ʻಬೆಟ್ಟದ ಹೂವುʼ ನಂತೆಯೇ ಯಾರೂ ಎಟುಕಲಾರದ ಸ್ಥಾನಕ್ಕೇರಿದ ʻಯುವರತ್ನʼ

ಬೆಂಗಳೂರು: ಹೃದಾಯಘಾತದಿಂದ ನಿಧನರಾಗಿರುವ ನಟ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ (46) ಕನ್ನಡ ಚಿತ್ರರಂಗದ ಮೇರು ನಟ. 1975ರ ಮಾರ್ಚ್‌ 17ರಂದು ಚೆನ್ನೈನಲ್ಲಿ ಜನಿಸಿದರು.

1975, ಮಾರ್ಚ್ 17 ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ವರನಟ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಜನಿಸಿದರು. ಇವರ ಹಿರಿಯ ಸಹೋದರರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಕೂಡ ಕನ್ನಡ ಚಿತ್ರರಂಗದ ಯಶಸ್ವಿ ನಾಯಕನಟರು. ಅಲ್ಲದೆ ಸಹೋದರಿಯರು ಲಕ್ಷ್ಮಿ ಮತ್ತು ಪೂರ್ಣಿಮಾ. ಪುನೀತ್‌ ರಾಜಕುಮಾರ್‌ ಅವರ 1999ರಲ್ಲಿ ಅಶ್ವಿನಿ ಅವರೊಂದಿಗೆ ವಿವಾಹವಾದರು. ಅವರಿಗೆ ಇಬ್ಬರು ಪುತ್ರಿಯರು ವಂದಿತಾ ಮತ್ತು ಧೃತಿ.

ಪುನೀತ್‌ ರಾಜಕುಮಾರ್‌ ಸದ್ಯ ಜೇಮ್ಸ್ ಚಿತ್ರೀಕರಣ ಮುಗಿದಿತ್ತು. ದ್ವಿತ್ವ ಮುಹೂರ್ತ ಇನ್ನು ಕೆಲವೇ ದಿನಗಳಲ್ಲಿ ಆಗಬೇಕಿತ್ತು. ಲೂಸಿಯಾ ಪವನ್ ನಿರ್ದೇಶಿಸಬೇಕಿದ್ದ ದ್ವಿತ್ವ. ದಿನಕರ್ ತೂಗುದೀಪ ಜೊತೆಗೂ ಒಂದು ಸಿನಿಮಾ ಮಾಡಬೇಕಿತ್ತು.

ತಂದೆ ಡಾ.ರಾಜಕುಮಾರ್ ಅವರ ಬಗ್ಗೆ ‘ಡಾ.ರಾಜಕುಮಾರ್ ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ’ ಪುಸ್ತಕ ಹೊರ ತಂದಿದ್ದ ಪುನೀತ್ ರಾಜಕುಮಾರ್‌ ತಂದೆಯ ಬಗೆಗಿನ ಹಲವು ವಿಷಯಗಳನ್ನು ನೆನೆಪಿಸಿಕೊಂಡಿದ್ದರು.

ಡಾ.ರಾಜಕುಮಾರ್‌ ಅವರು ತಮ್ಮ ಬಹುತೇಕ ಚಿತ್ರಗಳ ಚಿತ್ರೀಕರಣದ ಸ್ಥಳಗಳಿಗೆ ಪುನೀತ್‌ ರಾಜಕುಮಾರ್‌ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಬಾಲ್ಯದಿಂದಲೇ ಕಲೆಯ ಜೊತೆಗಿನ ನಂಟು ಆರಂಭವಾಯಿತು.

ಪವರ್‌ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು ಪ್ರಮುಖ ನಾಯಕ ನಟ. ಅಭಿಮಾನಿಗಳಿಂದ ಅಪ್ಪು ಎಂದೇ ಗುರುತಿಸಿಕೊಂಡಿದ್ದ ಪುನೀತ್ ರಾಜಕುಮಾರ್‌ ನಟನೆಯಲ್ಲದೇ ಹಿನ್ನಲೆ ಗಾಯಕರಾಗಿ, ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು. ಅವರ ಸಿನಿಮಾ ಪಯಣ ಸುಮಾರು ನಾಲ್ಕು ದಶಕಗಳಾಗಿದ್ದು, ಬಾಲ ಕಲಾವಿದನಾಗಿ 14 ಮತ್ತು ನಾಯಕನಾಗಿ 28 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಪುನೀತ್ ರಾಜಕುಮಾರ್‌ ಅವರ ಬಾಲ ನಟನಾಗಿ ನಟಿಸಿದ ಪ್ರಮುಖ ಚಿತ್ರ

ಪುನೀತ್ ಆರು ತಿಂಗಳು ಮಗುವಿದ್ದಾಗ 1976 ರಲ್ಲಿ ತೆರೆಕಂಡ `ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಬಂದ ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಭಾಗ್ಯವಂತರು ಮುಂತಾದ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಬಾಲ್ಯದಲ್ಲಿಯೇ ತಮ್ಮ ಚಾತುರ್ಯವನ್ನು ಮೆರೆದರು.

ಪ್ರೇಮದ ಕಾಣಿಕೆ ಚಿತ್ರದಿಂದ ಭಾಗ್ಯವಂತ, ಎರಡು ನಕ್ಷತ್ರಗಳು, ಬೆಟ್ಟದ ಹೂವು, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ, ಶಿವ ಮೆಚ್ಚಿದ ಕಣ್ಣಪ್ಪ, ಯಾರಿವನು, ಪರಶುರಾಮ್‌, ವಸಂತ ಗೀತ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಭಾಗ್ಯವಂತ ಚಿತ್ರದ `ಬಾನ ದಾರಿಯಲ್ಲಿ ಸೂರ್ಯ’, ಚಲಿಸುವ ಮೋಡಗಳು ಚಿತ್ರದ `ಕಾಣದಂತೆ ಮಾಯವಾದನೋ’, ಯಾರಿವನು ಚಿತ್ರದ `ಕಣ್ಣಿಗೆ ಕಾಣುವ ದೇವರು’ ಮುಂತಾದ ಗೀತೆಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿಯೂ ಪ್ರಶಂಸೆ ಪಡೆದರು. `ಚಲಿಸುವ ಮೋಡಗಳು’ ಮತ್ತು `ಎರಡು ನಕ್ಷತ್ರಗಳು’ ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಬಾಲಕಲಾವಿದನಾಗಿ ಪುನೀತ್ ಅಭಿನಯಿಸಿದ ಹೆಚ್ಚಿನ ಹೆಗ್ಗಳಿಕೆ ಚಿತ್ರ `ಬೆಟ್ಟದ ಹೂ’. ಇದು 1984ರಲ್ಲಿ ತೆರೆಕಂಡ ಎನ್ ಲಕ್ಷ್ಮಿನಾರಾಯಣ ನಿರ್ದೇಶನದ ಚಿತ್ರ. ಇದರಲ್ಲಿ ಪುನೀತ್ ಬಾಲಕ ರಾಮು ಆಗಿ ನಟಿಸಿದರು. ಶಾಲೆಗೆ ಹೋಗುವ ಬಡ ಬಾಲಕನೊಬ್ಬನ ತಳಮಳಗಳನ್ನು ಚಿತ್ರ ಚೆನ್ನಾಗಿ ಬಿಂಬಿಸಿತು. ಈ ಚಿತ್ರದ ಅಭಿನಯಕ್ಕಾಗಿ ಪುನೀತ್‌ಗೆ ರಾಷ್ಟ್ರ ಪ್ರಶಸ್ತಿ ದೊರೆಯಿತು.

ನಾಯಕ ನಟನಾಗಿ

2002 ರಲ್ಲಿ ತೆರೆಕಂಡ ಪುರಿ ಜಗನ್ನಾಥ ನಿರ್ದೇಶನದ `ಅಪ್ಪು’ ಚಿತ್ರದಿಂದ ಪೂರ್ಣ ಪ್ರಮಾಣದ ನಾಯಕನಟನಾಗಿ ಕನ್ನಡ ಚಿತ್ರರಂಗದಲ್ಲಿ ಮತ್ತೆ ಸಿನಿಪಯಣ ಆರಂಭಿಸಿದರು. ಈ ಚಿತ್ರ ಅದ್ಧೂರಿ ಯಶಸ್ಸು ಕಂಡಿತು. ನಂತರ ತೆರೆಗೆ ಬಂದ ಅಭಿ, ವೀರ ಕನ್ನಡಿಗ, ಮೌರ್ಯ, ಆಕಾಶ್ , ನಮ್ಮ ಬಸವ, ಅಜಯ್ ಮುಂತಾದ ಚಿತ್ರಗಳು ದಾಖಲೆಯ ಪ್ರದರ್ಶನ ಕಂಡವು.

ಇವರು ನಾಯಕನಾಗಿ ನಟಿಸಿದ ಮೊದಲ ಹತ್ತು ಚಿತ್ರಗಳು ಶತದಿನ ಪೂರೈಸಿದ್ದು ದಾಖಲೆ. ನಾಯಕನಾಗಿ ಎರಡು ರಾಜ್ಯ ಪ್ರಶಸ್ತಿ, ನಾಲ್ಕು ಫಿಲ್ಮಫೇರ್, ಎರಡು ಸೈಮಾ ಹೀಗೆ ಹತ್ತು ಹಲವು ಪ್ರಶಸ್ತಿ ಪಡೆದಿದ್ದಾರೆ.

