ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಗೆ ಹೆಚ್ಚುವರಿಯಾಗಿ ಕೋವಾಕ್ಸಿನ್ ಲಸಿಕೆಗಳನ್ನು ನೀಡಲು ಸಾಧ್ಯವಿಲ್ಲವೆಂದು ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್ ದೆಹಲಿ ಸರ್ಕಾರಕ್ಕೆ ತಿಳಿಸಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಆದರೆ ಕೇಂದ್ರ ಸರ್ಕಾರ ಕೋವಿಡ್ ಲಸಿಕೆ ಪೂರೈಕೆ ನಿಯಂತ್ರಿಸುತ್ತಿದೆ ಎಂದು ಆರೋಪಿಸಿರುವ ಅವರು ದೆಹಲಿಯಲ್ಲಿ ಕೋವಾಕ್ಸಿನ್ ಲಸಿಕೆಗಳು ದಾಸ್ತಾನು ಮುಗಿದಿದ್ದು, ಲಸಿಕೆಗಳ ಕೊರೆಯಿಂದಾಗಿ 17 ಶಾಲೆಗಳಲ್ಲಿ ಸ್ಥಾಪಿಸಲಾದ ಸುಮಾರು 100 ವ್ಯಾಕ್ಸಿನೇಷನ್ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ಅವರು ಹೇಳಿದರು.
ಇದನ್ನು ಓದಿ: ಬೇಡಿಕೆ ಇಟ್ಟಿದ್ದು 3 ಕೋಟಿ ಲಸಿಕೆ-ಬಂದದ್ದು 8 ಲಕ್ಷ ಮಾತ್ರ: ಪಿ ರವಿಕುಮಾರ್
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಸೋಡಿಯಾ ಅವರು, ದೆಹಲಿಯು ಒಟ್ಟು 1.34 ಕೋಟಿ ಡೋಸ್ ಅಂದರೆ ಎರಡು ಕೋವಿಡ್ ಲಸಿಕೆಗಳಾದ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ತಲಾ 67 ಲಕ್ಷದಷ್ಟು ಕೇಳಲಾಗಿತ್ತು. ಆದರೆ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಯ ಸೂಚನೆಯ ಮೇರೆಗೆ ಲಸಿಕೆ ಲಭ್ಯವಿಲ್ಲದ ಕಾರಣ ದೆಹಲಿ ಸರ್ಕಾರಕ್ಕೆ ಲಸಿಕೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಕೋವಾಕ್ಸಿನ್ ತಯಾರಕರು ಪತ್ರದ ಮೂಲಕ ತಿಳಿಸಿದ್ದಾರೆ.
ರಾಜ್ಯಗಳಿಗೆ ವಿತರಿಸುವ ಲಸಿಕೆಗಳ ನಿರ್ವಹಣೆಯಲ್ಲಿ ಕೇಂದ್ರ ಸರಕಾರದ ಪಾತ್ರವಿದೆ. ಅಂದರೆ ಮೋದಿ ಸರಕಾರವು ಲಸಿಕೆಗಳ ಹಂಚಿಕೆಯ ವಿಚಾರದಲ್ಲಿ ನಿಯಂತ್ರಣ ಹೇರುತ್ತಿದೆ ಎಂದು ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
ಇದನ್ನು ಓದಿ: ಆರೋಗ್ಯ ಬಿಕ್ಕಟ್ಟಿನ ನಡುವೆ ಲಸಿಕೆ ಬೆಲೆಯಲ್ಲೂ ಹಗರಣ!
“ಕೇಂದ್ರವು ಒಂದು ದೇಶದ ಸರ್ಕಾರವಾಗಿ ಕಾರ್ಯನಿರ್ವಹಿಸಬೇಕು. ಅವರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕೋವಿಡ್ ಲಸಿಕೆಗಳನ್ನು ವಿದೇಶಗಳಿಗೆ ರಫ್ತು ಮಾಡುವುದನ್ನು ನಿಲ್ಲಿಸಬೇಕು ಮತ್ತು ದೇಶದ ಎರಡು ತಯಾರಕರ ಸಂಸ್ಥೆಗಳಿಂದ ಲಸಿಕೆ ಪೂರೈಕೆ ಸಾಕಾಗುವುದಿಲ್ಲ. ಸಾಮೂಹಿಕ ಉತ್ಪಾದನೆಗಾಗಿ ಇತರ ಕಂಪನಿಗಳೊಂದಿಗೆ ಮಾತುಕತೆಗಳನ್ನು ಆರಂಭಿಸಬೇಕು ಎಂದು ದೆಹಲಿ ಉಪಮುಖ್ಯಮಂತ್ರಿ ಹೇಳಿದ್ದಾರೆ.
ಭಾರತದಲ್ಲಿ ಬಳಕೆಗಾಗಿ ವಿದೇಶಗಳಿಂದಲೂ ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಕ್ರಮವಹಿಸಬೇಕು. ಲಸಿಕೆಗಳನ್ನು ಆಮದು ಮಾಡಿಕೊಂಡು ಅವುಗಳನ್ನು ರಾಜ್ಯ ಸರ್ಕಾರಗಳಿಗೆ ಲಭ್ಯವಾಗುವಂತೆ ಮಾಡುವುದು ಕೇಂದ್ರದ ಜವಾಬ್ದಾರಿಯೂ ಆಗಿದೆ. ಕೇಂದ್ರ ಸರಕಾರ ಕೂಡಲೇ ಅನುಮೋದನೆ ನೀಡಿದರೆ ವಿದೇಶಗಳಿಂದ ಲಸಿಕೆಗಳನ್ನು ತರಿಸಿಕೊಳ್ಳಲಾಗುವುದು ಎಂದು ಸಿಸೋಡಿಯಾ ಅವರು ಒತ್ತಾಯಿಸಿದ್ದಾರೆ. ಉತ್ಪತ್ತಿಯಾಗುತ್ತಿರುವ ಲಸಿಕೆಗಳನ್ನು ಮೂರು ತಿಂಗಳೊಳಗೆ ಎಲ್ಲರಿಗೂ ಲಭ್ಯವಾಗುವಂತೆ ರಾಜ್ಯಗಳಿಗೆ ಸೂಚಿಸಬೇಕು ಎಂದಿದ್ದಾರೆ.