸ್ಥೆ

ಜಿನೇವಾ: ʻಭಾರತಕ್ಕೆ ಕೋವಿಡ್‌-19 ಪರಿಸ್ಥಿತಿಯನ್ನು ತೊಡೆದು ಹಾಕಲು  ಸಾಧ್ಯವಿರುವ ಎಲ್ಲ ರೀತಿಯ ಸಹಾಯ ಮಾಡಲು ವಿಶ್ವಸಂಸ್ಥೆ ಸಿದ್ಧವಿದೆ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಅವರ ಉಪವಕ್ತಾರ ಫರ್ಹಾನ್‌ ಹಕ್‌ ಹೇಳಿದ್ದಾರೆ.

ವಿಶ್ವದಲ್ಲಿ ಕೋವಿಡ್‌-19ರ ಹೊಸ ಪ್ರಕರಣಗಳು ದಾಖಲಾಗುತ್ತಿರುವ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಈಗಾಗಲೇ ಕಳೆದ ಕೆಲವು ದಿನಗಳಿಂದ 3.50 ಲಕ್ಷಕ್ಕೂ ಹೆಚ್ಚು ಹೊಸ ಕೋವಿಡ್‌ ಪ್ರಕರಣಗಳು ಮತ್ತು ಮೂರು ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಇದನ್ನು ಓದಿ: ಭಾರತದಲ್ಲಿ ಕೊರೋನಾ ವೈರಸ್ ಮತ್ತಷ್ಟು ಹೆಚ್ಚಳ

‘ಭಾರತದ ವಿವಿಧ ಹಂತದ ಅಧಿಕಾರಿಗಳೊಂದಿಗೆ ನಾವು ಸತತ ಸಂಪರ್ಕದಲ್ಲಿದ್ದೇವೆ. ನ್ಯೂಯಾರ್ಕ್‌ ಹಾಗೂ ಭಾರತದಲ್ಲಿರುವ ಸಂಬಂಧಪಟ್ಟ ಪ್ರತಿನಿಧಿಗಳೊಂದಿಗೂ ಮಾತುಕತೆ ನಡೆಸಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ಭಾರತದಿಂದ ಈವರೆಗೆ ಸಹಾಯ ಕೋರಿ ಬೇಡಿಕೆ ಬಂದಿಲ್ಲ. ಕೋವಿಡ್‌ ನಿವಾರಿಸಲು ಯಾವುದೇ ಪರಿಹಾರ/ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ನಾವು ಭಾರತಕ್ಕೆ ಕಳುಹಿಸಿಲ್ಲ. ಆದರೆ, ಬೇಡಿಕೆ ಬಂದರೆ ತಕ್ಷಣ ಸ್ಪಂದಿಸಲು ಸಿದ್ಧ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಹಿರಿಯ ಅಧಿಕಾರಿ ಮಾರಿಯಾ ಲೂಯಿಜಾ ರಿಬೈರೊ ವಿವೋಟ್ಟಿ ಅವರು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಟಿ.ಎಸ್‌.ತಿರುಮೂರ್ತಿ ಅವರೊಂದಿಗೂ  ಮಾತುಕತೆ ನಡೆಸಿ, ಭಾರತದಲ್ಲಿನ ಕೋವಿಡ್‌ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ’ ಎಂದು ಹಕ್‌ ತಿಳಿಸಿದ್ದಾರೆ.

ಇದನ್ನು ಓದಿ: ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

130 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಕೋವಿಡ್‌ ನಿವಾರಣೆಗೆ ಬೇಕಾಗುವ ಆಮ್ಲಜನಕ ಸಿಲಿಂಡರ್‌, ರೆಮ್‌ಡೆಸಿವಿರ್‌ ಔಷಧ, ಕೊರೊನಾ ಲಸಿಕೆಗಳ ಭಾರೀ ಕೊರತೆ ಉದ್ಭವವಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಕುಟುಂಬಸ್ಥರು ಟ್ವೀಟರ್‌ ಸೇರಿ ಇನ್ನಿತರ ಸಾಮಾಜಿಕ ವೇದಿಕೆಗಳಲ್ಲಿ ಆಸ್ಪತ್ರೆಗಳ ಹಾಸಿಗೆ, ಆಮ್ಲಜನಕ ಸಿಲಿಂಡರ್‌, ಲಸಿಕೆ ಸೇರಿದಂತೆ ಇನ್ನಿತರ ನೆರವಿನ ನಿರೀಕ್ಷೆ ಮಾಡುತ್ತಿದ್ದಾರೆ.

ಈ ಬಗ್ಗೆ ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೋಸ್‌ ಅಧನೋಮ್‌ ಘೇಬ್ರಿಯೇಸಸ್‌ ಅವರು ಸಹ ‘ಕೊರೊನಾ ವೈರಸ್‌ ಸೃಷ್ಟಿಸಿದ ಆರೋಗ್ಯ ಸಮಸ್ಯೆಯಿಂದಾಗಿ ಭಾರತದ ಆಸ್ಪತ್ರೆಗಳಲ್ಲಿ ಸೋಂಕಿತರು ಹಾಗೂ ಸ್ಮಶಾನಗಳು ಸಹ ತುಂಬಿವೆ. ಕೋವಿಡ್‌ ಸಾಂಕ್ರಾಮಿಕ ರೋಗ ನಿವಾರಣೆಗಾಗಿ ಭಾರತದೊಂದಿಗೆ ಕೈ ಜೋಡಿಸುವುದಾಗಿ’ ಹೇಳಿದ್ದಾರೆ.

ಕೋವಿಡ್‌ ನಿವಾರಣೆಗಾಗಿ ಬೇಕಾಗುವ ಎಲ್ಲಾ ವೈದ್ಯಕೀಯ ನೆರವುಗಳನ್ನು ನೀಡಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *