ಭಾಗ – 14 ʻವೀರʼ ಸಾವರ್ಕರ್‌ – ಏಳು ಮಿಥ್ಯೆಗಳು

ಡಾ.ಶಮ್ಸುಲ್ ಇಸ್ಲಾಂ
ಅನು: ಟಿ. ಸುರೇಂದ್ರರಾವ್

ಮಿಥ್ಯೆಗಳನ್ನು ಸತ್ಯಸಂಗತಿಗಳಿಂದ ಬೇರ್ಪಡಿಸುವ ಒಂದು ಪ್ರಾಮಾಣಿಕ ಆಕಾಂಕ್ಷೆಯಿಂದ ರಚಿಸಿರುವ ಡಾ. ಶಮ್ಸುಲ್ ಇಸ್ಲಾಮ್‌ ರವರ ʻಸಾವರ್ಕರ್ ಅನ್‌ಮಾಸ್ಕ್ಡ್‌ʼ ಸಾವರ್ಕರ್‌ ರವರನ್ನು ಕುರಿತ ಏಳು ಮಿಥ್ಯೆಗಳನ್ನು ದಾಖಲೆಗಳ ಬೆಳಕಿನಲ್ಲಿ ಪರಿಶೀಲಿಸುತ್ತದೆ.

ಮಿಥ್ಯೆ1: ʻಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರʼ!

ಈ ಮಿಥ್ಯೆ ಎಂತಹ ಅರೆ ಸತ್ಯಗಳು ಮತ್ತು ಸುಳ್ಳುಗಳಿಂದ ಕೂಡಿದೆ ಎಂಬುದನ್ನು ಓದಿದ್ದೀರಿ. ಇದರಲ್ಲಿ, ತನ್ನ ರಾಜಕೀಯ ಜೀವನದ ಮೊದಲ ಘಟ್ಟದಲ್ಲಿ ಭಾರತವು ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ಕಣವಾಗಿತ್ತು ಎಂಬ ವಾದವನ್ನಾಗಲೀ ಅಥವಾ ಹಿಂದೂಗಳು ಮಾತ್ರ ಭಾರತದ ಸಹಜ ದೇಶಪ್ರೇಮಿಗಳು ಎಂಬ ನಂಬಿಕೆಯನ್ನಾಗಲೀ ಹೊಂದಿರದಿದ್ದ, ಕೋಮು ಸಾಮರಸ್ಯದ  ಸ್ವತಂತ್ರ ಭಾರತದ ಆದರ್ಶಕ್ಕಾಗಿ ತುಡಿಯುತ್ತಿದ್ದ ಕ್ರಾಂತಿಕಾರಿಯಾಗಿದ್ದ ಸಾವರ್ಕರ್, ಸೆಲ್ಯುಲರ್ ಜೈಲಿನಲ್ಲಿನ ಕಾರಾಗೃಹವಾಸ ಮತ್ತು ಅಲ್ಲಿನ ಘೋರಯಾತನೆ ಕಂಡು ಕ್ಷಮಾಯಾಚನೆಯ ಅರ್ಜಿಯೊಂದಿಗೆ ಆರಂಭಿಸಿದ ಎರಡನೇ ಘಟ್ಟದಲ್ಲಿ ಬ್ರಿಟಿಷ್ ದೊರೆಗಳ ಒಡೆದು ಆಳುವ ಯೋಜನೆಯಲ್ಲಿ ನೆರವಾದರು, ಹೇಗೆ ಧರ್ಮದ ಹೆಸರಿನಲ್ಲಿ ದೇಶಾತೀತ ಸ್ವಾಮಿನಿಷ್ಠೆಯನ್ನು ಪ್ರದರ್ಶಿಸಿದ್ದರು, ರಾಷ್ಟ್ರೀಯ ಆಂದೋಲನ ಅಂಗೀಕರಿಸಿದ್ದ ತ್ರಿವರ್ಣ ಬಾವುಟದ ಕಡು ವಿರೋಧಿಸುತ್ತಲೇ ಇನ್ನೊಂದೆಡೆಯಲ್ಲಿ ಹೇಗೆ ಬ್ರಿಟಿಷರ ಬಂಟರಾಗಿದ್ದ ಹಿಂದೂ ರಾಜರುಗಳ ಮಹಾ ಸಮರ್ಥಕರಾಗಿದ್ದರು ಎಂಬುದನ್ನು ಓದಿದ್ದೀರಿ.

ಮಿಥ್ಯೆ 2: ಸಾವರ್ಕರ್ ತಮ್ಮ ಬದುಕಿನ ಬಹುಭಾಗವನ್ನು ಅಂಡಮಾನಿನ ಸೆಲ್ಯುಲರ್ ಜೈಲಿನಲ್ಲಿ ಕಳೆದರು!

ಸಾವರ್ಕರ್ ನಿಜವಾಗಿಯೂ ಕ್ರಾಂತಿಕಾರಿಯಾಗಿದ್ದಾಗ ಅವರಿಗೆ ಬ್ರಿಟಿಷರು ಎರಡು ವಿಭಿನ್ನ ಪ್ರಕರಣಗಳಲ್ಲಿ ಒಟ್ಟು 50 ವರ್ಷ ಗಡೀಪಾರಿನ ಶಿಕ್ಷೆ ವಿಧಿಸಿದ್ದು ನಿಜ. ಆದರೆ ಅದರಲ್ಲಿ ಅವರು ಅಂಡಮಾನಿನ ಸೆಲ್ಯಲುರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದು ಕೇವಲ 10 ವರ್ಷ. ಆದರೆ ಸಾವರ್ಕರ್ ಅವರ ಸಮಕಾಲೀನರಲ್ಲಿ ಅವರಂತೆ ಮಾಫಿ ಪಡೆಯದ, ಮಾಫಿ ಕೇಳದ ಕ್ರಾಂತಿಕಾರಿಗಳ ದೊಡ್ಡ ಪಟ್ಟಿಯೇ ಸಿಗುತ್ತದೆ. ಅಂತಹ ಕರಾಳ ಪರಿಸ್ಥಿತಿಯಲ್ಲೂ ಹೋರಾಟ ಮುಂದುವರೆಸಿದ, ಜೈಲಿನಲ್ಲೇ ಅಕಾಲಿಕ ವೃದ್ಧರಾದವರ, ಹುತಾತ್ಮರಾದವರ ದೊಡ್ಡ ಪಟ್ಟಿಯೇ ಇದೆ. ಅಂಥಹ ಒಬ್ಬರ ಹೆಸರೂ ಸಾವರ್ಕರ್ ಭಕ್ತರಿಗೆ ಗೊತ್ತಿರಲು ಸಾಧ್ಯವಿಲ್ಲ. ಅಂಥಹ ಕೆಲವು ಸಾಹಸಿಗಳನ್ನು ಲೇಖಕರು ಇಲ್ಲಿ ನೆನಪಿಸಿಕೊಂಡಿದ್ದಾರೆ.

ವಸಾಹತುಶಾಹಿ ಆಳರಸರ ವಿರುದ್ಧ ಸೆಟೆದು ನಿಂತ ನಿಜ ವೀರಕ್ರಾಂತಿಕಾರಿಗಳು

ತ್ರೈಲೋಕ್ಯನಾಥ್‌ ಚಕ್ರವರ್ತಿ

‘ಮಹಾರಾಜ್ʼ ಎಂದು ಕರೆಯಲ್ಪಡುತ್ತಿದ್ದ ಕ್ರಾಂತಿಕಾರಿ ಚಕ್ರವರ್ತಿಯವರು ಆಗಸ್ಟ್ 9, 1970 ರಲ್ಲಿ ದೆಹಲಿಯಲ್ಲಿ ಮರಣ ಹೊಂದಿದರು. 1916 ರಿಂದ 1921 ರವರೆಗೆ ಅವರು ಅಂಡಮಾನ್ ಜೈಲಿನಲ್ಲಿ ಬಂಧನದಲ್ಲಿದ್ದರು ಮತ್ತು ‘ಮೂವತ್ತು ವರ್ಷಗಳ ಜೈಲುವಾಸʼ ಎಂಬ ಪುಸ್ತಕವನ್ನು ಬಂಗಾಳಿಯಲ್ಲಿ ಬರೆದಿದ್ದಾರೆ. 1948 ರಲ್ಲಿ ಪ್ರಕಟವಾದ ಅಪರೂಪದ ಆ ಕೃತಿ ಕೊಲ್ಕತ್ತಾದ ನ್ಯಾಷನಲ್ ಲೈಬ್ರರಿಯಲ್ಲಿ ಲಭ್ಯವಿದೆ. ಅಲ್ಲಿ ಪ್ರತಿಯೊಬ್ಬ ರಾಜಕೀಯ ಖೈದಿಯ ಕುತ್ತಿಗೆಗೆ ಅವರ ‘ಹಿಂದಿನ ಚರಿತ್ರೆʼಯನ್ನು ನಮೂದಿಸಿದ್ದ ʻಟಿಕೆಟ್ʼನ್ನು ತೂಗುಹಾಕಲಾಗುತ್ತಿತ್ತು ಎಂದು ಅದರಲ್ಲಿ ಅವರು ಹೇಳಿದ್ದಾರೆ. ಸ್ವತಃ ಅವರು ತೂಗು ಹಾಕಿಕೊಂಡಿರಬೇಕಾಗಿದ್ದ ʻಟಿಕೆಟಿʼನಲ್ಲಿ ಹೀಗೆ ಬರೆಯಲಾಗಿತ್ತು:

ಹಿಂದಿನ ಚರಿತ್ರೆ; 1914 ರಲ್ಲಿ ರಾಜನ ವಿರುದ್ಧ ಯುದ್ಧ ಸಾರಿದ ಪಿತೂರಿಯೊಂದರಲ್ಲಿ ಇವನು ಬಂಗಾಳಿ ವಿದ್ಯಾರ್ಥಿಗಳ ಪಡೆಯಲ್ಲಿದ್ದವನು. ಭಾರತದಲ್ಲಿನ ಬ್ರಿಟಿಷ್ ಆಳ್ವಿಕೆಯನ್ನು ಕಿತ್ತೊಗೆಯುವ ಉದ್ದೇಶ ಹೊಂದಿದ್ದ ಅನುಶೀಲನ ಸಮಿತಿಯ ಸದಸ್ಯನಾಗಿದ್ದ. ಈ ಸಮಿತಿಯ ಸದಸ್ಯರು ಮದ್ದುಗುಂಡುಗಳನ್ನು ಖರೀದಿಸಲು ಅಗತ್ಯವಿದ್ದ ಹಣಕ್ಕಾಗಿ ಹಲವಾರು ದರೋಡೆಗಳನ್ನು ಮಾಡಿದ್ದರು. ಅವರು ಅಪ್ಪಟ ಅರಾಜಕನಾಗಿದ್ದ ಪಿ ದಾಸ್‌ ನ ಬಳಿ ತರಬೇತಿ ಪಡೆದಿದ್ದರು. ಡಾಕ್ಕಾ ಪಿತೂರಿ ಪ್ರಕರಣದಲ್ಲಿ ಇವನು ತಲೆಮರೆಸಿಕೊಂಡಿದ್ದ. ಕ್ರಾಂತಿಕಾರಿ ಪಕ್ಷದ ಅನೇಕ ಮುಖಂಡರುಗಳಲ್ಲಿ ಇವನೊಬ್ಬ ಮತ್ತು ಇವನು 14 ಕೊಲೆ ಮತ್ತು ದರೋಡೆ ಮಾಡಿರುವ ಶಂಕೆ ಇದೆ. ಬಹಳ ಅಪಾಯಕಾರಿ.

ಇದನ್ನು ಓದಿ: ಭಾಗ -1 ‘ವೀರ’ ಸಾವರ್ಕರ್-ಏಳು ಮಿಥ್ಯೆಗಳು

ಚಕ್ರವರ್ತಿ ಮತ್ತು ಅವರ ಜತೆಯಲ್ಲಿದ್ದ ರಾಜಕೀಯ ಖೈದಿಗಳು ಎಂತಹ ಕಷ್ಟಗಳನ್ನು ಎದುರಿಸಿದರು ಎಂಬುದನ್ನು ಆರ್.ಸಿ. ಮಜುಮ್‌ದಾರ್ ಅವರ ಪುಸ್ತಕದ ವಿವರಣೆಗಳಿಂದ ತಿಳಿದುಕೊಳ್ಳಬಹುದು:

ತೆಂಗಿನ ಕತ್ತದಿಂದ ಹುರಿ ಮಾಡುವ ತೀರ ಕಷ್ಟದ ಕೆಲಸವನ್ನು ಚಕ್ರವರ್ತಿಯವರಿಗೆ ವಹಿಸಲಾಗಿತ್ತು. ತನಗೆ ಅಸ್ತಮಾ ರೋಗವಿದೆ ಎಂಬ ಸಂಗತಿಯನ್ನು ಜೈಲಿನ ಸೂಪರಿಂಟೆಂಡೆಂಟ್‌ಗೆ ಹೇಳಿದಾಗ ಪರೀಕ್ಷೆ ಮಾಡಿ ತಿಳಿದುಕೊಂಡ ಅವನು ʻಇದು ಅಂಡಮಾನ್ʼ ಎಂದು ತೀಕ್ಷ್ಣವಾಗಿ ಹೇಳಿದ. ಒಮ್ಮೆ ಈ ಧೂಳಿನ ಕೆಲಸದಿಂದಾಗಿ ಅಸ್ತಮಾ ಹೆಚ್ಚಾಗಿ ಉಸಿರಾಡುವುದೇ ಕಷ್ಟವಾದಾಗ ಅಕ್ಕಪಕ್ಕದಲ್ಲಿದ್ದವರು ಅವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ಒಳರೋಗಿಯಾಗಿ ಸೇರಿಸಿದರು. ಮರುದಿನ ಚಕ್ರವರ್ತಿಯವರು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಇರುವುದನ್ನು ತಿಳಿದ ಜೈಲಿನ ಸೂಪರಿಂಟೆಂಡೆಂಟ್ ತೀವ್ರಕೋಪಗೊಂಡು ಅವರನ್ನು ಆಸ್ಪತ್ರೆಯಿಂದ ಕೂಡಲೇ ಬಿಡಿಸಿಕೊಂಡು ಬಂದು ʻನೀನು ದೇಶದಲ್ಲಿ ಅವ್ಯವಸ್ಥೆಯನ್ನು ಹುಟ್ಟುಹಾಕಿದವನು ಅನ್ನೋದು ನೆನಪಿಲ್ಲವಾ, ಜೈಲಿನಲ್ಲಿ ನಿನಗೆ ಕುಡಿಯಲು ಹಾಲು ಕೊಡಬೇಕಾ?ʼ ಎಂದು ಅವರ ಮುಖಕ್ಕೇ ಹೇಳಿದ. ಅವತ್ತು ರಾತ್ರಿಯಿಡೀ ಕೆಮ್ಮುತ್ತಿದ್ದ ಚಕ್ರವರ್ತಿಯವರು ಕಫ ಉಗುಳಲು ಸಣ್ಣ ಪಾತ್ರೆ ಕೊಡಿ ಎಂದು ಕೇಳಿದರೆ, ಅದನ್ನೂ ತಿರಸ್ಕರಿಸಿದರು. ರಾತ್ರಿಇಡೀ ಕೆಮ್ಮಿ ಸುಸ್ತಾಗಿ ಮಲಗಿಕೊಂಡರೆ ವಾರ್ಡನ್ ಪದೇ ಪದೇ ಬಂದು ಮೈಮುಟ್ಟಿ ಎಬ್ಬಿಸಿ, ಜೀವಂತ ಇದ್ದಾರೋ ಎಂದು ನೋಡಿಕೊಂಡು ಹೋಗುತ್ತಿದ್ದ.

ಯಾವ ಖೈದಿಯ ಪಕ್ಕದಲ್ಲೂ, ಊಟ ಮಾಡುವಾಗಲೂ ಕೂಡ ಮತ್ತೊಬ್ಬ ಖೈದಿ ಇರದಂತೆ ಮತ್ತು ಮಾತನಾಡಲು ಅವಕಾಶವಿಲ್ಲದಂತೆ ನೋಡಿಕೊಳ್ಳುತ್ತಿದ್ದರು ಆ ಜೈಲಲ್ಲಿ. ಚಕ್ರವರ್ತಿಯವರ ಪುಸ್ತಕದ ಪ್ರಕಾರ ಮತ್ತು ಇತರ ಅಧಿಕೃತ ದಾಖಲೆಗಳ ಪ್ರಕಾರವೂ ತಿಳಿದಂತೆ ಸೆಲ್ಯುಲರ್ ಜೈಲಿನಲ್ಲಿ ಪ್ರತಿ ತಿಂಗಳೂ ಸರಾಸರಿ ಮೂವರು ಖೈದಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಅಷ್ಟರಮಟ್ಟಿನ ಕ್ರೂರ ವ್ಯವಸ್ಥೆ ಆ ಅಂಡಮಾನ್ ಜೈಲಿನಲ್ಲಿ ಇತ್ತು.

ಇದನ್ನು ಓದಿ: ಭಾಗ – 2 `ವೀರ’ ಸಾವರ್ಕರ್- ಏಳು ಮಿಥ್ಯೆಗಳು

ಆದರೆ ಒಂದು ದೊಡ್ಡ ಸಂಖ್ಯೆಯ ಕ್ರಾಂತಿಕಾರಿಗಳು ಈ ಭೀಕರ ನಡವಳಿಕೆಯನ್ನು ಸಹಿಸುತ್ತಿರಲಿಲ್ಲ. ಈ ರಾಜಕೀಯ ಖೈದಿಗಳು ತಮ್ಮ ಹಿಂದಿನವರಂತೆಯೇ ಬಹಿರಂಗವಾಗಿಯೇ ಧಿಕ್ಕರಿಸುವ ಮೂಲಕ ಇಂತಹ ಪರಿಸ್ಥಿತಿಯನ್ನು ಬದಲಿಸಲು ಪ್ರಯತ್ನಿಸುತ್ತಿದ್ದರು. ಇದು ರಾಜಕೀಯ ಖೈದಿಗಳ ನಡುವೆ ವಿಭಜನೆಗೆ ಕಾರಣವಾಯಿತು. ʻಮಂದಗಾಮಿಗಳುʼ ಮತ್ತು ʻಉಗ್ರಗಾಮಿಗಳುʼ ಎಂದು ಎರಡು ಭಾಗವಾಯಿತು. ನಮಗಿಂತಲೂ ಮುಂಚೆಯೇ ಇಲ್ಲಿಗೆ ಬಂದಿದ್ದ ಸಾವರ್ಕರ್ ಹಾಗೂ ಬರೀನ್ ಬಾಬುರಂಥವರು ಇದೇ ರೀತಿಯ ಗೋಳನ್ನೇ ಅನುಭವಿಸಿದವರು ಮತ್ತು ಬಹಳ ಗುದ್ದಾಡಿ ಸೂಪರಿಂಟೆಂಡೆಂಟರಿಂದ ಕೆಲವು ರಿಯಾಯಿತಿಗಳನ್ನು ಪಡೆದಿದ್ದರು ಮತ್ತು ಅವರ ಆಪ್ತರಾಗಿ ಹಲವು ಸೌಲಭ್ಯಗಳನ್ನು ಪೀಕಿಸಿಕೊಂಡಿದ್ದರು. ಈ ಗುಂಪು ಅವರನ್ನು ಧಿಕ್ಕರಿಸಲು ಸಿದ್ಧರಿರಲಿಲ್ಲ ಮತ್ತು ನಮ್ಮ ಜತೆ ಹೋರಾಡಲು ಬರುತ್ತಿರಲಿಲ್ಲʼ ಎಂದು ಚಕ್ರವರ್ತಿ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ʻನನ್ನ ಅನಾರೋಗ್ಯದ ಕಾರಣಕ್ಕಾಗಿ ಪ್ರತಿಭಟನೆ ಮಾಡಿದ್ದ ನಮ್ಮ ಮಿತ್ರರ ಜತೆ ಸೇರಿ ಜೈಲಿನ ನಿಯಮಗಳನ್ನು ಪಾಲಿಸದಿರುವ ಮತ್ತು ಅಧಿಕಾರಿಗಳ ಆದೇಶವನ್ನು ಧಿಕ್ಕರಿಸುವ ಚಳವಳಿಗೆ ನಾನು ಸೇರಿಕೊಂಡೆ. ನಮಗೆ ಕೊಡುತ್ತಿದ್ದ ಕೆಲಸವನ್ನು ಮಾಡುತ್ತಿರಲಿಲ್ಲ ಮತ್ತು ನಮಗೆ ನೀಡುತ್ತಿದ್ದ ಆದೇಶ ಅಥವಾ ಶಿಕ್ಷೆಯನ್ನು ಮಾನ್ಯಮಾಡುತ್ತಿರಲಿಲ್ಲ. ನಾವು ಪರಸ್ಪರ ಮಾತನಾಡಿಕೊಂಡೆವು, ಕೀಳು ಗುಣಮಟ್ಟದ ಹಾಗೂ ಕಡಿಮೆ ಪ್ರಮಾಣದ ಆಹಾರದ ವಿರುದ್ಧ ಮತ್ತು ಯಾರಾದರೂ ಖೈದಿಗಳಿಗೆ ಅಧಿಕಾರಿಗಳು ಹೊಡೆಯುತ್ತಿದ್ದರೆ ಎಲ್ಲಾ ಸೇರಿ ಅದನ್ನು ತಡೆದು ತೀವ್ರತರದ ಶಾಂತಿಭಂಗ ಮಾಡುವ ಪ್ರತಿಭಟನೆಗಳನ್ನು ಮಾಡುತ್ತಿದ್ದೆವು. ಯಥಾಪ್ರಕಾರ ನಮಗೆ ದಂಡನೆ ವಿಧಿಸಿದರು. ಕೈಕೋಳ ತೊಡಿಸಿದರು, ಕಟ್ಟಿಹಾಕಿದರು, ನಿರ್ಬಂಧ ಹೇರಿದರು, ಹಗಲು ಇರುಳೂ ಪ್ರತ್ಯೇಕ ಕೋಣೆಯಲ್ಲಿ ಒಂಟಿ ಸೆರೆ ಶಿಕ್ಷೆ ಎಲ್ಲವನ್ನೂ ನೀಡಿದರು. ಸಿಖ್ಖರು 40 ವಯಸ್ಸಿಗೂ ಮೇಲ್ಪಟ್ಟವರು ಮತ್ತೆ ಕೆಲವರು ಐವತ್ತರ ಮೇಲಿದ್ದವರೂ ಧೀರೋದಾತ್ತರಾಗಿ ಎಲ್ಲಾ ಕಿರುಕುಳಗಳನ್ನು ಸಹಿಸಿಕೊಂಡರು. ಒಂದು ಮಧ್ಯಾಹ್ನ, ಅಮರ್ ಸಿಂಗ್ ತಮ್ಮ ಕೆಲಸಗಳನ್ನೆಲ್ಲಾ ಮಾಡಿ ಮುಗಿಸಿ ವರಾಂಡಾದಲ್ಲಿ ತಿರುಗಾಡುತ್ತಿದ್ದಾಗ ʻಏಕೆ ಓಡಾಡ್ತಾ ಇದೀಯಾʼ ಎಂದು ಜೈಲರ್ ಅವರನ್ನು ಗದರಿಸಿದ್ದಲ್ಲದೇ, ನಂತರ ಅದಕ್ಕಾಗಿ ಮೂರು ತಿಂಗಳ ಕಾಲ ಕಠಿಣ ಶಿಕ್ಷೆ ವಿಧಿಸಿದರು ಕೂಡ.ʼ

ಇವೆಲ್ಲವನ್ನೂ ಚಕ್ರವರ್ತಿ ತಮ್ಮ ಪುಸ್ತಕದಲ್ಲಿ ಸವಿವರವಾಗಿ ತಿಳಿಸಿದ್ದಾರೆ.

ʻʻಇಷ್ಟು ಸಾಲದು ಎಂಬಂತೆ ಕೆಲವು ಬಾರಿ ಜಮಾದಾರರು, ಟಿಂಡಾಲರು, ಸಣ್ಣಪುಟ್ಟ ಅಧಿಕಾರಿಗಳು ಮತ್ತು ವಾರ್ಡನ್ನುಗಳು ಕೂಡ ಅವಕಾಶ ಸಿಕ್ಕಾಗಲೆಲ್ಲಾ ರಾಜಕೀಯ ಖೈದಿಗಳನ್ನು ಹೊಡೆಯುತ್ತಿದ್ದರು. ಒಮ್ಮೆ ಬಾನ್ ಸಿಂಗ್ ಅವರನ್ನು ನಿರ್ದಯವಾಗಿ ಹೊಡೆದಾಗ ಅವರು ಸತ್ತೇ ಹೋಗುತ್ತಾರೇನೋ ಎಂದು ನಾವು ಭಾವಿಸಿದ್ದೆವು. ಅದರ ವಿರುದ್ಧವಾಗಿ ನಾವು ಎಪ್ಪತ್ತು ಖೈದಿಗಳು ಮುಷ್ಕರ ಹೂಡಿದೆವು–ಯಾವ ಕೆಲಸವನ್ನೂ ಮಾಡಲಿಲ್ಲ ಹಾಗೂ ಸಾಮರ್ಥ್ಯವಿದ್ದವರು ಆಹಾರವನ್ನೂ ತೆಗೆದುಕೊಳ್ಳಲಿಲ್ಲ. ಆ ಅಪರಾಧಕ್ಕಾಗಿ ನಮಗೆ ಪ್ರತಿಯೊಬ್ಬರಿಗೂ ಆರು ತಿಂಗಳ ಕಾಲ ದಂಡವೇರಿ (ಬಾರ್ ಫೆಟ್ಟರ‍್ಸ್‌) ಶಿಕ್ಷೆ, ಆರು ತಿಂಗಳ ಕಾಲ ಪ್ರತ್ಯೇಕ ಕೋಣೆಯ ಏಕಾಂತವಾಸದ ಶಿಕ್ಷೆ ಮತ್ತು ಒಂದು ವಾರ ಕಾಲ ಕೈಕೋಳ ಹಾಕಿ ಪಡಿತರ ಕಡಿತ ಮಾಡಿದರು.