ಗಾಯಕ – ನಿರೂಪಕ – ನಿರ್ಮಾಪಕ

ಗಾಯಕನಾಗಿ ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿರುವ ಪುನೀತ್ ರಾಜಕುಮಾರ್‌ ಗಾಯನದಿಂದ ಬರುವ ಸಂಪೂರ್ಣ ಹಣವನ್ನು ಸಮಾಜಸೇವೆಗೆ ವಿನಿಯೋಗಿಸುತ್ತಾರೆ. ಕಿರುತೆರೆಯಲ್ಲಿ ನಿರೂಪಕರಾಗಿ ಕನ್ನಡದ ಕೋಟ್ಯಾಧಿಪತಿಯ ಎರಡು ಅವಧಿಗೆ ಮತ್ತು ಫ್ಯಾಮಿಲಿ ಪವರ್ ಎಂಬ ರಿಯಾಲಿಟಿ ಶೋಗಳನ್ನು ನಿರೂಪಿಸಿದ್ದಾರೆ. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೊಟ್ಟಮೊದಲ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷ.

ಚಿತ್ರ ನಿರ್ಮಾಪಕರಾಗಿ `ಕವುಲುದಾರಿ’, `ಮಯಾಬಜಾರ್’ ಎಂಬ ಚಿತ್ರಗಳನ್ನು ತಮ್ಮ ಸ್ವಂತ ಬ್ಯಾನರ್‌ನಲ್ಲಿ ನಿರ್ಮಸಿರುವ ಪುನೀತ್ ಪ್ರೋಡಕ್ಸನ್ ಹೌಸ್ ಮೂಲಕ ಕಿರುತೆರೆ ಧಾರಾವಾಹಿ ಕೂಡ ನಿರ್ಮಿಸಿದ್ದಾರೆ. ತಾಯಿಯ ನೆನಪಿನಲ್ಲಿ `ಪಿ.ಅರ್.ಕೆ ‘ ಆಡಿಯೋ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ.

ಮೈಸೂರಿನ ಶಕ್ತಿ ಧಾಮ ಆಶ್ರಮದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಪುನೀತ್ `ಬೆಂಗಳೂರು ಪ್ರೀಮೀಯರ್ ಪುಟ್‌ಬಾಲ್ ತಂಡದ ಒಡೆತನ ಹೊಂದಿದ್ದರು. ಕರ್ನಾಟಕ ಸರ್ಕಾರದ ನಂದಿನಿ ಹಾಲು ಉತ್ಪನ್ನಗಳು ಸೇರಿದಂತೆ ಹಲವಾರು ಜಾಹೀರಾತುಗಳಲ್ಲಿಯೂ ಪುನೀತ್‌ ರಾಜಕುಮಾರ್‌ ಮಿಂಚಿದ್ದಾರೆ.

ಪುನೀತ್‌ ರಾಜಕುಮಾರ್‌ ಅವರ ಪೂರ್ಣ ಪ್ರಮಾಣದ ನಾಯಕ ನಟನ ಅಭಿಯನ ಆರಂಭವಾಗಿದ್ದು 2002ರಿಂದ ಅವರ ಮೊದಲ ಚಿತ್ರ ಅಪ್ಪು ಆಗಿದ್ದು, ಕೊನೆಯ ಚಿತ್ರ ಯುವರತ್ನ. ಅಭಿ, ವೀರಕನ್ನಡಿಗ, ಮೌರ್ಯ, ಆಕಾಶ್‌, ನಮ್ಮ ಬಸವ, ಅಜಯ್‌, ಅರಸು, ಮಿಲನ, ಬಿಂದಾಸ್‌, ವಂಶಿ, ರಾಜ್‌ ದ ಶೋಮ್ಯಾನ್‌, ಪೃಥ್ವಿ, ರಾಮ್‌, ಚಾಕಿ, ಹುಡುಗರು, ಪರಮಾತ್ಮ ಅಣ್ಣ ಬಾಂಡ್‌, ಯಾರೇ ಕೂಗಾಡಲಿ, ನಿನ್ನಿಂದಲೇ, ಮೈತ್ರಿ, ಪವರ್‌ ಸ್ಟಾರ್‌, ಧೀರ ರಣವಿಕ್ರಮ, ಚಕ್ರವ್ಯೂಹ, ದೊಡ್ಮನೆ ಹುಡುಗ, ರಾಜಕುಮಾರ, ಅಂಜನಿ ಪುತ್ರ, ನಟಸಾರ್ವಭೌಮ, ಯುವರತ್ನ ಚಲನಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *