ನೆರೆ ಮತ್ತು ಬರಪೀಡಿತ ರಾಜ್ಯದ ಮುಖ್ಯಮಂತ್ರಿಗಳ ಮನವಿಗೆ ಕೇಂದ್ರ ತಲೆಕೆಡಿಸಿಕೊಂಡಿಲ್ಲ: ಖರ್ಗೆ ಅಸಮಾಧಾನ

ನವದೆಹಲಿ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹಲವು ರಾಜ್ಯಗಳಲ್ಲಿನ ಪ್ರವಾಹ ಮತ್ತು ಬರ ಪರಿಸ್ಥಿತಿಗಳ ಬಗ್ಗೆ ಬುಧವಾರ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಕರ್ನಾಟಕವು ಹಿಂದೆಂದೂ ಕಂಡರಿಯದ ಭೀಕರ ಬರಗಾಲವನ್ನು ಅನುಭವಿಸುತ್ತಿದೆ ಎಂದು ಅವರು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ 226 ತಾಲೂಕುಗಳ ಪೈಕಿ 223 ತಾಲೂಕುಗಳ ಮೇಲೆ ರಾಜ್ಯದ ಬರ ಪರಿಸ್ಥಿತಿಯು ದುಷ್ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದು, ಈ ಪೈಕಿ 96 ತಾಲೂಕುಗಳು ತೀವ್ರ ಪರಿಣಾಮಗಳನ್ನು ಅನುಭವಿಸುತ್ತಿದ್ದರೆ, ಉಳಿದ 27 ತಾಲೂಕುಗಳು ಸಾಧಾರಣ ಪರಿಣಾಮ ಎದುರಿಸುತ್ತಿವೆ ಎಂದು ತಿಳಿಸಿದ್ದಾರೆ. ಅನೇಕ ಸಂದರ್ಭಗಳಲ್ಲಿ, ಬೆಳೆ ಹಾನಿಯು 40 ರಿಂದ 90% ಪ್ರತಿಶತದವರೆಗೆ ಆಗಿದೆ ಎಂದು ಅವರು ಸೂಚಿಸಿದ್ದಾರೆ.

ಇದನ್ನೂ ಓದಿ: ವರದಕ್ಷಿಣೆ ಸಾವು | 2022ರಲ್ಲಿ ದೇಶಾದ್ಯಂತ 6500 ಪ್ರಕರಣಗಳು ದಾಖಲು ; ದಕ್ಷಿಣ ಭಾರತದಲ್ಲಿ ಕರ್ನಾಟಕ ನಂ. 1!

ಕರ್ನಾಟಕ ರಾಜ್ಯದಲ್ಲಿ ಬೆಳೆ ಹಾನಿಯಿಂದ ಒಟ್ಟು ಅಂದಾಜು ನಷ್ಟ 35162.05 ಕೋಟಿ ರೂ. ಉಂಟಾಗಿದೆ ಎಂದು ಅವರು ಹೇಳಿದ್ದು, “ಪರಿಸ್ಥಿತಿಯ ತೀವ್ರತೆ ಹೆಚ್ಚಿದ್ದು ಕರ್ನಾಟಕವು ಹೊಸ ಸವಾಲನ್ನು ಎದುರಿಸುತ್ತಿದೆ” ಎಂದು ಹೇಳಿದ್ದಾರೆ.

ಈ ಸವಾಲನ್ನು ನಿಭಾಯಿಸಲು, ರಾಜ್ಯ ಸರ್ಕಾರವು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ 18,171 ಕೋಟಿ ರೂಪಾಯಿಗಳ ಸಹಾಯವನ್ನು ಕೋರಿದೆ. ಇನ್‌ಪುಟ್ ಸಬ್ಸಿಡಿ ಪರಿಹಾರವನ್ನು ಒದಗಿಸಲು ಮತ್ತು ಇತರ ತಕ್ಷಣದ ಬರ ಪರಿಹಾರ ಕ್ರಮಗಳನ್ನು ಜಾರಿಗೆ ತರಲು ಈ ಆರ್ಥಿಕ ಬೆಂಬಲವು ನಿರ್ಣಾಯಕವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಅಂಧ ಮುಸ್ಲಿಂ ವೃದ್ಧನಿಗೆ ಜೈ ಶ್ರೀರಾಮ್‌ ಹೇಳಲು ಒತ್ತಾಯಿಸಿ ಹಲ್ಲೆಗೈದ ಪ್ರಕರಣ: ಇಬ್ಬರ ಬಂಧನ

ಮಳೆಯ ಕೊರತೆಯಿಂದಾಗಿ ವಿವಿಧ ಜಲಾಶಯಗಳಲ್ಲಿ ನೀರು ಕಡಿಮೆ ಮಟ್ಟದಲ್ಲಿದೆ ಎಂದು ಖರ್ಗೆ ಹೇಳಿದ್ದಾರೆ. “ಕಳೆದ ಐದು ವರ್ಷಗಳಲ್ಲೇ ನೀರಿನ ಸಂಗ್ರಹ ಕಡಿಮೆಯಾಗಿದೆ. ಇನ್ನು ಮುಂದೆ ರಾಜ್ಯದಲ್ಲಿ ಜಾನುವಾರುಗಳಿಗೆ ಮತ್ತು ಜನರಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ಬೆಳೆ ಹಾನಿಯಿಂದ ಬಳಲುತ್ತಿರುವ ರೈತರ ನೆರವಿಗೆ ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಂಡಿದೆ” ಎಂದು ಅವರು ಸದನಕ್ಕೆ ತಿಳಿಸಿದ್ದಾರೆ.

ಸಭಾಪತಿಯನ್ನುದ್ದೇಶಿಸಿ ಮಾತನಾಡಿದ ಅವರು, ಬರ ಮಾತ್ರವಲ್ಲದೆ, ತಮಿಳುನಾಡಿನ ಚೆನ್ನೈ, ಕೇರಳ ಸೇರಿದಂತೆ ದೇಶದ ದಕ್ಷಿಣ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದೆ. ಸಂತ್ರಸ್ತ ರಾಜ್ಯಗಳ ಮುಖ್ಯಮಂತ್ರಿಗಳ ಮನವಿಯ ಹೊರತಾಗಿಯೂ, ಕೇಂದ್ರವು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ ಎಂದು ಖರ್ಗೆ ತಿಳಿಸಿದ್ದಾರೆ.

ವಿಡಿಯೊ ನೋಡಿ: ಭಾರತವು ಪ್ಯಾಲೆಸ್ತೀನ್ ಪರ ನಿಲ್ಲಬೇಕು : ಸದಾಗ್ರಹದ ಸಭೆ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *