- ಕಿಡಿಗೇಡಿಗಳನ್ನು ಗಡಿಪಾರು ಮಾಡಲು ಆಗ್ರಹ
- ದಲಿತ ಹಾಗೂ ಜನಪರ ಸಂಘಟನೆಗಳ ಬೃಹತ್ ಪ್ರತಿಭಟನೆ
- ರಾರಾಜಿಸಿದ ನೀಲಿ ಭಾವುಟ, ಮೊಳಗಿದ ಜೈ ಭೀಮ ಘೋಷಣೆ
- ಮಳೆಯ ಮದ್ಯೆ ಭೀಮ ನಡುಗೆ
ಸಕಲೇಶಪುರ: ತನ್ನ ಮನೆಗೆ ವಾಹನದಲ್ಲಿ ಕರುವನ್ನು ತೆಗೆದುಕೊಂಡು ಹೋಗುತ್ತಿದ್ದ ದಲಿತ ಯುವ ಮುಖಂಡನ ಮೇಲೆ ಬಜರಂಗದಳ ಕಾರ್ಯಕರ್ತರು ಸಕಲೇಶಪುರ ಪಟ್ಟಣದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯನ್ನು ಖಂಡಿಸಿ “ದಲಿತ ಸಮುದಾಯ ಸಕಲೇಶಪುರ” ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಮಿನಿ ವಿಧಾನಸೌದದಿಂದ ಹೊರಟ ಪ್ರತಿಭಟನಕಾರರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಳೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸಭೆ ನಡೆಸಿದರು. ಪ್ರತಿಭಟನಕಾರರು ಉಪವಿಭಾಗಾಧಿಕಾರಿ ಪ್ರತೀತ್ ಬಾಯಲ್, ತಹಶೀಲ್ದಾರ್ ಜಯ ಕುಮಾರ್, ಹಾಗೂ ಪೋಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ವೇಣು ಕುಮಾರ್ ಮಾತನಾಡಿ, ಹಲಸುಲಿಗೆ ಗ್ರಾಮದ ಪರಿಶಿಷ್ಟ ಜಾತಿಯ ದಲಿತ ಮಂಜುನಾಥ್ ಮತ್ತು ಕಾಳೇಶ್ ಅವರ ಮೇಲೆ ಜಾತಿನಿಂದನೆ ಹಲ್ಲೆ, ದೌರ್ಜನ್ಯ ಮಾಡಿರುವ ಬಜರಂಗದಳದ ಸಂಘಟನೆಯ ಹುಲ್ಲಳ್ಳಿ ದೀಪು ಹಾಗೂ ಪದೇ ಪದೇ ಸಂಘಟನೆಯ ಹೆಸರು ಹೇಳಿಕೊಂಡು ಜಾತಿ-ಧರ್ಮದ ವಿಷಯದಲ್ಲಿ ಸಕಲೇಶಪುರದಲ್ಲಿ ಶಾಂತಿ ಕದಡಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡುತ್ತಿರುವ ರೌಡಿಶೀಟರ್ ಗಳಾದ ರಘು, ಗುರುಮೂರ್ತಿ, ಲೋಕೇಶ್, ಶಿವು ಅವರುಗಳನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ದಲಿತ ಮುಖಂಡ ಬೈಕೆರೆ ದೇವರಾಜ್ ಮಾತನಾಡಿ, ಎಸ್ಸಿ ಎಸ್ಟಿ ಕಾಯ್ದೆ ಕೇಸು ದಾಖಲಾಗಿದ್ದ ಕಾರಣಕ್ಕಾಗಿ ಹೋರಾಟಗಾರರಾದ ದಲಿತ ಮುಖಂಡರ ಮೇಲೆ ದುರುದ್ದೇಶದಿಂದ ದಾಖಲಾಗಿರುವ ಸುಳ್ಳು ದೂರು ಪಡೆದು ಪೊಲೀಸರು ಕೌಂಟರ್ ಕೇಸ್ ದಾಖಲು ಮಾಡಿರುವ ಎಫ್ಐಆರ್ ಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ದಸಂಸ ಮುಖಂಡ ವಲಳಹಳ್ಳಿ ವೀರೇಶ ಮಾತನಾಡಿ, ಬಜರಂಗದಳದ ಕಾರ್ಯಕರ್ತರು ಕಾನೂನನ್ನು ಕೈಗೆತ್ತಿಕೊಂಡು ಅನೈತಿಕ ಪೊಲೀಸ್ ಗಿರಿಯನ್ನು ನಗರದಲ್ಲಿ ಪದೇಪದೇ ಪ್ರದರ್ಶಿಸುತ್ತಾ ಕಂಡಕಂಡವರ ಮೇಲೆ ಹಲ್ಲೆ ದೌರ್ಜನ್ಯ ಬೆದರಿಕೆ ಅಕ್ರಮ ವ್ಯವಹಾರಗಳನ್ನು ಮಾಡುತ್ತಾರೆ. ಇವರ ಅಕ್ರಮಗಳಿಗೆ ಸಂಘಟನೆಯನ್ನು ಗುರಾಣಿಯಾಗಿ ಬಳಸುತ್ತಾರೆ. ಪ್ರತಿ ದೌರ್ಜನ್ಯ ಪ್ರಕರಣ ದಲ್ಲೂ ಪೊಲೀಸರು ಕೌಂಟರ್ ಕೇಸ್ ಮಾಡುವ ಹಾಗೆ ಈ ಪ್ರಕರಣದಲ್ಲೂ ಸಹ ಸುಳ್ಳು ದೂರು ಪಡೆದು ಪೊಲೀಸರು ಕೌಂಟರ್ ಕೇಸ್ ಮಾಡಿದ್ದಾರೆ ಎಂದು ಆರೋಪಿಸಿದರು.
ದಸಂಸ ಮುಖಂಡ ಲಕ್ಷ್ಮಣ ಕೀರ್ತಿ ಮಾತನಾಡಿ, ನ್ಯಾಯ ಕೇಳಿದ ಅನ್ಯಾಯಕ್ಕೊಳಗಾದ ದಲಿತ ಯುವಕರ ಮೇಲೆಯೂ ರೌಡಿಶೀಟರ್ ತೆರೆದು ದಲಿತ ಯುವಕರನ್ನು ಬದುಕನ್ನು ಈ ಪೊಲೀಸರು ನಾಶ ಮಾಡುತ್ತಿದ್ದಾರೆ.
ಇಂತಹ ಸಂಚನ್ನು ಇಲಾಖೆಯೊಳಗೆ ಹತ್ತಾರು ವರ್ಷಗಳಿಂದ ಜಂಡಾ ಊರಿ ಇರುವ ಕೆಲವು ಜಾತಿವಾದಿ ಪೊಲೀಸ್ ಪೇದೆಗಳು ಸಂಚು ರೂಪಿಸಿ ಈ ಪ್ರಕರಣದಲ್ಲೂ ಆರೋಪಿಗಳಿಂದ ಸುಳ್ಳು ದೂರು ಪಡೆದು ಹೋರಾಟಗಾರ ದಲಿತ ಯುವಕರ ಮೇಲೆ ಮುಂದೊಂದು ದಿನ ರೌಡಿಶೀಟರ್ ಓಪನ್ ಮಾಡಲು ಮಾಡಿರುವ ಕುತಂತ್ರವಾಗಿದೆ ಎನ್ನುವ ಗುಮಾನಿ ನಮಗಿದೆ ಎಂದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಮಾತನಾಡಿ, ಸಕಲೇಶಪುರದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಲ್ಲಿ ಇವರು ಭಾಗಿಯಾಗುತ್ತಾರೆ. ಗೋ ರಕ್ಷಣೆ ಹೆಸರಿನಲ್ಲಿ ಹೆದ್ದಾರಿಯಲ್ಲಿ ಕದ್ದು ಸಾಗಿಸುವ ದನ ಕಳ್ಳರಿಂದ ಮಾಮೂಲಿ ವಸೂಲಿ, ದನದ ಮಾಂಸದ ವ್ಯಾಪಾರಿಗಳಿಂದ ಹಫ್ತ ವಸೂಲಿ ಮಾಡುವುದು ಇವರ ದಂಧೆಗಳಾಗಿವೆ ಎಂದರು.
ನಂದಿನಿ ಬನವಾಸೆ ಮಾತನಾಡಿ, ಬೇಲಿಯೇ ಎದ್ದು ಹೊಲ ಮೇದ ಹಾಗೆ ರಕ್ಷಣೆ ನ್ಯಾಯ ನೀಡಬೇಕಾದ ಪೊಲೀಸರು-ಆರೋಪಿಗಳ ಪರ ನಿಂತು ನ್ಯಾಯ ಕೇಳುವ ಜನರನ್ನು ಸದೆಬಡೆಯುವ ಕುತಂತ್ರವಾಗಿದೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯಪ್ರವೇಶಿಸಿ ಅನ್ಯಾಯವನ್ನು ತಡೆದು ದಲಿತ ಹೋರಾಟಗಾರರ ಮೇಲೆ ಹಾಕಿರುವ ಕೌಂಟರ್ ಕೇಸನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತೇವೆ ಎಂದರು.
ದಲಿತ ಮುಖಂಡ ಎಸ್ ಎನ್ ಮಲ್ಲಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಹಲಸುಲಿಗೆ ಗ್ರಾಮದ ಪರಿಶಿಷ್ಟಜಾತಿ ಯುವಕ ಮಂಜುನಾಥ್ ಎಂಬುವವರು ನಿಯಮ ಅನುಸಾರವಾಗಿ ದನವನ್ನು ವಾಹನದ ಮೂಲಕ ತನ್ನ ಸಂಬಂಧಿಕರ ಮನೆಗೆ ಸಾಕಲು ಸಾಗಿಸುತ್ತಿದ್ದಾಗ ಸಕಲೇಶಪುರ ನಗರದಲ್ಲಿ ಬಜರಂಗದಳ ಸಂಘಟನೆಯ ಹುಲ್ಲಳ್ಳಿ ದೀಪು ಎಂಬಾತ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿ ಹಲ್ಲೆ ಮಾಡಿ ಜಾತಿನಿಂದನೆ ಮಾಡಿದ್ದಾನೆ. ಪೊಲೀಸರಿಗೆ ದೂರು ಕೊಟ್ಟಿರುವುದನ್ನು ವಿರೋಧಿಸಿ ಮಂಜುನಾಥ್ ಅಣ್ಣನ ಮಗ ಕಾಳೇಶ್ ರವರ ಮೇಲೆ ರೌಡಿಶೀಟರ್ ಗಳಾದ ರಘು, ಗುರುಮೂರ್ತಿ ಸೇರಿದಂತೆ ಹತ್ತು ಜನರ ಗುಂಪು ಹಲ್ಲೆ ಮಾಡಿದೆ ಎಂದರು
ಸಕಲೇಶಪುರ ನಗರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಕುಮಾರಿ ಮಧು ಅವರ ವೈಯಕ್ತಿಕ ವಿಷಯಗಳನ್ನು ಮಾಹಿತಿ ಹಕ್ಕಿನಲ್ಲಿ ಕೇಳಿ ಅವರನ್ನು ಅವಮಾನ ಮಾಡಲಾಗಿತ್ತು. ಮಹಿಳೆಯರನ್ನು ನಿಂದಿಸುವುದು ಇಲ್ಲಿಗೆ ನಿಲ್ಲಲಿಲ್ಲ ನಂತರ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಬಂದ ದಕ್ಷ ಅಧಿಕಾರಿ ದೀಪಕ್ ಅವರು ಇವರ ಅಕ್ರಮಗಳಿಗೆ ಕಡಿವಾಣ ಹಾಕಿದಾಗ ಅವರ ಪತ್ನಿಯ ಬಗ್ಗೆ ಸಾರ್ವಜನಿಕವಾಗಿ ಅಶ್ಲೀಲ ಶಬ್ದಗಳಿಂದ ನಿಂದಿಸಿದರು ಎಂದು ಆರೋಪಿಸಿದರು.
ಈ ಹಿಂದೆ ಸರ್ಕಲ್ ಇನ್ಸ್ ಪೆಕ್ಟರ್ ಆಗಿದ್ದ ವಸಂತ್ ಕುಮಾರ್ ಅವರ ವಿರುದ್ಧವೂ ಸಾರ್ವಜನಿಕವಾಗಿ ನಿಂದಿಸಿದ್ದರು ನಂತರ ಮತ್ತೊಬ್ಬ ಸರ್ಕಲ್ ಇನ್ಸ್ ಪೆಕ್ಟರ್ ಮಂಜಯ್ಯ ಎಂಬವರ ವಿರುದ್ಧ ಸಾರ್ವಜನಿಕವಾಗಿ ಅವರ ಪತಿ ಮತ್ತು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಬಹಿರಂಗವಾಗಿ ನಿಂದಿಸಿದ್ದರು. ಅದೇ ರೀತಿ ಅನೇಕ ಅಧಿಕಾರಿಗಳು ಇವರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾದಾಗ ಸಂಘಟನೆ ಹೆಸರಿನಲ್ಲಿ ಬಗ್ಗುಬಡಿಯುವ ಅವಹೇಳನ ಮಾಡುತ್ತಾರೆ. ಇದರಿಂದ ಬೇಸತ್ತು ಪ್ರಾಮಾಣಿಕ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆಯಾಗಿ ಹೋಗುವಂತೆ ಮಾಡಿ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಿಸುತ್ತಾರೆ ಎಂದರು.
ಜಿಲ್ಲಾ ದಲಿತ ಮುಖಂಡ ಸಂದೇಶ್ ಮಾತನಾಡಿ, ಬಜರಂಗದಳ ಕಾರ್ಯಕರ್ತರು ಬಹಳ ದಿನದಿಂದಲೂ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಮ್ಮದಿಯನ್ನು ಕೆಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಜನಾಂಗೀಯ ದ್ವೇಷ ಇವರ ಚಾಳಿಯಾಗಿದೆ. ಸಕಲೇಶಪುರದಲ್ಲಿ ಇವರ ಸಮಾಜ ವಿರೋಧಿ ಚಟುವಟಿಕೆಗಳಿಂದ ಬಿಗುವಿನ ವಾತಾವರಣ ನಿರ್ಮಾಮವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಹೆತ್ತೂರು ನಾಗರಾಜ್, ಆರ್.ಪಿ.ಐ ಸತೀಶ್, ಡಿವೈಎಫ್ಐನ ಎಂ. ಜಿ ಪೃಥ್ವಿ, ಮರಿಜೋಸಫ್, ಸಿಐಟಿಯುನ ಸೌಮ್ಯ, ಹರೀಶ್, ನವೀನ್ ಸದಾ, ಬೆಳಗೋಡು ಬಸವರಾಜ್, ದೊಡ್ಡಿರಯ್ಯ, ರಾಮಚಂದ್ರರಾವ್, ಎಸ್ ಡಿಪಿಐ ಮುಖಂಡ ಆನಂದ್ ಮಿತ್ತಲ್, ಲಕ್ಷ್ಮೀ, ಭೀಮ್ ಆರ್ಮಿ ಪ್ರದೀಪ್, ವಕೀಲ ರಾದಕೃಷ್ಣ, ಭುವನಾಕ್ಷ, ಸಂದೀಪ, ಸ್ಪಂದನ ವರ್ಣ, ಮುಂತಾದವರು ಭಾಗವಹಿಸಿದ್ದರು.