- ಸಂತ್ರಸ್ತೆಯ ಹೇಳಿಕೆ ಆಧರಿಸಿ ಆರೋಪಿ ಬಸ್ ಚಾಲಕ ಶಿವಕುಮಾರ್ ವಿರುದ್ಧ ಕೇಸ್ ದಾಖಲು
- ಅತ್ಯಾಚಾರ, ಕೊಲೆ ಯತ್ನ, ಹಲ್ಲೆ ಸೇರಿದಂತೆ ಮತ್ತಿತರ ಆರೋಪಗಳ ಸಂಬಂಧ ಎಫ್‌ಐಆರ್ ದಾಖಲು
ಬೆಂಗಳೂರು : ಖಾಸಗಿ ಶಾಲಾ ಬಸ್ ಚಾಲಕನೊಬ್ಬ ಮಹಿಳೆಯೊಬ್ಬರನ್ನು ಡ್ರಾಪ್ ಮಾಡಲು ಹತ್ತಿಸಿಕೊಂಡು ಆಕೆಗೆ ಜೀವ ಬೆದರಿಕೆ ಒಡ್ಡಿ ಅತ್ಯಾಚಾರ ಎಸಗಿರುವ ಪ್ರಕರಣ ಮಂಗಳವಾರ ರಾತ್ರಿ ನಗರದಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ ಬಸ್ ಚಾಲಕ ಆರೋಪಿ ಶಿವಕುಮಾರ್ ಎಂಬಾತನನ್ನು ಬಂಧಿಸಿರುವ ಚಂದ್ರಾ ಲೇಔಟ್ ಠಾಣೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ರಾಪಿಡೋ ಬೈಕ್ ಸವಾರ ಕೇರಳ ಮೂಲದ ಯುವತಿಯ ಮೇಲೆ ಸ್ನೇಹಿತನ ಜತೆ ಸೇರಿ ಅತ್ಯಾಚಾರ ಎಸಗಿದ ಪ್ರಕರಣ ಮಾಸುವ ಮುನ್ನವೇ ಈ ಆಘಾತಕಾರಿ ಘಟನೆ ನಡೆದಿದೆ. ಶಾಲೆಯೊಂದರಲ್ಲಿ ಕೆಲಸ ಮಾಡುವ 35 ವರ್ಷದ ಮಹಿಳೆ, ಮಂಗಳವಾರ ಸಾಯಂಕಾಲ 5.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ಬಸ್‌ಗಾಗಿ ನಾಯಂಡ ಹಳ್ಳಿ ಜಂಕ್ಷನ್ ಬಳಿ ಕಾಯುತ್ತಿದ್ದರು. ಈ ವೇಳೆ ಶಿವಕುಮಾರ್ ಬಸ್‌ನಲ್ಲಿ ಬಂದಿದ್ದು , ಮಹಿಳೆ ಕೈ ಅಡ್ಡ ಹಾಕಿದ್ದು ಅವರನ್ನು ಬಸ್‌ಗೆ ಹತ್ತಿಸಿಕೊಂಡಿದ್ದ. ಈ ವೇಳೆ ಬಸ್‌ನಲ್ಲಿ ಯಾರೂ ಇರಲಿಲ್ಲ. ಶಾಲಾ ಬಸ್ ಆಗಿದ್ದರಿಂದ ಮಹಿಳೆಯೂ ಸುಮ್ಮನಿದ್ದರು.
ಮಾರ್ಗ ಮಧ್ಯೆ ಮೈಸೂರು ರಸ್ತೆ ಮಾರ್ಗ ಬದಲಿಸಿದ ಶಿವಕುಮಾರ, ನಾಗರಬಾವಿ ಸರ್ವೀಸ್ ರಸ್ತೆಯಲ್ಲಿ ತೆರಳಿ ಅಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಬಳಿಯ ರಸ್ತೆಯಲ್ಲಿ ಬಸ್ ನಿಲ್ಲಿಸಿದ್ದ ಬಳಿಕ ಮಹಿಳೆಗೆ ಹೆದರಿಸಿ, ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಶಿವಕುಮಾರ ಕೃತ್ಯ ಎಸಗಿದ ಬಳಿಕ ಯಾರಿಗೂ ಹೇಳದಂತೆ ಎಚ್ಚರಿಕೆ ಕೊಟ್ಟು ಮಹಿಳೆಯನ್ನು ಬಸ್‌ನಿಂದ ಕೆಳಕ್ಕೆ ಇಳಿಸಿ ಹೊರಟು ಹೋಗಿದ್ದ. ಈ ಕೃತ್ಯದಿಂದ ಜರ್ಜರಿತಗೊಂಡಿದ್ದ ಮಹಿಳೆ ಅವನಿಗೆ ಗೊತ್ತಾಗದಂತೆ ಬಸ್ ಫೊಟೋ ತೆಗೆದುಕೊಂಡಿದ್ದು, ಮಗನಿಗೆ ಕರೆ ಮಾಡಿ ವಿಚಾರ ತಿಳಿಸಿ ಬಸ್ ಪೋಟೋ ಕಳಿಸಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ಸಂತ್ರಸ್ತೆ ಮಗ ಸ್ಥಳಕ್ಕೆ ದೌಡಾಯಿಸಿ ತಾಯಿಯನ್ನು ರಕ್ಷಿಸಿದ್ದಾನೆ.
ಬಳಿಕ ಆರೋಪಿ ಬಸ್ ಚಾಲಕನಿಗಾಗಿ ಸಂತ್ರಸ್ತೆಯ ಮಗ ಹುಡುಕಾಡುತ್ತಿದ್ದಾಗ ಸಮೀಪದಲ್ಲಿಯೇ ಬಸ್ ನಿಲ್ಲಿಸಿ ಚಾಲಕ ಮಲಗಿರುವುದು ಕಂಡು ಬಂದಿದೆ. ಅಲ್ಲಿಗೆ ತೆರಳಿ ಕೃತ್ಯದ ಬಗ್ಗೆ ಪ್ರಶ್ನಿಸುತ್ತಲೇ ಇಬ್ಬರ ನಡುವೆ ಜಗಳ ನಡೆದಿದೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಾಗ ಸಂತ್ರಸ್ತೆ ಮಗ ವಿಚಾರ ತಿಳಿಸಿದ್ದ. ಈ ವಿಚಾರ ಹೊರ ಬರುತ್ತಲೇ ಪೊಲೀಸರು ಸಂತ್ರಸ್ತೆಯ ಹೇಳಿಕೆ ಆಧರಿಸಿ ಆರೋಪಿ ಬಸ್ ಚಾಲಕ ಶಿವಕುಮಾರ್ ವಿರುದ್ಧ ಅತ್ಯಾಚಾರ, ಕೊಲೆ ಯತ್ನ, ಹಲ್ಲೆ ಸೇರಿದಂತೆ ಮತ್ತಿತರ ಆರೋಪಗಳ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ಬಂಧಿಸಿದ್ದಾರೆ.