ಬೆಂಗಳೂರು : ಬಜೆಟ್‌ನಲ್ಲಿ ಘೋಷಿಸಿರುವಂತೆ ಕೇಂದ್ರ ಸರ್ಕಾರ ಬರ ಸಂಭವನೀಯ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ಒತ್ತಾಯಿಸಿದರು. ಭದ್ರಾ
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್.ಕೆ ಪಾಟೀಲ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಪಟ್ಟ ಎಲ್ಲಾ ಹಂತದ ಮಂಜೂರಾತಿಗಳು ದೊರೆತಿದ್ದು, ಇದು ರಾಷ್ಟ್ರೀಯ ಯೋಜನೆಗಾಗಿ ಘೋಷಣೆ ಮಾಡಲು ಎಲ್ಲಾ ಅರ್ಹತೆ ಪಡೆದಿದೆ ಎಂದು ರಾಜ್ಯಸಭೆಗೆ ಕಳೆದ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
ಅಲ್ಲದೆ, ಕೇಂದ್ರ ಸರ್ಕಾರದ 2023-24ನೇ ಮುಂಗಡ ಪತ್ರದ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ರವರು 5,300 ಕೋಟಿ ರೂ. ವಿಶೇಷ ಅನುದಾನ ಘೋಷಿಸಿದ್ದಾರೆ.
ವಿಧಾನಸಭೆಗೆ 2023ರ ಸಾರ್ವತ್ರಿಕ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಮುಂಗಡ ಪತ್ರದ ಭಾಷಣದಲ್ಲಿ ತಾನೇ ಘೋಷಿಸಿದ ಘೋಷಣೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ.
ಈ ಕುರಿತು ರಾಜ್ಯದ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಬರೆದ ಪತ್ರಕ್ಕೆ ಉತ್ತರ ಬರೆದ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನರುಜ್ಜೀವನ ಇಲಾಖೆಯ ಕಾರ್ಯದರ್ಶಿ ಶ್ರೀಮತಿ. ದೇಬಶ್ರೀ ಮುಖರ್ಜಿಯವರು ಪರೋಕ್ಷವಾಗಿ ಅನುದಾನ ಬಿಡುಗಡೆಗೆ ನಿರಾಕರಿಸಿದ್ದಾರೆ ಎಂದು ಆಕ್ಷೇಪಿಸಿದರು.
ಇದನ್ನು ಓದಿ : ಗಣೇಶ ವಿಸರ್ಜನೆ ವೇಳೆ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವು
ಕೇಂದ್ರ ಸರ್ಕಾರದ ನಿಯಮಗಳು ಮತ್ತು ಷರತ್ತುಗಳಂತೆ ಎಲ್ಲಾ ಹಂತಗಳಲ್ಲೂ ಅನುಮೋದನೆಗೊಂಡು ಮುಂಗಡ ಪತ್ರದಲ್ಲಿ ಘೋಷಣೆಯಾಗಿರುವ ಯೋಜನೆಗೆ ಈಗ ನಿರಾಕರಿಸುತ್ತಿರುವುದು ಒಕ್ಕೂಟ ವ್ಯವಸ್ಥೆಯ ಉನ್ನತ ಸಂಪ್ರದಾಯಗಳಿಗೆ ಮತ್ತು ನಿಯಮಗಳಿಗೆ ತದ್ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸರ್ಕಾರಗಳು ಯಾವ ಪಕ್ಷದ್ದೇ ಆಗಿರಲಿ ಪಕ್ಷಪಾತ ರಹಿತವಾಗಿ ಜನಹಿತ ಕಾಪಾಡುವ ಮೌಲ್ಯಗಳಿಗೆ ಕೇಂದ್ರದ ಬಿ.ಜೆ.ಪಿ ಸರ್ಕಾರ ತಿಲಾಂಜಲಿ ಇಡುತ್ತಿದೆ. ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗೆ 5,300 ಕೋಟಿ ರೂ ಬಿಡುಗಡೆ ಮಾಡಲು ಒತ್ತಾಯಿಸಿದರು.
ಘೋಷಿತ ಅನುದಾನ ಬಿಡುಗಡೆ ಮಾಡದಿದ್ದರೆ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯ ಪಡೆಯಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಹಾಗೂ ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯ ಗಮನಕ್ಕೆ ತಂದು ಚರ್ಚಿಸಲಾಗುವುದು ಎಂದು ಸಚಿವರು ಹೇಳಿದರು.
ಬಿಜೆಪಿ ಅವಧಿಯಲ್ಲಿಯೇ ಮಹಾದಾಯಿ ಜಲ ವಿವಾದ ಕುರಿತು ಟ್ರಿಬ್ಯೂನಲ್ ರಚಿಸಲು ಕೋರಿಕೆ ಸಲ್ಲಿಸಲಾಗಿತ್ತು. ಆದರೆ ಟ್ರಿಬ್ಯೂನಲ್ ಅವಶ್ಕತೆ ಇಲ್ಲದಿದ್ದರೂ ಕಾಂಗ್ರೆಸ್‌ನವರು ಟ್ರಿಬ್ಯೂನಲ್ ರಚಿಸಿದರು ಎಂದು ಬೊಮ್ಮಾಯಿ ಟೀಕಿಸಿರುವುದು ಅವರ ನಿರ್ಲಕ್ಷವನ್ನು ತೋರುತ್ತದೆ.
ಕೇಂದ್ರ ಸರ್ಕಾರದ ವನ್ಯಜೀವಿ ಮಂಡಳಿ ರಾಜ್ಯದ ಪ್ರತಿಷ್ಠಿತ ಈ ಮಹತ್ವದ ಯೋಜನೆಗೆ ಅಡ್ಡಗಾಲು ಹಾಕುವುದನ್ನು ಬಿಟ್ಟು ಮಂಜೂರಾತಿ ನೀಡಬೇಕೆಂದು ಸಚಿವ ಎಚ್.ಕೆ.ಪಾಟೀಲ ಒತ್ತಾಯಿಸಿದರು.
ಇದನ್ನು ನೋಡಿ : ರಾಜ್ಯಗಳಿಗೆ ಆರ್ಥಿಕ ಕೊರತೆಯುಂಟು ಮಾಡುವ ತೆರಿಗೆ ವ್ಯವಸ್ಥೆ ಮತ್ತು 16ನೆ ಹಣಕಾಸು ಆಯೋಗ : ಮುಂದೇನು? Janashakthi