ಬೆಳಗಾವಿ: ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರನ್ನೂ ಸೇರಿಸಿ ಯಾವೊಬ್ಬ ಸಚಿವರೂ ಸಹ ರೈತರನ್ನು ಭೇಟಿ ಮಾಡುವ ಕೆಲಸ ಮಾಡಲಿಲ್ಲ. ಸಿಎಂ ಮತ್ತು ಸಚಿವರು ಎಲ್ಲ ಕಡೆ ಹೋಗಲು ಸಾಧ್ಯವಿಲ್ಲ ಎಂಬುದು ನಮಗೂ ಗೊತ್ತು. ಆದರೆ, ಕೆಲವು ಕಡೆಯಾದರೂ ಹೋಗಬೇಕಲ್ಲವೇ? ನೋಡಲ್ ಅಧಿಕಾರಿ ವಿಮಾನದಲ್ಲಿ ಹೋಗಿ ಮೀಟಿಂಗ್ ಮಾಡಿ ವಾಪಸ್ ಬರುತ್ತಾರೆ. ಕೊನೆಗೆ ಅಧಿಕಾರಿಗಳು ಯಾವುದೇ ಸಮಸ್ಯೆ ಇಲ್ಲ ಎಂದು ವರದಿ ಕೊಡುತ್ತಾರೆ. ಸಿದ್ದರಾಮಯ್ಯ ಸಿದ್ದರಾಮಣ್ಣ ಮತ್ತು ನಮ್ಮ ಊರಲ್ಲೂ ಅದೇ ಕುರುಕ್ಷೇತ್ರ ಎಂದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಬರದ ಮೇಲಿನ ಚರ್ಚೆಯನ್ನು ಕೈಗೆತ್ತಿಕೊಂಡು ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬರ ಪರಿಸ್ಥಿತಿ ನಿರ್ವಹಣೆ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು ಕುಳಿತಲ್ಲೇ ವರದಿ ತಯಾರಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:Belagavi Winter Session| ವೇತನ ಆಯೋಗದ ವರದಿ ಬಗ್ಗೆ ಅತೃಪ್ತಿ; ಸಭಾತ್ಯಾಗ ಮಾಡಿದ ಕಮಲ, ದಳ ಸದಸ್ಯರು
ಯಾವುದಾದರೂ ತಹಸೀಲ್ದಾರ್ ಎಷ್ಟು ಊರಿಗೆ ಹೋಗಿರುವುದಾಗಿ ಹೇಳಿದ್ದಾರೆ ಎಂಬುದನ್ನು ಯಾರಾದರೂ ಹೇಳಿ ನೋಡೋಣ? ಗ್ರಾಮ ಪಂಚಾಯಿತಿಯಲ್ಲಿ ಕುಳಿತುಕೊಂಡು ಅಧಿಕಾರಿಗಳಿಗೆ ಏನು ಕೆಲಸ? ಬೆಳೆ ಎಷ್ಟು ನಷ್ಟ ಆಗಿದೆ ಅಂತ ನೋಡಿ ಹೇಳಬೇಕಲ್ಲವೇ? ಎಂದು ಆರ್. ಅಶೋಕ್ ಪ್ರಶ್ನೆ ಮಾಡಿದರು.
ಟಿಸಿ ಬದಲಾಯಿಸಲು ಹಣ ಕೇಳುತ್ತಿದ್ದಾರೆ!
ಟಿಸಿಗಳನ್ನು ರಿಪೇರಿ ಮಾಡಲು ಹಣ ಕೊಡಬೇಕು. ರಿಪೇರಿಗೆ ತೆಗೆದುಕೊಂಡು ಹೋದ ಆಟೋ ಚಾರ್ಜ್ ಕೊಡಬೇಕು. ಒಂದು ಟಿಸಿ ರಿಪೇರಿಗೆ ಹತ್ತರಿಂದ ಐದಿನೈದು ದಿನಗಳನ್ನು ತೆಗೆದುಕೊಳ್ಳುತ್ತಾರೆ. ಒಂದು ಕಂಬ ಹಾಕಲು ಎಂಟು ಸಾವಿರ ರೂಪಾಯಿಯನ್ನು ತೆಗೆದುಕೊಳ್ಳುತ್ತಾರೆ. ಏಳೆಂಟು ಬೋರ್‌ವೆಲ್‌ಗಳಿಗೆ ಒಂದು ಟ್ರಾನ್ಸ್‌ಫಾರ್ಮರ್ ಇರುತ್ತದೆ. ಅದು ರಿಪೇರಿಯಾದರೆ ಎಲ್ಲರೂ ಎರಡು ಸಾವಿರ ರೂಪಾಯಿ ಹಾಕಬೇಕು. ಟಿಸಿಗೆ ಆಯಿಲ್ ಅನ್ನು ಸ್ವತಃ ರೈತರೇ ಕೊಡಬೇಕು. ಉಪ್ಪು ಸಹ ಕೊಡಬೇಕು, ಸರ್ಕಾರಕ್ಕೆ ಉಪ್ಪು ಸಹ ಬರವೇ? ಎಂದು ಸದನದ ಗಮನಕ್ಕೆ ತಂದರು. ಆಗ ಇದಕ್ಕೆ ಪ್ರತಿಕ್ರಿಯೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಅಂತಹ ಯಾವ ಘಟನೆಗಳು ಆಗಿವೆ ಎಂಬ ಬಗ್ಗೆ ನಮಗೆ ವಿವರ ಕೊಡಿ. ಯಾರು ತಪ್ಪಿತಸ್ಥರು ಇದ್ದಾರೆ. ಅಂಥವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಹಣ ಕೇಳುವ ಅಧಿಕಾರಿ ಹೆಸರು ಹೇಳಿ; ಕ್ರಮ ತೆಗೆದುಕೊಳ್ಳುವೆ
ಶಾಸಕ ಸುನೀಲ್ ಕುಮಾರ್ ಮಾತನಾಡಿ, 24 ಗಂಟೆಯೊಳಗೆ ಟಿಸಿ ಸರಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದೆ. ಅದಕ್ಕೆ ಪೂರಕವಾಗಿ ಕ್ರಮ ತೆಗೆದುಕೊಂಡಿದ್ದರು. ಬರಗಾಲದ ಸಂದರ್ಭದಲ್ಲಿ ಟಿಸಿ ಬದಲಾವಣೆಗೆ ಹಣ ಕೇಳುತ್ತಿದ್ದಾರೆ ಎಂದು ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆ.ಜೆ. ಜಾರ್ಜ್, ಈಗ ಅಧಿಕಾರಿಗಳು ಹಣ ಕೇಳುತ್ತಾ ಇದ್ದಾರೆ ಎಂದು ವಿಪಕ್ಷ ನಾಯಕರು ಹೇಳುತ್ತಾ ಇದ್ದಾರೆ. ಯಾವ ಅಧಿಕಾರಿಗಳು ಎಂದು ನನ್ನ ಗಮನಕ್ಕೆ ತಂದರೆ ನಾನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಭರವಸೆ ನೀಡಿದರು.
ಇನ್ನೂ ಸ್ಟ್ರಾಂಗ್ ಆಗಿ ಮಾತಾಡಬೇಕು ಎಂದ ರಾಯರೆಡ್ಡಿ
ಬರದ ವಿಷಯದಲ್ಲಿ ಸರ್ಕಾರ ಅಧಿಕಾರಿಗಳ ಮಾತು ಕೇಳಿದರೆ ಆಗುವುದಿಲ್ಲ. ಜನರ ಬಳಿಯೇ ನೀವು ಹೋಗಿ, ಸತ್ಯ ಗೊತ್ತಾಗುತ್ತದೆ ಎಂದು ಆರ್. ಅಶೋಕ್ ಹೇಳುತ್ತಿದ್ದಂತೆ ಮಧ್ಯಪ್ರವೇಶ ಮಾಡಿದ ಶಾಸಕ ಬಸವರಾಜ್ ರಾಯರೆಡ್ಡಿ, ಅಶೋಕ್ ಅವರೇ ನಿಮ್ಮ ಬಳಿ ಇರುವ ಮಾಹಿತಿ ಕೊಟ್ಟು ಬಿಡಿ. ಆಡಳಿತಾತ್ಮಕವಾಗಿ ಒಳ್ಳೆಯದು ಆಗಲಿದೆ. ನೀವು ರೂಲಿಂಗ್ ಪಾರ್ಟಿಯವರು ಮಾತಾಡಿದಂತೆ ಮಾತಡುತ್ತೀರಿ. ನೀವು ವಿಪಕ್ಷ ನಾಯಕರು. ಇನ್ನೂ ಸ್ಟ್ರಾಂಗ್ ಆಗಿ ಮಾತಾಡಬೇಕು ಎಂದು ಸಲಹೆ ನೀಡಿದರು.
ಬಳಿಕ ಮಾತು ಮುಂದುವರಿಸಿದ ಆರ್. ಅಶೋಕ್, ಕರೆಂಟ್ ಬರೋದು ಬೆಳಗಿನ ಜಾವ ಮೂರು ಗಂಟೆ ಎಂದು ಹೇಳುತ್ತಾರೆ. ಆದರೆ ಅದೂ ಸಹ ಎರಡು ಗಂಟೆ ಬರುತ್ತದೆ. ಅದು ಸಹ ಟ್ರಿಪ್ ಆಗುತ್ತಿರುತ್ತದೆ. ಟಿಸಿಗಳು ಸುಟ್ಟು ಹೋಗುತ್ತವೆ. ರಾತ್ರಿ ಕರೆಂಟ್ ಕೊಡುತ್ತೇವೆ ಎಂದು ಹೇಳಿದರು. ರಾತ್ರಿ ಕರೆಂಟ್ ಹಾಕಲು ಹೋದವನಿಗೆ ಕರಡಿ ಕಚ್ಚಿದೆ. ಹಗಲು ಹೊತ್ತು ಕರೆಂಟ್ ಕೊಟ್ಟಿದ್ದರೆ ಅನುಕೂಲ ಆಗುತ್ತಿತ್ತು. ಕರಡಿ ಕಚ್ಚಿದರೆ ಅರಣ್ಯ ಇಲಾಖೆಯಿಂದ ಕಡಿಮೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಇಂಧನ ಕೆ.ಜೆ ಜಾರ್ಜ್, ನನಗೆ ಕೆಲ ರೈತರು ಮನವಿ ಮಾಡಿದ್ದಾರೆ. ನಿರಂತರವಾಗಿ ಕರೆಂಟ್ ಕೊಟ್ಟರೆ ಬೋರ್‌ವೆಲ್ ಅನ್ನು ನಿರಂತರವಾಗಿ ಬಳಕೆ ಮಾಡಲು ಆಗಲ್ಲ. ಹಗಲು ಮತ್ತು ರಾತ್ರಿ ವೇಳೆ ಸಮಯ ಹಂಚಿಕೆ ವಿದ್ಯುತ್ ಕೊಡಿ ಎಂದು ಮನವಿ ಮಾಡಿದ್ದಾರೆ. ಕರಡಿ, ಆನೆ ಕಾಟ ಇರುವ ಕಡೆ ಹಗಲು ಹೊತ್ತು ಕರೆಂಟ್ ಕೊಡಲು ಆದೇಶ ಮಾಡಲಾಗಿದೆ. ರಾತ್ರಿ ಹೊತ್ತು ಬೋರ್‌ವೆಲ್ ಆನ್ ಮಾಡಲು ಹೋದಾಗ ಕರಡಿ ದಾಳಿಗೆ ತುತ್ತಾದವರಿಗೆ ನಮ್ಮ ಇಲಾಖೆಯಿಂದಲೇ ಪರಿಹಾರ ನೀಡಲಾಗುತ್ತದೆ. ಆದರೆ, ಇದು ಇದೊಂದು ಪ್ರಕರಣಕ್ಕೆ ಮಾತ್ರ ಎಂದು ಹೇಳಿದರು. ಎಲ್ಲರಿಗೂ ಅನ್ವಯ ಆಗಲಿ ಎಂದು ವಿಪಕ್ಷ ಸದಸ್ಯರು ಆಗ್ರಹಿಸಿದರು. ಅದಕ್ಕೆ ಇಲ್ಲ ಎಂದು ಕೆ.ಜೆ. ಜಾರ್ಜ್ ಪ್ರತಿಕ್ರಿಯೆ ನೀಡಿದರು.
ವಿಡಿಯೋ ನೋಡಿ:ಚಳಿಗಾಲದ ಅಧಿವೇಶನ ಬೆಳಗಾವಿ 2023| ಡಿಸೆಂಬರ್ 06 | ಭಾಗ 02 Live #wintersession2023