ಇದನ್ನು ಓದಿ: ಭಾಗ – 3 ‘ವೀರ’ ಸಾವರ್ಕರ್ – ಏಳು ಮಿಥ್ಯೆಗಳು

ʻʻಒಂದು ದಿನ ಮುಖ್ಯ ಅಧಿಕಾರಿಗಳು ಸೆಲ್ಯುಲರ್ ಜೈಲ್ ಭೇಟಿಗೆ ಬಂದರು. ನನ್ನತ್ತ ಬಹಳ ಕೆಟ್ಟದಾಗಿ ನೋಡುತ್ತಾ ʻಏಕೆ ಈ ರೀತಿ ತೊಂದರೆ ಮಾಡ್ತಾ ಇದೀಯಾ?ʼ ಎಂದಾಗ ನಾನು ನಮಸ್ಕರಿಸಿ ಭಾನ್ ಸಿಂಗ್ ಅವರಿಗೆ ನಿರ್ದಯವಾಗಿ ಹೊಡೆದಿದ್ದನ್ನು ಸೌಮ್ಯವಾಗಿ ವಿವರಿಸಿದೆ. ಮೊದಮೊದಲು ಅವರು ಅದನ್ನು ನಿರಾಕರಿಸಿದರು, ಆಸ್ಪತ್ರೆಗೆ ಹೋಗಿ ಅವರ ಪರಿಸ್ಥಿತಿಯನ್ನು ಕಣ್ಣಾರೆ ನೋಡಿ ಎಂದು ಕೋರಿಕೊಂಡಾಗ ಆ ಅಧಿಕಾರಿ ನನ್ನ ಮೇಲೆ ರೇಗಿ, ʻಅದರಿಂದ ನಿನಗೇನಾಗೇಕು, ಅವನೇನು ನಿನ್ನ ಮಾವನೂ ಅಲ್ಲ, ಅಣ್ಣನೂ ಅಲ್ಲ, ನಿನ್ನ ಬಗ್ಗೆ ಹೇಳುʼ ಗದರಿದರು. ಆಗ ನಾನು ನನ್ನ ಅಸ್ತಮಾದ ಬಗ್ಗೆ ಹೇಳಿ, ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಸೂಪರಿಂಟೆಂಡೆಂಟರು ಹಿಂದಕ್ಕೆ ಕರೆತಂದಿದ್ದು ಎಲ್ಲಾ ವಿವರವಾಗಿ ಹೇಳಿದೆ. ಅಲ್ಲಿಯೇ ಇದ್ದ ಸೂಪರಿಂಟೆಂಡೆಂಟ್ ʻಅದೆಲ್ಲಾ ಸುಳ್ಳು ಸರ್, ನನಗೆ ಸರಿಯಾಗಿ ನೆನಪಿದೆ, ಅವತ್ತು ಅವನು ಚೆನ್ನಾಗಿಯೇ ಇದ್ದʼ ಎಂದ. ಆಗ ನನ್ನ ಬಳಿ ಇದ್ದ ಆಸ್ಪತ್ರೆ ಚೀಟಿಯನ್ನು ತೋರಿಸಿದಾಗ, ಮುಖ್ಯ ಅಧಿಕಾರಿ ʻಇದು ನಿನ್ನ ಬಹಾನಾ (ನೆಪ) ಅಷ್ಟೆʼ ಎಂದು ಹೊರಟೇ ಹೋದ. ಆದರೆ ಆ ಅಧಿಕಾರಿ ಭೇಟಿಕೊಟ್ಟ ಕಡೆಗಳಲ್ಲೆಲ್ಲಾ ಸಿಕ್ಕ ಸ್ವಾಗತ ಒರಟಾಗಿಯೇ ಇತ್ತು.ʼʼ  ಎಂದು ಅವರು ಬರೆದಿದ್ದಾರೆ.

ಇದರಲ್ಲಿ ಅತ್ಯಂತ ಕೆಟ್ಟ ಪ್ರಕರಣವೆಂದರೆ ಚಾತರ್ ಸಿಂಗ್ ಅವರದು. ಅವರು ಸೂಪರಿಂಟೆಂಡೆಂಟ್ ಮೇಲೆ ಹಲ್ಲೆ ಮಾಡಿದ್ದರು. ಆ ಅಪರಾಧಕ್ಕಾಗಿ ಐದು ವರ್ಷಗಳ ಕಾಲ ದಂಡ ಹಾಗೂ ಕೈಕೋಳ ಹಾಕಿ ಏಕಾಂತವಾಸದ ಶಿಕ್ಷೆ ವಿಧಿಸಿದ್ದರು. ಸೆಲ್ಯುಲರ್ ಜೈಲಿನಲ್ಲಿನ ಶಿಕ್ಷೆಯ ಬಗ್ಗೆ ಮಜುಮ್‌ದಾರ್ ತಮ್ಮ ಪುಸ್ತಕದಲ್ಲಿ ಹೀಗೆ ವಿಶದಪಡಿಸುತ್ತಾರೆ:

ಇದನ್ನು ಓದಿ: ಭಾಗ – 4 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಮಾರ್ಷಲ್ ಲಾ ಪ್ರಕರಣದಲ್ಲಿ ಶಿಕ್ಷೆಗೆ ಒಳಪಟ್ಟಿದ್ದ ಪಂಜಾಬ್ ಹಾಗೂ ಅಹಮದಾಬಾದಿನ ಖೈದಿಗಳು ಸೆಲ್ಯುಲರ್ ಜೈಲಿಗೆ ಬಂದಾಗ ಅವರಿಗೆ ಎಣ್ಣೆ ಹಿಂಡುವ ಗಿರಣಿಯ ಕೆಲಸವನ್ನು ನೀಡಲಾಗುತ್ತಿತ್ತು, ಆದರೆ ಅವರು ತಮ್ಮ ಸತ್ಯಾಗ್ರಹದ ಭಾಗವಾಗಿ ಅಂತಹ ಕೆಲಸ ಮಾಡುವುದಿಲ್ಲ ಎಂದು ತಿರಸ್ಕರಿಸುತ್ತಾರೆ. ಆಗ ಜೈಲರನ ಆದೇಶದ ಮೇರೆಗೆ ಅವರ ಕೈಕಾಲುಗಳನ್ನು ಹೆಡೆಮುರಿಕಟ್ಟಿ ಎಣ್ಣೆಗಿರಣಿಯ ಉದ್ದದ ಕಾವಿಗೆ ಕಟ್ಟುತ್ತಾರೆ. ಅದನ್ನು ಉಳಿದವರು ಗಾಣದ ಸುತ್ತ ಮತ್ತೆ ಮತ್ತೆ ತಿರುಗಿಸುತ್ತಾರೆ. ಆ ನಂತರ ಅವರನ್ನು ಅದೇ ಸ್ಥಿತಿಯಲ್ಲಿ ನೆಲದ ಮೇಲೆ ದರದರನೆ ಎಳೆದ ಕಾರಣ ಅವರ ಮೈಯೆಲ್ಲಾ ಗಾಯಗಳಾಗುತ್ತವೆ. ಆಗ ಕೆಲವು ಮುಷ್ಕರ ನಿರತ ಹಳೆಯ ಖೈದಿಗಳು ಅಲ್ಲಿಗೆ ನುಗ್ಗಿ ಬಂದು ಭಾರಿ ಗಲಾಟೆ ಮಾಡಿದ್ದರಿಂದ ಗಾಣಕ್ಕೆ ಕಟ್ಟಲ್ಪಟ್ಟಿದ್ದ ಆ ನತದೃಷ್ಟ ಖೈದಿಗಳನ್ನು ಮುಕ್ತಗೊಳಿಸಿ ಏಕ ಕೋಣೆಯ ಒಂಟಿ ಸೆರೆಗೆ ತಳ್ಳುತ್ತಾರೆ… ಮರುದಿನ ಜೈಲು ಬೇಟಿಗೆ ಬಂದ ಸೂಪರಿಂಟೆಂಡೆಂಟ್ ಬಳಿ ಚಕ್ರವರ್ತಿಯವರು ಆ ಗಾಣಕ್ಕೆ ಕಟ್ಟಲ್ಪಟ್ಟಿದ್ದ ಖೈದಿಗಳ ಮೇಲೆ ನಡೆದ ಅಮಾನವೀಯ ಕೃತ್ಯವನ್ನು ಹೇಳುತ್ತಾರೆ. ಅದಕ್ಕೆ ಸೂಪರಿಂಟೆಂಡೆಂಟ್ ಚಕ್ರವರ್ತಿಯವರ ಮೇಲೆ ರೇಗುತ್ತಾರೆ ʻʻಇಲ್ಲಿ ಸೂಪರಿಂಟೆಂಡೆಂಟ್ ನಾನೋ ಅಥವಾ ನೀನೋʼʼ ಎಂದಾಗ ಚಕ್ರವರ್ತಿಯವರು ವಿನೀತರಾಗಿ ʻʻಖಂಡಿತವಾಗಿಯೂ ತಾವೇ ಸರ್, ಆದ್ದರಿಂದ ನಾನು ನಿಮ್ಮ ಬಳಿ ಕೇಳುತ್ತಿರುವುದು ಆ ಖೈದಿಗಳನ್ನು ಏಕೆ ಅಷ್ಟು ಅಮಾನುಷವಾಗಿ ಹಿಂಸೆ ಕೊಟ್ಟಿದ್ದುʼʼ ಎಂದು ಹೇಳಿದರು. ಆಗ ಗದರಿದ ಸೂಪರಿಂಟೆಂಡೆಂಟ್ ʻʻನಾಲಿಗೆ ಬಿಗಿ ಹಿಡಿ, ಹಂದಿ ಮಗನೆʼʼ. ಇದನ್ನು ಸಹಿಸದ ಚಕ್ರವರ್ತಿಯವರು ʻʻನಿನ್ನ ನಾಲಿಗೆ ಬಿಗಿ ಹಿಡಿ, ಸೂಳೆ ಮಗನೆʼʼ ಎಂದು ಕೋಪದಲ್ಲಿ ತಿರುಗಿಕೊಟ್ಟರು. ಚಕ್ರವರ್ತಿಯವರು ಇದೇ ರೀತಿಯಲ್ಲಿ ಹಿಂದಿ ಹಾಗೂ ಪಂಜಾಬಿ ಭಾಷೆಯಲ್ಲಿ ಎಲ್ಲಾ ಅಧಿಕಾರಿಗಳನ್ನು ಬಯ್ಯುತ್ತಾರೆ. ಇದರಿಂದಾಗಿ ಅಂದು ಗಲಿಬಿಲಿಗೊಂಡು ಹಿಂತಿರುಗಿದ ಸೂಪರಿಂಟೆಂಡೆಂಟ್ ಚಕ್ರವರ್ತಿಯವರಿಗೆ ಶಿಕ್ಷೆ ವಿಧಿಸಿ, ನಾಲ್ಕು ದಿನಗಳ ಕಾಲ ದಿನಕ್ಕೆ ಕೇವಲ ಒಂದು ಪೌಂಡ್ ಗಂಜಿಯನ್ನು ಮಾತ್ರ ಕೊಡಲಾಗುತ್ತದೆ.

ಚಕ್ರವರ್ತಿಯವರು ತಮ್ಮ ಆತ್ಮಕಥನದಲ್ಲಿ ಜೈಲಿನ ಸ್ಥಿತಿಯನ್ನು ವಿವರಿಸುತ್ತಾರೆ. ದಷ್ಟಪುಷ್ಟರಾಗಿ ಆರೋಗ್ಯವಂತರಾಗಿದ್ದ ಸಿಖ್ ಖೈದಿಗಳು ಸ್ವಲ್ಪ ಪ್ರಮಾಣದ ಆಹಾರದಿಂದ ಸೋತುಹೋಗಿದ್ದರು, ಅವರಲ್ಲಿ ಅನೇಕರ ತೂಕ 40 ರಿಂದ 60 ಪೌಂಡಿನಷ್ಟು ಕಡಿಮೆಯಾಗಿತ್ತು….. ಒಂದು ದಿನ, ಖೈದಿಗಳು ಊಟ ಮಾಡುತ್ತಿದ್ದಾಗ ಜೈಲರ್ ಬಂದು ಹಿರಿಯ ಸಿಖ್ ಖೈದಿ ನಾದನ್ ಸಿಂಗನ್ನು ʻʻಹೇಗಿದ್ದೀಯಪ್ಪಾ?ʼʼ ಎಂದು ಕೇಳಿದಾಗ ನಾದನ್‌ ಸಿಂಗ್ ಉತ್ತರ ಹೀಗಿತ್ತು: ʻʻಏನು ನಿನ್ನ ಮಗಳನ್ನು ಮದುವೆ ಮಾಡಿಕೊಡ್ತೀಯ? ಹಗಲೂ ರಾತ್ರಿ ಕೈಕೋಳ ತೊಡಿಸಿ ಒಂಟಿಸೆರೆಯಲ್ಲಿ ಕೂಡಿ ಹಾಕಿ ತಿಂದು ಬದುಕಲು ಉಪವಾಸದ ಆಹಾರ ಕೊಟ್ಟು, ಹೇಗಿದ್ದೀಯಾ ಎಂದು ಕೇಳೋಕೆ ಎಷ್ಟು ಧೈರ್ಯ ನಿನಗೆ?ʼʼ. ಮರು ಮಾತಾಡದೆ ಜೈಲರ್ ಅಲ್ಲಿಂದ ಕಂಬಿ ಕಿತ್ತ. ಅವನ ಬತ್ತಳಿಕೆಯಲ್ಲಿದ್ದ ಎಲ್ಲಾರೀತಿಯ ದಂಡ ಹಾಗೂ ಶಿಕ್ಷೆಗಳು ಮುಗಿದುಹೋಗಿದ್ದವು, ಆರಂಭದಲ್ಲಿ ಭಯ ಹುಟ್ಟಿಸುತ್ತಿದ್ದ ಆ ಶಿಕ್ಷೆಗಳಿಗೆ ಖೈದಿಗಳು ಒಗ್ಗಿಹೋಗಿದ್ದರು ಮತ್ತು ಎದುರು ಬೀಳುತ್ತಿದ್ದರು.

ಇದನ್ನು ಓದಿ: ಭಾಗ – 5 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 6 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 7 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 8 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 9 ʻವೀರʼ ಸಾವರ್ಕರ್‌ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 10 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 11 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

Donate Janashakthi Media

Leave a Reply

Your email address will not be published. Required fields are marked *